ಬೆಂಗಳೂರು, ಜುಲೈ 24; ಕರ್ನಾಟಕದ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದು 'ಗೃಹಜ್ಯೋತಿ' ಯೋಜನೆ. ಜನರು ಈಗಾಗಲೇ ಯೋಜನೆಗೆ ಫಲಾನುಭವಿಯಾಗಲು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಯೋಜನೆಯ ಫಲಾನುಭವಿಗಳ ಸಂಖ್ಯೆಗೂ ಅರ್ಜಿ ಸಲ್ಲಿಕೆ ಮಾಡಿರುವವರ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ. ಸರ್ಕಾರ ಈಗಾಗಲೇ ಯೋಜನೆ ಫಲಾನುಭವಿಯಾಗಲು ಜುಲೈ 27ರೊಳಗೆ ನೋಂದಣಿ ಮಾಡಲು ಗಡುವು ಕೊಟ್ಟಿದೆ.
ಇಂಧನ ಸಚಿವ ಕೆ. ಜೆ. ಜಾರ್ಜ್ ಈ ಹಿಂದೆ ನೀಡಿದ್ದ ಮಾಹಿತಿಯಂತೆ ರಾಜ್ಯದಲ್ಲಿ 'ಗೃಹಜ್ಯೋತಿ' ಯೋಜನೆಯ ಫಲಾನುಭವಿಗಳ ಸಂಖ್ಯೆ ಸುಮಾರು 2.14 ಕೋಟಿ. ಆದರೆ ಇದುವರೆಗೂ ಅರ್ಜಿ ಸಲ್ಲಿಕೆ ಮಾಡಿರುವ ಫಲಾನುಭವಿಗಳ ಸಂಖ್ಯೆ 1 ಕೋಟಿ ದಾಟಿಲ್ಲ. ಆದ್ದರಿಂದ ಫಲಾನುಭವಿಗಳು ಏಕೆ ಅರ್ಜಿ ಸಲ್ಲಿಕೆ ಮಾಡಿಲ್ಲ? ಎಂದು ವಿವರ ಸಂಗ್ರಹ ಮಾಡಲಾಗುತ್ತಿದೆ.
ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಆದರೆ ಇದುವರೆಗೂ ಸುಮಾರು 1 ಕೋಟಿ ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಿಲ್ಲ. ಆದ್ದರಿಂದ ಫಲಾನುಭವಿಗಳಾಗಿದ್ದರೂ ಏಕೆ ಅರ್ಜಿ ಸಲ್ಲಿಸಿಲ್ಲ? ಎಂಬುದನ್ನು ಪತ್ತೆ ಹಚ್ಚಲು ಬೆಸ್ಕಾಂ ಅಭಿಯಾನ ಆರಂಭಿಸಲಿದೆ.
ಸ್ಥಳದಲ್ಲೇ ನೋಂದಣಿ; ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮನೆ-ಮನೆಗೆ ಭೇಟಿ ನೀಡಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದೆ. ಒಂದು ವೇಳೆ ಅರ್ಜಿ ಸಲ್ಲಿಸದಿದ್ದರೆ ಸಲ್ಲಿಸುವಂತೆ ಮನವಿ ಮಾಡಲಿದೆ, ಅಲ್ಲದೇ ಸಿಬ್ಬಂದಿ ಸ್ಥಳದಲ್ಲಿಯೇ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