E- Swathu Website-ಪಂಚಾಯತ್ ರಾಜ್ ಇಲಾಖೆಯಿಂದ ಇ-ಸ್ವತ್ತು 2.0 ತಂತ್ರಾಂಶ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತಿ(Grama Panchayat) ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದಾಖಲೆಯನ್ನು ವಿತರಣೆ ಮಾಡಲು ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಿದ್ದು, ಈ ಕುರಿತು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಗಳನ್ನು ವಿತರಿಸಿ ಹಾಗೂ ಇ-ಸ್ವತ್ತು 2.0(e-Swathu) ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, ಗ್ರಾಮದಿಂದಲೇ ಅಧಿಕಾರ ಕೆಳಗಿನಿಂದ ಮೇಲಕ್ಕೆ ಹೋಗಬೇಕು ಎನ್ನುವ ವಿಕೇಂದ್ರೀಕರಣ ಗಾಂಧಿ, ನೆಹರೂ, ಲೋಹಿಯಾ ಅವರ ಕನಸಾಗಿತ್ತು. ನಮ್ಮದು ಹಳ್ಳಿಗಳ ದೇಶ. ಗ್ರಾಮ ಭಾರತ ಅಭಿವೃದ್ಧಿ ಆಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಇ-ಸ್ವತ್ತು 2.0 ತಂತ್ರಾಂಶದಲ್ಲಿ((e-Swathu Document) ಯಾವೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ? ಇದರಿಂದ ಸಾರ್ವಜನಿಕರಿಗೆ ಆಗುವ ಬದಲಾವಣೆಗಳೇನು? ಇ-ಸ್ವತ್ತು ದಾಖಲಾತಿ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

e-Swathu 2.0 Website Specialties-ಇ-ಸ್ವತ್ತು 2.0 ತಂತ್ರಾಂಶದ ವಿಶೇಷತೆಗಳು:

ಪ್ರಸ್ತುತ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆಯನ್ನು ನೀಡಲಾಗಿದ್ದು ಈ ಹಿಂದೆ ಇದ್ದ ತಂತ್ರಾಂಶಕ್ಕೂ ಪ್ರಸ್ತುತ ನವೀಕರಿಸಿರುವ ತಂತ್ರಾಂಶಕ್ಕೂ ಇರುವ ಬದಲಾವಣೆಯ ವಿವರ ಈ ಕೆಳಗಿನಂತಿವೆ:

A) ಇ-ಸ್ವತ್ತು ದಾಖಲೆ ವಿತರಣೆ ಅವಧಿ 45 ರಿಂದ 15 ದಿನಕ್ಕೆ ಕಡಿತ:

ಪ್ರಸ್ತುತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದಾಖಲೆಯನ್ನು ವಿತರಣೆ ಮಾಡಲು ಅರ್ಜಿದಾರರು ಅರ್ಜಿ ಸಲ್ಲಿಸಿದ ಬಳಿಕ 45 ದಿನದ ಒಳಗಾಗಿ ಇ-ಸ್ವತ್ತು ದಾಖಲೆಯನ್ನು ವಿತರಣೆ ಮಾಡಬೇಕು ಎನ್ನುವ ಕಾಲಾವಧಿಯನ್ನು ನಿಗಧಿಪಡಿಸಲಾಗಿತ್ತು ಅದರೆ ಈಗ ಈ ನಿಯಮಕ್ಕೆ ತಿದ್ದುಪಡಿಯನ್ನು ತಂದು ನೂತನ ಇ-ಸ್ವತ್ತು 2.0 ತಂತ್ರಾಂಶದಲ್ಲಿ ವಿತರಣೆ ಅವಧಿಯನ್ನು 15 ದಿನಕ್ಕೆ ಇಳಿಕೆ ಮಾಡಲಾಗಿದೆ.

B) ಗ್ರಾಮ ಪಂಚಾಯಿತಿ ಅಧಿಕಾರಿಗಳು 15 ದಿನದ ಒಳಗಾಗಿ ಅರ್ಜಿ ಅನುಮೋದಿಸದಿದ್ದರೆ ಸ್ವಯಂ ಅನುಮೋದನೆ:

ಅರ್ಜಿದಾರರ ಅರ್ಜಿಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಬಳಿಕ ಆನ್ಲೈನ್ ನಲ್ಲಿ ಇ-ಸ್ವತ್ತು ತಂತ್ರಾಂಶದಲ್ಲಿ ವಿವರಗಳನ್ನು ದಾಖಲಿಸಿ 15 ದಿನದ ಒಳಗಾಗಿ ಅನುಮೋದನೆಯನ್ನು ನೀಡದೇ ಇದ್ದರೆ ಇಂತಹ ಅರ್ಜಿಗಳು ಸ್ವಯಂ ಅನುಮೋದನೆ ಗೊಳ್ಳುವಂತೆ ಇ-ಸ್ವತ್ತು 2.0 ತಂತ್ರಾಂಶದ ತಿದ್ದುಪಡಿ ಮಾಡಲಾಗಿದೆ.

