ಕಾಂಗ್ರೆಸ್ ಪಂಚ ಗ್ಯಾರಂಟಿಗಳ ಕುರಿತಾಗಿ 5 ಸಂಸ್ಥೆಗಳಿಂದ ಅಧ್ಯಯನ ನಡೆಸಲಾಗಿದೆ. ನವೆಂಬರ್ 5 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಕುರಿತಾದ ಅವಲೋಕನ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಉದ್ಘಾಟನಾ ಭಾಷಣವನ್ನು ಮಾಡಲಿದ್ದಾರೆ. ಎಂ.ಎಸ್ ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸೌಮ್ಯ ಸ್ವಾಮಿನಾಥನ್ ಅವರು ಕಾರ್ಯಕ್ರಮದ ಪ್ರಧಾನ ಭಾಷಣ ಮಾಡಲಿದ್ದು, ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಸರ್ಕಾರಿ ಖಾತರಿ ಯೋಜನೆಗಳ ಕಾರ್ಯನೀತಿ ಸನ್ನಿವೇಶವನ್ನು ವಿವರಿಸಲಿದ್ದಾರೆ.
- ರಾಜ್ಯ ಸರ್ಕಾರ ಮಹತ್ವದ ಯೋಜನೆಯಾದ ಪಂಚ ಗ್ಯಾರಂಟಿ
- ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ 5 ಸಂಸ್ಥೆಗಳ ಅಧ್ಯಯನ
- ಬುಧವಾರ ನಗರದಲ್ಲಿ ನಡೆಯಲಿದೆ ಅವಲೋಕನ ಕಾರ್ಯಕ್ರಮ
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳ ಪೈಕಿ ಐದು ಗ್ಯಾರಂಟಿ ಯೋಜನೆಗಳು ಒಂದಾಗಿವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಮೀಕ್ಷೆಗಳು, ಅಧ್ಯಯನ ವರದಿಗಳು ನಡೆದಿವೆ. ಇದೀಗ ಮತ್ತೆ ಐದು ಸಂಸ್ಥೆಗಳಿಂದ ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕಗಳು ಹಾಗೂ ಪರಿಣಾಮಗಳ ಬಗ್ಗೆಅಧ್ಯಯನ ನಡೆಸಲಾಗಿದೆ. ನವೆಂಬರ್ 5 ರಂದು ಈ ನಿಟ್ಟಿನಲ್ಲಿ ನಡೆಯಲಿರುವ ಅವಲೋಕನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಯಾಕಿಷ್ಟು ಅನಿವಾರ್ಯ?, ಟಚ್ ಮಾಡೋದು ಸುಲಭವಲ್ಲ, ಇಲ್ಲಿದೆ ಕಾರಣಗಳು
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಐದು ಖಾತರಿ (ಗ್ಯಾರಂಟಿ) ಯೋಜನೆಗಳ ಕುರಿತು ಪ್ರತಿಷ್ಠಿತ ಐದು ಸಂಶೋಧನಾ ಸಂಸ್ಥೆಗಳು ಕೈಗೊಂಡಿರುವ ಅಧ್ಯಯನಗಳ ಸಂಶೋಧನಾ ಫಲಿತಾಂಶಗಳನ್ನು ಮತ್ತು ಕಾರ್ಯನೀತಿ ಸಲಹೆಗಳನ್ನು ಭಾಗೀದಾರ ಸರ್ಕಾರಿ ಇಲಾಖೆಗಳೊಂದಿಗೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ತಜ್ಞರೊಂದಿಗೆ ಹಂಚಿಕೊಳ್ಳಲು 2025 ನೇ ನವೆಂಬರ್ 5 ರಂದು ಬೆಂಗಳೂರಿನ ಎಂ.ಜಿ.ರಸ್ತೆಯ ಹೋಟೆಲ್ ತಾಜ್ ನ ಟ್ರಿನಿಟಿ ಸಭಾಂಗಣದಲ್ಲಿ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಂಗಳೂರಿನಲ್ಲಿರುವ ರಾಜ್ಯದ ವಿತ್ತೀಯ ಕಾರ್ಯನೀತಿ ಸಂಸ್ಥೆ (ಎಫ್.ಪಿ.ಐ)ಯು ಆರ್ಥಿಕ ಇಲಾಖೆಯ ಅಧೀನದಲ್ಲಿರುವ ನಿರ್ದೇಶನಾಲಯವಾಗಿದ್ದು, ಸರ್ಕಾರಿ ಖಾತರಿ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಾತ್ಮಕ ಮೌಲ್ಯಮಾಪನ ನಡೆಸಲು ಈ ಐದು ಸಂಶೋಧನಾ ಸಂಸ್ಥೆಗಳ ಜೊತೆ ಸಹಭಾಗಿತ್ವವನ್ನು ಹೊಂದಿರುತ್ತದೆ.
