ರಾಜ್ಯದಲ್ಲಿ ಹರಳು ರೂಪದ ಯೂರಿಯಾ ಅಭಾವ ಸೃಷ್ಟಿಯಾಗಿದ್ದು, ಇದಕ್ಕೆ ಬೇಡಿಕೆ ಕಡಿಮೆ ಮಾಡುವ ಉದ್ದೇಶದಿಂದ ದ್ರವ ರೂಪದ ನ್ಯಾನೋ ಯೂರಿಯಾ ಬಳಸುವಂತೆ ಕೃಷಿ ತಜ್ಞರು ರೈತರಿಗೆ ಸಲಹೆ ನೀಡಿದ್ದಾರೆ.
ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದಂತೆ ರೈತರು ಬೀಜ ಹಾಗೂ ಗೊಬ್ಬರದ ಅಂಗಡಿಗಳನ್ನು ಮೊದಲು ಸಂಪರ್ಕಿಸುತ್ತಾರೆ. ಆದರೆ, ನಾನಾ ಕಾರಣಗಳಿಂದ ರೈತರಿಗೆ ಈ ಸಲ ಯೂರಿಯಾ ರಸಗೊಬ್ಬರ ನಿರೀಕ್ಷಿತ ಪ್ರಮಾಣದಷ್ಟು ಸಿಗುತ್ತಿಲ್ಲ. ಇದರಿಂದ ಯೂರಿಯಾ ರಸಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ಅನ್ನದಾತರು ಗೊಬ್ಬರಕ್ಕಾಗಿ ಅಲೆದಾಡುವಂತಾಗಿದೆ.ಹರಳುರೂಪದ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ನಿರೀಕ್ಷಿತ ಪ್ರಮಾಣದಷ್ಟು ಲಭ್ಯತೆ ಇಲ್ಲದ ಕಾರಣಕ್ಕೆ ರಾಜ್ಯ ಕೃಷಿ ಇಲಾಖೆ ಹರಳು ರೂಪದ ಯೂರಿಯಾಕ್ಕೆ ಪರ್ಯಾಯವಾಗಿ 'ದ್ರವ ರೂಪದ ನ್ಯಾನೋ ಯೂರಿಯಾ' ಗೊಬ್ಬರಕ್ಕೆ ಪ್ರೋತ್ಸಾಹ ನೀಡಲಾರಂಭಿಸಿದೆ. ಇದರಿಂದ ಹರಳು ರೂಪದ ರಸಗೊಬ್ಬರದ ಬೇಡಿಕೆ ಕಡಿಮೆ ಆಗಬಹುದು ಎಂಬುದು ಕೃಷಿ ಇಲಾಖೆಯ ನಿರೀಕ್ಷೆ.
ಕೃಷಿಗೆ ಬಳಸುವ ಯೂರಿಯಾದಲ್ಲಿ ಶೇ.30ರಿಂದ 50ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ಉಳಿದಂತೆ, ಪರಿಸರದ ಇತರೆ ಮೂಲಗಳಲ್ಲಿ ಶೇಖರಣೆಯಾಗುತ್ತದೆ. ಈ ಗೊಬ್ಬರ ಬೆಳೆಗಳಿಗೆ ಸಾರಜನಕ ರೂಪದಲ್ಲಿ ಅತ್ಯಂತ ಉಪಯುಕ್ತ ಪೋಷಕಾಂಶ ಮೂಲವಾಗಿದ್ದರೂ ಸಹ ಅತಿಯಾದ ಯೂರಿಯಾ ಬಳಕೆ ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಮಣ್ಣಿನ ಆಮ್ಲಿಯತೆ, ನೀರಿನ ಮಾಲಿನ್ಯ ಮತ್ತು ಹಸಿರು ಮನೆಗಳ ಅನಿಲ ಪ್ರಮಾಣ ಹೆಚ್ಚಳ ಉಂಟುಮಾಡುತ್ತದೆ. ಜೊತೆಗೆ ಬೆಳೆಗಳಿಗೆ ಇತರೆ ಪೋಷಕಾಂಶಗಳ ಲಭ್ಯತೆಯ ಮೇಲೆ ಅಸಮಾತೋಲನ ಹಾಗೂ ಸಸ್ಯಗಳಿಗೆ ವಿಷಕಾರಿಯಾಗಿ ಪರಿಣಾಮವಾಗಬಹುದು. ಬೆಳೆಗಳಿಗೆ ಹೆಚ್ಚಿನ ಕೀಟಬಾಧೆ ಹಾಗೂ ರೋಗಗಳು ಹೆಚ್ಚಾಗಬಹುದು. ಇದು ಮಾನವನ ಆರೋಗ್ಯದ ಮೇಲೂ ಪರಿಣಾಮ ಬಿರುತ್ತದೆ. ಯೂರಿಯಾ ಬಳಸಿ ಬೆಳೆದ ತರಕಾರಿ, ಹಣ್ಣುಗಳು ಹಾಗು ಧಾನ್ಯಗಳಲ್ಲಿ ನೈಟ್ರೇಟ್ ಹಾಗೂ ನೈಟ್ರೈಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವುಗಳನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ ಮಾನವನಿಗೆ ಆಹಾರ ವಿಷವಾಗಿ ಹೊಟ್ಟೆ ನೋವು, ವಾಂತಿ ಸೇರಿ ಇತರೆ ಸಮಸ್ಯೆಗಳು ಎದುರಾಗಬಹುದು. ಅಲ್ಲದೆ ಮಾರಣಾಂತಿಕ ಕಾಯಿಲೆಗಳಿಗೂ ಕಾರಣವಾಗುವ ಸಾಧ್ಯತೆ ಇದೆ ಎಂದು ಕೃಷಿ ತಜ್ಞರು ಹೇಳುತ್ತಾರೆ.
