ರಾಜ್ಯ ಸರ್ಕಾರದ 'ಗೃಹ ಜ್ಯೋತಿ' ಯೋಜನೆಯ ಫಲಾನುಭವಿಗಳ ಮನೆ - ಮನೆ ಪರಿಶೀಲನಾ ಕಾರ್ಯ ಜುಲೈ 1 ರಿಂದ ಆರಂಭವಾಗಲಿದೆ. ಎಸ್ಕಾಂ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಆಧಾರ್, ವೋಟರ್ ಐಡಿ ಮತ್ತು ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ. ಫಲಾನುಭವಿಗಳು ಈ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುವಂತೆ ಇಂಧನ ಇಲಾಖೆ ಮನವಿ ಮಾಡಿದೆ. ಇದು ರಾಜ್ಯದ ಎಲ್ಲಾ ಐದು ಎಸ್ಕಾಂ ವ್ಯಾಪ್ತಿಗಳಲ್ಲಿ ನಡೆಯಲಿದೆ.
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ - ಮನೆ ಪರಿಶೀಲನೆ ಕಾರ್ಯ ಆರಂಭ.ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ ಎಸ್ಕಾಂ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ.ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆ.ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು ತೋರಿಸಬೇಕು.
ಗೃಹಜ್ಯೋತಿ ಯೋಜನೆ ಪರಿಶೀಲನೆ ಆರಂಭ.
ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ - ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1 ರಿಂದ ಕೈಗೊಳ್ಳಲಿದ್ದಾರೆ. ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ.
2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ನಡೆಯಲಿದ್ದು, ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ ಎಸ್ಕಾಂ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿ ಅವರ ಮಾಹಿತಿ ಸಂಗ್ರಹಿಸಿ, ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದಾರೆ.
ಯಾವೆಲ್ಲಾ ದಾಖಲೆ ನೀಡಬೇಕು?
ಎಸ್ಕಾಂ ಸಿಬ್ಬಂದಿ ಮನೆಗೆ ಭೇಟಿ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸಿಬ್ಬಂದಿಗೆ ತೋರಿಸಲು ಬೆಸ್ಕಾಂ ಸೇರಿ ಎಲ್ಲಾ ಎಸ್ಕಾಗಳು ವಿನಂತಿ ಮಾಡಿವೆ.
- ಆಧಾರ್ ಕಾರ್ಡ್
- ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಫೋಟೋ
- ಮತದಾರರ ಗುರುತಿನ ಚೀಟಿ (ವೋಟರ್ ಐಡಿ)
- ಪಾನ್ ಕಾರ್ಡ್
- ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ)
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಮಾಡಿದೆ.
ಎಸ್ಕಾಂ ಸಿಬ್ಬಂದಿ ಏನೆಲ್ಲಾ ಪರಿಶೀಲನೆ ಮಾಡುತ್ತಾರೆ?
1. ಪಡಿತರ ಚೀಟಿ (ಎಪಿಎಲ್ / ಬಿಪಿಎಲ್ / ಯಾವುದೂ ಇಲ್ಲ). ಬಿಪಿಎಲ್ ಹೌದಾದಲ್ಲಿ - ಬಿಪಿಎಲ್ ಕಾರ್ಡ್ ಸಂಖ್ಯೆ
2. ಕರ್ನಾಟಕ ರಾಜ್ಯದ ನೊಂದಾಯಿತ ಮತದಾರರ ಬಗ್ಗೆ (ಹೌದು / ಇಲ್ಲ) ಕರ್ನಾಟಕ ಮತದಾರರಾದಲ್ಲಿ – EPIC ಸಂಖ್ಯೆ
3. ಅರ್ಜಿದಾರರ ಭಾವಚಿತ್ರ
4. ಅರ್ಜಿದಾರರ ವರ್ಗ (ಎಸ್‌ಸಿ / ಎಸ್‌ಟಿ / ಒಬಿಸಿ / ಅಲ್ಪಸಂಖ್ಯಾತ / ಇತರೆ)
5. ಆದಾಯ ತೆರಿಗೆ ಪಾವತಿದಾರರೇ (ಹೌದು / ಇಲ್ಲ). ಆದಾಯ ತೆರಿಗೆ ಪಾವತಿದಾರರಾದಲ್ಲಿ - PAN ಸಂಖ್ಯೆ
6. ವೃತ್ತಿ (ಸರ್ಕಾರಿ / ಖಾಸಗಿ / ವ್ಯಾಪಾರ / ಕೂಲಿ ಕಾರ್ಮಿಕ ಮತ್ತು ಇತ್ಯಾದಿ)
ರಾಜ್ಯದ 5 ಎಸ್ಕಾಂಗಳಲ್ಲಿ ಪರಿಶೀಲನಾ ಕಾರ್ಯ
ರಾಜ್ಯದ ಐದು ಎಸ್ಕಾಂಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ಗಳ ವ್ಯಾಪ್ತಿಯಲ್ಲಿ ಪರಿಶೀಲನಾ ಕಾರ್ಯ ನಡೆಯಲಿದೆ.
