ರಾಜ್ಯದಲ್ಲಿ ಮುಂದಿನ 9 ದಿನಗಳ ಕಾಲ ಮಳೆ

ರಾಜ್ಯದಲ್ಲಿ ಮುಂದಿನ 9 ದಿನಗಳ ಕಾಲ ಮಳೆ

 ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡ ಹಿನ್ನೆಲೆ ಮುಂದಿನ 9 ದಿನಗಳ ಕಾಲ ಮಳೆಯಾಗಲಿದೆ (Rain) ಎಂದು ಭಾರತೀಯ ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.



ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ ಆಗಲಿದೆ. ಉಳಿದ ದಿನಗಳು ಸಾಧಾರಣ ಮಳೆ ಆಗಲಿದೆ. ರಾಜ್ಯದಲ್ಲಿ ಮಳೆ ಕೊರತೆ ಇಲ್ಲ. ಜೂನ್ 21ರಂದು 70% ಮಳೆ ಕೊರತೆ ಇತ್ತು. ಆದರೆ ಈಗ ಮಳೆ ಹೆಚ್ಚಾಗಿದ್ದು, ಕೊರತೆ ಇಲ್ಲ. ಇಲ್ಲಿಯವರೆಗೆ 40.5% ಮಳೆ ಆಗಬೇಕಿತ್ತು. ಆದರೆ 40.8% ಮಳೆ ಆಗಿದ್ದು, 0.55 ಜಾಸ್ತಿಯೇ ಮಳೆ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಹೇಳಿದ್ದಾರೆ

ಎಲ್ಲೆಲ್ಲಿ ಏನಾಗಿದೆ?
ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ವಿವಿಧೆಡೆ ನಾಲ್ವರು ಬಲಿ ಆಗಿದ್ದಾರೆ. ಬಸವಕಲ್ಯಾಣದ ಧನ್ನೂರಿನಲ್ಲಿ ಯುವಕನೊಬ್ಬ ಹಳ್ಳದ ಪಾಲಾಗಿದ್ದಾನೆ. ವಿಜಯಪುರದ ಕನ್ನೂರಿನಲ್ಲಿ ಮನೆ ಗೋಡೆ ಕುಸಿದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಹರಿಹರದ ಕುಂಬಳೂರಿನಲ್ಲಿ ಗೋಡೆ ಕುಸಿದು ಒಂದು ವರ್ಷದ ಹೆಣ್ಣು ಮಗು ಮೃತಪಟ್ಟಿದೆ.

ಹಾವೇರಿಯಲ್ಲೂ ಇಂತಹದೇ ಘಟನೆ ಸಂಭವಿಸಿದ್ದು, 3 ವರ್ಷದ ಭಾಗ್ಯ ಚಲಮರದ್ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಬೆಳಗಾವಿ, ಗೋವಾ ನಡುವಿನ ಎನ್‌ಹೆಚ್ 4ಎ ಹೈವೇ ಉದ್ಘಾಟನೆ ಮುನ್ನವೇ ಕುಸಿದುಬಿದ್ದಿದೆ. ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು, ನರಸಿಂಹವಾಡಿಯ ದತ್ತ ಮಂದಿರ ಜಲಾವೃತವಾಗಿದೆ. ಅಲ್ಲದೇ ಬಳ್ಳಾರಿ, ವಿಜಯನಗರ, ಬಾಗಲಕೋಟೆ ಸೇರಿದಂತೆ ಹಲವೆಡೆ ವರುಣಾರ್ಭಟ ಜೋರಾಗಿದೆ

ಚಿಕ್ಕಮಗಳೂರಿನಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿದೆ. ಶೃಂಗೇರಿ-ಹೊರನಾಡು ರಸ್ತೆಯಲ್ಲಿ ಭೂಕುಸಿತವಾಗಿದ್ದು, ಮುಳ್ಳಯ್ಯನಗಿರಿ ಮಾರ್ಗದಲ್ಲಿ ಗುಡ್ಡ ಕುಸಿದಿದೆ. ಶಿರಾಡಿ ಸೇರಿ ಹಾಸನದ ಹಲವೆಡೆ ಬರೆ ಕುಸಿತ ಮುಂದುವರೆದಿದೆ. ಕೊಡಗಿನಲ್ಲಿ ಮಳೆ ಮುಂದುವರೆದಿದ್ದು, ಕುಶಾಲನಗರದ ಬಡಾವಣೆಯೊಂದು ಜಲಾವೃತಗೊಂಡಿದೆ. ಅಲ್ಲದೇ ಹಲವು ಗ್ರಾಮಗಳು ಜಲದಿಗ್ಬಂಧನದಲ್ಲಿವೆ.

ಕಾವೇರಿ ಕೊಳ್ಳದ ಜಲಾಶಯಗಳು ಮೈದುಂಬಿ ಹರಿಯುತ್ತಿದ್ದು, ಕೆಆರ್‌ಎಸ್ ಡ್ಯಾಂ ಭರ್ತಿಯಾಗುತ್ತದೋ ಇಲ್ಲವೋ ಎಂಬ ಆತಂಕದ ನಡುವೆ ಜಲಾಶಯಕ್ಕೆ 100 ಅಡಿ ನೀರು ಬಂದಿದೆ. 2 ದಿನದಲ್ಲಿ 5 ಟಿಎಂಸಿ ನೀರು ಹರಿದಿದೆ. ವಯನಾಡಲ್ಲಿ ಮಳೆಯ ಕಾರಣ ಕಬಿನಿ ಜಲಾಶಯದ ಒಳಹರಿವು ಹೆಚ್ಚಿದೆ. ಶಿವಮೊಗ್ಗದ ಅಂಜನಾಪುರ ಡ್ಯಾಂ ತುಂಬಿದ್ದು, ಜೋಗದ ಸಿರಿ ಡಬಲ್ ಆಗಿದೆ.

ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿದೆ. ಉತ್ತರ ಕನ್ನಡದ ನದಿಗಳಲ್ಲಿ ನೀರಿನ ಮಟ್ಟ ಸ್ವಲ್ಪ ಕಡಿಮೆ ಆಗಿದ್ದು, ಕಲಬುರಗಿಯ ಕಾಗಿಣಾ ನದಿ ತುಂಬಿ ಹರಿದಿದೆ. ಚಿಂಚೋಳಿಯ ಮುಲ್ಲಾಮಾರಿ ಡ್ಯಾಂನಿಂದ ನೀರು ರಿಲೀಸ್ ಆಗಿದೆ. ಧಾರವಾಡದ ಅಂಬ್ಲಿಕೊಪ್ಪ ಹಳ್ಳದ ಸೇತುವೆ ಮುಳುಗಡೆ ಆಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿ, ಬಾಗಲಕೋಟೆ, ಹಾವೇರಿ ಸೇರಿ ಹಲವು ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆ ಆಗಿದೆ. ಭಾರೀ ಮಳೆಯ ಪರಿಣಾಮ ಹಲವು ತಾಲೂಕುಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

Post a Comment

Previous Post Next Post
CLOSE ADS
CLOSE ADS
×