RationCard: ಹೊಸ ರೇಷನ್ ಕಾರ್ಡ್ ಶೀಘ್ರ ಅರ್ಜಿ ಸ್ವೀಕಾರ | ಕಂದಾಯ ಸಚಿವರ ಸೂಚನೆ | ಅರ್ಜಿ ಸಲ್ಲಿಕೆ ವಿಧಾನ ತಿಳಿಯಿರಿ
MrJazsohanisharma

RationCard: ಹೊಸ ರೇಷನ್ ಕಾರ್ಡ್ ಶೀಘ್ರ ಅರ್ಜಿ ಸ್ವೀಕಾರ | ಕಂದಾಯ ಸಚಿವರ ಸೂಚನೆ | ಅರ್ಜಿ ಸಲ್ಲಿಕೆ ವಿಧಾನ ತಿಳಿಯಿರಿ

 ಹೊಸ ಬಿಪಿಎಲ್ ಕಾರ್ಡ್ ವಿತರಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು; ಶೀಘ್ರದಲ್ಲಿಯೇ ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ನಡೆಯುವ ಸೂಚನೆ ಇದೆ…



ಹೊಸ ಬಿಪಿಎಲ್ ಪಡಿತರ ಚೀಟಿ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಡಿ ಕಾಂಗ್ರೆಸ್‌ನ ಯು.ಬಿ. ಬಣಕಾರ್, ರಾಜ್ಯದಲ್ಲಿ ಹೊಸ ಪಡಿತರ ಚೀಟಿ ನೀಡುವ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ನೀಡಬೇಕೆಂಬ ಆಗ್ರಹಕ್ಕೆ ಉತ್ತರ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ನೀಡಿರುವ ಶೇ.60 ಮೀರಿ ಶೇ.80 ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಕೇಂದ್ರದ ಕೆಲವು ನಿರ್ದಿಷ್ಟ ಸೂಚನೆಗಳನ್ನೂ ಮೀರಲಾಗಿದೆ. ಆರೋಗ್ಯ ವಿಚಾರ ಬಂದಾಗ ಎಲ್ಲರಿಂದಲೂ ಬಿಪಿಎಲ್ ಕಾರ್ಡ್ಗೆ ಬೇಡಿಕೆ ಬರುತ್ತಿದೆ. ಆದ್ದರಿಂದ ಬಿಪಿಎಲ್ ಕಾರ್ಡ್ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.


ಆನ್‌ಲೈನ್ ಅರ್ಜಿ ಬಂದ್

ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದ್ದ ಅವಕಾಶವನ್ನು ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇನ್ನೂ ಅವಕಾಶ ಕಲ್ಪಿಸಿಲ್ಲ. ಇದರಿಂದ ಬಡವರು ತೊಂದರೆ ಅನುಭವಿಸುವಂತಾಗಿದೆ.


ಈ ಹಿನ್ನೆಲೆಯಲ್ಲಿ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಾಗೂ ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು ಎಂದು ರಾಜ್ಯಾದ್ಯಂತ ಜನರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಗ್ರಹಿಸುತ್ತಿದ್ದಾರೆ.

ಪಡಿತರ ಚೀಟಿ ಕೊಡಿಸುವುದಾಗಿ ವಸೂಲಿ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬ೦ಧಿಸಿದ ವೆಬ್‌ಸೈಟ್‌ನಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಸ್ಥಗಿತವಾಗಿದೆ. ಇದರಿಂದಾಗಿ ಪ್ರಸ್ತುತ ನಾಡಕಚೇರಿ, ಗ್ರಾಮ ಪಂಚಾಯಿತಿಗಳು ಹಾಗೂ ಸೈಬರ್ ಕೇಂದ್ರಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪಡಿತರ ಚೀಟಿಗೆ ಅರ್ಜಿ ಸ್ವೀಕಾರ, ತಿದ್ದುಪಡಿ ಮತ್ತು ಹೆಸರು ಸೇರ್ಪಡೆ ಪ್ರಕ್ರಿಯೆಗಳು ನಡೆಯುತ್ತಿಲ್ಲ.


ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಂಡಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲದ ಕಾರಣ, ದಿನಗೂಲಿಯನ್ನು ಬಿಟ್ಟು ಪಡಿತರ ಚೀಟಿಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಅರ್ಜಿ ಹಾಕಿ ಪಡಿತರ ಚೀಟಿ ಕೊಡಿಸುವುದಾಗಿ ಜನರಿಂದ ಹಣ ವಸೂಲಿ ಮಾಡಿಕೊಳ್ಳುತ್ತಿದ್ದಾರೆ.


