ಗ್ಯಾರಂಟಿಗೆ ಸರ್ವರ್ ಸಮಸ್ಯೆ-ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಜನ, ದುಪ್ಪಟ್ಟು ಹಣ ವಸೂಲಿ ಆರೋಪ

ಗ್ಯಾರಂಟಿಗೆ ಸರ್ವರ್ ಸಮಸ್ಯೆ-ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಜನ, ದುಪ್ಪಟ್ಟು ಹಣ ವಸೂಲಿ ಆರೋಪ

 Guarantee Scheme: ಸರ್ಕಾರದ ಉಚಿತ ಯೋಜನೆಗೆ ಅರ್ಜಿ ಸಲ್ಲಿಸಲು ಜನ ಮುಗಿಬೀಳುತ್ತಿದ್ದು, ಸೈಬರ್ ಸೆಂಟರ್ ಬಳಿ ಜನಜಂಗುಳಿ ಉಂಟಾಗುತ್ತಿದೆ. ಇನ್ನು ಕೆಲ ಸೈಬರ್ ಸೆಂಟರ್‌ಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ಸರ್ವರ್ ಸಮಸ್ಯೆಯಿಂದಾಗಿ ಕೆಲವರು ಕಾಯಲು ಸಾಧ್ಯವಾಗದೆ ಹಣ, ದಾಖಲೆಗಳನ್ನು ನೀಡಿ ತೆರಳುತ್ತಿದ್ದು, ಸರ್ವರ್ ಕಾರ್ಯ ನಿರ್ವಹಿಸುವ ವೇಳೆ ಸೈಬರ್ ಸೆಂಟರ್‌ನವರೇ ಅರ್ಜಿ ಭರ್ತಿ ಮಾಡಿ, ಸಂಬಂಧಪಟ್ಟವರಿಗೆ ಕರೆ ಮಾಡಿ ಒಟಿಪಿ ಪಡೆದು ಪೂರ್ಣಗೊಳಿಸುತ್ತಿದ್ದಾರೆ.



ರಾಜ್ಯ ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಕೊನೆಯ ದಿನಾಂಕ ಪ್ರಕಟಿಸದೇ ಇದ್ದರೂ ಸಹ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಸೈಬರ್‌ ಸೆಂಟರ್‌ಗಳ ಬಳಿ ಜನರು ತುಂಬಿತುಳುಕುತ್ತಿದ್ದು, ಅರ್ಜಿ ಸಲ್ಲಿಕೆಗೆ ಕೆಲವರು ದಂಧೆಯಂತೆ ಹೆಚ್ಚಿನ ಹಣ ಪಡೆಯುತ್ತಿದ್ದರೂ ಕಡಿವಾಣ ಇಲ್ಲದಂತಾಗಿದೆ.

ಸೈಬರ್‌ ಸೆಂಟರ್‌ಗಳ ಬಳಿ ಆಧಾರ್‌, ಪಡಿತರ ಚೀಟಿ, ಪಾನ್‌ ಕಾರ್ಡ್‌, ವಿದ್ಯುತ್‌ ಬಿಲ್‌ ಸೇರಿದಂತೆ ನಾನಾ ದಾಖಲೆಗಳನ್ನು ಹಿಡಿದು ನಿಂತಿರುವ ಜನರು ಗೃಹಜ್ಯೋತಿ ಸೇರಿದಂತೆ ನಾನಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ತಡಬಡಾಯಿಸುತ್ತಿದ್ದಾರೆ. ಇನ್ನು ಸರ್ವರ್‌ ಸಮಸ್ಯೆ ಸರ್ವೆ ಸಾಮಾನ್ಯವಾಗಿದ್ದು,ಜನರು ಕೆಲಸ ಕಾರ್ಯ ಬಿಟ್ಟು, ಇಡೀ ದಿನ ಗಂಟೆಗಟ್ಟಲೇ ಕಾದು ಕುಳಿತುಕೊಳ್ಳುವಂತಾಗಿದೆ.

ಟೋಕನ್‌ನಿಂದ ತಡ

ಅರ್ಜಿ ಸಲ್ಲಿಕೆಗೆ ಉಚಿತವಾಗಿ ಕರ್ನಾಟಕ ಒನ್‌, ಗ್ರಾಮ ಒನ್‌ನಲ್ಲಿ ಅವಕಾಶವಿದ್ದರೂ ಅಲ್ಲಿ ಟೋಕನ್‌ಗಳನ್ನು ನೀಡಲಾಗುತ್ತಿದೆ. ಟೋಕನ್‌ ಇದ್ದವರಿಗೆ ಮಾತ್ರವೇ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗುತ್ತಿದೆ. ಅಲ್ಲಿ ಕೆಲಸವು ತಡವಾಗಿಯೇ ನಡೆಯುತ್ತಿದೆ. ಇದರಿಂದಾಗಿ ಜನರು ಅತ್ತ ಹೆಚ್ಚಿನ ಸಂಖ್ಯೆಯಲ್ಲಿ ಹೋಗದೆ ಸೈಬರ್‌ ಸೆಂಟರ್‌ಗಳ ದಾರಿ ಹಿಡಿದಿದ್ದು, ಸರ್ವರ್‌ ಸಮಸ್ಯೆ ನಡುವೆಯೂ ಕಾದು ಕೆಲಸ ಮುಗಿಸಿಕೊಂಡು ಹೋಗುತ್ತಿದ್ದಾರೆ.