ಲಂಡನ್ನಿನ ಕಿಂಗ್ಸ್ ಕಾಲೇಜ್, ಮುಂಬೈನ ಎಕ್ಸ್.ಕೆ.ಡಿ.ಆರ್. ಫೋರಂ ಮತ್ತು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ, ಲೋಕ್ ನೀತಿ-ಸಿಎಸ್ ಡಿಎಸ್ ಮತ್ತು ಇಂಡಸ್ ಆಕ್ಷನ್ ಹಾಗೂ ಜಸ್ಟ್ ಜಾಬ್ಸ್ ನೆಟ್ ವರ್ಕ್ಸ್ ಸಂಶೋಧನಾ ಸಂಸ್ಥೆಗಳು ಖಾತರಿ(ಗ್ಯಾರಂಟಿ) ಯೋಜನೆಗಳ ಕುರಿತು ಅಧ್ಯಯನವನ್ನು ಕೈಗೊಂಡಿರುತ್ತವೆ.
ವಿವಿಧ ತಾಂತ್ರಿಕ ಅಧಿವೇಶನಗಳು
ಈ ಕಾರ್ಯಕ್ರಮವು ವಿವಿಧ ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಸರ್ಕಾರದ ಖಾತರಿ ಯೋಜನೆಗಳ ಅನು಼ಷ್ಠಾನದಲ್ಲಿ ಇ-ಆಡಳಿತದ ಪಾತ್ರ, ಸರ್ಕಾರದ ಐದು ಖಾತರಿ ಯೋಜನೆಗಳ ಪರಿಣಾಮಾತ್ಮಕ ಮೌಲ್ಯಮಾಪನ ಶಕ್ತಿ ಯೋಜನೆಯ ಪರಿಣಾಮಾತ್ಮಕ ಮೌಲ್ಯಮಾಪನ ಮತ್ತು ತಜ್ಞರ ಚರ್ಚೆ ನಡೆಯಲಿದೆ. ಪ್ರತಿ ಅಧಿವೇಶನದಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ತಜ್ಞರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ದಿ ಆಯುಕ್ತರಾದ ಉಮಾ ಮಹಾದೇವನ್ ನೆರವೇರಿಸಲಿದ್ದು, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಕಾರ್ಯಕ್ರಮವು ಐದು ಸಂಶೋಧನಾ ಸಂಸ್ಥೆಗಳು ನಡೆಸಿದ ಸರ್ಕಾರಿ ಖಾತರಿ ಯೋಜನೆಗಳ ಸಂಶೋಧನಾ ಅಧ್ಯಯನಗಳ ಕುರಿತು ಮೌಲ್ಯಯುತ ಮಾಹಿತಿಯನ್ನು ಒದಗಿಸುವುದರೊಂದಿಗೆ ಸರ್ಕಾರಿ ಖಾತರಿ ಯೋಜನೆಗಳ ಕಾರ್ಯನೀತಿ ವಿನ್ಯಾಸ, ಅನುಷ್ಠಾನ ಹಾಗೂ ನಿರೀಕ್ಷಿತ ಪರಿಣಾಮಗಳ ಅವಲೋಕನವನ್ನು ಸಹ ಒದಗಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.