ನ್ಯಾನೋ ಯೂರಿಯಾ ಬಳಕೆ ಏಕೆ?
ನ್ಯಾನೋ ಯೂರಿಯಾ ದ್ರವ ರೂಪದ ರಸಗೊಬ್ಬರ. ಇದನ್ನು ಭಾರತೀಯ ರಸಗೊಬ್ಬರ ತಯಾರಿಕಾ ಸಂಸ್ಥೆಯಾದ ಇಫ್ಕೂ(IFFCO) ತಯಾರಿಸುತ್ತದೆ. ಇದು ಹರಳು ರೂಪದ ಯೂರಿಯಾಕ್ಕಿಂತ ಶೇ 8-10 ಪಟ್ಟು ಪರಿಣಾಮಕಾರಿ. ಇದನ್ನು ಬೆಳೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಬೆಳೆಗಳಿಗೆ ಬೇಗನೆ ಪೋಷಕಾಂಶಗಳು ನೇರವಾಗಿ ಲಭ್ಯವಾಗುತ್ತವೆ. ನ್ಯಾನೋ ಯೂರಿಯಾ ಹರಳು ರೂಪದ ಯೂರಿಯಾಕ್ಕಿಂತ ಶೇ.50ರಷ್ಟು ಬಳಕೆ ಕಡಿಮೆ ಮಾಡಬಹು. ಇದರ ಬಳಕೆಯಿಂದ ರಾಸಾಯನಿಕ ಬಳಕೆ ಕಡಿಮೆ ಮಾಡಿದಂತಾಗುತ್ತದೆ. ಜೊತೆಗೆ, ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಳ, ಮಣ್ಣಿನ ಆರೋಗ್ಯ ಸುಧಾರಣೆ ಇದರೊಂದಿಗೆ ಖರ್ಚು ಕೂಡ ಕಡಿಮೆ ಬರುತ್ತದೆ ಎಂದು ಕೃಷಿ ಇಲಾಖೆಯು ಕರಪತ್ರಗಳ ಮೂಲಕ ಪ್ರಚಾರ ನಡೆಸುತ್ತಿದೆ.
ಹರಳು ರೂಪದ ಯೂರಿಯಾಕ್ಕಿಂತ ದ್ರವ ರೂಪದ ನ್ಯಾನೋ ಯೂರಿಯಾವನ್ನೇ ಏಕೆ ಬಳಕೆ ಮಾಡಬೇಕು ಎಂಬ ಬಗ್ಗೆ ಶಿವಮೊಗ್ಗ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಅವರು ಮಾಹಿತಿ ನೀಡಿದರು.
