WhatsApp Ban: ಭಾರತದಲ್ಲಿ 71 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಅಕೌಂಟ್‌ಗಳು ಬ್ಯಾನ್‌

 ಮಿಲಿಯನ್‌ ಗಟ್ಟಲೇ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ಆಗಾಗ್ಗೆ ತನ್ನ ಕೆಲವು ಬಳಕೆದಾರರ ಅಕೌಂಟ್‌ಗಳನ್ನು ನಿಷೇಧಿಸುವ ಮೂಲಕ



ಮಿಲಿಯನ್‌ ಗಟ್ಟಲೇ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ (WhatsApp) ಆಗಾಗ್ಗೆ ತನ್ನ ಕೆಲವು ಬಳಕೆದಾರರ ಅಕೌಂಟ್‌ಗಳನ್ನು ನಿಷೇಧಿಸುವ (Accounts Ban) ಮೂಲಕ ಪ್ಲಾಟ್‌ಫಾರ್ಮ್‌ ಅನ್ನು ಸುರಕ್ಷಿತವಾಗಿರಿಸುವ ಕೆಲಸ ಮಾಡುತ್ತದೆ. ಇತ್ತೀಚೆಗೆ ಕೂಡ ವಾಟ್ಸಾಪ್‌ ಅಸುರಕ್ಷಿತ ಖಾತೆಗಳಿಗೆ ಮೇಜರ್‌ ಸರ್ಜರಿ ಮಾಡಿದ್ದು, ಲಕ್ಷಾಂತರ ಅಕೌಂಟ್‌ಗಳನ್ನು ಬ್ಲಾಕ್‌ ಮಾಡಿದೆ. ಕಂಪನಿಯು ಪ್ರತಿ ತಿಂಗಳು ಬಳಕೆದಾರರ ಸುರಕ್ಷತಾ ವರದಿಯನ್ನು ಬಿಡುಗಡೆ ಮಾಡುತ್ತದೆ. ಸುರಕ್ಷತೆ ಮತ್ತು ಭದ್ರತೆ ಕುರಿತಾಗಿ ಬಳಕೆದಾರರಿಂದ ದೂರುಗಳನ್ನು ವಾಟ್ಸಾಪ್‌ ಸ್ವೀಕರಿಸುತ್ತದೆ.

ಈ ದೂರುಗಳ ಅನ್ವಯ ಆ ಅಕೌಂಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲೂ ಇದೇ ರೀತಿಯ ದೂರಗಳು ಬಂದ ಕಾರಣ ಸಂಸ್ಥೆಯು 71 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಅಕೌಂಟ್‌ಗಳು ಬ್ಯಾನ್ ಮಾಡಿದೆ.

ವಾಟ್ಸಾಪ್‌ನಲ್ಲಿ ನಿಂದನೆ ಅಥವಾ ಹಾನಿಕಾರಕ ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳ ಕಾರಣ ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ 71 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್‌ ಮಾಡುವ ಮೂಲಕ ವಾಟ್ಸಾಪ್‌ ವೇದಿಕೆಯನ್ನು ಶುದ್ಧೀಕರಿಸಲಾಗಿದೆ ಮತ್ತು ಐಟಿ ನಿಯಮಗಳಿಗೆ ಅನುಸಾರವಾಗಿ ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ಕಂಪನಿ ಹೇಳಿದೆ.

ಇತ್ತೀಚಿನ ಭಾರತದ ಮಾಸಿಕ ವರದಿಯ ಪ್ರಕಾರ, 71.1 ಲಕ್ಷ ಖಾತೆಗಳಲ್ಲಿ, 25.7 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಮಾಡುವ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ

“1 ಸೆಪ್ಟೆಂಬರ್, 2023 ಮತ್ತು 30 ಸೆಪ್ಟೆಂಬರ್ 2023 ರ ನಡುವೆ, 71,11,000 ವ್ಯಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಇದರಲ್ಲಿ ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲೇ 25,71,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ” ಎಂದು ಮೆಟಾ ಕಂಪನಿ ತಿಳಿಸಿದೆ.

ವಾಟ್ಸಾಪ್ ಸೆಪ್ಟೆಂಬರ್ 1-30 ರ ನಡುವೆ ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ ಆರು ಆದೇಶಗಳನ್ನು ಸ್ವೀಕರಿಸಿದ್ದು, ಮೆಟಾ-ಮಾಲೀಕತ್ವದ ಕಂಪನಿಯು ಎಲ್ಲಾ ಆರು ಆದೇಶಗಳನ್ನು ಅನುಸರಿಸಿ ಈ ಕ್ರಮ ತೆಗೆದುಕೊಂಡಿದೆ.

