ಕರ್ನಾಟಕ ಲೋಕಸೇವಾ ಆಯೋಗವು ಜುಲೈ ತಿಂಗಳಿನಲ್ಲಿ 400 ಗೆಜೆಟೆಡ್ ಪ್ರೊಬೇಷನರಿ ಹಾಗೂ 115 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಸರಣಿ ಅಧಿಸೂಚನೆ ಹೊರಡಿಸಲು ಸಜ್ಜಾಗಿದೆ. ಎಫ್‌ಡಿಎ, ಎಸ್‌ಡಿಎ ಹಾಗೂ ಗ್ರೂಪ್ ‘ಸಿ’ ಹುದ್ದೆಗಳ ಭರ್ತಿಗೆ ಕಾಲಮಿತಿಯ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ಮೂರು ಹಂತದ ಪರೀಕ್ಷೆಗಳು ನಡೆಯಲಿವೆ ಎಂದು ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ತಿಳಿಸಿದ್ದಾರೆ. ಆದರೆ, ಹೈಕೋರ್ಟ್ ನಿರ್ಬಂಧವಿರುವುದರಿಂದ ಹಳೆಯ ಕೆಎಎಸ್ ಫಲಿತಾಂಶ ಸದ್ಯಕ್ಕೆ ಪ್ರಕಟವಾಗುವುದಿಲ್ಲ.
ಜುಲೈನಲ್ಲಿ ಸರ್ಕಾರದ ನಾನಾ ಇಲಾಖೆಗಳಲ್ಲಿ ಹುದ್ದೆಗಳಿಗೆ ನೇಮಕಾತಿ ಧಮಾಕಾ.ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಶೀಘ್ರ ಸರಣಿ ಅಧಿಸೂಚನೆ, ವೇಳಾಪಟ್ಟಿ ಪ್ರಕಟಿಸಲು ಕೆಪಿಎಸ್‌ಸಿ ಸಿದ್ಧತೆ.ಹೇಗಿರಲಿದೆ ನೇಮಕಾತಿ ಪ್ರಕ್ರಿಯೆ, ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ?
ಕರ್ನಾಟಕ ಲೋಕಸೇವಾ ಆಯೋಗ ಜುಲೈ ತಿಂಗಳಲ್ಲಿ 400 ಗೆಜೆಟೆಡ್ ಪ್ರೊಬೇಷನರಿ ಹುದ್ದೆ, ಸುಮಾರು 115 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆ ಸೇರಿ ಒಂದು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಕ್ಕೆ ಸರಣಿ ಅಧಿಸೂಚನೆಗಳನ್ನು ಹೊರಡಿಸಲು ಸಿದ್ಧತೆ ಮಾಡಿಕೊಂಡಿದೆ.
ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ನೀಲನಕ್ಷೆ ರೂಪಿಸಿಕೊಂಡಿರುವ ಆಯೋಗ, ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳ ಜತೆಗೆ ವಿವಿಧ ಸಚಿವಾಲಯ/ ಇಲಾಖೆಗಳಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಮತ್ತು ‘ಸಿ’ ಗುಂಪಿನ ಹುದ್ದೆಗಳೂ ಸೇರಿದಂತೆ ಸಾವಿರಾರು ಹುದ್ದೆಗಳಿಗೆ ಕಾಲಮಿತಿಯ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಯಾರಿ ನಡೆಸಿದೆ. ಹಾಗಾಗಿ, ನಾಗರಿಕ ಸೇವಾ ಆಕಾಂಕ್ಷಿಗಳು ಹಾಗೂ ಸರ್ಕಾರಿ ಸೇವೆಯ ಕನಸು ಹೊಂದಿರುವ ಯುವ ಜನತೆ ಆಯೋಗದ ಪರೀಕ್ಷೆಗಳನ್ನು ಎದುರಿಸಿ, ಉದ್ಯೋಗ ಗಿಟ್ಟಿಸಿಕೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳಬಹುದಾಗಿದೆ. ನಿಗದಿತ ವೇಳಾಪಟ್ಟಿಯಂತೆ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಕೆಪಿಎಸ್‌ಸಿ ತನಗೆ ಅಂಟಿರುವ ‘ವಿಳಂಬ ನೇಮಕಾತಿ’ಯ ಕಳಂಕವನ್ನೂ ತೊಡೆದುಕೊಳ್ಳಲು ಮುಂದಾಗಿದೆ.
