Gruha lakshmi Yojana:
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದೆ. ನೋಂದಣಿ ಮಾಡಿಕೊಳ್ಳಲು ಮಹಿಳೆಯರು ಪ್ರಯತ್ನಿಸುತ್ತಿದ್ದಾರೆ. ನೋಂದಣಿ ವೇಳೆ ಮೂಡಬಹುದಾದ ಪ್ರಶ್ನೆಗಳಿಗೆ ಪ್ರಶ್ನೋತ್ತರ ರೀತಿಯಲ್ಲಿ ವಿವರಿಸುವ ಪ್ರಯತ್ನ ಇಲ್ಲಿದೆ. ನೀವೂ ಓದಿ, ಗೃಹಲಕ್ಷ್ಮಿ ಯೋಜನೆಯ ಸಮಗ್ರ ವಿವರ ತಿಳಿದುಕೊಳ್ಳಿ. ನಿಮ್ಮ ಗೆಳತಿಯರು ಆಪ್ತರಿಗೂ ಶೇರ್ ಮಾಡಿ.
Gruha lakshmi Scheme: ಕರ್ನಾಟಕದಲ್ಲಿ ಇದೀಗ ಗೃಹಲಕ್ಷ್ಮಿ ಯೋಜನೆ ಆರಂಭವಾಗಿದೆ. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದ ಈ ಯೋಜನೆ ಕಾಂಗ್ರೆಸ್ ನೀಡಿದ್ದ 5 ಗ್ಯಾರೆಂಟಿಗಳ ಭಾಗವಾಗಿತ್ತು. ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಮಹಿಳೆಯರು ಪ್ರಯತ್ನ ಪಡುತ್ತಿದ್ದಾರೆ. ಬ್ಯಾಂಕುಗಳು ಮತ್ತು ಆಧಾರ್ ಕೇಂದ್ರಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಇಚ್ಛಿಸುವ ಮಹಿಳೆಯರು ತಿಳಿಯಲೇಬೇಕಾದ ಅತ್ಯಗತ್ಯ ಮಾಹಿತಿ ಇಲ್ಲಿದೆ. ಈ ಮಾಹಿತಿಯು ಕರ್ನಾಟಕ ಸರ್ಕಾರದ ಅಧಿಕೃತ ಮೂಲದಿಂದ ಲಭ್ಯವಾಗಿದೆ.
ಪ್ರಶ್ನೆ: 1) ಗೃಹಲಕ್ಷ್ಮಿ ಯೋಜನೆ ಎಂದರೇನು?
ಉತ್ತರ: 'ಗೃಹಲಕ್ಷ್ಮಿ ಯೋಜನೆ' ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ಮಾಸಿಕ ರೂ. 2000/- ಹಣ ವಿತರಣೆ ಮಾಡಲಾಗುತ್ತದೆ.
ಪ್ರಶ್ನೆ: 2) ನಾನು ಈ ಯೋಜನೆಗೆ ಅರ್ಹಳೇ?
ಉತ್ತರ: ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿದ ಮಹಿಳೆ ಅರ್ಹಳು.
ಪ್ರಶ್ನೆ: 3) ಮನೆಯ ಯಜಮಾನಿ ಯಾರು?
ಉತ್ತರ: ರೇಷನ್ ಕಾರ್ಡ್‌ನಲ್ಲಿ ನಮೂದಿಸಿರುವ ಮನೆಯ ಯಜಮಾನಿಯನ್ನೇ ಯೋಜನೆಯ ಫಲಾನುಭವಿ ಎಂದು ಪರಿಗಣಿಸಲಾಗುತ್ತದೆ.
ಪ್ರಶ್ನೆ: 4) ಪಡಿತರ ಚೀಟಿಯಲ್ಲಿ ಅತ್ತೆ ಯಜಮಾನಿಯಾಗಿದ್ದು, ಸದಸ್ಯರ ಪಟ್ಟಿಯಲ್ಲಿ ಸೊಸೆಯ ಹೆಸರಿದ್ದರೆ ಸೊಸೆಯನ್ನೇ ಫಲಾನುಭವಿಯನ್ನಾಗಿಸುವ ಸೌಲಭ್ಯವಿದೆಯೇ?
ಉತ್ತರ: ಇಲ್ಲ, ಪಡಿತರ ಚೀಟಿಯಲ್ಲಿಯ ಯಜಮಾನಿಯೇ ಈ ಯೋಜನೆಯ ಫಲಾನುಭವಿಯಾಗಿರುತ್ತಾರೆ.
ಪ್ರಶ್ನೆ: 5) ಕುಟುಂಬದ ಯಜಮಾನಿಯು ಇತ್ತೀಚೆಗೆ ನಿಧನರಾದರೆ, ಈ ಸನ್ನಿವೇಶದಲ್ಲಿ ಏನು ಮಾಡಬಹುದು?
