ಇದು ಮಾರ್ಚ್ ತಿಂಗಳು. ಈ ತಿಂಗಳ ಅಂತ್ಯದಲ್ಲೇ ಪ್ರಾಥಮಿಕ ಶಾಲೆಯಿಂದ -ಪಿಯುಸಿ ವರೆಗಿನ ಶೈಕ್ಷಣಿಕ ವರ್ಷ ಮುಕ್ತಾಯವಾಗಲಿದೆ. ಬಹುಸಂಖ್ಯಾತ ಪೋಷಕರು ತಮ್ಮ ಮಕ್ಕಳ ಮುಂದಿನ ತರಗತಿಯ ಪ್ರವೇಶದ ಬಗ್ಗೆ ಚಿಂತಿಸುವ ಸಮಯವಿದು. ಯಾವ ಶಾಲೆಗೆ ಪ್ರವೇಶ ಮಾಡಿಸಬೇಕು, ಎಷ್ಟು ಡೊನೇಷನ್ ಕಟ್ಟಲು ತಮಗೆ ಸಾಧ್ಯ, ಉಚಿತವಾಗಿ ಪ್ರವೇಶ ಪಡೆಯುವುದಾದರೆ ಎಲ್ಲಿ ಪಡೆಯುವುದು, ಹೀಗೆ ಹಲವು ಅಂಶಗಳನ್ನು ಆಲೋಚಿಸುವುದು.
Karnataka RTE Admission 2025 26 date
ಈ ಪ್ರವೇಶಾತಿ ವಿಷಯ ಬಂದಾಗ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಉಚಿತವಾಗಿ ತಮ್ಮ ಮಕ್ಕಳನ್ನು ಎಲ್‌ಕೆಜಿ / 1ನೇ ತರಗತಿಗೆ ಪ್ರವೇಶ ಮಾಡಿಸಲು ಇರುವ ಒಂದೇ ಒಂದು ಮಾರ್ಗ ಎಂದರೆ ಅದು ಶಿಕ್ಷಣ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವುದು. ಈ ಬಗ್ಗೆ ಈಗಾಗಲೇ ಹಲವು ಪೋಷಕರು ಮಾಹಿತಿಗಳನ್ನು ಕಲೆಹಾಕಿ, ಅರ್ಜಿ ಸಲ್ಲಿಸಲು ಸಿದ್ಧತೆಯನ್ನು ಸಹ ನಡೆಸಿಕೊಳ್ಳುತ್ತಿದ್ದಾರೆ.
ಹಾಗಿದ್ರೆ ಕರ್ನಾಟಕದಲ್ಲಿ ಖಾಸಗಿ ಶಾಲೆಗಳಲ್ಲಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಯಾವಾಗ? ಅರ್ಹತೆಗಳು ಏನು? ಶಾಲೆಗಳನ್ನು ಚೆಕ್ ಮಾಡುವ ಸುಲಭ ವಿಧಾನ ಯಾವುದು? ವಯಸ್ಸಿನ ಅರ್ಹತೆಗಳು ಏನು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ ನೋಡಿ.
ಕರ್ನಾಟಕದಲ್ಲಿ ಆರ್‌ಟಿಇ ಅಡಿ ಪ್ರವೇಶಕ್ಕೆ ಅರ್ಜಿ ಸ್ವೀಕಾರ ಆರಂಭ ಯಾವಾಗ? ನೋಟಿಫಿಕೇಶನ್ ಯಾವಾಗ?
