PM Kisan Scheme Update In Budget: ಈ ಬಾರಿಯ ಮಧ್ಯಂತರ ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಹಣದ ನೆರವನ್ನು ದ್ವಿಗುಣಗೊಳಿಸುವ ಸಾಧ್ಯತೆ ಇದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದ್ದು, ಜನವರಿ 31ರಿಂದ ಫೆಬ್ರುವರಿ 9ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಬಾರಿಯ ಮಧ್ಯಂತರ ಬಜೆಟ್ನಲ್ಲಿ ಮಹತ್ವದ ಘೋಷಣೆಗಳ ಸಾಧ್ಯತೆ ಬಹಳ ಕಡಿಮೆ. ಆದರೆ, ಕೃಷಿಕ ಮಹಿಳೆಯರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಧನ ಸಹಾಯ ದ್ವಿಗುಣಗೊಳ್ಳಬಹುದು ಎನ್ನಲಾಗುತ್ತಿದೆ. ಫೆಬ್ರುವರಿ 1ರ ಬಜೆಟ್ನಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಬರಬಹುದು ಎಂದು ವರದಿಗಳು ಹೇಳುತ್ತಿವೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಈಗ ವರ್ಷಕ್ಕೆ 6,000 ರೂ ರೂ ನೀಡಲಾಗುತ್ತಿದೆ. ಮಹಿಳಾ ಕೃಷಿಕರಿಗೆ ಇದು 12,000 ರೂಗೆ ಹೆಚ್ಚಾಗಬಹುದು. ಅಂದರೆ, ಜಮೀನು ಮಾಲಕತ್ವ ಹೊಂದಿರುವ ಮಹಿಳೆಯರಿಗೆ ಹೆಚ್ಚಿನ ಧನಸಹಾಯ ಸಿಗಬಹುದು. ಇದು ಬಿಟ್ಟರೆ ಬೇರೆ ಮಧ್ಯಂತರ ಬಜೆಟ್ನಲ್ಲಿ ಪ್ರಮುಖ ನಿರ್ಧಾರ ಬರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಹಿಂದೆ ಕೆಲ ವರದಿಗಳ ಪ್ರಕಾರ ಪಿಎಂ ಕಿಸಾನ್ ಯೋಜನೆಯಲ್ಲಿ ಹಣದ ಮೊತ್ತವನ್ನು ಸರ್ಕಾರ ಹೆಚ್ಚಿಸಲು ಯೋಜಿಸಿದೆ ಎಂದು ಹೇಳಲಾಗಿತ್ತು. 6,000 ರೂ ಇರುವ ಧನಸಹಾಯದ ಮೊತ್ತವನ್ನು 8,000 ರೂಗೆ ಹೆಚ್ಚಿಸಬಹುದು ಎನ್ನಲಾಗಿತ್ತು. ಸರ್ಕಾರ ಈ ಯೋಜನೆಯ ಸರ್ವ ಫಲಾನುಭವಿಗಳಿಗೂ ನೆರವು ಹೆಚ್ಚಿಸುತ್ತದಾ? ಅಥವಾ ಮಹಿಳಾ ಕೃಷಿಕರನ್ನು ಮಾತ್ರವೇ ಗುರಿ ಮಾಡಿ ಸಹಾಯ ನೀಡುತ್ತದಾ ಸ್ಪಷ್ಟವಾಗಿಲ್ಲ.
ಜನವರಿ 31ರಿಂದ ಫೆಬ್ರುವರಿ 9ರವರೆಗೆ ಬಜೆಟ್ ಅಧಿವೇಶನ
ಬಜೆಟ್ ಮಂಡನೆಗೆ ಒಂದು ದಿನ ಮುಂಚೆ, ಅಂದರೆ, ಜನವರಿ 31ರಂದ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಅಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ನಲ್ಲಿ ಜಂಟಿ ಅಧಿವೇಶನ (Joint session) ಉದ್ದೇಶಿಸಿ ಭಾಷಣ ಮಾಡುತ್ತಾರೆ. ಅದಾದ ಮರುದಿನ, ಫೆಬ್ರುವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ನಡೆಯಲಿದೆ.
ಇಂಡಿಯಾ ಟುಡೇ ವರದಿ ಪ್ರಕಾರ, ಬಜೆಟ್ ಅಧಿವೇಶನ ಫೆಬ್ರುವರಿ 9ರವರೆಗೆ ನಡೆಯಲಿದೆ. ಜನವರಿ 31ರಂದು ಆರಂಭವಾಗಿ 11 ದಿನಗಳ ಅವಧಿಯವರೆಗೆ ಅಧಿವೇಶನ ನಡೆಯುವ ಸಾಧ್ಯತೆ ಇದೆ.