ಬೆಂಗಳೂರು: ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯು ಶನಿವಾರ ಸಂಜೆ ವೇಳೆಗೆ ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಿಳಿಸಿದೆ.
ಭೂಮಿಯಿಂದ ನಭಕ್ಕೆ ಹಾರಿದ 22 ದಿನಗಳ ಬಳಿಕ ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದೆ. ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಚಂದ್ರಯಾನ್-3 ಗಗನನೌಕೆಯನ್ನ ಸೇರಿಸುವ ಲೂನಾರ್ ಆರ್ಬಿಟ್ ಇಂಜೆಕ್ಷನ್ ಪ್ರಕ್ರಿಯೆಯನ್ನು ಇಸ್ರೋ ಪೂರ್ಣಗೊಳಿಸಿದೆ. ಬೆಂಗಳೂರಿನ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಸಂಸ್ಥೆಯು ಲೂನಾರ್ ಆರ್ಬಿಟ್ ಇಂಜೆಕ್ಷನ್ (Lunar Orbit Injection) ಪ್ರಕ್ರಿಯೆಯನ್ನ ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಗಗನನೌಕೆ ಚಂದ್ರನನ್ನ ಸುತ್ತತೊಡಗಿದ್ದು, ನಿಗದಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 23ರಂದು ಚಂದ್ರನ ಮೇಲ್ಮೈ ಅಂಗಳದ ಮೇಲೆ ಲ್ಯಾಂಡರ್ ಲ್ಯಾಂಡ್ ಆಗಲಿದೆ.
ಸದ್ಯ ಚಂದ್ರನ ಗುರುತ್ವಾಕರ್ಷಣೆಯ (Lunar Gravity) ಅನುಭವವಾಗುತ್ತಿದೆ. ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ ಎಂದು ಪೆರಿಲುನ್‌ನಲ್ಲಿ ರೆಟ್ರೋ-ಬರ್ನಿಂಗ್ ಅನ್ನು ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್‌ನಿಂದ ಕಮಾಂಡಿಂಗ್ ಬಂದಿದೆ. ಮುಂದಿನ ಹಂತದಲ್ಲಿ ಕಕ್ಷೆ ಕಡಿತಗೊಳಿಸುವ ಕಾರ್ಯವನ್ನ ಆಗಸ್ಟ್ 6ರಂದು ರಾತ್ರಿ 11 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ಶನಿವಾರ ಟ್ವೀಟ್ ಮೂಲಕ ತಿಳಿಸಿದೆ.
ಚಂದ್ರಯಾನ-3 ಈವರೆಗಿನ ಪ್ರಯಾಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಈಗಾಗಲೇ ಬಾಹ್ಯಾಕಾಶ ನೌಕೆಯು ಚಂದ್ರನ ಸುಮಾರು ಮೂರನೇ ಎರಡರಷ್ಟು ದೂರವನ್ನು ಕ್ರಮಿಸಿರುವುದಾಗಿ ಶುಕ್ರವಾರ ಹೇಳಿತ್ತು.
ಚಂದ್ರಯಾನ-3 ಮೂರು ಘಟಕಗಳನ್ನು ಒಳಗೊಂಡಿದೆ. ಸ್ಥಳೀಯ ಲ್ಯಾಂಡರ್ ಮಾಡ್ಯೂಲ್ (LM), ಪ್ರೊಪಲ್ಷನ್ ಮಾಡ್ಯೂಲ್ (PM) ಮತ್ತು ರೋವರ್. ಇವುಗಳನ್ನು ಅಂತರ ಗ್ರಹಗಳ ಕಾರ್ಯಾಚರಣೆಗಳ ವಿವಿಧ ಹಂತಗಳಲ್ಲಿ ಬಳಸಲಾಗುತ್ತದೆ.
ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಅನ್ನು ಲಾಂಚ್ ವೆಹಿಕಲ್ ಇಂಜೆಕ್ಷನ್‌ನಿಂದ ಅಂತಿಮವಾಗಿ ಚಂದ್ರನ 100 ಕಿಮೀ ವೃತ್ತಾಕಾರದ ಧ್ರುವೀಯ ಕಕ್ಷೆಯವರೆಗೆ ಒಯ್ಯುತ್ತದೆ. ಲ್ಯಾಂಡರ್ ಚಂದ್ರನ ಮೇಲ್ಮೈನ ನಿರ್ದಿಷ್ಟ ಸ್ಥಳದಲ್ಲಿ ಸೂಕ್ಷ್ಮವಾಗಿ ಇಳಿಯುವ ಮತ್ತು ಸಂಶೋಧನೆ ನಡೆಸಲು ರೋವರ್ ಅನ್ನು ನಿಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ. ಆಗಸ್ಟ್ 1 ರಂದು ಭೂಮಿಯ ಕಕ್ಷೆಯನ್ನು ನೌಕೆ ಬಿಟ್ಟಿದೆ. ಆ ದಿನದಿಂದ ಸರಿಯಾಗಿ 5 ದಿನಕ್ಕೆ ಗಗನನೌಕೆಯು ಚಂದ್ರನ ಕಕ್ಷೆಯನ್ನು ತಲುಪಲಿದೆ ಎಂದು ತಿಳಿಸಿತ್ತು.
ಮುಂದೆ ಏನಾಗುತ್ತೆ?
ಚಂದ್ರಯಾನ-3 ಗಗನನೌಕೆಯು ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಈ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಲು ದ್ರವ ಎಂಜಿನ್ ಅನ್ನು ಮತ್ತೆ ಉರಿಸಲಾಗುವುದು. ಚಂದ್ರಯಾನವು ಚಂದ್ರನನ್ನು ನಾಲ್ಕು ಬಾರಿ ಸುತ್ತುತ್ತದೆ. ಪ್ರತಿ ಸುತ್ತಿನಲ್ಲೂ ಚಂದ್ರನ ಮೇಲ್ಮೈಗೆ ಹತ್ತಿರವಾಗುತ್ತದೆ
ಆಗಸ್ಟ್ 17 ರಂದು ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಲ್ಯಾಂಡರ್ ಬೇರ್ಪಟ್ಟ ನಂತರ, ಆಗಸ್ಟ್ 23 ರಂದು ಸಂಜೆ 5:47 ಕ್ಕೆ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈನ ದಕ್ಷಿಣ ಧ್ರುವದ ಬಳಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗುತ್ತದೆ. ಯಶಸ್ವಿ ಲ್ಯಾಂಡಿಂಗ್ ನಂತರ, ಮಿಷನ್ ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈನಲ್ಲಿ ಒಂದು ಚಂದ್ರನ ದಿನ ಅಂದ್ರೆ 14 ಭೂಮಿಯ ದಿನಗಳವರೆಗೆ ಡೇಟಾವನ್ನು ಸಂಗ್ರಹಿಸುತ್ತದೆ.