ಪ್ರತಿವರ್ಷವು ಸಹ ಮಾರ್ಚ್ ತಿಂಗಳಲ್ಲಿ RTE ಅಡಿ ಖಾಸಗಿ, ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಉಚಿತವಾಗಿ ಎಲ್‌ಕೆಜಿ / 1ನೇ ತರಗತಿಗೆ ಪ್ರವೇಶದ ಅರ್ಜಿಗೆ ಸಂಬಂಧ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚಿಸಲಿದೆ. ಈಗ 2025-26ನೇ ಸಾಲಿನ ಆರ್‌ಟಿಇ ಶಿಕ್ಷಣ ಪ್ರವೇಶಾತಿಗೆ ಮಾರ್ಚ್ ಅಂತ್ಯದೊಳಗೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಅಧಿಸೂಚನೆ ಬಿಡುಗಡೆ ಆಗಲಿದ್ದು, ಪೋಷಕರು ತಮ್ಮ ಮಕ್ಕಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
2025-26ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ ಅಡಿ ದಾಖಲಾತಿಗೆ ನಿರೀಕ್ಷಿತ ಸಂಭಾವ್ಯ ವೇಳಾಪಟ್ಟಿ
- ನೋಟಿಫಿಕೇಶನ್, ಅರ್ಜಿ ಸ್ವೀಕಾರ ದಿನಾಂಕಗಳು: ಮಾರ್ಚ್ ಅಂತ್ಯದೊಳಗೆ / ಏಪ್ರಿಲ್ ಮೊದಲ ವಾರ 2025.
- ವಿಶೇಷ ಪ್ರವರ್ಗಗಳು / ಕ್ರಮಬದ್ಧವಲ್ಲದ ಅರ್ಜಿಗಳ ಪರಿಶೀಲನೆ: ಮೇ 2025
- ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸುವ ದಿನಾಂಕ: ಜೂನ್ 2025
- ಆನ್‌ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ದಿನಾಂಕ: ಜೂನ್ 2025
- ಶಾಲೆಗಳಲ್ಲಿ ದಾಖಲಾತಿ ಆರಂಭ ದಿನಾಂಕ: ಜೂನ್ 2025
- ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರ ಬಿಡುಗಡೆ ದಿನಾಂಕ: ಜೂನ್ ಎರಡನೇ ವಾರ 2025
- ಆನ್‌ಲೈನ್ ತಂತ್ರಾಂಶದ ಮೂಲಕ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ದಿನಾಂಕ: ಜೂನ್ ಮೂರನೇ ವಾರ 2025
- 2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ದಿನಾಂಕಗಳು: ಜೂನ್ ಕೊನೆ ವಾರದೊಳಗೆ -2025.
- ಶಾಲೆಗಳಲ್ಲಿ ದಾಖಲಾದ 2ನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸುವ ದಿನಾಂಕ: ಜೂನ್ ಅಂತ್ಯದೊಳಗೆ -2025.
ಆರ್‌ಟಿಇ ಅಡಿ ಪ್ರವೇಶಕ್ಕೆ ಶಾಲೆಗಳನ್ನು ತಿಳಿಯುವುದು ಹೇಗೆ?
2025-26ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1) (ಬಿ) ಮತ್ತು 12 (1)(ಸಿ) ಅಡಿಯಲ್ಲಿ ಪ್ರವೇಶ ಪ್ರಕ್ರಿಯೆಗೆ ನೆರೆಹೊರೆಯ ಪ್ರದೇಶದ ಮಿತಿಯನ್ನು, ಶಾಲೆಗಳನ್ನು ಮ್ಯಾಪಿಂಗ್ ಮಾಡುವ ಕಾರ್ಯವನ್ನು ಜನವರಿ ಅಂತ್ಯದಲ್ಲಿಯೇ ಆರಂಭಿಸಲಾಗಿದೆ. 'RTE - ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ'ಯನ್ನು ಅರ್ಜಿಗೆ ನೋಟಿಫಿಕೇಶನ್ ಬಿಡುಗಡೆ ಮಾಡುವ ವೇಳೆಗೆ ಪ್ರಕಟಿಸಲಾಗುತ್ತದೆ.
RTE ಅಡಿ ಪ್ರವೇಶಕ್ಕೆ ನೆರೆ ಹೊರೆ ಶಾಲೆ ಚೆಕ್ ಮಾಡುವ ಸುಲಭ ವಿಧಾನ ಹೀಗಿದೆ
- ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ https://schooleducation.karnataka.gov.in/en ಗೆ ಭೇಟಿ ನೀಡಿ.
