HSRP: ಹೆಚ್‌ಎಸ್ಆರ್‌ಟಿ ಅಳವಡಿಕೆ, ಗಡುವು, ದಂಡದ ಕುರಿತು ಸಚಿವರ ಮಾಹಿತಿ

ಕೇಂದ್ರ ಸರ್ಕಾರದ ಆದೇಶದ ಅನ್ವಯ ಕರ್ನಾಟಕದ ಸಾರಿಗೆ ಇಲಾಖೆ 2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾದ ಎಲ್ಲಾ ವಾಹನಗಳಿಗೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯಗೊಳಿಸಿದೆ. ನಂಬರ್ ಪ್ಲೇಟ್ ಆಳವಡಿಕೆ ಮಾಡಿಕೊಳ್ಳಲು ಮಾರ್ಚ್‌ 31ರ ತನಕ ಗಡುವು ನೀಡಲಾಗಿದೆ. ಆದರೆ ಈಗ ಈ ಗಡುವು ಮತ್ತಷ್ಟು ವಿಸ್ತರಣೆ ಆಗುವುದು ಖಾತ್ರಿಯಾಗಿದೆ. ಕಾರಣ ಇನ್ನೂ ಕೋಟ್ಯಾಂತರ ವಾಹನಗಳಿಗೆ ನಂಬರ್ ಪ್ಲೇಟ್ ಆಳವಡಿಕೆ ಬಾಕಿ ಇದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧಾನ ಪರಿಷತ್ ಕಲಾಪದಲ್ಲಿ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕುರಿತು ಚರ್ಚೆಗೆ ಉತ್ತರವನ್ನು ನೀಡಿದ್ದಾರೆ. ಹಲವು ಬಾರಿ ಗಡುವು ವಿಸ್ತರಣೆ ಮಾಡಿದ ಬಳಿಕವೂ ರಾಜ್ಯದಲ್ಲಿ ಅತಿ ಹೆಚ್ಚು ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿರುವ ಜಿಲ್ಲೆಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಸಚಿವರ ಮಾಹಿತಿ ಪ್ರಕಾರ 58,12,207 ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಅರ್ಜಿಗಳು ಸಲ್ಲಿಕೆಯಾಗಿವೆ. 57,20,550 ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟಾರೆ ಶೇ 29ರಷ್ಟು ವಾಹನಗಳಿಗೆ ಯಶಸ್ವಿಯಾಗಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದ್ದು, ಮಾರ್ಚ್ 31, 2025ರ ತನಕ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ಕೊಡಲಾಗಿದೆ.

ದಂಡ ವಿಧಿಸಲಾಗುತ್ತದೆಯೇ?; ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕುರಿತು ಕರ್ನಾಟಕ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಚಾರಣೆ ಕಾರಣಕ್ಕೆ ಸರ್ಕಾರ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಮಾರ್ಚ್ 31ರ ತನಕ ಗಡುವು ಕೊಟ್ಟಿದೆ. ಈ ತಿಂಗಳಿನಲ್ಲಿಯೇ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಲಿದ್ದು, ಬಳಿಕ ಸರ್ಕಾರ ಮುಂದಿನ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಸಚಿವರು ಪರಿಷತ್‌ನಲ್ಲಿ ವಿವರಣೆ ಕೊಟ್ಟಿದ್ದಾರೆ.

ಸೆಪ್ಟೆಂಬರ್ 21, 2019ರ ಸರ್ಕಾರದ ಅಧಿಸೂಚನೆಯಂತೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದ ವಾಹನ ಮಾಲೀಕರಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ದಂಡ ಹಾಕಿದ ಮೇಲೆ ಸಹ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ಪ್ರತಿ ಬಾರಿ 1000 ರೂ.ಗಳ ದಂಡವನ್ನು ಹಾಕಲಾಗುತ್ತದೆ.

ಕರ್ನಾಟಕ ಹೈಕೋರ್ಟ್ ಯಥಾಸ್ಥಿತಿ ಕಾಪಾಡಲು ಸೂಚನೆ ನೀಡಿರುವ ಕಾರಣ ಸದ್ಯಕ್ಕೆ ವಾಹನ ಸವಾರರಿಗೆ ದಂಡವನ್ನು ವಿಧಿಸುತ್ತಿಲ್ಲ. ಅಲ್ಲದೆ ನಂಬರ್ ಪ್ಲೇಟ್ ಅಳವಡಿಕೆಗೆ ಮಾರ್ಚ್‌ 31ರ ತನಕ ಗಡುವು ಕೊಡಲಾಗಿದೆ. ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಮಾಲೀಕರು ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಿ ಎಂದು ಸಚಿವರು ಮನವಿ ಮಾಡಿದ್ದಾರೆ.

ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 24,77,653 ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಉಳಿದಂತೆ ಮೈಸೂರು 4,07,830, ದಕ್ಷಿಣ ಕನ್ನಡ 2,76,014, ಬೆಳಗಾವಿ 2,61,807, ಶಿವಮೊಗ್ಗ 2,06,812 ಜಿಲ್ಲೆಗಳಿವೆ.

ಹಲವು ಬಾರಿ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಲಾಗಿದೆ. ಆದ್ದರಿಂದ ಮಾರ್ಚ್ 31ರ ಬಳಿಕ ಗಡುವು ವಿಸ್ತರಣೆ ಮಾಡುವ ಪ್ರಸ್ತಾವನೆ ನಮ್ಮ ಮುಂದಿನಲ್ಲ. ಕೋರ್ಟ್ ಆದೇಶದ ಅನ್ವಯ ನಾವು ದಂಡ ವಿಧಿಸುವ ಕಾರ್ಯಾಚರಣೆಯನ್ನು ಆರಂಭಿಸುತ್ತೇವೆ ಎಂದು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ.



Previous Post Next Post