Do this if credit score not updated despite loan closure: ಬ್ಯಾಂಕ್ನಲ್ಲಿ ಸಾಲ ಪಡೆದು ಅದನ್ನು ಪೂರ್ಣವಾಗಿ ಮರುಪಾವತಿ ಮಾಡಿದ ಬಳಿಕ ನಿಮ್ಮ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗುತ್ತದೆ. ಇದಾಗಲು ಒಂದೆರಡು ತಿಂಗಳಾಗಬಹುದು. ಕೆಲವೊಮ್ಮೆ ತಾಂತ್ರಿಕ ಕಾರಣಕ್ಕೂ ಅಪ್ಡೇಟ್ ಆಗದೇ ಇರಬಹುದು. ಇಂಥ ಸಂದರ್ಭದಲ್ಲಿ ನೀವು ಕ್ರೆಡಿಟ್ ಬ್ಯೂರೋ ಸಂಪರ್ಕಿಸುವ ಮುನ್ನ ಬ್ಯಾಂಕ್ನಿಂದ ಲೋನ್ ಕ್ಲೋಷರ್ ಪತ್ರ ಪಡೆಯಬೇಕು.
ನೀವು ಪಡೆದ ಸಾಲವನ್ನು ಕಷ್ಟಪಟ್ಟು ತೀರಿಸಿದಾಗ ಅದೊಂಥರಾ ನೆಮ್ಮದಿ. ಈಗ ಸಾಲ ತೀರಿಸಿದಾಗ ಹಣಕಾಸು ಹೊರೆ ಕಡಿಮೆ ಆಗುವುದರ ಜೊತೆಗೆ ಇನ್ನೂ ಹಲವು ಲಾಭ ಬರುತ್ತದೆ. ಅದರಲ್ಲಿ ಕ್ರೆಡಿಟ್ ಸ್ಕೋರ್ (credit score) ಏರಿಕೆ ಆಗುವುದೂ ಒಂದು. ಸಾಲ ಪೂರ್ಣವಾಗಿ ಪಾವತಿ ಮಾಡಿದರೆ ಕ್ರೆಡಿಟ್ ಸ್ಕೋರ್ ಸಹಜವಾಗಿ ಏರುತ್ತದೆ. ನಿಮ್ಮ ಕ್ರೆಡಿಟ್ ಹಿಸ್ಟರಿ ಉಜ್ವಲಗೊಳ್ಳುತ್ತದೆ. ನೀವು ಸಾಲದ ವಿಚಾರದಲ್ಲಿ ಶಿಸ್ತು ತೋರುತ್ತೀರಿ ಎಂಬುದು ಬ್ಯಾಂಕುಗಳಿಗೆ ಗೊತ್ತಾಗುತ್ತದೆ. ಕೆಲವೊಮ್ಮೆ ಸಾಲ ತೀರಿಸಿಯೂ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು?
ನೀವು ಸಾಲ ಮರುಪಾವತಿ ಮಾಡಿದ ಬಳಿಕ ಆ ಮಾಹಿತಿಯನ್ನು ಬ್ಯಾಂಕುಗಳು ಕ್ರೆಡಿಟ್ ಬ್ಯೂರೋಗಳಿಗೆ ತಿಳಿಸುತ್ತವೆ. ಅದಾಗಲು 30-60 ದಿನಗಳಾಗಬಹುದು. ಹೀಗಾಗಿ, ನೀವು ಸಾಲ ತೀರಿಸಿದ ಬಳಿಕ ಕ್ರೆಡಿಟ್ ರಿಪೋರ್ಟ್ ತೆಗೆಸಿದರೆ ನಿಮ್ಮ ಲೋನ್ ಇನ್ನೂ ಆ್ಯಕ್ಟಿವ್ ಸ್ಥಿತಿಯಲ್ಲಿ ಇರುತ್ತದೆ. ಸಾಲ ತೀರಿಸಿ ಎರಡು ತಿಂಗಳಿಗೂ ಹೆಚ್ಚು ಕಾಲ ಆದರೂ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗಿಲ್ಲ ಎಂದಾಗ ಬ್ಯಾಂಕು ಮತ್ತು ಕ್ರೆಡಿಟ್ ಬ್ಯೂರೋವನ್ನು ಸಂಪರ್ಕಿಸಿ ಸರಿಪಡಿಸಲು ಸಾಧ್ಯ.
ಬ್ಯಾಂಕಿಂದ ನೀವು ಲೋನ್ ಕ್ಲೋಷರ್ ಡಾಕ್ಯುಮೆಂಟ್ಗಳನ್ನು ಪಡೆಯಿರಿ. ಅಂದರೆ ನೀವು ಸಾಲ ತೀರಿಸಿದ್ದೀರಿ ಎಂದು ತಿಳಿಸಿ ಬ್ಯಾಂಕುಗಳು ಪ್ರಮಾಣಪತ್ರ ನೀಡುತ್ತವೆ, ಅದನ್ನು ಪಡೆಯಿರಿ. ಆ ಸರ್ಟಿಫಿಕೇಟ್ನಲ್ಲಿ ನಿಮ್ಮ ಕೊನೆಯ ಇಎಂಐ ದಿನಾಂಕವೂ ನಮೂದಾಗಿರುವುದನ್ನು ಖಚಿತಪಡಿಸಿಕೊಳ್ಳಿ.
ಈಗ ನೀವು ಸಿಬಿಲ್ ಇತ್ಯಾದಿ ಕ್ರೆಡಿಟ್ ಬ್ಯೂರೋದ ವೆಬ್ಸೈಟ್ಗೆ ಹೋಗಿ ಡಿಸ್ಪ್ಯೂಟ್ ರಿಸಲ್ಯೂಶನ್ ಪೋರ್ಟಲ್ನಲ್ಲಿ ನಿಮ್ಮ ಸಮಸ್ಯೆ ನಿವೇದಿಸಿ. ಸಂಬಂಧಿತ ಸಾಕ್ಷ್ಯಗಳನ್ನು ಸಲ್ಲಿಸಿ.
ಈಗ ಕ್ರೆಡಿಟ್ ಬ್ಯೂರೋದವರು ಪರಿಶೀಲನೆ ನಡೆಸುತ್ತಾರೆ. 7ರಿಂದ 21 ಕಾರ್ಯದಿನದೊಳಗೆ ಸಮಸ್ಯೆ ಬಗೆಹರಿಯುತ್ತದೆಂದು ನಿರೀಕ್ಷಿಸಬಹುದು.
ಕ್ರೆಡಿಟ್ ಸ್ಕೋರ್ ಯಾಕೆ ಮುಖ್ಯ?
ನೀವು ಸಾಲ ಅಥವಾ ಕ್ರೆಡಿಟ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿದಾಗ ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುತ್ತವೆ. ಈ ಸ್ಕೋರ್ 300ರಿಂದ 900 ಅಂಕಗಳ ಶ್ರೇಣಿಯಲ್ಲಿರುತ್ತದೆ. ಸ್ಕೋರ್ 800 ಅಂಕಗಳಿಗಿಂತ ಹೆಚ್ಚಿದ್ದರೆ ನಿಮಗೆ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಕೊಡಲು ಪೈಪೋಟಿ ನಡೆಯುತ್ತದೆ. 10 ಲಕ್ಷಕ್ಕೂ ಅಧಿಕ ಕ್ರೆಡಿಟ್ ಲಿಮಿಟ್ ಇರುವ ಪ್ರೀಮಿಯಮ್ ಕಾರ್ಡ್ಗಳೂ ನಿಮಗೆ ಸಿಗಬಹುದು.