ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಒಂದೊಂದಾಗಿ ಅನುಷ್ಠಾನಗೊಳಿಸುತ್ತಿದ್ದು, ಈ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಅಡ್ಡಿಯಾಗಿದೆ. ದಿನ ಬೆಳಗಾದರೆ ಆಧಾರ್ ಅಪ್ಡೇಟ್ ಮಾಡಿಸಲು ಸೇವಾ ಕೇಂದ್ರಗಳ ಮುಂದೆ ಜನರು ಗಂಟೆಗಟ್ಟಲೇ ನಿಲ್ಲಬೇಕಾಗಿದೆ.
ಆಧಾರ್ ಕಾರ್ಡ್ ವಿತರಿಸುವಾಗ ಸೇವಾ ಕೇಂದ್ರಗಳ ಪ್ರತಿನಿಧಿಗಳು ಫೋಟೋ, ಬೆರಳಚ್ಚು, ರೆಟಿನಾ ಮತ್ತು ಹೆಸರು, ವಿಳಾಸ ಪಡೆದು ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ಗಳನ್ನು ಮನಸ್ಸಿಗೆ ಬಂದಂತೆ ತುಂಬಿ ಕಾರ್ಡ್ ವಿತರಿಸಿದ ಆರೋಪವಿದೆ. ಈ ಕಾರಣದಿಂದಾಗಿ ಫಲಾನುಭವಿಗಳಿಗೆ ಒಟಿಪಿ ಇಲ್ಲದೆ, ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಗೃಹಜ್ಯೋತಿಗೆ ಅರ್ಜಿ ಸಲ್ಲಿಸುವಾಗ ಆಧಾರ್ ನಂಬರ್ ಜತೆ ಲಿಂಕ್ ಆಗಿರುವ ಮೊಬೈಲ್ಗೆ
ಬರುವ ಒಟಿಪಿ ನಂಬರ್ ಅಪ್ಲೋಡ್ ಮಾಡಬೇಕಾಗಿದೆ. 5 ಕೆಜಿ ಅಕ್ಕಿ ಬದಲಿಗೆ 170 ರೂ.ಗಳನ್ನು ನೇರವಾಗಿ ಪಡಿತರದಾರನ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ರೇಷನ್ ಕಾರ್ಡ್ಗೂ ಆಧಾರ್(ಕೆವೈಸಿ) ಲಿಂಕ್ ಆಗಿರಬೇಕು. ಆಧಾರ್ ಜತೆಗೆ ಬ್ಯಾಂಕ್ ನಂಬರ್ ಸಂಯೋಜನೆ ಆಗಿದ್ದರೆ ಮಾತ್ರ ಹಣ ಬರಲಿದೆ. ಹೀಗಾಗಿ ಸಾಕಷ್ಟು ಜನರ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ.
ಗೃಹಲಕ್ಷ್ಮಿ ಯೋಜನೆಗೂ ಆಧಾರ್ ಬೇಕಾಗಿದೆ. ಸಾಕಷ್ಟು ಜನರ ಆಧಾರ್ ಕಾರ್ಡ್ನಲ್ಲಿ ವಿಳಾಸ, ಹುಟ್ಟಿದ ದಿನಾಂಕ ವ್ಯತ್ಯಾಸವಾಗಿದೆ. ಮೊಬೈಲ್ ನಂಬರ್ ಸೇರಿ ಕೆವೈಸಿ ಅಪ್ಡೇಟ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳು ಆಧಾರ್ ಅಪ್ಡೇಟ್ ಮಾಡಿಸಲು ಸೇವಾ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ.
ಪ್ರತಿ ಸೇವಾ ಕೇಂದ್ರವು ದಿನಕ್ಕೆ 60 ಜನರ ಕಾರ್ಡ್ ಮಾತ್ರ ಅಪ್ಡೇಟ್ ಮಾಡುತ್ತಿವೆ. ಇದಕ್ಕಾಗಿ ಟೋಕನ್ ಪಡೆಯಲು ಬೆಳಗ್ಗೆ 5 ಗಂಟೆಗೆ ಜನ ಸಾಲಿನಲ್ಲಿ ನಿಲ್ಲುತ್ತಿದ್ದು, ಟೋಕನ್ ಸಿಕ್ಕ ಮೇಲೆ ಅರ್ಜಿ ನಮೂನೆಗೂ ಸಾಲು ನಿಲ್ಲಬೇಕಿದೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಬೆರಳಚ್ಚು ಮತ್ತು ಕಣ್ಣಿನ ರೆಟಿನಾ ಸ್ಕಾ್ಯನಿಂಗ್ನ ದತ್ತಾಂಶ ಸೇರಿ ಮಾಹಿತಿ ಅಪ್ಡೇಟ್ಗಾಗಿಯೂ ಜನರು ಸೇವಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ದುಡಿಯುವ ವರ್ಗ ವಾರ ಪೂರ್ತಿ ಕಚೇರಿ ಮತ್ತು ಕಾರ್ಯಭಾರಗಳ ನಡುವೆ ಇದೀಗ ಆಧಾರ್ ಸಂಕೋಲೆಯಲ್ಲಿ ಸಿಲುಕಿಕೊಂಡಿದೆ.