ಉತ್ತರ: ಪಡಿತರ ಚೀಟಿಯಲ್ಲಿ ಅಗತ್ಯ ತಿದ್ದುಪಡಿಯಾದ ನಂತರ ನೋಂದಾಯಿಸಬಹುದು.
ಪ್ರಶ್ನೆ: 6) ಕುಟುಂಬದ ಯಜಮಾನಿಯು ಮರಣ ಹೊಂದಿದ್ದಲ್ಲಿ, ಮುಂದಿನ ಕ್ರಮವೇನು?
ಉತ್ತರ: ಕುಟುಂಬದ ಯಜಮಾನಿಯು ಮರಣ ಹೊಂದಿದ್ದಲ್ಲಿ, ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುವುದು.
ಪ್ರಶ್ನೆ: 7) ಕುಟುಂಬದ ಮುಖ್ಯಸ್ಥರು ಮೃತಪಟ್ಟರು ಸಹ ಪಡಿತರ ಚೀಟಿಯಿಂದ ಅವರ ಹೆಸರನ್ನು ತೆಗೆಯದಿರುವ ಪಡಿತರ ಚೀಟಿಗಳನ್ನು ಪರಿಗಣಿಸಲಾಗುತ್ತದೆಯೇ?
ಉತ್ತರ: ನಿಮ್ಮ ಸಮೀಪದ ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಚೇರಿಯನ್ನು ಸಂಪರ್ಕಿಸುವುದು.
ಪ್ರಶ್ನೆ: 8) ಈ ಯೋಜನೆಗೆ ನೋಂದಾಯಿಸುವುದು ಹೇಗೆ?
ಉತ್ತರ: ಅ) ಈ ಯೋಜನೆಯನ್ನು ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಿಬಿಎಂಪಿ ವಾರ್ಡ್ ಕಚೇರಿ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳ ಮೂಲಕ ಉಚಿತವಾಗಿ ನೋಂದಾಯಿಸಬಹುದು.
ಬ) ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕವಾದ ಪ್ರಜಾಪ್ರತಿನಿಧಿಗಳು ಮನೆಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ.
ಪ್ರಶ್ನೆ: 9) ಈ ಯೋಜನೆಯ ಪ್ರಯೋಜನವನ್ನು ಸೇವಾಕೇಂದ್ರಗಳಿಗೆ ಹೋಗದೆ ಪಡೆಯಬಹುದೇ?
ಉತ್ತರ: ಹೌದು, ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕಗೊಂಡ ಪ್ರಜಾಪ್ರತಿನಿಧಿಗಳು ಮನೆಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಿದ್ದಾರೆ.
ಪ್ರಶ್ನೆ: 10) ಈ ಯೋಜನೆ ಪಡೆಯಲು ಯಾವ ದಾಖಲೆಗಳನ್ನು ಸಲ್ಲಿಸಬೇಕು?
ಉತ್ತರ: ರೇಷನ್ ಕಾರ್ಡ್ ಪ್ರತಿ, ಯಜಮಾನಿ ಮತ್ತು ಆಕೆಯ ಪತಿಯ ಅಧಾರ್ ಕಾರ್ಡ್ ಪ್ರತಿ ಮತ್ತು ಯೋಜನೆಯ ನಗದು ಸೌಲಭ್ಯ ಪಡೆಯಲು ಸಲ್ಲಿಸುವ ಬ್ಯಾಂಕ್ ಖಾತೆಯ ಪಾಸ್‌ಬುಕ್ ಪ್ರತಿಯ ಅಗತ್ಯವಿದೆ.
ಪ್ರಶ್ನೆ: 11) ಯೋಜನೆಗೆ ನೋಂದಾಯಿಸುವಾಗ ಶುಲ್ಕ ಪಾವತಿಸಬೇಕೆ?
ಉತ್ತರ: ಈ ಯೋಜನೆಯ ನೋಂದಣಿ ಸಂಪೂರ್ಣ ಉಚಿತ. (ಯಾವುದೇ ಕಾರಣಕ್ಕೂ, ಯಾರಿಗೂ ಹಣ ಕೊಡಬೇಡಿ).
ಪ್ರಶ್ನೆ: 12) ಈ ಯೋಜನೆಗೆ ನೋಂದಾಯಿಸಲು ಕೊನೆಯ ದಿನಾಂಕ ಯಾವಾಗ?
ಉತ್ತರ: ಈ ಯೋಜನೆಗೆ ಯಾವುದೇ ಕೊನೆಯ ದಿನಾಂಕದ ಮಿತಿಯಿಲ್ಲ, ಯಾವುದೇ ಸಮಯದಲ್ಲಿ ಬೇಕಿದ್ದರೂ ನೋಂದಾಯಿಸಬಹುದು.
ಪ್ರಶ್ನೆ: 13) ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?