- ಓಪನ್ ಆದ ಪೇಜ್‌ನಲ್ಲಿ 'RTE - ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ' ಎಂದಿರುವಲ್ಲಿ ಕ್ಲಿಕ್ ಮಾಡಿ.
- ತೆರೆದ ವೆಬ್ ಪುಟದಲ್ಲಿ ಜಿಲ್ಲೆ, ಬ್ಲಾಕ್ (ತಾಲ್ಲೂಕು), ಗ್ರಾಮ, ವಾರ್ಡ್ ಆಯ್ಕೆ ಮಾಡಿ, ಕ್ಲಿಕ್ ಮಾಡಿ.
- ನಂತರ ನಿಮ್ಮ ಸುತ್ತ ಮುತ್ತ ಹತ್ತಿರದಲ್ಲಿರುವ ಅನುದಾನಿತ, ಅನುದಾನರಹಿತ, ಸರ್ಕಾರಿ, ಖಾಸಗಿ ಶಾಲೆಗಳ ಪಟ್ಟಿ ಪ್ರದರ್ಶಿತವಾಗುತ್ತದೆ.
- ನಿಮ್ಮ ಆಸಕ್ತಿಯ ಶಾಲೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಂದುವರೆಸಬಹುದು.
ಎಲ್‌ಕೆಜಿ / 1ನೇ ತರಗತಿ ಪ್ರವೇಶಕ್ಕೆ ವಯಸ್ಸಿನ ಅರ್ಹತೆ ಎಷ್ಟಿರಬೇಕು?
ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಪ್ರಾರಂಭಿಕ ತರಗತಿಗಳಿಗೆ ಮಕ್ಕಳ ಪ್ರವೇಶಕ್ಕೂ ವಯಸ್ಸು ನಿಗದಿಪಡಿಸಲಾಗಿದೆ.
- ಎಲ್‌ಕೆಜಿ ಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 4 ವರ್ಷ ಆಗಿರಬೇಕು.
- 1 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 5 ವರ್ಷ 5 ತಿಂಗಳು ಹಾಗೂ ಗರಿಷ್ಠ 7 ವರ್ಷ ನಿಗದಿಪಡಿಸಲಾಗಿದೆ.
ಆರ್‌ಟಿಇ ಅಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಹೇಗೆ?
- ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
- ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು-ಒನ್, ಇತರೆ ನಗರ ಪ್ರದೇಶಗಳಲ್ಲಿ ಕರ್ನಾಟಕ-ಒನ್, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
- ತಂದೆ / ತಾಯಿ / ಪಾಲಕರು ಸ್ವಂತ ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ ಆನ್‌ಲೈನ್ ಮುಖಾಂತರ ನೇರವಾಗಿ ಅರ್ಜಿ ಹಾಕಬಹುದು.
- ಪೋಷಕರು ಸಲ್ಲಿಸಿದ ಅರ್ಜಿಯಿಂದ ನೈಜತೆ ತಾಳೆ ಆಗದ ಅಪೂರ್ಣ ಅಥವಾ ಕ್ರಮಬದ್ಧವಲ್ಲದ ಅರ್ಜಿಗಳ ತಂದೆ / ತಾಯಿ ಪೋಷಕರ ಮೊಬೈಲಿಗೆ ದೋಷಗಳನ್ನು ಸರಿಪಡಿಸಲು ಎಸ್‌ಎಂಎಸ್ ಕಳುಹಿಸಲಾಗುವುದು. ಸಂಬಂಧಿಸಿದ ಪೋಷಕರು ಸಕಾಲಕ್ಕೆ ಪ್ರತಿಕ್ರಿಯಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಮಾಹಿತಿಗಳು ಏನು?
ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವವರಿಗೆ ಬೇಕಾದ ದಾಖಲೆಗಳೆಂದರೆ..
- ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯ
- ವಾಸಸ್ಥಳ ದೃಢೀಕರಣ ಪ್ರಮಾಣಪತ್ರ
- ಮೊಬೈಲ್ ನಂಬರ್
- ಇಮೇಲ್ ವಿಳಾಸ