ನಮ್ಮ ಜಿಲ್ಲೆಗೆ ಮುಂಗಾರು ಹಂಗಾಮಿಗೆ ಬೇಕಾದ ರಸಗೊಬ್ಬರಗಳು ಸಾಕಷ್ಟು ದಾಸ್ತಾನಿದೆ. ಆದರೆ, ಹರಳು ರೂಪದ ರಸಗೊಬ್ಬರ ಬಳಸಿದಾಗ, ಅದು ಸಸಿಗಳಿಗೆ ಸಿಗುವುದು ಶೇ.50ರಷ್ಟು ಮಾತ್ರ. ಮಳೆ ಹೆಚ್ಚಾದಾಗ ಅದು ತೊಳೆದು ಹೋಗುವ ಸಾಧ್ಯತೆ ಇರುತ್ತದೆ. ಇದರಿಂದ ರೈತರು ಯೂರಿಯಾವನ್ನು ನೋಡಿಕೊಂಡು ಬಳಸಬೇಕಾಗುತ್ತದೆ. ಅಲ್ಲದೆ ಯೂರಿಯಾವನ್ನು ಹೆಚ್ಚಾಗಿ ಬಳಸುವುದರಿಂದ ಮಣ್ಣು ಹಾಗೂ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬಿರುತ್ತದೆ. ಇದರಿಂದ ಯೂರಿಯಾ ಗೊಬ್ಬರದ ಬಳಕೆ ಕಡಿಮೆ ಮಾಡಬೇಕಿದೆ. ಯೂರಿಯಾ ಬಳಸುವುದರಿಂದ ಸಸಿಗಳಿಗೆ ರೋಗ ಹಾಗೂ ಕೀಟಗಳು ಬರುವ ಸಾಧ್ಯತೆಗಳಿರುತ್ತವೆ. ಅಲ್ಲದೆ ಇದರಿಂದ ಮಣ್ಣಿನ ರಚನೆ ಹಾಗೂ ಗುಣಧರ್ಮ ಹಾಳಾಗುವುದರ ಜೊತೆಗೆ ಆಮ್ಲಿಯತೆ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿರುವುದರಿಂದ ಇದರ ಬಳಕೆ ಕಡಿಮೆ ಮಾಡಬೇಕಿದೆ. ಹರಳು ರೂಪದ ಯೂರಿಯಾಕ್ಕೆ ಪರ್ಯಾಯವಾಗಿ 'ನ್ಯಾನೋ ಯೂರಿಯಾ ಪ್ಲೇಸ್' ಎಂಬುದು ಬಂದಿದೆ. ಇದರ ಜೊತೆಗೆ 'ನ್ಯಾನೋ ಡಿಎಪಿ' ಬಂದಿದೆ. ನ್ಯಾನೋ ಯೂರಿಯಾ ಪ್ಲೇಸ್ನಲ್ಲಿ ನೈಟ್ರೋಜನ್ ನ್ಯಾನೋ ರೂಪದಲ್ಲಿರುತ್ತದೆ. 20-50 ಮೈಕ್ರಾನ್ಸ್ ನಲ್ಲಿರುತ್ತದೆ. ನ್ಯಾನೋ ಪ್ಲೇಸ್ನಲ್ಲಿ 20+ ಪ್ರಾಮಾಣದಲ್ಲಿ ನೈಟ್ರೋಜನ್ ಇರುವುದರಿಂದ ಸಸಿಗಳಿಗೆ ಇದು ಸಹಾಯಕ.
ಇದನ್ನು ಭತ್ತ ನಾಟಿ ಮಾಡಿದ ವೇಳೆ ಹಾಗೂ ನಾಟಿ ಮಾಡಿದ ನಂತರ 30 ದಿನಗಳ ನಂತರ ಇದರ ಸಿಂಪಡಣೆ ಮಾಡಬಹುದು. ನಾಟಿ ಅಥವಾ ಬಿತ್ತನೆ ಮಾಡಿದ ನಂತರ ಒಂದು ಲೀಟರ್ ನೀರಿಗೆ 5ML ಹಾಕಿ ಸಿಂಪಡಣೆ ಮಾಡಬಹುದು. 6-7ML ಹಾಕಿದರೂ ಸಹ ಯಾವುದೇ ಸಮಸ್ಯೆ ಇಲ್ಲ. ರೈತರು ಕೀಟನಾಶಕ ಸಿಂಪಡಣೆ ಮಾಡುವ ವೇಳೆಯಲ್ಲಿ ಅವುಗಳ ಜೊತೆಗೆ ಸೇರಿಸಿ ಸಿಂಪಡಣೆ ಮಾಡಬಹುದಾಗಿದೆ. ಕೀಟಗಳಿಂದ ರಕ್ಷಣೆ ಹಾಗೂ ಸಸಿಗಳ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಾಕಷ್ಟು ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ದಾಸ್ತಾನಿದೆ
