ಪಿಎಂ ಕುಸುಮ್‌ ಬಿ ಯೋಜನೆ: ಸೋಲಾರ್‌ ಪಂಪ್‌ಸೆಟ್‌ಗಳಿಗೆ ಸಿಗಲಿದೆ ಶೇ.80ರಷ್ಟು ಸಬ್ಸಿಡಿ; ಅರ್ಜಿ ಸಲ್ಲಿಸುವುದು ಹೇಗೆ?

By SVR Creations

ರೈತರೇ ಗಮನಿಸಿ! ಕರ್ನಾಟಕ ಸರ್ಕಾರವು ಪಿಎಂ ಕುಸುಮ್-ಬಿ ಯೋಜನೆಯಡಿ, ರೈತರ ಆರ್ಥಿಕಭದ್ರತೆ ಮತ್ತು ಕೃಷಿ ಅಭಿವೃದ್ಧಿಗೆ ಪೂರಕವಾಗಿ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಒದಗಿಸುತ್ತಿದೆ. ಇದರಿಂದ ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಿ, ರೈತರ ಆದಾಯದಲ್ಲಿ ಗಣನೀಯ ಏರಿಕೆಯಾಗಲಿದೆ. ಹಗಲಿನ ವೇಳೆಯಲ್ಲಿ ನಿರಂತರ ನೀರಾವರಿ ಸೌಲಭ್ಯ ಲಭ್ಯವಾಗುವುದರಿಂದ ಬೆಳೆಗಳ ಇಳುವರಿ ಹೆಚ್ಚುತ್ತದೆ. ಕೇವಲ ಶೇ.20ರಷ್ಟು ಮೊತ್ತವನ್ನು ಪಾವತಿಸಿ ಈ ಯೋಜನೆಯ ಫಲಾನುಭವಿಗಳಾಗಿ. ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ರೈತರು ವಿದ್ಯುತ್‌ ಸಮಸ್ಯೆಯ ಕಾರಣ ತಮ್ಮ ಹೊಲಗಳಿಗೆ ನಿರಂತರ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಲು ಮಹತ್ವದ ಹೆಜ್ಜೆ ಇಟ್ಟಿರುವ ಕರ್ನಾಟಕ ಸರ್ಕಾರವು, ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ (PM-KUSUM) ಯೋಜನೆಯ ಘಟಕ-ಬಿ ಅಡಿಯಲ್ಲಿ ರೈತರಿಗೆ ಭಾರಿ ಸಬ್ಸಿಡಿಯೊಂದಿಗೆ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಒದಗಿಸುತ್ತಿದೆ. ಹಗಲು ಹೊತ್ತಿನಲ್ಲಿ ನೀರಾವರಿ ಬೆಂಬಲ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವನ್ನು ಒದಗಿಸಲಾಗಿದೆ.

ಏನಿದು ಪಿಎಂ ಕುಸುಮ್‌ ಬಿ ಯೋಜನೆ?

ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ ಯೋಜನೆಯ ಘಟಕ-ಬಿಯು ಗ್ರಿಡ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಪ್ರತ್ಯೇಕ ರೈತರಿಗೆ 7.5 HP ಸಾಮರ್ಥ್ಯದವರೆಗೆ ಸ್ವತಂತ್ರ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಗಳನ್ನು ಅಳವಡಿಸಲು ಗಮನಹರಿಸುತ್ತದೆ. ಈ ಯೋಜನೆಯ ಪ್ರಮುಖ ಉದ್ದೇಶವು ರೈತರು ತಮ್ಮ ಅಸ್ತಿತ್ವದಲ್ಲಿರುವ ಡೀಸೆಲ್ ಪಂಪ್‌ಗಳ ಬದಲಿಗೆ ಸೌರ ಪಂಪ್‌ಗಳನ್ನು ಅಳವಡಿಸಲು ಸಹಾಯ ಮಾಡುವುದಾಗಿದೆ. ಇದರಿಂದ ನೀರಾವರಿ ವೆಚ್ಚ ಕಡಿಮೆಯಾಗುತ್ತದೆ. ಮಾಲಿನ್ಯವನ್ನು ತಗ್ಗಿಸಬಹುದು ಮತ್ತು ರೈತರ ಆದಾಯ ಹಾಗೂ ಜೀವನ ಮಟ್ಟ ಸುಧಾರಿಸುತ್ತದೆ. ಈ ಯೋಜನೆಯು ಕೃಷಿಯಲ್ಲಿ ಸೌರಶಕ್ತಿಯ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಿ, ರಾಜ್ಯದ ವಿದ್ಯುತ್ ಮೂಲಸೌಕರ್ಯದ ಮೇಲಿನ ಹೊರೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

