Advertisement

ಪಿಎಫ್ ಹಣ ATM, UPI ಮೂಲಕ ಸಿಗಲಿದೆ! EPFO 3.0 ಶೀಘ್ರ; ಆಟೋ ಸೆಟಲ್ಮೆಂಟ್ ಮಿತಿ 5 ಲಕ್ಷ ರೂ.ಗೆ ಏರಿಕೆ

ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯು (EPFO) ಡಿಜಿಟಲ್ ರೂಪಾಂತರದ ಭಾಗವಾಗಿ ಶೀಘ್ರದಲ್ಲೇ 'ಇಪಿಎಫ್‌ಒ 3.0' ಅನ್ನು ಪರಿಚಯಿಸುತ್ತಿದೆ. ಇದರ ಮೂಲಕ ಪಿಎಫ್ ಚಂದಾದಾರರು ಯುಪಿಐ ಮತ್ತು ಎಟಿಎಂ ಬಳಸಿ ಸುಲಭವಾಗಿ ಶೇ.50-75 ರಷ್ಟು ಹಣ ಹಿಂಪಡೆಯಬಹುದು. ಆಟೋ-ಸೆಟಲ್ಮೆಂಟ್ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಲಾಗಿದ್ದು, ಕ್ಲೈಮ್ ಪ್ರಕ್ರಿಯೆಗಳು ಸಂಪೂರ್ಣ ಕಾಗದರಹಿತ ಹಾಗೂ ವೇಗವಾಗಲಿವೆ. ಈ ಯೋಜನೆಯ ಅಧಿಕೃತ ಜಾರಿ ದಿನಾಂಕ ಶೀಘ್ರದಲ್ಲೇ ಪ್ರಕಟವಾಗಲಿದೆ.

ಇಪಿಎಫ್‌ಒ 3.0' ಜಾರಿಯಾದ ಬಳಿಕ ಚಂದಾದಾರರು ಯುಪಿಐ ಮತ್ತು ಎಟಿಎಂ ಬಳಸಿ ಸುಲಭವಾಗಿ ಮತ್ತು ವೇಗವಾಗಿ ಪಿಎಫ್ ಹಣ ಪಡೆಯಬಹುದು.

ಪಿಎಫ್ ಬ್ಯಾಲೆನ್ಸ್‌ನಲ್ಲಿ ಶೇ.50 ರಿಂದ 75ರಷ್ಟು ಹಣವನ್ನು ಮಾತ್ರ ಹಿಂಪಡೆಯಲು ಅವಕಾಶವಿದ್ದು, ನಿವೃತ್ತಿ ಭದ್ರತೆಗಾಗಿ ಶೇ.25ರಷ್ಟು ಮೊತ್ತವನ್ನು ಖಾತೆಯಲ್ಲೇ ಕಡ್ಡಾಯವಾಗಿ ಉಳಿಸಿಕೊಳ್ಳಲಾಗುತ್ತದೆ.

ಸ್ವಯಂಚಾಲಿತ ಇತ್ಯರ್ಥದ ಮಿತಿಯನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದ್ದು, ಉಮಂಗ್ ಆ್ಯಪ್ ಮೂಲಕ ಫೇಸ್ ಅಥೆಂಟಿಕೇಶನ್ ನಂತಹ ತ್ವರಿತ ಡಿಜಿಟಲ್ ಸೇವೆಗಳು ಸಿಗಲಿವೆ.

ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯು (ಇಪಿಎಫ್‌ಒ) ತನ್ನ ಸೇವೆಗಳನ್ನು ಇನ್ನಷ್ಟು ವೇಗವಾಗಿ, ಪಾರದರ್ಶಕವಾಗಿ ಮತ್ತು ಕಾಗದರಹಿತವಾಗಿ ಒದಗಿಸುವ ನಿಟ್ಟಿನಲ್ಲಿ 'ಇಪಿಎಫ್‌ಒ 3.0' ಎಂಬ ಬೃಹತ್ ಡಿಜಿಟಲ್ ರೂಪಾಂತರಕ್ಕೆ ಸಜ್ಜಾಗಿದೆ.

