ಭಾರತದಲ್ಲಿ ಎಲ್ಲ ಕೆಲಸಗಳಿಗೂ ಆಧಾರ್ ಕಾರ್ಡ್ ಅಗತ್ಯ. ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು ಸರ್ಕಾರದ ಪ್ರಮುಖ ಯೋಜನೆಗಳ ಪ್ರಯೋಜನ ಪಡೆಯುವ ತನಕ ಇದು ಅಗತ್ಯ. ಸಿಮ್ ಪಡೆಯೋದ್ರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವ ತನಕ ಎಲ್ಲ ಕೆಲಸಗಳಿಗೂ ಆಧಾರ್ ಸಂಖ್ಯೆ ನೀಡಿರುತ್ತೇವೆ.
ಆಧಾರ್ ಕಾರ್ಡ್ ನಲ್ಲಿ ನಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿಗಳಿರುತ್ತವೆ. ಹೀಗಾಗಿ ಆಧಾರ್ ಕಾರ್ಡ್ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಅಗತ್ಯ. ಏಕೆಂದರೆ ನಮ್ಮ ಆಧಾರ್ ಸಂಖ್ಯೆಯನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿರುತ್ತದೆ. ಹೀಗಾಗಿ ಆಧಾರ್ ಕಾರ್ಡ್ ಅನ್ನು ಜೋಪಾನ ಮಾಡೋದು ಅಗತ್ಯ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಕಾಟ ಹೆಚ್ಚಿದೆ. ಆಧಾರ್ ಕಾರ್ಡ್ ನಲ್ಲಿ ಮಾಹಿತಿ ಅಪ್ಡೇಟ್ ಮಾಡುತ್ತೇವೆ ಎಂಬ ಸಂದೇಶಗಳನ್ನು ಕಳುಹಿಸಿ ಬ್ಯಾಂಕ್ ಮಾಹಿತಿಗಳನ್ನು ಪಡೆದು ವಂಚಿಸಿದ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ಇನ್ನು ಆಧಾರ್ ಕಾರ್ಡ್ ಸುರಕ್ಷತೆಯ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಗಾಗ ಜನರನ್ನು ಎಚ್ಚರಿಸುತ್ತಲೇ ಇರುತ್ತದೆ. ಅಲ್ಲದೆ, ಯುಐಡಿಎಐಅಧಿಕೃತ ವೆಬ್ ಸೈಟ್ ನಲ್ಲಿ ಆಧಾರ್ ಅಥೆಂಟಿಕೇಷನ್ ಹಿಸ್ಟರಿ ಎಂಬ ಟೂಲ್ ನೀಡಲಾಗಿದೆ. ಇದರ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬಹುದು
ಆಧಾರ್ ಹಿಸ್ಟರಿ ಚೆಕ್ ಮಾಡೋದು ಹೇಗೆ?
ಹಂತ 1: ಯುಐಡಿಎಐ ಅಧಿಕೃತ ವೆಬ್ ಸೈಟ್ uidai.gov.in.ಭೇಟಿ ನೀಡಿ.
ಹಂತ 2: ‘My Aadhaar’ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದು ವೆಬ್ ಸೈಟ್ ತೆರೆದುಕೊಂಡ ತಕ್ಷಣ ಎಡ ಬದಿಯಲ್ಲಿ ಮೇಲ್ಭಾಗದಲ್ಲಿದೆ. ಈ ಆಯ್ಕೆ ಕ್ಲಿಕ್ ಮಾಡಿದ ತಕ್ಷಣ ಡ್ರಾಪ್ ಡೌನ್ ಮೆನು ಕಾಣಿಸುತ್ತದೆ.
ಹಂತ 3: ಆಧಾರ್ ಸೇವಾ ವಿಭಾಗದಲ್ಲಿ ಈಗ ‘Aadhaar Authentication History’ ಭೇಟಿ ನೀಡಿ. ಈಗ ಹೊಸ ವೆಬ್ ಪುಟ ತೆರೆದುಕೊಳ್ಳುತ್ತದೆ.
