Advertisement

ವಾಸಸ್ಥಳ ಪ್ರಮಾಣ ಪತ್ರಕ್ಕೆ ಅಲೆದಾಟ ಬೇಕಿಲ್ಲ; ಇನ್ಮುಂದೆ ಪಂಚಾಯತಿಯಲ್ಲೇ ಉಚಿತವಾಗಿ ಸಿಗಲಿದೆ: ಸರ್ಕಾರ ಮಹತ್ವದ ಆದೇಶ

ಗ್ರಾಮೀಣ ಜನರಿಗೆ ರಾಜ್ಯ ಸರ್ಕಾರ ಮಹತ್ವದ ರಿಲೀಫ್ ನೀಡಿದ್ದು, ಇನ್ನು ಮುಂದೆ 'ವಾಸಸ್ಥಳ ದೃಢೀಕರಣ ಪತ್ರ'ವನ್ನು ತಮ್ಮ ಗ್ರಾಮ ಪಂಚಾಯತಿಯ 'ಬಾಪೂಜಿ ಸೇವಾ ಕೇಂದ್ರ'ಗಳಲ್ಲಿಯೇ ಪಡೆಯಬಹುದು. ಹೋಬಳಿ ಕೇಂದ್ರಗಳಿಗೆ ಅಲೆಯುವ ಬವಣೆ ತಪ್ಪಿದ್ದು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಈ ಪ್ರಮಾಣ ಪತ್ರವನ್ನು ಸಂಪೂರ್ಣ ಉಚಿತವಾಗಿ ನೀಡಲಿದ್ದಾರೆ. ಇದರಿಂದ ಗ್ರಾಮೀಣ ಜನರ ಸಮಯ ಮತ್ತು ಹಣ ಉಳಿತಾಯವಾಗಲಿದ್ದು, ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟವಾಗಲಿದೆ.

ಗ್ರಾಮೀಣ ಭಾಗದ ಜನ ಅತ್ಯಗತ್ಯವಾದ 'ವಾಸಸ್ಥಳ ದೃಢೀಕರಣ ಪತ್ರ' ಪಡೆಯಲು ಹೋಬಳಿ ಕೇಂದ್ರಗಳಿಗೆ ಅಲೆದಾಟ ಬೇಕಿಲ್ಲ.ತಮ್ಮ ವಾಸ ಸ್ಥಳ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲೇ ಸಿಗಲಿದೆ; ಅದೂ ಸಂಪೂರ್ಣ ಉಚಿತ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಹತ್ವದ ಆದೇಶ.

ಗ್ರಾಮ ಪಂಚಾಯತಿಯಲ್ಲಿಯೇ ಸಿಗಲಿದೆ ವಾಸ ಸ್ಥಳ ದೃಢೀಕರಣ ಪತ್ರ

ಬೆಂಗಳೂರು: ಗ್ರಾಮೀಣ ಭಾಗದ ಜನತೆಗೆ ರಾಜ್ಯ ಸರ್ಕಾರವು ಮಹತ್ವದ ರಿಲೀಫ್ ನೀಡಿದ್ದು, ಇನ್ನು ಮುಂದೆ ಅತ್ಯಗತ್ಯವಾದ 'ವಾಸಸ್ಥಳ ದೃಢೀಕರಣ ಪತ್ರ' ಪಡೆಯಲು ಹೋಬಳಿ ಕೇಂದ್ರಗಳಿಗೆ ಅಲೆಯುವ ತಪ್ಪಿದೆ. ಜನರ ಅನುಕೂಲಕ್ಕಾಗಿ ತಮ್ಮ ತಮ್ಮ ಗ್ರಾಮ ಪಂಚಾಯತಿಗಳಲ್ಲೇ, ಅದೂ ಸಂಪೂರ್ಣ ಉಚಿತವಾಗಿ ಈ ಪ್ರಮಾಣ ಪತ್ರವನ್ನು ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ದೇಶನದ ಮೇರೆಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ನೂತನ ಆದೇಶವನ್ನು ಹೊರಡಿಸಿದ್ದಾರೆ.

ಹಿಂದಿನ ಸಮಸ್ಯೆಯೇನಿತ್ತು?