ತಾತ್ಕಾಲಿಕ ವೇಳಾಪಟ್ಟಿ
ಶೇ.50ರಷ್ಟು ಮೀಸಲು ಆದೇಶಕ್ಕೆ ಒಳಪಟ್ಟು ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲು ನ್ಯಾಯಾಲಯದಿಂದ ಸದ್ಯ ಯಾವುದೇ ತಡೆ ಇಲ್ಲ. ಹಾಗಾಗಿ, ಆಯೋಗ ಈಗಾಗಲೇ (ಜೂನ್ 5) ಯಾವ್ಯಾವ ಇಲಾಖೆಗಳ ಸಂಬಂಧ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದೆಂದು ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿ, ಈಗ ಅಂತಿಮ ವೇಳಾಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.
ಈ ಕುರಿತು ‘‘ತಾತ್ಕಾಲಿಕ ವೇಳಾಪಟ್ಟಿಯಂತೆ ಜುಲೈ ತಿಂಗಳಲ್ಲಿ ಬಹುತೇಕ ಎಲ್ಲಾ ನೇಮಕಾತಿಗಳ ಅಧಿಸೂಚನೆಗಳು ಹೊರಬೀಳಲಿವೆ. ವಿವಿಧ ಇಲಾಖೆಗಳಿಂದ ಪ್ರಸ್ತಾವ ಸ್ವೀಕರಿಸಿದ ಕೂಡಲೇ ಆಯೋಗ ನಿರ್ದಿಷ್ಟ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷಾ ದಿನಾಂಕ ಸೇರಿ ಇಡೀ ನೇಮಕ ಪ್ರಕ್ರಿಯೆಯ ನಿರ್ದಿಷ್ಟ ವೇಳಾಪಟ್ಟಿಯ ಅಧಿಸೂಚನೆಗಳನ್ನು ಪ್ರಕಟಿಸಲಿದೆ. ಅದಕ್ಕಾಗಿ ಆಯೋಗ ಏನೇನು ಸಿದ್ಧತೆಗಳು ಬೇಕೋ ಅವುಗಳನ್ನು ಮಾಡಿಕೊಳ್ಳುತ್ತಿದೆ,’’ ಎಂದು ಆಯೋಗದ ಕಾರ್ಯದರ್ಶಿ ಕೆ.ಜ್ಯೋತಿ ತಿಳಿಸಿದ್ದಾರೆ.
ಮೂರು ವಿಧಾನಗಳ ಪರೀಕ್ಷೆ
ಆಯೋಗ ಖಾಲಿ ಹುದ್ದೆಗಳನ್ನು ತುಂಬಲು ಮೂರು ವಿಧಾನಗಳ ಪರೀಕ್ಷಾ ಪದ್ಧತಿ ಅನುಸರಿಸಲು ತೀರ್ಮಾನಿಸಿದೆ. ಅದರಂತೆ ಮೊದಲನೆಯದಾಗಿ, ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆಗಳನ್ನು ನಡೆಸಲಿದೆ. ಎರಡನೇಯದಾಗಿ, ಕೆಲವು ಇಲಾಖೆಗಳ ‘ಎ’ ವೃಂದದ ಹುದ್ದೆಗಳಿಗೆ ಕೇವಲ ಪರೀಕ್ಷೆಗಳನ್ನು ನಡೆಸಿ, ಜ್ಯೇಷ್ಠತೆ ಆಧಾರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅಲ್ಲದೆ, ಮೂರನೆಯದಾಗಿ ತಾಂತ್ರಿಕ ಪರಿಣತಿ ಅವಶ್ಯಕತೆ ಇರುವಂತಹ ಕೆಲವು ಗ್ರೂಪ್ ‘ಬಿ’ ಹುದ್ದೆಗಳಿಗೆ ಕೇವಲ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸಲು ಆಯೋಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಒಟ್ಟಾರೆ ಡಿಸ್ಕ್ರಿಪ್ಟೀವ್ ವಿಧಾನದ ಎಲ್ಲಾ ಪರೀಕ್ಷೆಗಳನ್ನು ಆಯೋಗ ನಡೆಸಬೇಕು ಮತ್ತು ಒಎಂಆರ್ ಪದ್ಧತಿಯಲ್ಲಿ ಉತ್ತರಿಸುವಂತಹ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಬೇಕೆಂದು ಸರ್ಕಾರ ಸೂಚಿಸಿದೆ.
