ಕಡೆಗೂ ಹೊಸ ಪಡಿತರ ಚೀಟಿ ವಿತರಿಸುವ ಬಗ್ಗೆ ಸರ್ಕಾರ ಆಹಾರ ಇಲಾಖೆಗೆ ನಿರ್ದೇಶಿಸಿದೆ. ಯಾರಿಗೆಲ್ಲ ಹೊಸ ರೇಷನ್ ಕಾರ್ಡ್ ಸಿಗಲಿದೆ? ಯಾವಾಗ ಸಿಗಲಿದೆ? ಮಾಹಿತಿ ಇಲ್ಲಿದೆ…
New Ration Card:
ವರ್ಷಗಳಿಂದ ಹೊಸ ರೇಷನ್ ಕಾರ್ಡ್’ಗಾಗಿ ಹಂಬಲಿಸುತ್ತಿದ್ದ ಫಲಾನುಭವಿಗಳಿಗೆ ಸರಕಾರ ಗುಡ್‌ನ್ಯೂಸ್ ನೀಡಿದೆ. ಆಹಾರ ಇಲಾಖೆಯ ಆದ್ಯತಾ (Priority Household – PHH) ಹಾಗೂ ಆದ್ಯತೇತರ ಪಡಿತರ (Non-Priority Household – NPHH) ಎರಡೂ ರೀತಿಯ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ, ಹೊಸ ಪಡಿತರ ಚೀಟಿ ವಿತರಿಸುವ ಬಗ್ಗೆ ಸರ್ಕಾರದಿಂದ ಆಹಾರ ಇಲಾಖೆಗೆ ನಿರ್ದೇಶಿಸಲಾಗಿದೆ.
ಹೊಸ ರೇಷನ್ ಕಾರ್ಡ್’ಗಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಲು ಆಹಾರ ಇಲಾಖೆಯು (Department of Food and Civil Supplies) ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮತಿಗಾಗಿ ಕಾದು ಕುಳಿತಿತ್ತು. ಕಳೆದ ಸೆಪ್ಟೆಂಬರ್ 29ರಂದು ಹೊಸ ಪಡಿತರ ಚೀಟಿಗಾಗಿ ಬಾಕಿ ಉಳಿದಿರುವ ಅರ್ಜಿಗಳನ್ನು ಅಧಿಕಾರಿಗಳು ಇತ್ಯರ್ಥಪಡಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸರ್ಕಾರಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಇದೀಗ BPL ಮತ್ತು APL ಎರಡೂ ರೀತಿಯ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ವಿತರಿಸುವಂತೆ ಇಲಾಖೆಗೆ ನಿರ್ದೇಶಿಸಲಾಗಿದೆ.
ಎಷ್ಟು ಜನಕ್ಕೆ ಸಿಗಲಿದೆ ಹೊಸ ರೇಷನ್ ಕಾರ್ಡ್?
ರಾಜ್ಯ ಸರಕಾರದ ಅನ್ನಭಾಗ್ಯ, ಗೃಹಲಕ್ಷ್ಮಿ (Gruhalakshmi) ಯೋಜನೆ ಪ್ರಯೋಜನ ಪಡೆಯಲು ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಜತೆಗೆ ವಿವಿಧ ಯೋಜನೆಗಳಿಗೂ ರೇಷನ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಮೇಲಾಗಿ ವರ್ಷಗಳಿಂದ ರೇಷನ್ ಕಾರ್ಡ್ (Ration Card Application) ಅರ್ಜಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಕಾರಣಕ್ಕೆ ಹೊಸ ರೇಷನ್ ಕಾರ್ಡ್ ವಿತರಿಸುವಂತೆ ಪದೇ ಪದೆ ಆಗ್ರಹ ಕೇಳಿ ಬರುತ್ತಿತ್ತು. ವಿಧಾನಸಭೆಯಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆಗಳಾಗಿವೆ. ಹೀಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಹೊಸ ಪಡಿತರ ಚೀಟಿ ವಿತರಿಸುವಂತೆ ಸರಕಾರ ಆಹಾರ ಇಲಾಖೆಗೆ ನಿರ್ದೇಶನ ನೀಡಿದೆ.
