PDO Recruitment 2023 : ಪಿಡಿಒ ನೇಮಕಕ್ಕೆ ಮುಂದಾದ ಸರ್ಕಾರ; ಅರ್ಜಿ ಸಲ್ಲಿಸಲು ಈಗಲೇ ರೆಡಿಯಾಗಿ!

PDO Recruitment 2023 : ಪಿಡಿಒ ನೇಮಕಕ್ಕೆ ಮುಂದಾದ ಸರ್ಕಾರ; ಅರ್ಜಿ ಸಲ್ಲಿಸಲು ಈಗಲೇ ರೆಡಿಯಾಗಿ!

ಬೆಂಗಳೂರು: ರಾಜ್ಯ ಸರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು (Rural Development and Panchayath Raj Department-RDPR) ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-I) ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-II) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ನೇಮಕಕ್ಕೆ ಮುಂದಾಗಿದ್ದು, ಸದ್ಯವೇ ನೇಮಕಾತಿ (PDO Recruitment 2023) ಅಧಿಸೂಚನೆ ಹೊರ ಬೀಳಲಿದೆ.



ಪಿಡಿಒ ಮತ್ತು ಕಾರ್ಯದರ್ಶಿ ಹುದ್ದೆಗಳು ಖಾಲಿ ಇರುವುದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿಕೆಲಸಗಳಾಗುತ್ತಿಲ್ಲ ಎಂಬ ದೂರಿರುವ ಹಿನ್ನೆಲೆಯಲ್ಲಿ ಸರ್ಕಾರವು ಆದಷ್ಟು ಬೇಗ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಮಂದಾಗಿದ್ದು, ಯಾವ ಗ್ರಾಮ ಪಂಚಾಯಿತಿಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಈಗ ಸಂಗ್ರಹಿಸಲಾಗುತ್ತಿದೆ.

ಪಂಚಾಯತ್‌ ರಾಜ್‌ ಆಯುಕ್ತಾಲಯದ ನಿರ್ದೇಶಕರ ಪತ್ರ



ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪಂಚಾಯತ್‌ ರಾಜ್‌ ಆಯುಕ್ತಾಲಯದ ನಿರ್ದೇಶಕರು ಈ ಸಂಬಂಧ ಜೂನ್‌ 15 ರಂದು ರಾಜ್ಯದ ಎಲ್ಲ ಜಿಲ್ಲಾಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿಇಓ) ಪತ್ರ ಬರೆದಿದ್ದು, ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ತುರ್ತಾಗಿ ಅಂದರೆ ಜೂನ್‌ 17 ರ ಸಂಜೆ 4 ಗಂಟೆಯ ಒಳಗೆ ಕಳುಹಿಸಿಕೊಡುವಂತೆ ಕೋರಿದ್ದಾರೆ. ಈ ಮಾಹಿತಿ ಬಂದಕೂಡಲೇ ಖಾಲಿ ಹುದ್ದೆಗಳ ಸಂಖ್ಯೆಯನ್ನು ನೋಡಿಕೊಂಡು ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಸರ್ಕಾರ ಕೂಡ ಕೂಡಲೇ ಅನುಮತಿ ನೀಡುವ ಭರವಸೆ ನೀಡಿದೆ ಎಂದು ಇಲಾಖೆಯ ಉನ್ನತ ಮೂಲಗಳು ʻವಿಸ್ತಾರ ನ್ಯೂಸ್‌ʼಗೆ ತಿಳಿಸಿವೆ.

ಎಷ್ಟು ಹುದ್ದೆಗಳಿಗೆ ನೇಮಕ ನಡೆಯಬಹುದು?

ಈ ಹಿಂದಿನ ಬಿಜೆಪಿ ಸರ್ಕಾರವು 570 ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಕ್ಕೆ ಮುಂದಾಗಿತ್ತು. ಕಳೆದ ಫೆಬ್ರವರಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಈ ಸಂಬಂಧ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸರ್ಕಾರ ಈ ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು. ಆದರೆ ಈ ನೇಮಕ ಪ್ರಕ್ರಿಯೆ ಆರಂಭವಾಗಿರಲೇ ಇಲ್ಲ.


