Gruha Jyothi Application - ಗೃಹಜ್ಯೋತಿ ಯೋಜನೆಯನ್ನು ಪಡೆಯಲು ಅರ್ಜಿ ಸಲ್ಲಿಸಲು ಜೂ. 27ರಂದು ಕಡೆಯ ದಿನವಾಗಿರುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಂಗಳವಾರ (ಜು. 12) ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ. ಗೃಹಜ್ಯೋತಿ ಯೋಜನೆಯ ಕಡೆಯ ದಿನಾಂಕದ ನಂತರ ಮುಂದಿನ 2 ತಿಂಗಳವರೆಗೆ ಎಲ್ಲಾ ಜಿಲ್ಲೆಗಳು, ತಾಲೂಕುಗಳಲ್ಲಿ ವಿದ್ಯುತ್ ಅದಾಲತ್ ನಡೆಸಲಾಗುತ್ತದೆ. ಯೋಜನೆಯ ವ್ಯಾಪ್ತಿಯಿಂದ ಹೊರಗುಳಿದಿರುವವರನ್ನು ಯೋಜನೆಯೊಳಗೆ ತರಲಾಗುತ್ತದೆ ಎಂದು ಅವರು ಹೇಳಿದ್ದಾರೆ
ಬೆಂಗಳೂರು: ಸರ್ಕಾರದ ಮಹತ್ವಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಗೆ ರಾಜ್ಯ ಸರ್ಕಾರ ಡೆಡ್ ಲೈನ್ ವಿಧಿಸಿದೆ. ಗೃಹ ಜ್ಯೋತಿ ಕುರಿತಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಖುದ್ದು ಇಂಧನ ಸಚಿವರೇ ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ
ಇಂದು ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿ ಆಗಿರುವ ಗೊಂದಲಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಉತ್ತರ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಲು ಈ ಮೊದಲು ಕಡೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಈಗ, ಕಡೆಯ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದೇವೆ. ಅದರಂತೆ, ಜೂ. 27ರಂದು ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ ಎಂದು ಜಾರ್ಜ್ ತಿಳಿಸಿದ್ದಾರೆ.
ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ವಿದ್ಯುತ್ ಅದಾಲತ್
ಜೂ. 27ರಂದು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿರುತ್ತದೆ. ಆನಂತರ 2 ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸುತ್ತೇವೆ. ಪ್ರತಿ ಜಿಲ್ಲೆ, ತಾಲೂಕುಗಳಲ್ಲಿನ ಆಯಾ ಪ್ರಾಂತ್ಯದ ವಿದ್ಯುತ್ ಕಚೇರಿಗಳಲ್ಲಿ ವಿದ್ಯುತ್ ಅದಾಲತ್ ನಡೆಸುತ್ತೇವೆ. ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸದವರಿಗಾಗಿ ಆ ಅದಾಲತ್ ನಡೆಯುತ್ತದೆ. ಅಲ್ಲಿ ಅರ್ಜಿ ಸಲ್ಲಿಕೆಗೆ ಆಗಿರುವ ತೊಂದರೆಗಳನ್ನು ಗಮನಿಸಿ, ಅರ್ಹರ ಅರ್ಜಿಗಳನ್ನು ಸ್ವೀಕರಿಸಿ ಅವರನ್ನು ಯೋಜನೆಯ ವ್ಯಾಪ್ತಿಯೊಳಗೆ ತರುತ್ತೇವೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ ನಲ್ಲಿ ಬಿಲ್ ಕಟ್ಟೋಹಾಗಿಲ್ಲ!
ನಂತರ ತಮ್ಮ ಮಾತು ಮುಂದುವರಿಸಿದ ಅವರು, “200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುವ ಎಲ್ಲರಿಗೂ ನಾವು ಉಚಿತ ವಿದ್ಯುತ್ ನೀಡುತ್ತೇವೆ. ಇದರಲ್ಲಿ ಮಾತು ತಪ್ಪುವ ಪ್ರಮೇಯವೇ ಇಲ್ಲ. ಜುಲೈನಲ್ಲಿ ಬಳಸಲಾಗಿರುವ ವಿದ್ಯುತ್ ಬಿಲ್ ಆಗಸ್ಟ್ ನಲ್ಲಿ ಬರುತ್ತದೆ. 200 ಯೂನಿಟ್ ಗಿಂತ ಕೆಳಗೆ ವಿದ್ಯುತ್ ಬಳಸಿರುವವರು ವಿದ್ಯುತ್ ಕಟ್ಟುವ ಹಾಗಿಲ್ಲ ಎಂದು ಅವರು ತಿಳಿಸಿದ್ದಾರೆ.