ಮಳೆಗಾಲದ ಪ್ರಯುಕ್ತ ವಿಶ್ವವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಭಾನುವಾರ ಮತ್ತು ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.
ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಗಳು, ಜಲಪಾತಗಳು ಮೈದುಂಬಿ ಹರಿಯುತ್ತಿವೆ. ವಿಶ್ವವಿಖ್ಯಾತ ಜೋಗ ಜಲಪಾತ ಧುಮ್ಮಿಕ್ಕುತ್ತಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಜೋಗ ಜಲಪಾತ ವೀಕ್ಷಿಸಲು ಕುಟುಂಬದವರೊಂದಿಗೆ ಹೋಗಿ ಬರಲು ಅನುಕೂಲವಾಗುವಂತೆ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಹೋಗುವಾಗ ಶಿರಸಿ ಮಾರಿಕಾಂಬ ದೇವಸ್ಥಾನದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋಗದಲ್ಲಿ ಜಲಪಾತ ವೀಕ್ಷಣೆಗೆ ಹಾಗೂ ಪ್ರಕೃತಿ ಸೌಂದರ್ಯ ಸೊಬಗು ಆನಂದಿಸಲು ಸಾಕಷ್ಟು ಸಮಯಾವಕಾಶ ಕಲ್ಪಿಸಲಾಗಿದೆ.
ವಿಭಿನ್ನ ಪ್ರಯಾಣಿಕರ ಅಭಿರುಚಿಗೆ ತಕ್ಕಂತೆ ಮಲ್ಟಿ ಆಕ್ಸೆಲ್ ವೋಲ್ವೋ ಎಸಿ, ರಾಜಹಂಸ ಹಾಗೂ ವೇಗದೂತ ಮಾದರಿಯ ವಿಶೇಷ ಬಸ್ಗಳ ಆಯ್ಕೆಗೆ ಅವಕಾಶವಿದೆ.
ವೋಲ್ವೊ ಎಸಿ ಬಸ್:
ಹುಬ್ಬಳ್ಳಿಯಿಂದ ಬೆಳಿಗ್ಗೆ 8ಕ್ಕೆ ಹೊರಡುತ್ತದೆ. ಮಧ್ಯಾಹ್ನ12:30ಕ್ಕೆ ಜೋಗ ಜಲಪಾತ ತಲುಪುತ್ತದೆ. ಜೋಗ ಜಲಪಾತದಿಂದ ಸಂಜೆ 5 ಗಂಟೆಗೆ ಹೊರಟು, ರಾತ್ರಿ 9 ಹುಬ್ಬಳ್ಳಿಗೆ ವಾಪಸ್ ಆಗುತ್ತದೆ. ಪ್ರಯಾಣ ದರ 700 ರೂ. ನಿಗದಿಪಡಿಸಲಾಗಿದೆ.
ರಾಜಹಂಸ ಬಸ್:
ಹುಬ್ಬಳ್ಳಿಯಿಂದ ಬೆಳಗ್ಗೆ 7:30ಕ್ಕೆ ಹೊರಡುತ್ತದೆ. ಮಧ್ಯಾಹ್ನ12:30ಕ್ಕೆ ಜೋಗ ಜಲಪಾತ ತಲುಪುತ್ತದೆ. ಜೋಗ ಜಲಪಾತದಿಂದ ಸಂಜೆ 4:30ಕ್ಕೆ ಹೊರಟು, ರಾತ್ರಿ 9 ಹುಬ್ಬಳ್ಳಿಗೆ ವಾಪಸ್ ಆಗುತ್ತದೆ. ಪ್ರಯಾಣ ದರ 600 ರೂ. ನಿಗದಿಪಡಿಸಲಾಗಿದೆ.
ವೇಗದೂತ ಬಸ್:
ಹುಬ್ಬಳ್ಳಿಯಿಂದ ಬೆಳಿಗ್ಗೆ 7:30ಕ್ಕೆ ಹೊರಡುತ್ತದೆ. ಮಧ್ಯಾಹ್ನ12:30ಕ್ಕೆ ಜೋಗ ಜಲಪಾತ ತಲುಪುತ್ತದೆ. ಜೋಗ ಜಲಪಾತದಿಂದ ಸಂಜೆ 4:30ಕ್ಕೆ ಹೊರಟು, ರಾತ್ರಿ 9 ಹುಬ್ಬಳ್ಳಿಗೆ ವಾಪಸ್ ಆಗುತ್ತದೆ. ಪ್ರಯಾಣ ದರ 500 ರೂ. ನಿಗದಿಪಡಿಸಲಾಗಿದೆ.
ಮುಂಗಡ ಬುಕ್ಕಿಂಗ್:
ಈ ವಿಶೇಷ ಬಸ್ಗಳಿಗೆ www.ksrtc.in ಮತ್ತು KSRTC Mobile App ಮೂಲಕ ಆನ್ಲೈನ್ನಲ್ಲಿ ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣ ಮತ್ತು ಹೊಸೂರು ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಶಕ್ತಿ ಯೋಜನೆ ಈ ವಿಶೇಷ ಬಸ್ ಸೌಲಭ್ಯಕ್ಕೆ ಅನ್ವಯವಾಗುವುದಿಲ್ಲ.
ನಿಮ್ಮಿಷ್ಟದ ದಿನ ಬಸ್:
ಸರ್ಕಾರಿ, ಖಾಸಗಿ ನೌಕರರು, ಸಂಘ- ಸಂಸ್ಥೆಗಳು, ಸ್ನೇಹಿತರು, ಕುಟುಂಬದವರೊಂದಿಗೆ ಒಟ್ಟಾಗಿ ಪ್ರವಾಸ ಮಾಡಲು ಬಯಸಿದಲ್ಲಿ ತಾವು ಬಯಸಿದ ದಿನದಂದು ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ವೋಲ್ವೋ ಎಸಿ ಬಸ್ ಹಾಗೂ ವೇಗದೂತ ಬಸ್ಸಿಗೆ ಕನಿಷ್ಠ 45 ಹಾಗೂ ರಾಜಹಂಸ ಬಸ್ಗೆ ಕನಿಷ್ಠ 35 ಜನ ಪ್ರವಾಸಿಗರು ಇರಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 7760991674 ಅಥವಾ 7760991682ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ಅವರು ಮಾಹಿತಿ ನೀಡಿದ್ದಾರೆ.