ಉತ್ತರ: ಜುಲೈ 19ರಂದು ಯೋಜನೆಗೆ ಚಾಲನೆ ನೀಡಲಾಗಿದೆ. ಆಗಸ್ಟ್ 15ರ ನಂತರ ಫಲಾನುಭವಿಗಳು ಮೊದಲ ಹಣಕಾಸು ನೆರವು ರೂ.2000/- ಪಡೆಯಲಿದ್ದಾರೆ.
ಪ್ರಶ್ನೆ: 14) ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಅರ್ಹರೇ?
ಉತ್ತರ: ಸದ್ಯದ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಅರ್ಹರಲ್ಲ
ಪ್ರಶ್ನೆ: 15) ಕುಟುಂಬದ ಮುಖ್ಯಸ್ಥರಿಗಾಗಿ ನಾವು ಈಗ ರೇಷನ್ ಕಾರ್ಡ್‌ನಲ್ಲಿ ಬದಲಾವಣೆಗಳನ್ನು ಮಾಡಬಹುದೇ? (ಉದಾ: ಪತಿ ಕುಟುಂಬದ ಮುಖ್ಯಸ್ಥ)
ಉತ್ತರ: ನಿಮ್ಮ ಸಮೀಪದ ಆಹಾರ, ಮತ್ತು ನಾಗರಿಕ ಸರಬರಾಜು ಇದಾಖೆಯ ಕಚೇರಿ ಸಂಪರ್ಕಿಸಿ.
ಪ್ರಶ್ನೆ: 16) ನೋಂದಣಿ ನಂತರ ನಾನು ಯಾವುದಾದರೂ ಸ್ವೀಕೃತಿಯನ್ನು ಪಡೆಯಬಹುದೇ?
ಉತ್ತರ: ಹೌದು, ನೋಂದಣಿ ಸಮಯದಲ್ಲಿ ಮೆಸೇಜ್ / ಎಸ್‌ಎಂಎಸ್ ಅನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ.
ಪ್ರಶ್ನೆ: 17) ಫಲಾನುಭವಿಗಳಿಗೆ ಹಣ ಹೇಗೆ ತಲುಪುತ್ತದೆ?
ಉತ್ತರ: ಅರ್ಹ ಕುಟುಂಬದ ಯಜಮಾನಿಯ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಅಥವಾ ಆಧಾರ್ ಲಿಂಕ್ ಆಗದಿರುವ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಮಾಸಿಕ ರೂ 2000/- ವಿತರಿಸಲಾಗುತ್ತದೆ.
ಪ್ರಶ್ನೆ: 18) ಕುಟುಂಬದ ಯಜಮಾನಿ ಬೇರೆ ಸದಸ್ಯರ ಬ್ಯಾಂಕ್ ಖಾತೆ ನೀಡಬಹುದಾ?
ಉತ್ತರ: ಇಲ್ಲ. ಕುಟುಂಬದ ಯಜಮಾನಿ ತಮ್ಮದೇ ಬ್ಯಾಂಕ್ ಖಾತೆಯನ್ನು ನೀಡಬೇಕು.
ಪ್ರಶ್ನೆ: 19) ಗಂಡ ಮತ್ತು ಹೆಂಡತಿ ಜಂಟಿ ಖಾತೆಯನ್ನು ಹೊಂದಿದ್ದರೆ, ಜಂಟಿ ಖಾತೆ ವಿವರಗಳನ್ನು ನೋಂದಾಯಿಸಲು ಒದಗಿಸಬಹುದೇ?
ಉತ್ತರ: ಇಲ್ಲ. ಇಂಥ ಸಂದರ್ಭಗಳಲ್ಲಿ ಯೋಜನೆಯಡಿ ನೋಂದಾಯಿಸಿಕೊಳ್ಳುವವರು ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಪಾಸ್ ಪುಸ್ತಕದ ಪ್ರತಿಯನ್ನು ಒದಗಿಸಬೇಕು.
ಪ್ರಶ್ನೆ: 20) ನಾನು ರಾಷ್ಟ್ರೀಕೃತ / ಷೆಡ್ಯೂಲ್ಡ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೇನೆ, ನಾನು ಗೃಹಲಕ್ಷ್ಮಿ ಯೋಜನೆಗೆ ಖಾತೆಯನ್ನು ಬಳಸಬಹುದೇ?
ಉತ್ತರ: ಹೌದು, ಬಳಸಬಹುದು.
ಪ್ರಶ್ನೆ: 21) ಮಗ/ಮಗಳು ತೆರಿಗೆ ಪಾವತಿದಾರನಾಗಿದ್ದರೆ ಅಥವಾ ಐಟಿ ರಿಟರ್ನ್ಸ್ ಸಲ್ಲಿಸಿದ್ದರೆ, ತಾಯಿ ಗೃಹಲಕ್ಷ್ಮಿ, ಯೋಜನೆಗೆ ಅರ್ಹರಾಗುತ್ತಾರೆಯೇ?