ಪಿಎಂ ಕುಸುಮ್-ಬಿ ಯೋಜನೆಯ ಪ್ರಮುಖ ಅಂಶಗಳು

ಡೀಸೆಲ್ ಪಂಪ್‌ಗಳಿಗೆ ಪರ್ಯಾಯ: ಅಸ್ತಿತ್ವದಲ್ಲಿರುವ ಡೀಸೆಲ್ ಪಂಪ್‌ಗಳನ್ನು ಸೌರ ಪಂಪ್‌ಗಳಿಂದ ಬದಲಾಯಿಸಿ ಮಾಲಿನ್ಯ ಮತ್ತು ಡೀಸೆಲ್ ವೆಚ್ಚವನ್ನು ಕಡಿಮೆ ಮಾಡುವುದು.

ವೆಚ್ಚ ಕಡಿತ ಮತ್ತು ಆದಾಯ ಹೆಚ್ಚಳ: ಇದರಿಂದ ರೈತರು ಪ್ರತಿ ವರ್ಷ ಸುಮಾರು 50,000 ರೂ. ವರೆಗೆ ಡೀಸೆಲ್ ವೆಚ್ಚವನ್ನು ಉಳಿಸಬಹುದು ಮತ್ತು ನಿಶ್ಚಿತ ನೀರಾವರಿಯಿಂದ ಕೃಷಿ ಉತ್ಪಾದನೆ ಹೆಚ್ಚಿಸಬಹುದು.

ಹಗಲಿನ ನೀರಾವರಿ: ವಿದ್ಯುತ್ ಕಡಿತ ಅಥವಾ ಅನಿಶ್ಚಿತ ಪೂರೈಕೆಯ ತೊಂದರೆ ಇಲ್ಲದೆ ಹಗಲು ಹೊತ್ತಿನಲ್ಲಿ ನಿರಂತರ ನೀರಾವರಿ ಸೌಲಭ್ಯ ಒದಗಿಸುವುದು.

ಸ್ವಾವಲಂಬನೆ: ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು.

ರೈತರು ಕೇವಲ 20% ಪಾಲು ಭರಿಸಿದರೆ ಸಾಕು!

ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಶೇ.30ರಷ್ಟು ಹಾಗೂ ರಾಜ್ಯ ಸರ್ಕಾರದ ಶೇ.50ರಷ್ಟು ಸಹಾಧನದೊದಿಗೆ ರೈತರಿಗೆ ಶೇ. 80 ರಷ್ಟು ದೊಡ್ಡ ಮೊತ್ತದ ಸಬ್ಸಿಡಿ ಲಭ್ಯವಾಗಲಿದೆ. ರೈತರು ತಾವು ಖರೀಸುವ ಹೊಸ ಸೌರ ಪಂಪ್‌ಸೆಟ್‌ ಮೇಲೆ ಕೇವಲ 20% ಪಾಲನ್ನು ಮಾತ್ರ ಭರಿಸಬೇಕಾಗುತ್ತದೆ.

ಸೋಲಾರ್‌ ಪಂಪ್‌ಸೆಟ್‌ಗೆ ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ರೈತರು ಈ ಕೆಳಗಿನ ಪ್ರಕ್ರಿಯೆಯ ಮೂಲಕ ಅರ್ಜಿ ಸಲ್ಲಿಸಬಹುದು:

ಆನ್‌ಲೈನ್ ನೋಂದಣಿ: ರೈತರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL) ದ ಸಹಯೋಗದೊಂದಿಗೆ ನಿರ್ವಹಿಸಲಾಗುತ್ತಿರುವ ಅಧಿಕೃತ ವೆಬ್‌ಸೈಟ್‌ souramitra.com ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು.