ಯಾವ್ಯಾವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ?
* ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರು (ಎಫ್‌ಡಿಎ)
* ನಾನಾ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರು (ಎಸ್‌ಡಿಎ)
* ಪದವಿ ವಿದ್ಯಾರ್ಹತೆಯ ಗ್ರೂಪ್ ‘ಸಿ’ ಹುದ್ದೆಗಳು
* 400 ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳು
* 115 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
* ಲೆಕ್ಕ ಪರಿಶೋಧನಾ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧನಾಧಿಕಾರಿ
ಕೆಎಎಸ್ ಫಲಿತಾಂಶ ಸದ್ಯಕ್ಕಿಲ್ಲ
ಈ ಮಧ್ಯೆ, 2024ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ ನೇಮಕ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ಸಂದರ್ಶನ ಪ್ರಕ್ರಿಯೆ ಮುಗಿದು ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧವಾಗಿದ್ದರೂ ಆಯೋಗ ಅದನ್ನು ಪ್ರಕಟಿಸಲಾಗುತ್ತಿಲ್ಲ. ಮೀಸಲು ವಿವಾದದ ಪ್ರಕರಣದಲ್ಲಿ ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಕಳೆದ ವಾರ ಆಯೋಗ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮನವಿ ಮಾಡಿದರೂ ಅನುಮತಿ ನೀಡಿಲ್ಲ. ನ್ಯಾಯಾಲಯದಿಂದ ಅನುಮೋದನೆ ಸಿಗದ ಹೊರತು ಆಯೋಗ ಸದ್ಯಕ್ಕೆ ಫಲಿತಾಂಶ ಪ್ರಕಟಿಸುವಂತಿಲ್ಲ. ಹಾಗಾಗಿ, ಆಯೋಗ ಸುಮ್ಮನೆ ಕೂರದೆ ಹೊಸ ನೇಮಕ ಪ್ರಕ್ರಿಯೆ ಕೈಗೆತ್ತಿಕೊಂಡಿದೆ.
"ಕರ್ನಾಟಕ ಲೋಕಸೇವಾ ಆಯೋಗ ಈಗಾಗಲೇ ವಿವಿಧ ನೇಮಕಾತಿ ಸಂಬಂಧ ಅಧಿಸೂಚನೆಗಳನ್ನು ಪ್ರಕಟಿಸಲು ಎಲ್ಲಾ ಸಿದ್ಧತೆ ನಡೆಸಿದೆ. ಸರ್ಕಾರದ ಇಲಾಖೆಗಳಿಂದ ಪ್ರಸ್ತಾವ ಬಂದ ಹಾಗೆ ಅಧಿಸೂಚನೆ ಹೊರಡಿಸಿ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗುವುದು."-ಕೆ. ಜ್ಯೋತಿ, ಕಾರ್ಯದರ್ಶಿ, ಕೆಪಿಎಸ್‌ಸಿ
0 Comments