ಹಂತ 4: ನಿಮ್ಮ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕೋಡ್ ಬಳಸಿಕೊಂಡು ಲಾಗಿನ್ ಆಗಿ. ಆ ಬಳಿಕ send OTP ಮೇಲೆ ಕ್ಲಿಕ್ ಮಾಡಿ.
ಹಂತ 5: ಪರಿಶೀಲನೆಗೆ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ ನಮೂದಿಸಿ. ಆ ಬಳಿಕ ‘Proceed’ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 6: ನಿಮ್ಮ ಆಧಾರ್ ಕಾರ್ಡ್ ಎಲ್ಲ ಮಾಹಿತಿಗಳು ಹಾಗೂ ಈ ಹಿಂದಿನ ದೃಢೀಕರಣ ಮನವಿಗಳು ಪರದೆ ಮೇಲೆ ಕಾಣಿಸುತ್ತವೆ
ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೆ ಯಾರಾದರೂ ಬಳಸಿದ್ದರೆ ನೀವು ಆ ಬಗ್ಗೆ ಯುಐಡಿಎಐಗೆ ಮಾಹಿತಿ ನೀಡಬಹುದು. ಯುಐಡಿಎಐ ಟೋಲ್ ಫ್ರೀ ನಂಬರ್ 1947 ಅಥವಾ help@uidai.gov.in ಮೂಲಕ ಯುಎಐಡಿಎ ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಗೆ ಸೆ.14 ಅಂತಿಮ ಗಡುವು
10 ವರ್ಷಕ್ಕಿಂತಲೂ ಹಳೆಯ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡೋದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದ್ದು, ಯಾವುದೇ ಶುಲ್ಕವಿಲ್ಲದೆ ಅಪ್ಡೇಟ್ ಮಾಡಲು 2023ರ ಸೆಪ್ಟೆಂಬರ್ 14ರ ತನಕ ಕಾಲಾವಕಾಶ ನೀಡಿದೆ. ಈ ಅಂತಿಮ ಗಡುವಿನೊಳಗೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಇತರ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು. ಅಂದ ಹಾಗೇ ಈ ಸೌಲಭ್ಯ ಮೈ ಆಧಾರ್ ಪೋರ್ಟಲ್ ನಲ್ಲಿ ಮಾತ್ರ ಲಭ್ಯವಿದೆ
ಈ ಹಿಂದೆ ಆಧಾರ್ ಪೋರ್ಟಲ್ ನಲ್ಲಿ ಈ ಮಾಹಿತಿಗಳನ್ನು ಅಪ್ಡೇಟ್ ಮಾಡಲು 25ರೂ. ಶುಲ್ಕ ಪಾವತಿಸಬೇಕಿತ್ತು. ಆಧಾರ್ ಕೇಂದ್ರಗಳಲ್ಲಿ ಈಗಲೂ ಈ ಕೆಲಸಕ್ಕೆ 50ರೂ. ಶುಲ್ಕ ಪಾವತಿಸಬೇಕು. 10 ವರ್ಷಕ್ಕಿಂತಲೂ ಹಳೆಯ ಆಧಾರ್ ಕಾರ್ಡ್ ಗಳನ್ನು ಹೊರತುಪಡಿಸಿ ವ್ಯಕ್ತಿಯ ಬಯೋಮೆಟ್ರಿಕ್ ಡೇಟಾ, ವಿಳಾಸ, ಇಮೇಲ್, ಫೋನ್ ನಂಬರ್ ಹಾಗೂ ಇತರ ಮಾಹಿತಿಗಳಲ್ಲಿ ಯಾವುದೇ ಬದಲಾವಣೆ ಆಗಿದ್ದರೆ ಅವುಗಳನ್ನು ಆಧಾರ್ ನಲ್ಲಿ ಅಪ್ಡೇಟ್ ಮಾಡುವುದು ಅಗತ್ಯ. ಇನ್ನು ಮಗುವಿಗೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಐದು ವರ್ಷವಾದಾಗ ಹಾಗೂ 15 ವರ್ಷವಾದಾಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಅಗತ್ಯ