ಸರ್ಕಾರಿ ಸೌಲಭ್ಯಗಳಿಂದ ವಂಚಿತ

ಪಡಿತರ ಚೀಟಿ, ಹೆಸರು ಸೇರ್ಪಡೆ, ತಿದ್ದುಪಡಿ ಮಾಡಿಸಿಕೊಳ್ಳಲು ಸಾಧ್ಯವಾಗದ ಜನರು, ಸರ್ಕಾರದ ಹಲವು ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಇದರಲ್ಲಿ ರೋಗಿಗಳದ್ದೇ ದೊಡ್ಡ ಪಾಲು.


ಸರ್ಕಾರದ ವಿವಿಧ ಯೋಜನೆಗಳಡಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗೆ ಪಡಿತರ ಚೀಟಿ ಕೇಳುತ್ತಿದ್ದಾರೆ. ಆದರೆ, ಹೆಸರು ತಪ್ಪು ನಮೂದಾಗಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಮಕ್ಕಳು ಸೇರಿದಂತೆ ಇನ್ನಿತರರು ಉಚಿತ ಸೇವೆಯಿಂದ ವಂಚಿತರಾಗುವ೦ತಾಗಿದೆ.

ಶೀಘ್ರ ಅರ್ಜಿ ಸ್ವೀಕಾರ

ಶಸ್ತ್ರಚಿಕಿತ್ಸೆ, ಗಂಭೀರ ಕಾಯಿಲೆಗಳಿಗೆ ತುತ್ತಾಗಿರುವವರು ಪಡಿತರ ಚೀಟಿಗಾಗಿ ಕಾಯುತ್ತಿದ್ದಾರೆ. ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ದಾಖಲಾತಿ, ವಿದ್ಯಾರ್ಥಿ ವೇತನ, ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಸೇರಿದಂತೆ ಇತರೆ ಕಾರ್ಯಗಳಿಗೂ ಅಡ್ಡಿಯಾಗಿದೆ. ಇನ್ನು ಪರಿಶೀಲನೆ ನೆಪದಲ್ಲಿ ಅಧಿಕಾರಿಗಳು ಅನೇಕ ಬಡವರ ಬಿಪಿಎಲ್ ಚೀಟಿ ರದ್ದುಪಡಿಸಿದ್ದಾರೆ. ಇದಕ್ಕೆ ಹಲವರಿಗೆ ಪಡಿತರ ಆಹಾರ ಧಾನ್ಯಗಳು ಸಿಗುತ್ತಿಲ್ಲ.


ಈ ನಡುವೆ ಆನ್‌ಲೈನ್ ಮೂಲಕ ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಇಲಾಖೆಯಿಂದ ಯಾವುದೇ ನಿರ್ದೇಶನ ಬಂದಿಲ್ಲ. ಬಂದ ಕೂಡಲೇ ಸಾರ್ವಜನಿಕ ಪ್ರಕಟಣೆ ನೀಡಿ, ಜನರಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತದೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

1 Comments

  1. ದಯವಿಟ್ಡು ರೇಷನ ಕಾರ್ಡನ್ನು ಹೊಸದಾಗಿ ಮಾಡಿಸೋರು ಇದ್ದಾರೆ.ಮತ್ತು ತಿದ್ದುಪಡಿ ಮಾಡಸೋರು ಇದ್ದಾರೆ.ಹೆಣ್ಣು ‌ಮಕ್ಕಲ ಮದುವೆ ಆಗಿರುವವರು ತಂದೆ ಮನೆಯಿಂದ ಗಂಡನ‌ಮನೆಯವರ ಜೊತೆ ಸೇರಿಸಲು ಆಗುತ್ತಾ ಇಲ್ಲಾ ಹಾಗಾಗಿ ದಯವಿಟ್ಟು ಸಚಿವರುಗಳು ಇದರ ಬಗ್ಗೆ ಗಮನಹರಿಸೊ ಆದಷ್ಡು ಬೇಗನೆ ಬದಲಾವಣೆ ಮಾಡಲು ತಿಳಿಸಿ

    ReplyDelete
Previous Post Next Post

Top Post Ad

CLOSE ADS
CLOSE ADS
×