ಮಾರಾಟಗಾರರ ಆಯ್ಕೆ: ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರ, ರೈತರು ಮಾರಾಟಗಾರ/ಏಜೆನ್ಸಿಯನ್ನು ಆಯ್ಕೆ ಮಾಡಬೇಕು.

ವಂತಿಗೆ ಪಾವತಿ: ರೈತರು ತಮ್ಮ ಪಾಲಿನ 20% ಮೊತ್ತವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆಯ ಕೈಪಿಡಿಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಕೆಗೆ ಪ್ರಮುಖ ಸೂಚನೆಗಳು

ಯೋಜನೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳನ್ನು kredl.karnataka.gov.in ವೆಬ್‌ಸೈಟ್‌ನಿಂದ ಪಡೆಯಬಹದುದಾಗಿದೆ.

ನೋಂದಣಿ ಪ್ರಕ್ರಿಯೆಯಲ್ಲಿ ಯಾರೊಂದಿಗೂ ಒ.ಟಿ.ಪಿ (OTP) ಹಂಚಿಕೊಳ್ಳಬೇಡಿ. ನಿಮ್ಮ ನೋಂದಣಿಯನ್ನು ನೀವೇ ಖುದ್ದಾಗಿ ಪೂರ್ಣಗೊಳಿಸಿ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಂದು?

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC) ದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು, "ಸೋಲಾರ್ ಪಂಪ್‌ಸೆಟ್‌ಗಳ ಮೂಲಕ ಹಗಲಿನ ನೀರಾವರಿ ಒದಗಿಸಲು ಕುಸುಮ್-ಬಿ ಯೋಜನೆ ನಿರ್ಣಾಯಕವಾಗಿದೆ. ಈ ಯೋಜನೆಯು ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳುವುದರಿಂದ, ರೈತರು ತಕ್ಷಣವೇ ಈ ಸೌಲಭ್ಯದ ಲಾಭ ಪಡೆಯಬೇಕು" ಎಂದು ಮನವಿ ಮಾಡಿದ್ದಾರೆ.

ಸಹಾಯವಾಣಿ ಸಂಖ್ಯೆಗಳು:

KREDL ಹೆಲ್ಪ್‌ಲೈನ್: 080-22202100 / 8095132100

CESC ಸಹಾಯವಾಣಿ: 9449598669

ಹೆಚ್ಚುವರಿ ಸಹಾಯಕ್ಕಾಗಿ ಹತ್ತಿರದ ವಿದ್ಯುತ್‌ ವಿತರಣಾ ಕಚೇರಿಯನ್ನು ಸಂಪರ್ಕಿಸಬಹುದು.

ಸೋಲಾರ್‌ ಪಂಪ್‌ಸೆಟ್‌ ಸಬ್ಸಿಡಿಗೆ ಯಾರೆಲ್ಲಾ ಅರ್ಹರು?

ಪಿಎಂ-ಕುಸುಮ್ ಯೋಜನೆಗೆ ಈ ಕೆಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ:

ರೈತರು

ರೈತರ ಗುಂಪುಗಳು

ರೈತರ ಉತ್ಪಾದಕ ಸಂಸ್ಥೆಗಳು

ಪಂಚಾಯತ್‌ಗಳು

ಸಹಕಾರ ಸಂಘಗಳು

ನೀರು ಬಳಕೆದಾರರ ಸಂಘಗಳು

ಅಗತ್ಯವಿರುವ ದಾಖಲೆಗಳು

ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅವಶ್ಯಕ:

ಆಧಾರ್ ಕಾರ್ಡ್

ಭೂ ದಾಖಲೆಗಳು

ಬ್ಯಾಂಕ್ ಖಾತೆ ಪಾಸ್‌ಬುಕ್

ಘೋಷಣಾ ನಮೂನೆ

ಮೊಬೈಲ್ ಸಂಖ್ಯೆ

ಪಾಸ್‌ಪೋರ್ಟ್ ಗಾತ್ರದ ಫೋಟೋ