ಉತ್ತರ: ಹೌದು, ಅರ್ಹರಾಗುತ್ತಾರೆ.
ಪ್ರಶ್ನೆ: 22) ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಏನು ಮಾಡಲಾಗುವುದು?
ಉತ್ತರ: ಪಾವತಿಸಿರುವ ಹಣವನ್ನು ಫಲಾನುಭವಿಗಳಿಂದ ವಸೂಲು ಮಾಡಲಾಗುವುದು ಮತ್ತು ಅಂಥವರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಪ್ರಶ್ನೆ: 23) ಆಧಾರ್ ಮತ್ತು ಪಡಿತರ ಚೀಟಿಯಲ್ಲಿ ಹೆಸರು/ವಿಳಾಸ ಹೊಂದಿಕೆಯಾಗದಿದ್ದರೆ ಅಂಥವರನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆಯೇ? ನೋಂದಣಿ ಪ್ರಕ್ರಿಯೆಗೊಳಿಸಲಾಗುತ್ತದೆಯೇ?
ಉತ್ತರ: ಈಗಾಗಲೇ ಆಧಾರ್ ಮತ್ತು ಪಡಿತರ ಚೀಟಿ ಜೋಡಣೆಯಾಗಿರುವುದರಿಂದ ಈ ಪ್ರಶ್ನೆ ಉದ್ಭವಿಸುವುದಿಲ್ಲ.
ಪ್ರಶ್ನೆ: 24) ನನ್ನ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿತ್ತು. ಆದರೆ ಪ್ರಸ್ತುತ ಸದರಿ ಮೊಬೈಲ್ ಸಂಖ್ಯೆ ನಿಷ್ಕ್ರಿಯಗೊಂಡಿದೆ. ನಾನು ಹೇಗೆ ನೋಂದಾಯಿಸಬೇಕು?
ಉತ್ತರ: ಆಧಾರ್ ಸಂಖ್ಯೆಗೆ ಜೋಡಣೆಯಾಗಿದ್ದ ಮೊಬೈಲ್ ಸಂಖ್ಯೆಯು ಪ್ರಸ್ತುತ ನಿಷ್ಕ್ರಿಯಗೊಂಡಿದ್ದಲ್ಲಿ ನೀವು ನೋಂದಣಿ ಕೇಂದ್ರಗಳಲ್ಲಿರುವ ಬಯೋಮೆಟ್ರಿಕ್ ಉಪಕರಣಕ್ಕೆ ನಿಮ್ಮ ಬೆರಳಚ್ಚು ನೀಡಿ, ಆಧಾರ್ ದೃಢೀಕರಣ ಮಾಡಬಹುದು.
ಪ್ರಶ್ನೆ: 25) ಯೋಜನೆಯಡಿ ನೋಂದಾಯಿಸಿಕೊಳ್ಳಲು ಗಂಡನ ವಿವರಗಳು ಕಡ್ಡಾಯವಾಗಿದೆ. ವಿಚ್ಛೇದನದ ಪ್ರಕರಣವು ಬಾಕಿ ಉಳಿದಿದ್ದರೆ ಅಥವಾ ನ್ಯಾಯಾಲಯದಲ್ಲಿ ಪ್ರಕ್ರಿಯೆಯಲ್ಲಿದ್ದರೆ ಏನು ಮಾಡಬೇಕು?
ಉತ್ತರ: ಕಾನೂನು ರೀತಿ ವಿಚ್ಛೇದನ ಆಗಿದ್ದರೆ ಗಂಡನ ವಿವರಗಳನ್ನು ಸಲ್ಲಿಸುವ ಅಗತ್ಯವಿಲ್ಲ.
ಪ್ರಶ್ನೆ: 26) ನಾಗರಿಕರು ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದರೆ ಅವರು ನೋಂದಾಯಿಸಿಕೊಳ್ಳಲು ಅರ್ಹರಾಗುತ್ತಾರೆಯೇ?
ಉತ್ತರ: ಹೌದು, ಅರ್ಹರಿರುತ್ತಾರೆ.
ಪ್ರಶ್ನೆ: 27) ನಾಗರಿಕರು ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿದ್ದರೆ, ಈಗ ಅವರು ನಿವೃತ್ತರಾಗಿದ್ದರೆ ಮತ್ತು ಪಿಂಚಣಿ ಪಡೆಯುತ್ತಿರುವವರು ಯೋಜನೆಗೆ ನೋಂದಾಯಿಸಿಕೊಳ್ಳಲು ಅರ್ಹರಾಗುತ್ತಾರೆಯೇ?
ಉತ್ತರ: ಅವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸದಿದ್ದರೆ ಅರ್ಹರಾಗುತ್ತಾರೆ.
ಪ್ರಶ್ನೆ: 28) ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಥರಿರುವ ಪಡಿತರ ಚೀಟಿಗಳನ್ನು ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ಉತ್ತರ: ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.