ಈವರೆಗೆ ಗ್ರಾಮೀಣ ನಾಗರಿಕರು ಶಾಲಾ-ಕಾಲೇಜು ಪ್ರವೇಶ, ಉದ್ಯೋಗ, ಸರ್ಕಾರಿ ಸೌಲಭ್ಯಗಳು ಸೇರಿದಂತೆ ಹಲವು ಉದ್ದೇಶಗಳಿಗಾಗಿ ವಾಸಸ್ಥಳ ಪ್ರಮಾಣ ಪತ್ರವನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಪಡೆಯಬೇಕಾಗಿತ್ತು. ಇದಕ್ಕಾಗಿ ಗ್ರಾಮಸ್ಥರು ಹೋಬಳಿ ಕೇಂದ್ರಗಳಿಗೆ ಭೇಟಿ ನೀಡುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಪ್ರಮಾಣ ಪತ್ರ ಪಡೆಯಲು ಸಾಕಷ್ಟು ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು.

ಪಿಡಿಓಗಳಿಗೆ ಅಧಿಕಾರ, ಗ್ರಾಮ ಪಂಚಾಯತಿಯಲ್ಲೇ ಸೌಲಭ್ಯ

ಸದ್ಯ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿರುವ 'ಬಾಪೂಜಿ ಸೇವಾ ಕೇಂದ್ರ'ಗಳ ಮೂಲಕ ಸರ್ಕಾರದ 85ಕ್ಕೂ ಹೆಚ್ಚು ಸೇವೆಗಳನ್ನು ನೀಡಲಾಗುತ್ತಿದೆ. ಇದೀಗ ಇದೇ ಕೇಂದ್ರಗಳ ಮೂಲಕ ವಾಸಸ್ಥಳ ದೃಢೀಕರಣ ಪತ್ರವನ್ನು ನೀಡುವ ಅಧಿಕಾರವನ್ನು ಆಯಾ ಗ್ರಾಮ ಪಂಚಾಯತಿಯ 'ಪಂಚಾಯತಿ ಅಭಿವೃದ್ಧಿ ಅಧಿಕಾರಿ'ಗೆ (ಪಿಡಿಒ) ನೀಡಲಾಗಿದೆ. ಇದರಿಂದ ಗ್ರಾಮೀಣ ಜನರು ಸ್ಥಳೀಯವಾಗಿ ಹಾಗೂ ವಿಳಂಬವಿಲ್ಲದೆ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗಲಿದೆ.

ಆದೇಶದ ಪ್ರಮುಖ ಅಂಶಗಳು ಏನು?

ಅಭಿಯಾನ ಮಾದರಿಯಲ್ಲಿ ವಿತರಣೆ: ಪಿಡಿಓಗಳು ತಮ್ಮ ವ್ಯಾಪ್ತಿಯ ಅರ್ಹ ನಿವಾಸಿಗಳಿಗೆ ಒಂದು ಬಾರಿಗೆ ಅಭಿಯಾನದ ಮಾದರಿಯಲ್ಲಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಅರ್ಜಿಗಳನ್ನು ಸ್ವೀಕರಿಸಿ ಪತ್ರ ನೀಡಬೇಕು.

ಅದೇ ತಂತ್ರಾಂಶದ ಬಳಕೆ: ಇದಕ್ಕಾಗಿ ಪ್ರಸ್ತುತ ಇರುವ 'ಅಟಲ್ ಜೀ ಜನಸ್ನೇಹಿ ಕೇಂದ್ರ'ದ ತಂತ್ರಾಂಶದಲ್ಲಿ ಲಭ್ಯವಿರುವ ಸೇವೆಯನ್ನೇ ಬಳಸಿಕೊಳ್ಳಬೇಕು.

ಸಂಪೂರ್ಣ ಉಚಿತ: ಅತ್ಯಂತ ಪ್ರಮುಖವಾಗಿ, ವಾಸಸ್ಥಳ ಪ್ರಮಾಣ ಪತ್ರವನ್ನು ನೀಡಲು ಸಾರ್ವಜನಿಕರಿಂದ 'ಯಾವುದೇ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ' ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

ಶೀಘ್ರದಲ್ಲೇ ಪ್ರತ್ಯೇಕ ಮಾರ್ಗಸೂಚಿ

ವಾಸಸ್ಥಳ ದೃಢೀಕರಣ ಪತ್ರವನ್ನು ನೀಡಲು ಸಾರ್ವಜನಿಕರು ಒದಗಿಸಬೇಕಾದ ಅಗತ್ಯ ದಾಖಲೆಗಳು ಯಾವುವು ಮತ್ತು ಇದರ ಸಂಪೂರ್ಣ ಕಾರ್ಯವಿಧಾನ ಹೇಗಿರಲಿದೆ ಎಂಬುದರ ಕುರಿತು ಶೀಘ್ರದಲ್ಲೇ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಗ್ರಾಮೀಣ ಜನರಿಗೆ ಸಮಯ ಮತ್ತು ಹಣದ ಉಳಿತಾಯವಾಗಲಿದೆ.


Post a Comment

0 Comments