ವಿದ್ಯುತ್ ಹೊರತು ಪ್ರಸ್ತುತ ದಿನಗಳಲ್ಲಿ ಯಾವ ಕಾರ್ಯಗಳೂ ನಡೆಯುವುದಿಲ್ಲ ಎನ್ನುವಂತಾಗಿದೆ. ಮನೆಕೆಲಸಗಳು, ಕೈಗಾರಿಕೆ, ಕೃಷಿ, ಉದ್ಯಮ ಮುಂತಾದ ಎಲ್ಲಾ ಕ್ಷೇತ್ರಗಳಿಗೂ ವಿದ್ಯುತ್ ಪ್ರಮುಖ ಅವಶ್ಯಕತೆಯಾಗಿದೆ. ಅಂದರೆ, ಮಾನವ ವಿದ್ಯುತ್ ಬಳಕೆಯ ಮೇಲೆ ತಾನು ಹೆಚ್ಚು ಅವಲಂಬಿತನಾಗಿದ್ದಾನೆ ಎನ್ನಬಹುದಾಗಿದೆ.
ವಿದ್ಯುತ್ ಬಳಕೆಯ ಮೇಲೆ ನಾವು ಅವಲಂಬಿತವಾದಷ್ಟೂ, ವಿದ್ಯುತ್ ಬಳಕೆಯ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತದೆ. ಉದಾಹರಣೆಗೆ, ಸಾಮಾನ್ಯವಾಗಿ ಮನೆಯಲ್ಲಿ 2 ಕಿ.ವ್ಯಾ ವಿದ್ಯುತ್ ಅನ್ನು ಬಳಸುತ್ತಿದ್ದರೆ, ಮನೆಯಲ್ಲಿ ವಿದ್ಯುತ್ ಉಪಕರಣಗಳ ಸಂಖ್ಯೆ ಅಧಿಕವಾದಂತೆ
ವಿದ್ಯುತ್ ಬಳಕೆಯ ಪ್ರಮಾಣದ ಅವಶ್ಯಕತೆಯೂ ಹೆಚ್ಚುತ್ತದೆ. ಪ್ರಸ್ತುತ ದಿನಗಳಲ್ಲಿ ಮನೆ/ಕಟ್ಟಡಗಳ ವಿನ್ಯಾಸವೂ ಕೂಡ ಸಂಕೀರ್ಣವಾಗಿದೆ. ನೈಸರ್ಗಿಕ ಬೆಳಕಿನ ಮೂಲಗಳ ಬದಲಿಗೆ ವಿದ್ಯುತ್ ದೀಪಗಳನ್ನು ಉರಿಸುವ ಮೂಲಕ ವಿದ್ಯುತ್ ಬಳಕೆಗೇ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿರುವುದು ಆತಂಕಕಾರಿ ವಿಚಾರ. ಈ ನಿಟ್ಟಿನಲ್ಲಿ ವಿದ್ಯುತ್ ಉಳಿಕೆಗೆ ಹೆಚ್ಚಿನ ಗಮನ ನೀಡಬೇಕಾಗಿದ್ದು, ಜನತೆ ವಿದ್ಯುತ್ ಉಳಿಕೆಯ (Saving Electricity) ಸುಲಭ ಮಾರ್ಗಗಳನ್ನು ಅನುಸರಿಸಬೇಕಿದೆ
ವಿದ್ಯುಚ್ಛಕ್ತಿ ಉಳಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ:
ವಿದ್ಯುತ್ ಉಪಕರಣಗಳನ್ನು ಬಳಸದೇ ಇರುವಾಗ ಸ್ವಿಚ್ ಆಫ್ ಮಾಡಿ.
ವಿದ್ಯುತ್ ಸೋರಿಕೆ ಹಾಗೂ ವಿದ್ಯುತ್ ಉಪಕರಣಗಳಲ್ಲಿ ದೋಷ ಕಂಡುಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ತಿಳಿಸಿ.
ವಿದ್ಯುಚ್ಛಕ್ತಿಯನ್ನು ದುರುಪಯೋಗಪಡಿಸಿಕೊಳ್ಳದೆ, ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯ ಪ್ರಯೋಜನವನ್ನು ಪಡೆಯಿರಿ.
ವಿದ್ಯುತ್ ಉಳಿಕೆಗಾಗಿ ಪರಿಸರ ಸ್ನೇಹಿ ಎಲ್.ಇ.ಡಿ ಬಲ್ಬ್ ಗಳನ್ನು ಬಳಸಿ.
ಅಕ್ರಮ ವಿದ್ಯುತ್ ಸಂಪರ್ಕ ಪಡೆಯದಿರಿ.
ಹಳೆಯ ತಂತ್ರಜ್ಞಾನದ ವಿದ್ಯುತ್ ಉಪಕರಣಗಳ ಬದಲಿಗೆ ನವೀನ ಸ್ಮಾರ್ಟ್ ತಂತ್ರಜ್ಞಾನದ ವಿದ್ಯುತ್ ಉಪಕರಣಗಳನ್ನು ಬಳಸಿ.
ರೆಪ್ರಿಜರೇಟರ್ ಗೆ ಥರ್ಮೋಸ್ಟಾಟ್ ಅನ್ನು ಅಳವಡಿಸಿ.
ಸೆನ್ಸರ್ ತಂತ್ರಜ್ಞಾನದ ವಿದ್ಯುತ್ ಉಪಕರಣಗಳನ್ನು ಬಳಸಿ.
ಸಾಧ್ಯವಾದಷ್ಟು ನೈಸರ್ಗಿಕ ಬೆಳಕಿನ ಮೂಲಗಳನ್ನೇ ಬಳಸಿ.
ನವೀಕರಿಸಬಹುದಾದ ವಿದ್ಯುತ್ ಮೂಲಗಳನ್ನು ಬಳಸಿ.
ಸೋಲಾರ್ ವಿದ್ಯುತ್ ಘಟಕಗಳನ್ನು ಮನೆಯ ಮೇಲ್ಛಾವಣಿಯಲ್ಲಿ ಸ್ಥಾಪಿಸಿ, ಸೌರವಿದ್ಯುತ್ ಅನ್ನು ಬಳಸಿ.
ನಿಯಮಿತ ಹಾಗೂ ಸ್ವಾವಲಂಬಿ ವಿದ್ಯುತ್ ಬಳಕೆಗೆ ವಿದ್ಯುತ್ ನಿಯಂತ್ರಣ ಮಂಡಳಿಗಳು ತಂದಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