KCET Seat Hanchike Manthana- ಕೆಸಿಇಟಿ ಸೀಟು ಹಂಚಿಕೆ ಕಾರ್ಯಾಗಾರ | ವಿದ್ಯಾರ್ಥಿಗಳೂ, ಪೋಷಕರೂ ಗಮನಿಸಬೇಕಾದ ಮಹತ್ವದ ಅಂಶಗಳು ಇಲ್ಲಿವೆ

2025-26ನೇ ಶೈಕ್ಷಣಿಕ ಸಾಲಿನ ಎಂಜಿನಿಯರಿಂಗ್ ಮತ್ತು ಇತರೆ ವೃತ್ತಿಪರ ಕೋರ್ಸ್’ಗಳಿಗೆ ಕೆಸಿಇಟಿ (KCET) ಆಧಾರದ ಮೇಲೆ ಸೀಟು ಹಂಚಿಕೆ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ.

ಈ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸೀಟು ಹಂಚಿಕೆ ಸಂಬಂಧಿತ ಸಂಪೂರ್ಣ ಮಾಹಿತಿ, ನಿಖರ ಮಾರ್ಗದರ್ಶನ ಹಾಗೂ ತಾಂತ್ರಿಕ ಪ್ರಕ್ರಿಯೆಗಳ ಅರಿವನ್ನು ನೀಡಲು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಜೂನ್ 28ರಂದು ರಾಜ್ಯದಾದ್ಯಂತ ‘ಯುಜಿಸಿಇಟಿ-2025: ಸೀಟು ಹಂಚಿಕೆ ಮಂಥನ’ ಎಂಬ ಹೆಸರಿನಲ್ಲಿ ವಿಶಿಷ್ಟ ಕಾರ್ಯಾಗಾರವನ್ನು ಆಯೋಜಿಸಿದೆ.

ಈ ಕಾರ್ಯಾಗಾರದ ಮುಖ್ಯ ಉದ್ದೇಶ

ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಅನೇಕ ಹಂತಗಳಿಂದ ಕೂಡಿದ್ದು, ಈ ಹಂತಗಳಲ್ಲಿ ತಪ್ಪು ಮಾಡಿದರೆ ಅಥವಾ ಸರಿಯಾದ ಮಾರ್ಗದರ್ಶನವಿಲ್ಲದೆ ಆಯ್ಕೆ ಮಾಡಿದರೆ, ಅದು ವಿದ್ಯಾರ್ಥಿಯ ಉನ್ನತ ಶಿಕ್ಷಣ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದನ್ನು ತಡೆಯಲು ಹಾಗೂ ಪೋಷಕರಲ್ಲಿರುವ ಅನುಮಾನಗಳನ್ನು ನಿವಾರಿಸಲು ಈ ಕಾರ್ಯಾಗಾರ ಅತ್ಯಂತ ಉಪಯುಕ್ತವಾಗಿದೆ.

ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ‘ವಿದ್ಯಾರ್ಥಿಗಳು ಮತ್ತು ಪೋಷಕರು ಖಾಸಗಿ ದಲ್ಲಾಳಿಗಳ ಮಾತಿಗೆ ಬಲಿಯಾಗದೆ, ಸರಿಯಾದ ಮಾಹಿತಿ ಹೊಂದಿರುವ ಅಧಿಕಾರಿಗಳಿಂದಲೇ ಮಾರ್ಗದರ್ಶನ ಪಡೆಯಬೇಕು’ ಎಂದು ತಿಳಿಸಿದ್ದಾರೆ.

ಕೆಸಿಇಟಿ ಸೀಟು ಹಂಚಿಕೆ ಸಂಬಂಧಿತ ನಿಖರ ಮಾರ್ಗದರ್ಶನ ನೀಡಲು ಕೆಇಎ ಜೂನ್ 28ರಂದು ವಿಶಿಷ್ಟ ಕಾರ್ಯಾಗಾರವನ್ನು ಆಯೋಜಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಕಾರ್ಯಾಗಾರವು ಎಲ್ಲೆಲ್ಲೆ ನಡೆಯಲಿದೆ?

ಕೆಇಎ ವತಿಯಿಂದ ರಾಜ್ಯದ ನಾನಾ ಭಾಗಗಳಲ್ಲಿ ಈ ಕಾರ್ಯಾಗಾರಗಳು ಆಯೋಜನೆಯಾಗಿದ್ದು, ಸ್ಥಳೀಯ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ಯೋಜಿಸಲಾಗಿದೆ:

16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು

8 ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳು

6 ವಿಟಿಯು (VTU) ಸಂಯೋಜಿತ ಎಂಜಿನಿಯರಿಂಗ್ ಕಾಲೇಜುಗಳು

ಎಂಜಿನಿಯರಿಂಗ್ ಕಾಲೇಜುಗಳಿಲ್ಲದ ಚಿಕ್ಕಮಗಳೂರು, ಧಾರವಾಡ (ಹುಬ್ಬಳ್ಳಿ), ಕೆ.ಜಿ.ಎಫ್ (ಕೋಲಾರ), ಮಂಗಳೂರು, ಶಿವಮೊಗ್ಗ, ತುಮಕೂರು, ಉಡುಪಿ, ವಿಜಯಪುರ, ಸುರಪುರ (ಯಾದಗಿರಿ) ಜಿಲ್ಲೆಗಳ ಪಾಲಿಟೆಕ್ನಿಕ್ ಕಾಲೇಜುಗಳು

ಕಾರ್ಯಾಗಾರಗಳಲ್ಲಿ ಏನೆಲ್ಲ ಮಾಹಿತಿ ಸಿಗುತ್ತದೆ?

ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ: ಸೀಟು ಹಂಚಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದರ ಕುರಿತು ನೈಜ ಉದಾಹರಣೆಗಳೊಂದಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಇದರಲ್ಲಿ ಆಪ್ಷನ್ ಎಂಟ್ರಿ, ಅಲಾಟ್‌ಮೆಂಟ್ ಪ್ರಕ್ರಿಯೆ, ಡಾಕ್ಯುಮೆಂಟ್ ವೆರಿಫಿಕೇಷನ್ ಹಾಗೂ ಶುಲ್ಕ ಪಾವತಿಸುವ ಕ್ರಮದ ವಿವರಗಳು ಇರುತ್ತವೆ.

ತಜ್ಞರಿಂದ ನೇರ ಸಲಹೆ: ಕೆಇಎ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ಇಲಾಖೆ ಅಧಿಕಾರಿಗಳು ಹಾಜರಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರ ಎಲ್ಲ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡುತ್ತಾರೆ.

ಮೋಸದ ಜಾಲಗಳಿಂದ ಎಚ್ಚರಿಕೆ: ಕೆಲವು ಖಾಸಗಿ ಏಜೆಂಟ್‌ಗಳು ಅಥವಾ ಮದ್ಯವರ್ತಿಗಳು ‘ಸೀಟು ಖಾತರಿ’ ಎಂದು ಹಣ ವಸೂಲಿ ಮಾಡುವ ಪ್ರಸಂಗಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಗಾರದಲ್ಲಿ ತಾಂತ್ರಿಕ ಮಾರ್ಗದರ್ಶನದ ಜೊತೆಗೆ ಎಚ್ಚರಿಕೆ ಸೂಚನೆಗಳನ್ನು ನೀಡಲಾಗುತ್ತದೆ.

ಕಾಲೇಜುಗಳ ಪರಿಚಯ: ಪ್ರತಿ ಎಂಜಿನಿಯರಿಂಗ್ ಕಾಲೇಜುಗಳ ಪರ್ಫಾರ್ಮೆನ್ಸ್, ಪ್ಲೇಸ್ಮೆಂಟ್ ದಾಖಲೆ, ಸೌಲಭ್ಯಗಳು ಇತ್ಯಾದಿಗಳ ಕುರಿತು ವಿವರಿಸುತ್ತಾರೆ.

ವಿದ್ಯಾರ್ಥಿಗಳಿಗೆ ಗಮನಿಸಬೇಕಾದ ಅಂಶಗಳು

ಹತ್ತಿರದ ಕಾರ್ಯಾಗಾರ ಸ್ಥಳಕ್ಕೆ ಕಡ್ಡಾಯವಾಗಿ ಹಾಜರಾಗುವ ಮೂಲಕ ಸರ್ಕಾರದ ಉಚಿತ ಮಾರ್ಗದರ್ಶನದ ಸದುಪಯೋಗ ಪಡೆದುಕೊಳ್ಳಿ

ಆನ್‌ಲೈನ್ ಆಪ್ಷನ್ ಎಂಟ್ರಿ ಹೇಗೆ ಮಾಡುವುದು ಎಂಬುದನ್ನು ನೇರವಾಗಿ ಕಲಿಯಿರಿ

ಖಾಸಗಿ ಸಂಸ್ಥೆಗಳ ಭರವಸೆಗಳ ಬದಲು, ಸರ್ಕಾರದ ಅಧಿಕಾರಿಗಳ ಮಾರ್ಗದರ್ಶನವನ್ನೇ ಅನುಸರಿಸಿ

ಭದ್ರತಾ ದೃಷ್ಟಿಯಿಂದ ಯಾವುದೇ ಹಣದ ವ್ಯವಹಾರಕ್ಕೆ ಹೋಗಬೇಡಿ

ಈ ಕಾರ್ಯಾಗಾರವು ಕೇವಲ ಮಾಹಿತಿ ನೀಡುವ ಕಾರ್ಯಕ್ರಮವಲ್ಲ, ಇದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಮಾರ್ಗದರ್ಶಕ ದೀಪವಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ. ಹೆಚ್ಚಿನ ಮಾಹಿತಿ, ಸ್ಥಳ ವಿವರ ಹಾಗೂ ಸಮಯದ ವೇಳಾಪಟ್ಟಿ ನಿಮಗೆ ಹತ್ತಿರದ ಎಂಜಿನಿಯರಿಂಗ್/ಪಾಲಿಟೆಕ್ನಿಕ್ ಕಾಲೇಜಿನಿಂದ ಪಡೆಯಬಹುದಾಗಿದೆ.

Previous Post Next Post