ಪ್ರಶ್ನೆ: 29) ಕುಟುಂಬದ ಮುಖ್ಯಸ್ಥರ ಆಧಾರ್ ಅನ್ನು ನವೀಕರಿಸದ ಮತ್ತು ಆಧಾರ್‌ನೊಂದಿಗೆ ಜೋಡಣೆ ಮಾಡಿರದ ಪಡಿತರ ಚೀಟಿಗಳನ್ನು ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ಉತ್ತರ: ನಿಮ್ಮ ಸಮೀಪದ ಆಧಾರ್ ಕೇಂದ್ರ ಸಂಪರ್ಕಿಸಿ. ಆಧಾರ್ ಅನ್ನು ನವೀಕರಿಸಿಕೊಳ್ಳುವುದು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯನ್ನು ಸಂಪರ್ಕಿಸಿ, ಪಡಿತರ ಚೀಟಿಗೆ ಜೋಡಣೆ ಮಾಡಿಸಿಕೊಳ್ಳುವುದು.
ಪ್ರಶ್ನೆ: 30) ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರು ಮಹಿಳೆಯಾಗಿದ್ದು, ಆಧಾರ್ ಕಾರ್ಡ್‌ನಲ್ಲಿ ಪುರುಷ/ತೃತೀಯ ಲಿಂಗಿಯಾಗಿರುವ ಪ್ರಕರಣಗಳನ್ನು ಪರಿಗಣಿಸಲಾಗುತ್ತದೆಯೇ?
ಉತ್ತರ: ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.
ಪ್ರಶ್ನೆ: 31) ತಡೆಹಿಡಿಯಲಾದ/ರದ್ದುಗೊಳಿಸಿದ ಪಡಿತರ ಚೀಟಿಗಳನ್ನು ಪರಿಗಣಿಸಲಾಗುತ್ತದೆಯೇ?
ಉತ್ತರ: ಈ ಯೋಜನೆಗೆ ಅರ್ಹರಿರುವುದಿಲ್ಲ
ಪ್ರಶ್ನೆ: 32) ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆಯಾಗಿದ್ದು, ಪಡಿತರ ಚೀಟಿಯಲ್ಲಿ ಲಿಂಗ ಪುರುಷ ಎಂದು ನಮೂದಾಗಿದ್ದರೆ ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ಉತ್ತರ: ನಿಮ್ಮ ಸಮೀಪದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.
ಪ್ರಶ್ನೆ: 33) ನನ್ನ ನೋಂದಣಿಗಾಗಿ ನಿಗದಿಪಡಿಸಿದ ದಿನಾಂಕ ಮತ್ತು ಸಮಯವನ್ನು ನಾನು ಎಲ್ಲಿ ತಿಳಿದುಕೊಳ್ಳಬಹುದು?
ಉತ್ತರ: ನಿಮ್ಮ ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ನೋಂದಣಿ ವೇಳಾಪಟ್ಟಿಯ ಸಂದೇಶ ಕಳುಹಿಸಲಾಗಿದೆ. ಅಲ್ಲದೇ ನಿಮ್ಮ ನೋಂದಣಿ ವೇಳಾಪಟ್ಟಿಯನ್ನು ಈ ಕೆಳಗಿನ ವಿಧಾನಗಳಲ್ಲಿ ಪರಿಶೀಲಿಸಬಹುದು.
[ಎ] ನಿಮ್ಮ ವೇಳಾಪಟ್ಟಿಯನ್ನು ತಿಳಿಯಲು 1902 ಗೆ ಕರೆ ಮಾಡಿ ಹಾಗೂ ನೀಡಲಾಗುವ ಸೂಚನೆಗಳನ್ನು ಅನುಸರಿಸಿ
(ಬಿ) ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147-400-500 ಗೆ SMS ಮಾಡಿ ಮತ್ತು ನಿಗದಿಪಡಿಸಲಾದ ದಿನಾಂಕ ಮತ್ತು ಸಮಯದ ಮಾಹಿತಿ ಪಡೆಯಿರಿ.
(ಸಿ) ಪಡಿತರ ಚೀಟಿ ಸಂಖ್ಯೆಯನ್ನು ಬಳಸಿ ಸೇವಾಸಿಂಧು ಪೋರ್ಟಲ್‌ನಲ್ಲಿ ಹುಡುಕಿ,
ಪ್ರಶ್ನೆ: 34) ನನಗೆ ನಿಗದಿಪಡಿಸಲಾದ ದಿನಾಂಕ ಮತ್ತು ಸಮಯದಲ್ಲಿ ನೋಂದಾಯಿಸುವುದು ಸಾಧ್ಯವೇ?