C) ನಿರಾಕ್ಷೇಪಣಾ ಪತ್ರ, ತೆರಿಗೆ, ಶುಲ್ಕ ಹಾಗೂ ದರಗಳ ವೈಜ್ಞಾನಿಕ ನಿಗದಿ:

ನೂತನ ನಿಯಮದ ಪ್ರಕಾರ ಗ್ರಾಮೀಣ ಭಾಗದ ಆಸ್ತಿಗಳಿಗೆ ನಿರಾಕ್ಷೇಪಣಾ ಪತ್ರ, ತೆರಿಗೆ, ಶುಲ್ಕ ಹಾಗೂ ದರಗಳ ವೈಜ್ಞಾನಿಕವಾಗಿ ನಿಗದಿಪಡಿಸಲಾಗಿದೆ.

e-Swathu Statistics-ಇ-ಸ್ವತ್ತು ದಾಖಲೆ ಅಂಕಿ-ಅಂಶ:

ಪ್ರಸ್ತುತ ನಮ್ಮ ರಾಜ್ಯದಲ್ಲಿ ಇ-ಸ್ವತ್ತು ದಾಖಲೆಯನ್ನು ವಿತರಿಸಿರುವ ಅಂಕಿ-ಅಂಶ ಈ ಕೆಳಗಿನಂತಿದೆ:

ರಾಜ್ಯದಲ್ಲಿರುವ ಒಟ್ಟು ಮನೆಗಳು- 1.48 ಕೋಟಿ ಮನೆಗಳು

ಇ-ಸ್ವತ್ತು ಪಡೆದ ಮನೆಗಳು- 53 ಲಕ್ಷ ಮನೆಗಳು

ಇ-ಸ್ವತ್ತು ಪಡೆಯಲು ಬಾಕಿಯಿರುವ ಮನೆಗಳು-95 ಲಕ್ಷ ಮನೆಗಳು

ಒಟ್ಟು ತೆರಿಗೆ ಸಂಗ್ರಹ- 1,272 ಕೋಟಿ

ಹೊಸ ತಂತ್ರಾಂಶ ಜಾರಿಯಿಂದ ಹೆಚ್ಚುವರಿ ತೆರಿಗೆ ಆದಾಯ ನಿರೀಕ್ಷೆ- 2,000 ಕೋಟಿ

e-Swathu Helpline-ಇ-ಸ್ವತ್ತು ಸಹಾಯವಾಣಿ ಸ್ಥಾಪನೆ:

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಇ - ಸ್ವತ್ತು ಪಡೆಯಲು ಇರುವ ಎಲ್ಲಾ ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇ - ಸ್ವತ್ತು ಸಹಾಯವಾಣಿ 9483476000 ಸ್ಥಾಪಿಸಲಾಗಿದ್ದು. ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್‌ ರೂಪದ ಇ - ಖಾತಾ ಪಡೆಯಲು ಇಲಾಖೆಯು ಅವಕಾಶ ಕಲ್ಪಿಸಿದ್ದು ಇದಕ್ಕಾಗಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ.

C M Siddaramaiah-ಗ್ರಾಮಗಳು ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಗ್ರಾಮಗಳು ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ಮಹಾತ್ಮಾ ಗಾಂಧೀಜಿಯವರ ಕನಸು ಇದೇ ಆಗಿತ್ತು. ಮೊದಲು ಗ್ರಾಮಗಳ ಅಭಿವೃದ್ಧಿ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಹಳ್ಳಿಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ರಾಜೀವ್ ಗಾಂಧಿಯವರು ಪ್ರಧಾನಿ ಆದಾಗ ಸಂವಿಧಾನ ಪರಿಚ್ಛೇದ 73, 74 ಕ್ಕೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ತಂದರು. ಈ ತಿದ್ದುಪಡಿ ಬರುವವರೆಗೂ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿಯೇ ಇರಲಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

e-Swathu Revenue-ಇ-ಸ್ವತ್ತು ತಂತ್ರಾಂಶದಿಂದ 1778 ಕೋಟಿ ಆದಾಯ ಹೆಚ್ಚು:

ಇ-ಸ್ವತ್ತು ತಂತ್ರಾಂಶದಿಂದ ಸದ್ಯ 1778 ಕೋಟಿ ತೆರಿಗೆ ಆದಾಯ ಹೆಚ್ಚಾಗುವ ಅಂದಾಜಿದೆ. ತಂತ್ರಾಂಶ ಪರಿಣಾಮಕಾರಿ ಜಾರಿ ಆದರೆ, ಆದಾಯದ ಪ್ರಮಾಣ 2000 ಕೋಟಿಗೂ ಹೆಚ್ಚುವ ನಿರೀಕ್ಷೆ ಇದೆ ಎಂದರು.

DCM D.K Shivakumar-ಇ-ಸ್ವತ್ತು ಮೂಲಕ ನಿಮ್ಮ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

“ಭಾರತದ ಭವಿಷ್ಯ ಅಡಗಿರುವುದು ಹಳ್ಳಿಯಲ್ಲಿ ಎಂದು ಗಾಂಧೀಜಿ ತಿಳಿಸಿದ್ದರು. ಪ್ರತಿ ಹಳ್ಳಿಯಲ್ಲಿ ಪಂಚಾಯ್ತಿ, ಸೊಸೈಟಿ, ಶಾಲೆ ಇರಬೇಕು ಎಂದು ಮಾರ್ಗದರ್ಶನ ನೀಡಿದರು. ಅವರ ಮಾರ್ಗದರ್ಶನದಂತೆ ನಾವು ಕೆಲಸ ಮಾಡುತ್ತಿದ್ದೇವೆ.

ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ತಂದುಕೊಡುವ ಕೆಲಸ ಮಾಡುತ್ತಿದ್ದೇವೆ. ಇದು ನಿಮ್ಮೆಲ್ಲರ ಬದುಕಿಗೆ ಹೊಸರೂಪ ನೀಡಿ, ಎಲ್ಲ ಪಂಚಾಯ್ತಿ ಆಸ್ತಿ ದಾಖಲೆಗಳಿಗೆ 11 ಬಿ ಖಾತೆಗಳನ್ನು ನೀಡಲಾಗುತ್ತಿದೆ. ನೀವು ಅರ್ಜಿ ಹಾಕಿ 15 ದಿನದ ಒಳಗೆ ಖಾತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಯಾರೂ ಕಚೇರಿ ಅಲೆಯುವುದು ಬೇಡ ಎಂದು ಆನ್ಲೈನ್ ಹಾಗೂ ಬಾಪುಜಿ ಕೇಂದ್ರಗಳಲ್ಲಿ ವಿತರಣೆಗೆ ಅವಕಾಶ ನೀಡಲಾಗಿದೆ. 11 ಬಿ ಮೂಲಕ ತೆರಿಗೆ ಪಾವತಿಸಿ, ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ” ಎಂದು ತಿಳಿಸಿದರು.

Grama Panchayat-ಭೂ ದಾಖಲೆ ನೀಡುವುದು ಸರ್ಕಾರದ ಆರನೇ ಗ್ಯಾರಂಟಿ:

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ ಮಾಡಿದೆ. ಅರಣ್ಯ ಪ್ರದೇಶದಲ್ಲೂ ವಾಸಿಸುವವರಿಗೆ ಕಾನೂನಿನ ಅಡಿಯಲ್ಲಿ ಸಹಾಯ ಮಾಡಿದೆ. ನಿಮ್ಮ ಭೂಮಿ ಹಾಗೂ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ ಯೋಜನೆಯಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳನ್ನು ಇ-ಖಾತಾ ಅಭಿಯಾನ ಮಾಡಿದ್ದು, 6 ಲಕ್ಷ ಜನರಿಗೆ ಇ-ಖಾತಾ ವಿತರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಕೃಷ್ಣ ಬೈರೇಗೌಡರು ಹಾಗೂ ಪ್ರಿಯಾಂಕ್ ಖರ್ಗೆ ಅವರು ಸೇರಿ 1,11,111 ಜನರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಹೊರಗಿರುವ ತಾಂಡಾಗಳನ್ನು ಸಕ್ರಮ ಮಾಡಿ ಹಕ್ಕುಪತ್ರ, ಭೂ ದಾಖಲೆಗಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.

Previous Post Next Post