ದೇಶದ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಇಪಿಎಫ್‌ಒ ಸದಸ್ಯರು ತಮ್ಮ ಭವಿಷ್ಯ ನಿಧಿ (PF) ಖಾತೆಯಿಂದ ತಮಗೆ ಅಗತ್ಯವಿರುವ ಅರ್ಹ ಮೊತ್ತವನ್ನು ನೇರವಾಗಿ ಯುಪಿಐ (UPI) ಮೂಲಕವೇ ಡ್ರಾ ಮಾಡಿಕೊಳ್ಳಬಹುದು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಅವರು ಯುಪಿಐ ಪೇಮೆಂಟ್ ಗೇಟ್‌ವೇ ಪರೀಕ್ಷೆಯು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಈ ಸೇವೆ ದೇಶದ 8 ಕೋಟಿ ಪಿಎಫ್ ಚಂದಾದಾರರಿಗೆ ಲಭ್ಯವಾಗಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಈ ಹೊಸ ತಂತ್ರಜ್ಞಾನದ ಇಪಿಎಫ್‌ಒ 3.0 (EPFO 3.0) ವ್ಯವಸ್ಥೆಯು ಈ ಹಿಂದೆ ಪಿಎಫ್ ಹಣ ಕೈ ಸೇರಲು ತೆಗೆದುಕೊಳ್ಳುತ್ತಿದ್ದ ವಾರಗಳ ಸಮಯವನ್ನು ಕೇವಲ ಕೆಲವು ಸೆಕೆಂಡುಗಳಿಗೆ ಇಳಿಸಲಿದೆ. ಇದರಲ್ಲಿ ಮಾಲೀಕರ (Employer) ಮ್ಯಾನುವಲ್ ಅನುಮೋದನೆಯ ಅಗತ್ಯ ಇರುವುದಿಲ್ಲ. ಇದರಿಂದಾಗಿ ಪಿಎಫ್ ಹಣ ಹಿಂಪಡೆಯುವ ಪ್ರಕ್ರಿಯೆಯು ಸಂಪೂರ್ಣವಾಗಿ ಪೇಪರ್‌ಲೆಸ್ ಮತ್ತು ಸುಲಭವಾಗಲಿದೆ.
ಈಗಿರುವ ತೊಂದರೆಗಳಿಗೆ ಮುಕ್ತಿ!
ಪ್ರಸ್ತುತ ಇರುವ ನಿಯಮಗಳ ಪ್ರಕಾರ, ಪಿಎಫ್ ಕ್ಲೈಮ್ ಪ್ರಕ್ರಿಯೆಗೆ 7 ರಿಂದ 10 ದಿನಗಳ ಸಮಯ ಬೇಕಾಗುತ್ತದೆ. ಒಂದು ವೇಳೆ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಬೇಕಾದರೆ ಕಠಿಣವಾದ ಮ್ಯಾನುವಲ್ ಪರಿಶೀಲನೆ ನಡೆಯುತ್ತದೆ. ಜೊತೆಗೆ, ದಾಖಲೆಗಳಲ್ಲಿ ಸಣ್ಣ ಹೆಸರಿನ ಬದಲಾವಣೆ ಅಥವಾ ಜನ್ಮ ದಿನಾಂಕದ ತಪ್ಪುಗಳಿದ್ದರೂ ಕ್ಲೈಮ್ ತಿರಸ್ಕೃತಗೊಳ್ಳುತ್ತದೆ. ಆದರೆ ಹೊಸ ಯುಪಿಐ ವ್ಯವಸ್ಥೆಯು ಈ ಎಲ್ಲಾ ತೊಂದರೆಗಳಿಗೆ ಶಾಶ್ವತ ಮುಕ್ತಿ ನೀಡಲಿದೆ.
ಯುಪಿಐ ಪಿಎಫ್ ಡ್ರಾ ಹೇಗೆ ಕೆಲಸ ಮಾಡುತ್ತದೆ?
ಉಮಾಂಗ್ (UMANG) ಆಪ್ ಬಳಕೆ: ಉದ್ಯೋಗಿಗಳು ಉಮಾಂಗ್ ಆಪ್ ಮೂಲಕ ತಮ್ಮ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ಎಷ್ಟು ಮೊತ್ತವನ್ನು ನೇರವಾಗಿ ವರ್ಗಾಯಿಸಬಹುದು ಎಂಬುದನ್ನು ಪರಿಶೀಲಿಸಬಹುದು.