ಉತ್ತರ: ಹೌದು, ಸುಗಮ ನೋಂದಣಿಯನ್ನು ಖಚಿತಪಡಿಸಿಕೊಳ್ಳಲು ವೇಳಾಪಟ್ಟಿಯನ್ನು ಮಾಡಲಾಗಿದೆ. ದಯವಿಟ್ಟು ನಿಗದಿಪಡಿಸಿದ ವೇಳಾಪಟ್ಟಿಯನ್ನು ಅನುಸರಿಸಿ.
ಪ್ರಶ್ನೆ: 35) ಸೂಚಿಸಿದ ದಿನಾಂಕ ಮತ್ತು ಸಮಯದಂದು ನಿಗದಿಪಡಿಸಿದ ಕೇಂದ್ರಕ್ಕೆ ಭೇಟಿ ನೀಡಲು ನನಗೆ ಸಾಧ್ಯವಾಗಲಿಲ್ಲ. ನಾನು ಹೇಗೆ ನೋಂದಾಯಿಸಿಕೊಳ್ಳಬಹುದು?
ಉತ್ತರ: ನಿಮಗೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನೋಂದಾಯಿಸಲು ಸಾಧ್ಯವಾಗದಿದ್ದಲ್ಲಿ ನೀವು ಯಾವುದೇ ಕೆಲಸದ ದಿನದಂದು ಸಂಜೆ 5 ಗಂಟೆಯ ನಂತರ ನಿಮಗೆ ನಿಗದಿಪಡಿಸಿದ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ನೋಂದಾಯಿಸಿಕೊಳ್ಳಬೇಕು.
ಪ್ರಶ್ನೆ: 36) ನಾನು ಬೇರೆ ಗ್ರಾಮ / ಪಟ್ಟಣ / ತಾಲೂಕು ಅಥವಾ ಜಿಲ್ಲೆಗೆ ಸ್ಥಳಾಂತರಗೊಂಡಿದ್ದೇನೆ. ಆದರೆ ನಾನು ಪಡಿತರ ಚೀಟಿಯಲ್ಲಿ ವಿಳಾಸವನ್ನು ನವೀಕರಿಸಿಲ್ಲ. ಏನು ಮಾಡಬೇಕು?
ಉತ್ತರ: ನಿಮ್ಮ ನೋಂದಣಿ ವೇಳಾಪಟ್ಟಿಯು ನಿಮ್ಮ ಪಡಿತರ ಚೀಟಿಯ ವಿಳಾಸಕ್ಕೆ ಸಮೀಪವಿರುವ ಕೇಂದ್ರದಲ್ಲಿರುತ್ತದೆ. (ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ನಗರ ಸ್ಥಳೀಯ ಸಂಸ್ಥೆಯ ಆಡಳಿತ ಕಚೇರಿ).
ವೇಳಾಪಟ್ಟಿಯ ಮೂಲಕ ದಾಖಲಾತಿಗಳು ಪೂರ್ಣಗೊಂಡ ನಂತರವೇ ನಿಮಗೆ ನಿಮ್ಮ ಪ್ರಸ್ತುತ ವಸತಿ ಸ್ಥಳದಲ್ಲಿ ನೋಂದಾಯಿಸಲು ಅವಕಾಶವನ್ನು ನೀಡಲಾಗುತ್ತದೆ. (ಈ ಸೌಲಭ್ಯವು ಆಗಸ್ಟ್ 2023ರ 2ನೇ ವಾರದಲ್ಲಿ ಲಭ್ಯವಾಗಲಿದೆ).
ಪಡಿತರ ಚೀಟಿಯಲ್ಲಿ ವಿಳಾಸವನ್ನು ನವೀಕರಿಸುವ ಕುರಿತು ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಗೆ ಭೇಟಿ ನೀಡಿ.
ನೀವು ಈಗ ಪಡಿತರ ಚೀಟಿಯಲ್ಲಿ, ಪ್ರಸ್ತುತ ವಿಳಾಸವನ್ನು ನವೀಕರಿಸಿದರೆ, ನಿಮ್ಮ ನೋಂದಣಿ ಕೇಂದ್ರವು ಸ್ವಯಂಚಾಲಿತವಾಗಿ ಹೊಸ ವಿಳಾಸಕ್ಕೆ ಬದಲಾಗುವುದಿಲ್ಲ. ಆಗಸ್ಟ್ 2 ನೇ ವಾರದ ನಂತರ ನಿಮಗೆ ಹತ್ತಿರವಿರುವ ಯಾವುದೇ ಕೇಂದ್ರದಲ್ಲಿ ದಾಖಲಾಗಲು ನಿಮಗೆ ಆಯ್ಕೆಯನ್ನು ನೀಡಲಾಗುತ್ತದೆ.