ದುಪಟ್ಟು ಹಣ ವಸೂಲಿ

ಇನ್ನು ಕೆಲ ಸೈಬರ್‌ ಸೆಂಟರ್‌ಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಸಾಕಷ್ಟು ಕೇಳಿ ಬರುತ್ತಿವೆ. ಸರ್ವರ್‌ ಸಮಸ್ಯೆಯಿಂದಾಗಿ ಇನ್ನೂ ಕೆಲವರು ಕಾಯಲು ಸಾಧ್ಯವಾಗದೆ ಹಣ, ದಾಖಲೆಗಳನ್ನು ನೀಡಿ ತೆರಳುತ್ತಿದ್ದು, ಸರ್ವರ್‌ ಕಾರ್ಯ ನಿರ್ವಹಿಸುವ ವೇಳೆ ಸೈಬರ್‌ ಸೆಂಟರ್‌ನವರೇ ಅರ್ಜಿ ಭರ್ತಿ ಮಾಡಿ, ಸಂಬಂಧಪಟ್ಟವರಿಗೆ ಕರೆ ಮಾಡಿ ಒಟಿಪಿ ಪಡೆದು ಪೂರ್ಣಗೊಳಿಸುತ್ತಿದ್ದಾರೆ. ಇತ್ತ ಗ್ಯಾರಂಟಿ ಯೋಜನೆಯ ಅರ್ಜಿ ಸಲ್ಲಿಕೆ ಜತೆಗೆ ಕೆಲವರು ಆಧಾರ್‌-ಪಾನ್‌ ಲಿಂಕ್‌ ಕೆಲಸ ಮಾಡಿಕೊಳ್ಳಲು ಬರುವುದರಿಂದ ಸಾಕಷ್ಟು ವಿಳಂಬವೂ ಆಗುತ್ತಿದೆ.

ಒಟ್ಟಾರೆಯಾಗಿ ನಾನಾ ಯೋಜನೆಗಳ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಸೈಬರ್‌ ಸೆಂಟರ್‌ ಬಳಿ ಜನಜಂಗುಳಿ ಏರ್ಪಟ್ಟಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಜನರ ಸಮಸ್ಯೆ ಪರಿಗಣಿಸದೇ ಇರುವುದು ಸಾರ್ವಜನಿಕ ವಲಯದಲ್ಲಿಆಕ್ರೋಶಕ್ಕೆ ಕಾರಣವಾಗಿದ್ದು, ಸ್ಪಷ್ಟ ಮಾಹಿತಿ, ನಿರ್ದೇಶನ ನೀಡುವುದು ಸೂಕ್ತವಾಗಿದೆ.


ಅರ್ಜಿಗಳ ಸಲ್ಲಿಕೆಗೂ ಪ್ಯಾಕೇಜ್‌

ಸರ್ವರ್‌ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಕೆಗೆ ಸಾಕಷ್ಟು ಅಡಚಣೆ, ವಿಳಂಬವಾಗುತ್ತಿದೆ. ಅದಕ್ಕಾಗಿ ಕೆಲ ಸೈಬರ್‌ ಸೆಂಟರ್‌ನವರು ಪ್ಯಾಕೇಜ್‌ಗಳನ್ನು ಮಾಡಿಕೊಂಡು ನಾನಾ ಯೋಜನೆಗಳಿಗೆ ಅರ್ಜಿ ಸಲ್ಲಿಸುತ್ತಿವೆ. ದಾಖಲೆ ಮತ್ತು ಹಣ ನೀಡಿ ಎಂದು ಇಂತಿಷ್ಟು ಹಣ ನಿಗಧಿಪಡಿಸಿರುವುದೂ ನಗರದ ಕೆಲ ಕಡೆಗಳಲ್ಲಿ ಕಂಡುಬಂದಿದೆ. ಇನ್ನೂ ಕೆಲವರು ರಾತ್ರಿ ವೇಳೆಯಲ್ಲೂ ಸರ್ವರ್‌ಗೆ ಕಾದು ಅರ್ಜಿ ಸಲ್ಲಿಸುತ್ತಿರುವುದು ತಿಳಿದುಬಂದಿದೆ.

ಅರ್ಜಿ ಸಲ್ಲಿಕೆಗೆ ಸರಕಾರ ಕೊನೆ ದಿನಾಂಕ ನಿಗಧಿಪಡಿಸಿಲ್ಲ, ಆತುರ ಪಡದೆ ಜನರು ಅರ್ಜಿ ಸಲ್ಲಿಸಬಹುದಾಗಿದ್ದರೂ ಊಹಾಪೋಹ ಮಾತುಗಳಿಗೆ ಒಳಗಾಗಿ ಸೈಬರ್‌ ಸೆಂಟರ್‌ಗಳಿಗೆ ತೆರಳಿ ಹಣ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಜನರಿಗೆ ಸೂಕ್ತ ಮಾಹಿತಿ, ನಿರ್ದೇಶನ ನೀಡಿದರೆ ಅನುಕೂಲ ಎಂದು ಹೋಳೂರು ಸಾಮಾಜಿಕ ಕಾರ್ಯಕರ್ತ ಎಚ್‌.ಎಸ್‌.ರೆಡ್ಡಿ ಎಚ್ಚರಿಸಿದ್ದಾರೆ.

ಸೈಬರ್‌ ಸೆಂಟರ್‌ಗಳ ಬಳಿ ಜನರು ತುಂಬಿ ತುಳುಕುತ್ತಿದ್ದರೂ ಕನಿಷ್ಠ ಅಲ್ಲಿ ಜನರಿಗೆ ಏನು ಸಮಸ್ಯೆಯಾಗುತ್ತಿದೆ ಎಂಬುದಕ್ಕಾದರೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸದೇ ಇರುವುದು ಸರಿಯಲ್ಲ.

Post a Comment

Previous Post Next Post
CLOSE ADS
CLOSE ADS
×