ಗೃಹ ಬಳಕೆದಾರರಿಗೆ ಮಾತ್ರ ಅನ್ವಯ
ರಾಜ್ಯದ ಪ್ರತಿಯೊಂದು ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದು ಗೃಹಜ್ಯೋತಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಈ ಯೋಜನೆಯು ಕೇವಲ ಗೃಹ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಉದ್ದೇಶದ ಮಳಿಗೆಗಳಿಗೆ ಇದು ಅನ್ವಯಿಸುವುದಿಲ್ಲ. ಜತೆಗೆ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಬಾಡಿಗೆ ಮನೆಯಲ್ಲಿ ವಾಸಿಸುವವರು ಕೂಡ ಈ ಯೋಜನೆಯ ಲಾಭ ಪಡೆಯಬಹುದು. ಒಂದು ಆಧಾರ್ ಕಾರ್ಡ್ ಸಂಖ್ಯೆಗೆ ಕೇವಲ ಒಂದು ಮೀಟರ್‌ಗೆ ಮಾತ್ರ ರಿಯಾಯಿತಿ ಸಿಗುತ್ತದೆ.
ಉಚಿತ ವಿದ್ಯುತ್ ಲೆಕ್ಕಾಚಾರ ಹೇಗೆ?
ಪ್ರತಿ ತಿಂಗಳು ಪೂರ್ತಿ 200 ಯೂನಿಟ್ ಉಚಿತವಾಗಿ ಸಿಗುವುದಿಲ್ಲ. ನಿಮ್ಮ ಹಿಂದಿನ ಒಂದು ವರ್ಷದ (2022 - 23ರ ಸರಾಸರಿ) ವಿದ್ಯುತ್ ಬಳಕೆಯ ಸರಾಸರಿಯನ್ನು ತೆಗೆದುಕೊಳ್ಳಲಾಗುತ್ತದೆ. ಆ ಸರಾಸರಿ ಬಳಕೆಗೆ ಹೆಚ್ಚುವರಿ ಶೇಕಡಾ 10 ರಷ್ಟು ಯೂನಿಟ್‌ಗಳನ್ನು ಸೇರಿಸಿ ನಿಮ್ಮ ಮಾಸಿಕ ಉಚಿತ ವಿದ್ಯುತ್ ಮಿತಿಯನ್ನು ನಿಗದಿಪಡಿಸಲಾಗುತ್ತದೆ. ನಿಮ್ಮ ಸರಾಸರಿ ಬಳಕೆ 100 ಯೂನಿಟ್ ಆಗಿದ್ದರೆ, ನಿಮಗೆ 110 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸಿಗುತ್ತದೆ. ಒಂದು ವೇಳೆ ನಿಮ್ಮ ಬಳಕೆ 200 ಯೂನಿಟ್‌ಗಿಂತ ಹೆಚ್ಚಾದರೆ, ನೀವು ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಜುಲೈ ತಿಂಗಳಿನಲ್ಲಿ ಗ್ರಾಹಕರಿಗೆ ಬೆಸ್ಕಾಂನಿಂದ ಸರಾಸರಿ ಬಿಲ್
ಗೃಹ ಜ್ಯೋತಿ ಫಲಾನುಭವಿಗಳ ಮನೆ ಮನೆ ಪರಿಶೀಲನೆ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್‌ಗಳು ನಿಯೋಜನೆಗೊಂಡಿರುವುದರಿಂದ ಜುಲೈ ತಿಂಗಳ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ, ಗ್ರಾಹಕರಿಗೆ ಸರಾಸರಿ ಬಿಲ್ ನೀಡಲಾಗುತ್ತದೆ.
ಜುಲೈ ಬಿಲ್ಲಿಂಗ್ ಅವಧಿಯಲ್ಲಿ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ ಸರಾಸರಿ ಬಿಲ್ ನೀಡಲಾಗುವುದು. ಸರಾಸರಿ ಬಿಲ್‌ಗಳನ್ನು ಗ್ರಾಹಕರಿಗೆ ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುವುದು. ಗೃಹ ಬಳಕೆದಾರರಿಗೆ ಆಗಸ್ಟ್ ತಿಂಗಳಿನಿಂದ ಯಥಾಪ್ರಕಾರ ನಿಯಮಿತ ಮೀಟರ್ ರೀಡಿಂಗ್ ಮತ್ತು ನೈಜ ವಿದ್ಯುತ್ ಬಳಕೆಯ ಆಧಾರದಮೇಲೆ ಬಿಲ್ ನೀಡಲಾಗುವುದು. ಸರಾಸರಿ ಬಿಲ್ಲಿಂಗ್ ಅವಧಿಯಲ್ಲಿನ ವ್ಯತ್ಯಾಸವಾದಲ್ಲಿ ಮುಂದಿನ ಬಿಲ್‌ನಲ್ಲಿ ಸೂಕ್ತವಾಗಿ ಹೊಂದಾಣಿಕೆ ಮಾಡಲಾಗುವುದು ಎಂದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
0 Comments