ಇನ್‌ಸ್ಟಂಟ್ ಹಣ ವರ್ಗಾವಣೆ: ಯುಪಿಐ ಪಿನ್ (UPI PIN) ಬಳಸಿಕೊಂಡು ತಕ್ಷಣವೇ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಳ್ಳಬಹುದು. ಅನಾರೋಗ್ಯ, ಶಿಕ್ಷಣ, ಮದುವೆ ಮತ್ತು ಮನೆ ನಿರ್ಮಾಣದಂತಹ ತುರ್ತು ಅಗತ್ಯಗಳಿಗಾಗಿ 3 ದಿನಗಳ ಒಳಗಾಗಿ ಹಣ ನಿಮ್ಮ ಕೈಸೇರಲಿದೆ.
ಎಟಿಎಂ ಮೂಲಕವೂ ವಿತ್‌ಡ್ರಾ: ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದ ಬಳಿಕ, ಯುಪಿಐ ಸೌಲಭ್ಯವಿರುವ ಎಟಿಎಂ (ATM) ಮೂಲಕ ಅಥವಾ ನೇರ ಯುಪಿಐ ಟ್ರಾನ್ಸ್‌ಫರ್ ಬಳಸಿ ಹಣವನ್ನು ಎಲ್ಲಿ ಬೇಕಾದರೂ ಉಪಯೋಗಿಸಬಹುದು.
ಹಣ ಹಿಂಪಡೆಯುವ ಮಿತಿ ಮತ್ತು ನಿಬಂಧನೆಗಳು
ಉದ್ಯೋಗಿಗಳ ನಿವೃತ್ತಿ ಜೀವನದ ಭದ್ರತೆಗಾಗಿ ಪಿಎಫ್ ಖಾತೆಯ ಒಟ್ಟು ಮೊತ್ತದ ಶೇಕಡಾ 25 ರಷ್ಟನ್ನು ಯಾವಾಗಲೂ ಲಾಕ್ ಮಾಡಲಾಗಿರುತ್ತದೆ. ಅಂದರೆ, ಉಳಿದ ಶೇಕಡಾ 50 ರಿಂದ 75 ರಷ್ಟು ಅರ್ಹ ಮೊತ್ತವನ್ನು ಮಾತ್ರ ಯುಪಿಐ ಅಥವಾ ಎಟಿಎಂ ಮೂಲಕ ಹಿಂಪಡೆಯಲು ಸಾಧ್ಯವಾಗುತ್ತದೆ. ಆಪ್‌ನಲ್ಲಿಯೇ 'ಅರ್ಹ ಬ್ಯಾಲೆನ್ಸ್' ಎಷ್ಟು ಎಂಬುದು ಸ್ಪಷ್ಟವಾಗಿ ಕಾಣಿಸಲಿದೆ.
ಈ ಅದ್ಭುತ ಸೌಲಭ್ಯವನ್ನು ಪಡೆಯಲು ಸದಸ್ಯರು ಸಕ್ರಿಯ ಯುಎಎನ್ (UAN) ಸಂಖ್ಯೆಯನ್ನು ಹೊಂದಿರಬೇಕು. ಇದರೊಂದಿಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ (PAN) ಕಾರ್ಡ್ ಅನ್ನು ಯುಎಎನ್ ಸಂಖ್ಯೆಗೆ ಲಿಂಕ್ ಮಾಡಿ ಪರಿಶೀಲಿಸಿರಬೇಕು. ಮುಖ್ಯವಾಗಿ, ನಿಮ್ಮ ಪಿಎಫ್ ದಾಖಲೆಗಳು ಮತ್ತು ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಹಾಗೂ ಜನ್ಮ ದಿನಾಂಕಗಳು ಯಾವುದೇ ವ್ಯತ್ಯಾಸವಿಲ್ಲದೆ ಒಂದೇ ಆಗಿರಬೇಕು. ಇದರ ಜೊತೆಗೆ, ವಾಟ್ಸಾಪ್ ಚಾಟ್‌ಬಾಟ್ (WhatsApp Chatbot) ಸೌಲಭ್ಯವನ್ನೂ ತರಲಾಗುತ್ತಿದ್ದು, ಕೇವಲ ಒಂದು ಮೆಸೇಜ್ ಕಳುಹಿಸುವ ಮೂಲಕ ಬ್ಯಾಲೆನ್ಸ್ ಪರಿಶೀಲಿಸಬಹುದಾಗಿದೆ,(ಏಜೆನ್ಸೀಸ್).
0 Comments