ಕಳೆದ ವರ್ಷದ ಸರ್ಕಾರದ ವರದಿ ಪ್ರಕಾರವೇ ರಾಜ್ಯದಲ್ಲಿ 851 ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆ, 390 ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-I) ಹುದ್ದೆ ಮತ್ತು 697 ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-II) ಹುದ್ದೆಗಳು ಖಾಲಿ ಇವೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆಗಳಿವೆ.

2016 ರಲ್ಲಿ 815 ಪಿಡಿಒ ಮತ್ತು 809 ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ಹುದ್ದೆಗೆ ನೇಮಕ ನಡೆದಿದ್ದು ಬಿಟ್ಟರೆ ಕಳೆದ ಆರು ವರ್ಷಗಳಿಂದ ಮತ್ತೆ ನೇಮಕಾತಿ ನಡೆದಿಲ್ಲ. ಹೀಗಾಗಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹೆಚ್ಚಿದ್ದು, ಎಲ್ಲ ಹುದ್ದೆಗಳಿಗೂ ಒಮ್ಮೆಗೆ ನೇಮಕ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. 2016ರಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ 4,96,873 ಅಭ್ಯರ್ಥಿಗಳು ಭಾಗವಹಿಸಿದ್ದರು. 3,62,899 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.


ಯಾರಿಗೆಲ್ಲಾ ಅವಕಾಶ?

ಅಂಗೀಕೃತಗೊಂಡ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಪಿಡಿಒ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-I) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-II) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಓದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 35 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.




ವೇತನ ಎಷ್ಟಿರುತ್ತದೆ?

ಗ್ರಾಮ ಪಂಚಾಯಾತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಯ ವೇತನ ಶ್ರೇಣಿ: ರೂ. 37,900-70,850

ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-I) ಹುದ್ದೆಯ ವೇತನ ಶ್ರೇಣಿ: ರೂ. 27,650-52,650

ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-II) ಹುದ್ದೆಯ ವೇತನ ಶ್ರೇಣಿ: ರೂ. 21,400-42,000

ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಯ ವೇತನ ಶ್ರೇಣಿ: ರೂ. 21,400-42,000


ನೇಮಕ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಗಳಿಸಿದ ಶೇಕಡಾವಾರು ಅಂಕಗಳ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತದೆ. ಈ ಯಾವ ಹುದ್ದೆಗಳಿಗೂ ಸಂದರ್ಶನ ನಡೆಸಲಾಗುವುದಿಲ್ಲ.


ಈ ಹಿಂದೆ ಪಿಡಿಒ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ನಡೆಸಲಾಗುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತಿತ್ತು. ಪ್ರಶ್ನೆ ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ್ದಾಗಿರುತ್ತಿತ್ತು. ಇದರಲ್ಲಿ ಒಟ್ಟು ನೂರು ಪ್ರಶ್ನೆಗಳಿರಲಿದ್ದು, 200 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತಿತ್ತು. ಮತ್ತೊಂದು ಪತ್ರಿಕೆ-2 ಸಹ ನೂರು ಪ್ರಶ್ನೆಗಳಿರಲಿದ್ದು, 200 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಇದರಲ್ಲಿ ಈ ಬಾರಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ.

2016 ರಲ್ಲಿ ನೇಮಕ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿತ್ತು. ಆದರೆ ಈ ಬಾರಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಈ ನೇಮಕ ಪ್ರಕ್ರಿಯೆಯನ್ನು ವಹಿಸುವ ಸಾಧ್ಯತೆಗಳಿವೆ. ಹೀಗೆ ಮಾಡಿದಲ್ಲಿ ಆಯೋಗವು ಗ್ರೂಪ್‌ “ಸಿʼʼ ಹುದ್ದೆಗಳ ನೇಮಕಕ್ಕೆ ನಡೆಸುವ ರೀತಿಯಲ್ಲಿಯೇ ಈ ಹುದ್ದೆಗಳಿಗೂ ಪರೀಕ್ಷೆ ನಡೆಸಲಿದೆ. ಗ್ರೂಪ್‌ ಸಿ ಹುದ್ದೆಗಳಿಗೆ 200 ಅಂಕಗಳಿಗೆ ಬದಲಾಗಿ ನೂರು ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ.



Post a Comment

Previous Post Next Post
CLOSE ADS
CLOSE ADS
×