10,000 ದೂರು ಮತ್ತು ವರದಿ

ಸೆಪ್ಟೆಂಬರ್‌ನಲ್ಲಿ ಖಾತೆ ಬೆಂಬಲ (1,031 ದೂರು), ಬ್ಯಾನ್ ಮೇಲ್ಮನವಿ (7,396), ಇತರ ಬೆಂಬಲ (1,518), ಉತ್ಪನ್ನ ಬೆಂಬಲ (370) ಮತ್ತು ಸುರಕ್ಷತೆ (127) ಈ ಎಲ್ಲಾ ವಿಭಾಗಗಳಿಗೆ ಸಂಬಂಧಿಸಿದಂತೆ 10,442 ಬಳಕೆದಾರರ ವರದಿಗಳನ್ನು ಸ್ವೀಕರಿಸಲಾಗಿದೆ. ಈ ಅವಧಿಯಲ್ಲಿ 85 ಖಾತೆಗಳಿಗೆ ಬಂದ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಸ್ಪಷ್ಟ ಪಡಿಸಿದೆ

“Accounts Actioned” ವರದಿಯನ್ನು ಆಧರಿಸಿ ಮೇಸೇಜಿಂಗ್‌ ವೇದಿಕೆ ಪರಿಹಾರ ಕ್ರಮಗಳನ್ನು ಕೈಗೊಂಡ ವರದಿಗಳನ್ನು ಉಲ್ಲೇಖಿಸುತ್ತದೆ ಮತ್ತು ಕ್ರಮ ಕೈಗೊಳ್ಳುವುದು ಎಂದರೆ ಖಾತೆಯನ್ನು ನಿಷೇಧಿಸುವುದು ಅಥವಾ ಈ ಹಿಂದೆ ನಿಷೇಧಿತ ಖಾತೆಯನ್ನು ಮರುಸ್ಥಾಪಿಸುವುದನ್ನು ಒಳಗೊಂಡಿರುತ್ತದೆ

ಬಳಕೆದಾರರ ಸುರಕ್ಷತೆಯೇ ಮುಖ್ಯ ಉದ್ದೇಶ

ತನ್ನ ಸೇವಾ ಬಳಕೆದಾರರನ್ನು ಸುರಕ್ಷಿತವಾಗಿರಿಸುವ ಪ್ರಮುಖ ಉದ್ದೇಶದ ಕಾರಣ ವಾಟ್ಸಾಪ್ ಖಾತೆಯ ಮೂಲಕ ಅಪರಾಧ ಕೃತ್ಯಗಳನ್ನು ಎಸಗುವ, ಸುಳ್ಳು ಸುದ್ದಿಗಳನ್ನು ಹರಡುವ ಅಥವಾ ಇನ್ಯಾವುದೇ ದುರುದ್ದೇಶಪೂರಿತ ಮತ್ತು ಕಾನೂನು ಬಾಹಿರ ಚಟುವಟಿಕೆ ನಡೆಸುವ ಖಾತೆಯನ್ನು ಪತ್ತೆಹಚ್ಚಿ ನಂತರ ಆ ಎಲ್ಲಾ ಖಾತೆಗಳನ್ನು ಸಂಸ್ಥೆ ನಿಷೇಧಿಸುವ ಕೆಲಸ ಮಾಡುತ್ತದೆ.

ಐಟಿ ನಿಯಮಗಳು 2021ರ ಅಡಿಯಲ್ಲಿ ಬಳಕೆದಾರರು ಭಾರತದ ಏಕತೆಗೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ, ಅಶ್ಲೀಲವಾದ, ಹಕ್ಕುಸ್ವಾಮ್ಯ ಅಥವಾ ಪೇಟೆಂಟ್ ಅನ್ನು ಉಲ್ಲಂಘಿಸುವ ಅಥವಾ ಸಾಫ್ಟ್‌ವೇರ್ ವೈರಸ್ ಹೊಂದಿರುವ ವಿಷಯವನ್ನು ರಚಿಸಲು, ಅಪ್‌ಲೋಡ್ ಮಾಡಲು ಅಥವಾ ಹಂಚಿಕೊಳ್ಳಲು ನಿಷೇಧಿಸಲಾಗಿದೆ. ಹೀಗಾಗಿ ಈ ನಿಯಮದನುಸಾರ ವಾಟ್ಸಾಪ್‌ ಈ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.


Previous Post Next Post