ಪ್ರಶ್ನೆ: 37) ನನ್ನ ಪಡಿತರ ಚೀಟಿಗಾಗಿ ನಾನು ವೇಳಾಪಟ್ಟಿಯನ್ನು ಹುಡುಕಿದಾಗ ನನ್ನ ಪಡಿತರ ಚೀಟಿಯನ್ನು ತಡೆಹಿಡಿಯಲಾಗಿದೆ / ರದ್ದುಗೊಂಡಿದೆ ಎಂದು ತೋರಿಸುತ್ತದೆ. ಗೃಹಲಕ್ಷ್ಮಿ ಯೋಜನೆಗೆ ದಾಖಲಾಗಲು ನಾನು ಅರ್ಹಳೇ?
ಉತ್ತರ: ಇಲ್ಲ, ಸಕ್ರಿಯ ಪಡಿತರ ಚೀಟಿಗಳ ಯಜಮಾನಿ ಮಾತ್ರ ನೋಂದಣಿಗೆ ಅರ್ಹರು.
ಪ್ರಶ್ನೆ: 38) ನಾನು ಯಾವುದೇ ನೋಂದಣಿ ವೇಳಾಪಟ್ಟಿಯನ್ನು ಸ್ವೀಕರಿಸಿಲ್ಲ. ಆದರೆ 1 ಆಗಸ್ಟ್ 2023ರ ನಂತರ ಪರಿಶೀಲಿಸಲು ನನಗೆ ತಿಳಿಸಲಾಗಿದೆ. ಅದು ಏಕೆ?
ಉತ್ತರ: ನೋಂದಣಿಗಾಗಿ ಪಡಿತರ ಚೀಟಿಗಳನ್ನು ಯಾದೃಚ್ಛಿಕವಾಗಿ (Random) ಅವರಿಗೆ ಹತ್ತಿರವಿರುವ ಕೇಂದ್ರಕ್ಕೆ ನಿಗದಿಪಡಿಸಲಾಗಿದೆ. ಇದನ್ನು ವಿವಿಧ ಹಂತಗಳಲ್ಲಿ ಮಾಡಲಾಗುತ್ತಿದೆ. ಅದ್ದರಿಂದ ಮುಂದಿನ ಸುತ್ತಿನ ಹಂಚಿಕೆಯಲ್ಲಿ ನಿಯೋಜಿಸಬೇಕಾದ ಪಡಿತರ ಚೀಟಿಗಳನ್ನು 1 ಆಗಸ್ಟ್ 2023ರ ನಂತರ ಪರಿಶೀಲಿಸಲು ತಿಳಿಸಲಾಗಿದೆ.
ಪ್ರಶ್ನೆ: 39) ನಾನು ಸಕ್ರಿಯ ಪಡಿತರ ಚೀಟಿಯನ್ನು ಹೊಂದಿದ್ದೇನೆ. ಆದರೆ ಪುರುಷ ಸದಸ್ಯರು ಕುಟುಂಬದ ಮುಖ್ಯಸ್ಮರಾಗಿದ್ದಾರೆ. ನಾನು ಗೃಹಲಕ್ಷ್ಮಿ ಯೋಜನೆಗೆ ಅರ್ಹಳೇ?
ಉತ್ತರ: ಇಲ್ಲ, ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ನಮೂದಿಸಿದವರು ಮಾತ್ರ ಅರ್ಹರು.
ಪ್ರಶ್ನೆ: 40) ನಾನು ಸಕ್ರಿಯ ಪರಿಸರ ಚೀಟಿಯನ್ನು ಹೊಂದಿದ್ದೇನೆ, ಆದರೆ ಅದರಲ್ಲಿ ಯಾವುದೇ ಸದಸ್ಯರನ್ನು ಕುಟುಂಬದ ಯಜಮಾನಿ ಎಂದು ನಮೂದಿಸಿಲ್ಲ. ನಾನು ಗೃಹಲಕ್ಷ್ಮಿ ಯೋಜನೆಗೆ ಅರ್ಹಳೇ?
ಉತ್ತರ: ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಮಾಹಿತಿಯನ್ನು ನವೀಕರಿಸಿದ ನಂತರ ನೀವು ನೋಂದಾಯಿಸಬಹುದು.
ಪ್ರಶ್ನೆ: 41) ನಾನು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೇನೆ. ಆದರೆ ಆದರೆ ಇನ್ನೂ ನನಗೆ ಪಡಿತರ ಚೀಟಿ ನೀಡಿಲ್ಲ. ನಾನು ಯೋಜನೆಗೆ ನೋಂದಾಯಿಸಬಹುದೇ?
ಉತ್ತರ: ನಿಮಗೆ ಪಡಿತರ ಚೀಟಿ ನೀಡಿದ ನಂತರ ನೀವು ನೋಂದಾಯಿಸಬಹುದು.
ಪ್ರಶ್ನೆ: 42) ನನ್ನ ಬಿಪಿಎಲ್/ಎಪಿಎಲ್ ಪಡಿತರ ಚೀಟಿ ರದ್ದುಗೊಂಡಿದೆ, ಆದರೆ ನಮ್ಮ ಕುಟುಂಬ ಕರ್ನಾಟಕದಲ್ಲಿ ವಾಸಿಸುತ್ತಿದೆ. ನಾನು ಯೋಜನೆಗೆ ನೋಂದಾಯಿಸಬಹುದೇ?
