ರಾಜ್ಯದಲ್ಲಿ ಸದ್ಯ ಗೃಹಲಕ್ಷ್ಮಿ ಯೋಜನೆಯನ್ನು ಪರಿಷ್ಕರಣೆ ಮಾಡುತ್ತಿದ್ದು, ಬಿಗಿ ನಿಯಮಗಳನ್ನು ಜಾರಿ ಮಾಡುವ ಮೂಲಕ ಅನರ್ಹರ ಬೇಟೆಯಾಡಿ ಅವರನ್ನು ಯೋಜನೆಯ ಲಿಸ್ಟ್‌ನಿಂದ ಕೈಬಿಡುವ ಮೂಲಕ ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಹಾವೇರಿಯಲ್ಲಿ ಈವರೆಗೂ ಸುಮಾರು 6,346 ಅನರ್ಹರನ್ನು ಲಿಸ್ಟ್‌ನಿಂದ ಕಿತ್ತುಹಾಕಲಾಗಿದ್ದು, ಇದರಲ್ಲಿ ಬರೋಬ್ಬರಿ 980 ಮಂದಿ ಮೃತಪಟ್ಟ ಫಲಾನುಭವಿಗಳಿದ್ದಾರೆ. ಹಾಗಾದ್ರೆ, ಯಾರನೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅನರ್ಹರು ಎಂದು ಪರಿಗಣಿಸಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ..
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ, ಬಿಗಿ ನಿಯಮಗಳ ಜಾರಿಗೆ ಮುಂದಾದ ಸರ್ಕಾರ.ಸರ್ಕಾರಕ್ಕೆ ಆರ್ಥಿಕ ಹೊತೆ ತಪ್ಪಿಸಲು ಅನರ್ಹರ ಬೇಟೆ ಹಾವೇರಿಯಲ್ಲಿ ಈವರೆಗೂ 6,346 ಅನರ್ಹರು ಔಟ್.ಮೃತಪಟ್ಟ 980 ಮಂದಿ ಫಲಾನುಭವಿಗಳ ಖಾತೆಗೂ ಸೇರಿದ ಗೃಹಲಕ್ಷ್ಮಿ ಹಣ, ಯಾರೆಲ್ಲಾ ಈ ಯೋಜನೆಗೆ ಅನರ್ಹರು?
ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಪ್ರಸ್ತುತ ಬಿಗಿ ನಿಯಮಗಳನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 6,346 ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಪಟ್ಟಿಯಿಂದ ಕೈಬಿಡಲಾಗಿದೆ.
2023ರಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನವಾದಾಗ ಹೆಚ್ಚೇನೂ ನಿಯಮಗಳನ್ನು ರೂಪಿಸಿರಲಿಲ್ಲ. ಇದರಿಂದ ಕೆಲವು ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಪಾವತಿದಾರರಿಗೂ ಮಾಸಿಕ 2 ಸಾವಿರ ರೂ. ಸಂದಾಯವಾಗುತ್ತಿತ್ತು. ದಿನಗಳೆದಂತೆ ಗ್ಯಾರಂಟಿಗಳಿಂದ ಆರ್ಥಿಕ ಹೊರೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯೋಜನೆಗಳಿಗೆ ಬಿಗಿ ನಿಯಮ ರೂಪಿಸಲು ಸರ್ಕಾರ ಮುಂದಾಗಿದೆ.
ಯಾರನ್ನು ಕೈ ಬಿಡಲಾಗಿದೆ?
ಜಿಲ್ಲೆಯಲ್ಲಿ 3,97,625 ಪಡಿತರ ಚೀಟಿದಾರರಿದ್ದು, ಗೃಹಲಕ್ಷ್ಮಿ ಯೋಜನೆಗೆ 3,97,719 ಅರ್ಜಿಗಳು ನೋಂದಣಿಯಾಗಿವೆ. ಈ ಪೈಕಿ 3,86,977 ಫಲಾನುಭವಿಗಳಿಗೆ ಯೋಜನೆ ಮಂಜೂರಾಗಿದ್ದು, ಇನ್ನೂ 14,742 ಅರ್ಜಿ ಮಂಜೂರಾತಿಗೆ ಬಾಕಿ ಇವೆ. ಈ ನಡುವೆ ಅನರ್ಹರಿಗೆ ಗೃಹಲಕ್ಷ್ಮಿ ಯೋಜನೆ ಹಣ ಹೋಗುತ್ತಿರುವುದರಿಂದ ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆ ತಪ್ಪಿಸಲು ಅನರ್ಹರನ್ನು ಗುರುತಿಸುವ ಕಾರ್ಯ ನಡೆಸಲಾಗಿದೆ.