ಬಿತ್ತನೆ ಕಾಲದಲ್ಲಿ ರೈತಾಪಿ ವರ್ಗವೂ ಆಧಾರ್ ಪರಿಷ್ಕರಣೆ ಜಂಜಾಟ ಎದುರಿಸಬೇಕಿದೆ. ಮತ್ತೊಂದೆಡೆ, 5 ಮತ್ತು 15 ವರ್ಷ ತುಂಬಿರುವ ವಿದ್ಯಾರ್ಥಿಗಳು ದತ್ತಾಂಶ ಪರಿಷ್ಕರಣೆ ಕಡ್ಡಾಯ ವಾಗಿರುವ ಕಾರಣಕ್ಕೆ ತರಗತಿ ಬಿಟ್ಟು ಬರಬೇಕಾಗಿದೆ.
ವೃದ್ಧಾಪ್ಯ ವೇತನದಿಂದ ವಂಚಿತರು : ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು 60 ವರ್ಷ ತುಂಬಿದವರಿಗೆ ಸಾಧ್ಯವಾಗುತ್ತಿಲ್ಲ. ಈ ಮೊದಲು ವೈದ್ಯರ ದೃಢೀಕರಣ ಪತ್ರ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಆಧಾರ್ ಅಥವಾ ವೋಟರ್ ಐಡಿ ಪಡೆದು ಅರ್ಜಿ ಸ್ವೀಕರಿಸಲಾಗುತ್ತಿತ್ತು. ಇದೀಗ ಆಧಾರ್ ಕಡ್ಡಾಯ ಮಾಡಿದ್ದು, ಆಧಾರ್ನಲ್ಲಿ ಹುಟ್ಟಿದ ದಿನಾಂಕ ಹೊಂದಾಣಿಕೆಯಾಗದಿದ್ದರೆ ಅಪ್ಡೇಟ್ ಮಾಡಿಸಲು ಕೇಂದ್ರ ಸರ್ಕಾರ ಎಸ್ಎಸ್ಎಲ್ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ ಮತ್ತು ಪಿಂಚಣಿ ಸರ್ಟಿಫಿಕೇಟ್ ಕಡ್ಡಾಯ ಮಾಡಿದೆ. ಈ ದಾಖಲೆಗಳು ಇಲ್ಲದೆ, ವೃದ್ಧರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
Aadhar Pan Link
ಆಧಾರ್, ಪಾನ್ ಕಾರ್ಡ್ ಲಿಂಕ್ ಸಮಸ್ಯೆ
ಆಧಾರ್ ಮತ್ತು ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಸಾಮಾನ್ಯ ದಾಖಲೆ ಪಡೆದು ವಿತರಿಸಲಾಗಿದೆ. ಇದೀಗ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಎರಡು ಕಾರ್ಡ್ಗಳ ಪೈಕಿ ಒಂದರಲ್ಲಿ ಹೆಸರು ಅಥವಾ ಹುಟ್ಟಿದ ದಿನಾಂಕದಲ್ಲಿ ವ್ಯತ್ಯಾಸ ಕಂಡು ಬಂದರೆ ಲಿಂಕ್ ಆಗುತ್ತಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ ದಾಖಲೆ ಒದಗಿಸಲು ಜನರು ಪರದಾಡುತ್ತಿದ್ದಾರೆ.
ಆಧಾರ್ನಲ್ಲಿನ ಮಾಹಿತಿ ಅಪ್ಡೇಟ್ಗೂ ಕಠಿಣ ಷರತ್ತು ವಿಧಿಸಲಾಗಿದೆ. ಹುಟ್ಟಿದ ದಿನಾಂಕ ತಿದ್ದುಪಡಿಗೆ ಎಸ್ಎಸ್ಎಲ್ಸಿ ಅಂಕಪಟ್ಟಿ, ಜನನ ಪ್ರಮಾಣಪತ್ರ, ಪಿಂಚಣಿ ಸರ್ಟಿಫಿಕೇಟ್ ಕಡ್ಡಾಯ ಮಾಡಿದ್ದು, ಜನರಿಗೆ ಸಂಕಷ್ಟವಾಗಿದೆ.