ಇದನ್ನು ಸಾಕಷ್ಟು ಜನ ರೈತರು ಪಡೆದುಕೊಂಡು ಇದರ ಲಾಭ ಪಡೆದುಕೊಂಡಿದ್ದಾರೆ. ನ್ಯಾನೋ ಯೂರಿಯಾ ಪ್ಲೇಸ್ 500MLಗೆ 220 ರೂ ಇದೆ. ಇದು ಒಂದು ಚೀಲ ಯೂರಿಯಾಕ್ಕೆ ಸಮಾನವಾಗಿ ಬಳಸಿಕೊಳ್ಳಬಹುದು. ನ್ಯಾನೋ ಡಿಎಪಿ ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ 8 ಪ್ರತಿಶತ ಸಾರಜನಕ ಹಾಗೂ 16 ಪ್ರತಿಶತ ರಂಜಕ ಇದೆ. ಇದರ 500MLಗೆ 600 ರೂ. ಇದೆ. ಹರಳು ರೂಪದ ಡಿಎಪಿಗೆ 1300 ಇದೆ. ನಾಟಿ ಮಾಡುವವರು, ಇದರಲ್ಲಿ ಪಿಪ್ ಮಾಡಿ, ಸಸಿಗಳ ಬೆಳವಣಿಗೆಯನ್ನು ಕಾಣಬಹುದಾಗಿದೆ. ಇದನ್ನು ಒಂದು ಬೆಳೆಗೆ 30 ದಿನಕ್ಕೊಮ್ಮೆ ಸಿಂಪಡಣೆ ಮಾಡಬಹುದು. ನ್ಯಾನೋ ಯೂರಿಯಾ ಪ್ಲೆಸ್ ಹಾಗೂ ನ್ಯಾನೋ ಡಿಎಪಿಯನ್ನು ಬಳಸುವುದರಿಂದ ರೈತರು ತಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎನ್ನುತ್ತಾರೆ ಕಿರಣ್ ಕುಮಾರ್.
ಇಷ್ಟೆಲ್ಲ ಉಪಯುಕ್ತ ಇರುವ ನ್ಯಾನೋ ಯೂರಿಯಾ ಬಳಕೆ ಬಗ್ಗೆ ಕೃಷಿ ಇಲಾಖೆಯು ರೈತ ಸಮೂದಾಯಕ್ಕೆ ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕಿದೆ ಎನ್ನುತ್ತಾರೆ ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಸಿ.ಲೋಕೇಶ್ವರ್.
ನ್ಯಾನೋ ಯೂರಿಯಾ ಗೊಬ್ಬರವು ಹರಳು ರೂಪದ ರಸಗೊಬ್ಬರಕ್ಕಿಂತ ಉತ್ತಮ. ಇದರ ಬಳಕೆಯು ರೈತರಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಹರಳು ರೂಪದ ಗೊಬ್ಬರವನ್ನು ರೈತರು ತಮ್ಮ ಜಮೀನಿನ ತುಂಬ ಚೆಲ್ಲುವುದರಿಂದ ಶೇ.50ರಷ್ಟು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಆದರೆ, ನ್ಯಾನೋ ಯೂರಿಯಾವನ್ನು ಬಳಸಿದರೆ ಅದು ನೇರವಾಗಿ ಬೆಳೆಗಳಿಗೆ ತಲುಪುತ್ತದೆ. ಆದರೆ, ಇದರ ಬಳಕೆ ಬಗ್ಗೆ ಇನ್ನಷ್ಟು ರೈತರಿಗೆ ಅರಿವು ಮೂಡಿಸಬೇಕಿದೆ. ನ್ಯಾನೋ ಯೂರಿಯಾ ಸಿಂಪಡಣೆ ಮಾಡಬೇಕಾಗಿರುವುದರಿಂದ ರೈತರಿಗೆ ಸ್ವಲ್ಪ ಖರ್ಚು ಹೆಚ್ಚು ಬರುತ್ತದೆ. ಇದನ್ನು ಸಿಂಪಡಣೆ ಮಾಡಲು ಸಿಂಪಡಣಾ ಮಿಷನ್ ಬೇಕು ಹಾಗೂ ಸಿಂಪಡಣೆ ಮಾಡುವ ಕಾರ್ಮಿಕರೂ ಸಹ ಬೇಕಾಗುತ್ತಾರೆ. ಇದರಿಂದ ಇದು ರೈತರಿಗೆ ಕಷ್ಟಬಹುದು. ಆದರೆ, ಇದು ಉತ್ತಮ ಫಲಿತಾಂಶ ನೀಡಬಲ್ಲದು ಎನ್ನುತ್ತಾರೆ ಸಿ.ಲೋಕೇಶ್ವರ್.