ಸಮಗ್ರವಾಗಿ ಪರಿಶೀಲಿಸಿದಾಗ ಮೃತಪಟ್ಟವರು, ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ಖಾತೆ ಹೊಂದಿದವರು ಹಾಗೂ ಆಧಾರ್ ಜೋಡಣೆ, ಇಕೆವೈಸಿ ಜೋಡಣೆ ಆಗದಿರುವವರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 6,346 ಅನರ್ಹ ಫಲಾನುಭವಿಗಳು ಇರುವುದು ಕಂಡುಬಂದಿದ್ದು, ಅವರನ್ನು ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ಕೈಬಿಡಲಾಗಿದೆ.
ಮೃತಪಟ್ಟವರಿಗೂ ಹಣ ಸಂದಾಯ!
ಜಿಲ್ಲೆಯಲ್ಲಿ 980 ಮೃತಪಟ್ಟವರ ಖಾತೆಗೆ ಹಣ ಹೋಗುತ್ತಿರುವುದು ಕಂಡುಬಂದಿದೆ. ಕುಟುಂಬದ ಯಜಮಾನಿ ಮೃತಪಟ್ಟರೆ ಸ್ಥಳೀಯ ಆಡಳಿತ ಸಂಸ್ಥೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿ ಯೋಜನೆ ರದ್ದುಗೊಳಿಸಬೇಕಿದೆ. ಆದರೆ ಗ್ರಾಮೀಣ ಭಾಗದಲ್ಲಿ ಹಲವಾರು ಬಡ ಮತ್ತು ವಯೋವೃದ್ಧ ಮಹಿಳೆಯರು ತಮ್ಮ ಎಟಿಎಂ ಕಾರ್ಡ್ ಮಕ್ಕಳಿಗೆ ಅಥವಾ ಕುಟುಂಬದ ಯುವ ಸದಸ್ಯರಿಗೆ ನೀಡಿ ಅವರ ಮೂಲಕವೇ ಹಣ ತೆಗೆಸಿಕೊಳ್ಳುವ ಪರಿಪಾಠವಿದೆ. ಇಂತಹ ಸಂದರ್ಭದಲ್ಲಿ ಫಲಾನುಭವಿಗಳು ಮೃತಪಟ್ಟರೂ ಅವರ ಖಾತೆಯಿಂದ ಹಣ ತೆಗೆಯಲು ಯಾವುದೇ ತೊಡಕಿರುವುದಿಲ್ಲ. ಕೆಲ ಕುಟುಂಬದವರು ಫಲಾನುಭವಿ ಮಹಿಳೆ ಮೃತಪಟ್ಟರೂ ಅಧಿಕಾರಿಗಳಿಗೆ ಮಾಹಿತಿ ನೀಡಿ ಯೋಜನೆ ಸ್ಥಗಿತಗೊಳಿಸಿಲ್ಲ. ಈ ಕಾರಣಕ್ಕೆ ಯೋಜನೆಯ ಹಣ ಅನರ್ಹರಿಗೂ ಹೋಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಗೃಹಲಕ್ಷ್ಮಿ ಯೋಜನೆಯಿಂದ ಕೈ ಬಿಟ್ಟ ಫಲಾನುಭವಿಗಳ ವಿವರ
* ಬ್ಯಾಂಕ್ ಖಾತೆಯೊಂದಿಗೆ ದಾಖಲೆ ಲಿಂಕ್ ಆಗದಿರುವ -1152
*ಇಕೆವೈಸಿ ಮಿಸ್ಸಿಂಗ್ ಆಗಿರುವುದು -130
* ಮೃತಪಟ್ಟವರು -980
* ಐಟಿ, ಜಿಎಸ್‌ಟಿ ಹೊಂದಿರುವವರು -4084
* ಒಟ್ಟು -6346
"ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟವರು, ಆದಾಯ ತೆರಿಗೆ ಪಾವತಿದಾರರಿಗೂ ಹಣ ಸಂದಾಯವಾಗುತ್ತಿತ್ತು. ಪರಿಶೀಲನೆ ಬಳಿಕ ಹಾವೇರಿ ಜಿಲ್ಲೆಯಲ್ಲಿ 6346 ಫಲಾನುಭವಿಗಳನ್ನು ಅನರ್ಹರೆಂದು ಪಟ್ಟಿ ಮಾಡಲಾಗಿದೆ. ಅರ್ಹರಿಗೆ ಎಂದಿನಂತೆ ಪ್ರತಿ ತಿಂಗಳು 2 ಸಾವಿರ ರೂ. ಬರಲಿದೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ."
-ಎಸ್.ಆರ್.ಪಾಟೀಲ, ರಾಜ್ಯ ಉಪಾಧ್ಯಕ್ಷರು, ಗ್ಯಾರಂಟಿ ಯೋಜನೆ
0 Comments