ಆಹಾರ ಇಲಾಖೆಗೆ ಕಳೆದ ಆಗಸ್ಟ್ 16, 2023ರ ವರೆಗೂ ಒಟ್ಟು 2,96,986, ಆದ್ಯತಾ ಪಡಿತರ (PHH) ಚೀಟಿಗಾಗಿ ಹಾಗೂ 71,410 ಆದ್ಯೇತರ ಪಡಿತರ ಚೀಟಿಗಾಗಿ (NPHH /APL) ಫಲಾನುಭವಿಗಳು ಅರ್ಜಿ ಸಲ್ಲಿದ್ದಾರೆ. ಎರಡೂ ಪ್ರಕಾರದ ಪಡಿತರ ಚೀಟಿಗಳಿಗಾಗಿ ಒಟ್ಟು 3,68,396 ಅರ್ಜಿಗಳು ಸಲ್ಲಿಕೆಯಾಗಿವೆ. ಕೆಲವು ಷರತ್ತುಗಳ ಅನ್ವಯ ಈ ಎಲ್ಲರಿಗೂ ಪಡಿತರ ಚೀಟಿ ವಿತರಿಸುವಂತೆ ಸರಕಾರ ಆಹಾರ ಇಲಾಖೆಗೆ ತಿಳಿಸಲಾಗಿದೆ.
ಆಹಾರ ಇಲಾಖೆ ವಿಧಿಸಿರುವ ಷರತ್ತುಗಳೇನು?
- ಪ್ರಸ್ತುತ ಅನುಮತಿಸಿರುವ ಹೊಸ ಆದ್ಯತಾ ಚೀಟಿಗಳಿಗೆ ಸಂಬ೦ಧಿಸಿದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೂ, ಹೊಸ ಪಡಿತರ ಚೀಟಿಗಾಗಿ ಯಾವುದೇ ಅರ್ಜಿಗಳನ್ನು ಸ್ವೀಕರಿಸುವಂತಿಲ್ಲ.
- APL (ಆದ್ಯತೇತರ) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಅರ್ಜಿಗಳ ಅನುಮೋದನೆ ನೀಡುವುದನ್ನು ತಾತ್ಕಾಲಿಕವಾಗಿ (Temporarily shut down) ಸ್ಥಗಿತಗೊಳಿಸಲಾಗಿದೆ.
- ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಿರುವ 2.96 ಲಕ್ಷ ಅರ್ಜಿಗಳ ವಿತರಣೆಯ ಬಳಿಕವೂ, ಪ್ರಸ್ತುತ ಚಾಲ್ತಿಯಲ್ಲಿರುವ ಆಧ್ಯತಾ / ಅಂತ್ಯೋದಯ ಪಡಿತರ ಚೀಟಿಗಳ ಸಂಖ್ಯೆಯನ್ನು ಮೀರುವಂತಿಲ್ಲ.
- ಆದ್ಯತಾ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಯೊಂದಿಗೆ, ಏಕ ಕಾಲದಲ್ಲಿ ಆರು ತಿಂಗಳ ನಿರಂತರ ಪಡಿತರವನ್ನು ಪಡೆಯದೇ ಇರುವ ಆದ್ಯತಾ ಪಡಿತರ ಚೀಟಿಯನ್ನು ಅಮಾನತು(Suspension)ಗೊಳಿಸಬೇಕು.
- ಹೀಗೆ ಅಮಾನತುಗೊಂಡಿರುವ ಪಡಿತರ ಚೀಟಿಗಳನ್ನು ಪುನರ್ ಚಾಲ್ತಿಗೊಳಿಸುವುದಕ್ಕೆ ಸಂಬ೦ಧಿಸಿದ೦ತೆ ಆಯಾ ತಾಲ್ಲೂಕಿನ ತಹಶೀಲ್ದಾರರು (Taluk Tahsildar) ಖುದ್ದು ಸ್ಥಳ ಪರಿಶೀಲನೆ ಮತ್ತು ದಾಖಾಲಾತಿ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಷರತ್ತುಗಳಲ್ಲಿ ಉಲ್ಲೇಖಿಸಲಾಗಿದೆ.