ಈ ಹೊಸ ಅಪ್‌ಗ್ರೇಡ್‌ನ ಅತಿ ದೊಡ್ಡ ಆಕರ್ಷಣೆ ಎಂದರೆ, ಇನ್ನು ಮುಂದೆ ಪಿಎಫ್ ಚಂದಾದಾರರು ತಮ್ಮ ಖಾತೆಯಲ್ಲಿರುವ ಹಣವನ್ನು ಯುಪಿಐ ಹಾಗೂ ಎಟಿಎಂ ವ್ಯವಸ್ಥೆಗಳ ಮೂಲಕವೂ ಹಿಂಪಡೆಯಬಹುದು! ಆದರೆ, ಈ ಬಹುನಿರೀಕ್ಷಿತ ಸೌಲಭ್ಯ ಇನ್ನೂ ಅಧಿಕೃತವಾಗಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ.

ಯುಪಿಐ ಮತ್ತು ಎಟಿಎಂ ಸೌಲಭ್ಯ ಯಾವಾಗ ಶುರು?

ಅಧಿಕೃತ ಮೂಲಗಳ ಪ್ರಕಾರ, ಇಪಿಎಫ್‌ಒ ತನ್ನ ಹೊಸ ವ್ಯವಸ್ಥೆಯ ಪರೀಕ್ಷಾರ್ಥ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಶೀಘ್ರದಲ್ಲೇ ಈ ಯೋಜನೆಯ ಜಾರಿಯನ್ನು ಘೋಷಿಸಲಾಗುವುದು ಎಂದಿದ್ದಾರೆ. ಆದರೆ, ನಿಖರವಾದ ದಿನಾಂಕ ಅಥವಾ ತಿಂಗಳನ್ನು ಇನ್ನೂ ಪ್ರಕಟಿಸಿಲ್ಲ.

ಈ 'ಇಪಿಎಫ್‌ಒ 3.0' ಜಾರಿಯಾದ ಬಳಿಕ, ಆಧಾರ್ ಲಿಂಕ್ ಆಗಿರುವ ಹಾಗೂ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಅಕೌಂಟ್‌ಗಳಿಗೆ ಯುಪಿಐ ಅಥವಾ ಎಟಿಎಂ ಮೂಲಕ ನೇರವಾಗಿ ಮತ್ತು ಸುಲಭವಾಗಿ ಪಿಎಫ್ ಹಣವನ್ನು ವರ್ಗಾಯಿಸಿಕೊಳ್ಳಬಹುದು. ಇದರಿಂದ ಅರ್ಜಿಗಳ ವಿಳಂಬ, ಕಾಗದದ ಕೆಲಸಗಳು ತಪ್ಪಲಿದ್ದು, ಪಾರದರ್ಶಕತೆ ಹೆಚ್ಚಾಗಲಿದೆ.

ಎಷ್ಟು ಪಿಎಫ್ ಹಣವನ್ನು ಹಿಂಪಡೆಯಬಹುದು?

ಹೊಸ ಪ್ರಸ್ತಾವನೆಯ ಪ್ರಕಾರ, ಅರ್ಹ ಚಂದಾದಾರರು ತಮ್ಮ ಒಟ್ಟು ಇಪಿಎಫ್ ಬ್ಯಾಲೆನ್ಸ್‌ನಲ್ಲಿ ಶೇ. 50 ರಿಂದ 75 ರಷ್ಟು ಹಣವನ್ನು ಹಿಂಪಡೆಯಲು ಅವಕಾಶವಿರುತ್ತದೆ (ಷರತ್ತುಗಳಿಗೆ ಒಳಪಟ್ಟು). ಸದಸ್ಯರ ನಿವೃತ್ತಿ ಜೀವನದ ಭದ್ರತೆಯ ದೃಷ್ಟಿಯಿಂದ ಒಟ್ಟು ಮೊತ್ತದ ಕನಿಷ್ಠ ಶೇ. 25 ರಷ್ಟು ಹಣವನ್ನು ಲಾಕ್ ಮಾಡಲಾಗುತ್ತದೆ. ಅಂದರೆ ತೆಗೆಯಲು ಬರುವುದಿಲ್ಲ. ಇದು ಇಪಿಎಫ್‌ಒನ ಮೂಲ ಉದ್ದೇಶವಾದ ದೀರ್ಘಕಾಲೀನ ಉಳಿತಾಯವನ್ನು ರಕ್ಷಿಸುತ್ತದೆ.