ಉತ್ತರ: ನಿಮಗೆ ಪಡಿತರ ಚೀಟಿ ನೀಡಿದ ನಂತರ ನೀವು ನೋಂದಾಯಿಸಬಹುದು.
ಪ್ರಶ್ನೆ: 43) ನಾನು ಮಹಿಳೆ ಮತ್ತು ಕುಟುಂಬದ ಯಜಮಾನಿ, ಆದರೆ ಆದಾಯ ತೆರಿಗೆ ಪಾವತಿಸುತ್ತಿದ್ದೇನೆ. ನಾನು ಯೋಜನೆಗೆ ಅರ್ಹಳೇ?
ಉತ್ತರ: ಇಲ್ಲ, ಕುಟುಂಬದ ಯಜಮಾನಿ ಆದಾಯ ತೆರಿಗೆ ಪಾವತಿಸುತ್ತಿದ್ದಲ್ಲಿ ಯೋಜನೆಗೆ ಅರ್ಹರಲ್ಲ.
ಪ್ರಶ್ನೆ: 44) ನಾನು ಮಹಿಳೆ ಮತ್ತು ಕುಟುಂಬದ ಯಜಮಾನಿ, ಆದರೆ GST ರಿಟರ್ನ್ ಸಲ್ಲಿಸುತ್ತಿದ್ದೇನೆ. ನಾನು ಯೋಜನೆಗೆ ಅರ್ಹಳೇ?
ಉತ್ತರ: ಇಲ್ಲ. ಕುಟುಂಬದ ಯಜಮಾನಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುತ್ತಿದಲ್ಲಿ ಯೋಜನೆಗೆ ಅರ್ಹರಲ್ಲ.
ಪ್ರಶ್ನೆ: 45) ನಾನು ಕುಟುಂಬದ ಮಹಿಳಾ ಯಜಮಾನಿ ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ನಾನು ಯೋಜನೆಗೆ ಅರ್ಹಳೇ?
ಉತ್ತರ: ಇಲ್ಲ, ಕುಟುಂಬದ ಯಜಮಾನಿಯ ಪತಿ ಆದಾಯ ತೆರಿಗೆ ಸಲ್ಲಿಸುತ್ತಿದ್ದಲ್ಲಿ ಯೋಜನೆಗೆ ಅರ್ಹರಲ್ಲ.
ಪ್ರಶ್ನೆ: 47) ನನಗೆ ನೋಂದಣಿಗಾಗಿ ನಿಗದಿಪಡಿಸಿದ ಕೇಂದ್ರವು ನನ್ನ ಗ್ರಾಮ / ಗ್ರಾಮ ಪಂಚಾಯಿತಿಯ ಹೊರಗೆ ಇದೆ. ಏಕೆ?
ಉತ್ತರ: ಸಾಧ್ಯವಾದಷ್ಟೂ ನಿಮ್ಮ ಪಡಿತರ ಚೀಟಿಯ ವಿಳಾಸದನ್ವಯ ನೋಂದಣಿ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ. ಅದು ಸಾಧ್ಯವಿಲ್ಲದ ಕಡೆ ನೀವು ಪಡಿತರ ಪಡೆಯುವ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ಇತರೆ ಗ್ರಾಮ ಪಂಚಾಯತಿಯ ನೋಂದಣಿ ಕೇಂದ್ರವನ್ನು ನಿಗದಿಪಡಿಸಲಾಗಿದೆ.
ಪ್ರಶ್ನೆ: 48) ನನಗೆ ನಿಯೋಜಿಸಲಾದ ಕೇಂದ್ರಕ್ಕೆ ಭೇಟಿ ನೀಡಲು ಅನಾರೋಗ್ಯದ ಕಾರಣದಿಂದ ಅಥವಾ ದೂರ ಇರುವುದರಿಂದ ಸಾಧ್ಯವಾಗುವುದಿಲ್ಲ, ನಾನು ಹೇಗೆ ನೋಂದಾಯಿಸಬಹುದು?
ಉತ್ತರ: ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಯಶಸ್ಸಿಗಾಗಿ ಸರ್ಕಾರವು ಅದೇ ಗ್ರಾಮದ ಪ್ರಜಾ ಪ್ರತಿನಿಧಿಗಳನ್ನು ನೇಮಿಸುತ್ತಿದೆ. ಅವರು ನೋಂದಣಿಗಾಗಿ ಮನೆಗಳಿಗೆ ಭೇಟಿ ನೀಡುತ್ತಾರೆ. ನೀವು ಅವರ ಸಹಾಯದಿಂದ ನೋಂದಾಯಿಸಿಕೊಳ್ಳಬಹುದು.