5 ಲಕ್ಷ ರೂ.ವರೆಗೆ ಆಟೋ ಸೆಟಲ್ಮೆಂಟ್

ಸರ್ಕಾರವು ಇತ್ತೀಚೆಗಷ್ಟೇ ಪಿಎಫ್ ಆಟೋ-ಸೆಟಲ್ಮೆಂಟ್ (ಸ್ವಯಂಚಾಲಿತ ಇತ್ಯರ್ಥ) ಮಿತಿಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಿದೆ. ಹೊಸ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬಂದ ನಂತರ, ಅರ್ಹ ಕ್ಲೈಮ್‌ಗಳು ಕೆಲವೇ ದಿನಗಳಲ್ಲಿ ಇತ್ಯರ್ಥವಾಗಲಿವೆ ಎಂದು ಇಪಿಎಫ್‌ಒ ವಿಶ್ವಾಸ ವ್ಯಕ್ತಪಡಿಸಿದೆ.

ಬೇರೆ ಏನೆಲ್ಲಾ ಬದಲಾವಣೆಗಳಾಗಲಿವೆ?

ಇಪಿಎಫ್‌ಒ 3.0 ಮೂಲಕ ಉಮಂಗ್ (UMANG) ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಶನ್, ತಕ್ಷಣದ ಯುಎಎನ್ ಆಕ್ಟಿವೇಶನ್, ಸುಲಭವಾಗಿ ಪಾಸ್‌ಬುಕ್ ವೀಕ್ಷಣೆ ಮತ್ತು ಆಧಾರ್‌ಗೆ ಸಂಬಂಧಿಸಿದ ತಿದ್ದುಪಡಿಗಳನ್ನು ಮತ್ತಷ್ಟು ಸರಳಗೊಳಿಸಲಾಗುತ್ತದೆ. ತಪ್ಪುಗಳನ್ನು ಕಡಿಮೆ ಮಾಡುವುದು ಮತ್ತು ಸದಸ್ಯರಲ್ಲಿ ವಿಶ್ವಾಸ ಮೂಡಿಸುವುದು ಇದರ ಪ್ರಮುಖ ಗುರಿಯಾಗಿದೆ.

ಒಟ್ಟಾರೆಯಾಗಿ, ಇಪಿಎಫ್‌ಒ 3.0 ಜಾರಿಯಾದರೆ ಪಿಎಫ್ ಸೇವೆಗಳು ಸಂಪೂರ್ಣವಾಗಿ ರಿಯಲ್-ಟೈಮ್ ಡಿಜಿಟಲ್ ಮಯವಾಗಲಿವೆ. ಸದ್ಯಕ್ಕೆ ಹೊಸ ಸಿಸ್ಟಮ್ ಟೆಸ್ಟಿಂಗ್ ಮುಗಿದಿದ್ದರೂ, ಯುಪಿಐ ಅಥವಾ ಎಟಿಎಂ ಮೂಲಕ ಹಣ ತೆಗೆಯಲು ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬೀಳುವವರೆಗೂ ಉದ್ಯೋಗಿಗಳು ಕಾಯಲೇಬೇಕಿದೆ.


Post a Comment

0 Comments