Savings Mistakes: ಸಾಕಷ್ಟು ಜನರು ಹಣ ಉಳಿತಾಯ ಮಾಡಲು ಬಯಸುತ್ತಾರೆ. ಆದರೆ, ಉಳಿಸಲು ಹಣ ಎಲ್ಲಿದೆ ಎಂಬ ಪ್ರಶ್ನೆ ಅವರಿಗೆ ಎದುರಾಗುತ್ತದೆ. ಹಣಕಾಸು ನಿರ್ವಹಣೆ ವಿಷಯದಲ್ಲಿ ಮಾಡುವ ಹಲವು ತಪ್ಪಗಳು ನಿಮ್ಮ ಕೈಯಿಂದ ಹಣ ಸೋರಿಕೆಯಾಗಲು ಕಾರಣವಾಗುತ್ತದೆ. ಹಣ ಉಳಿತಾಯ ಮಾಡಲು ಬಯಸುವವರು ಈ ಮುಂದಿನ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಖರ್ಚಿನ ಮೇಲೆ ಇರಲಿ ನಿಗಾ:
ಸಣ್ಣಪುಟ್ಟ ಖರ್ಚುಗಳನ್ನು ಕಡೆಗಣಿಸಬೇಡಿ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಬಿರಿಯಾನಿಗೂ ನಿಮ್ಮ ಮನೆಯಿಂದ ಒಂದಿಷ್ಟು ದೂರದಲ್ಲಿರುವ ಬಿರಿಯಾನಿಗೂ ದರದಲ್ಲಿ ಸಾಕಷ್ಟು ವ್ಯತ್ಯಾಸ ಇರಬಹುದು. ಹೋಟೆಲ್‌ಗೆ ಒಂದು ರೌಂಡ್ ಹೋಗಿ ಪಾರ್ಸೆಲ್ ತಂದ್ರೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಕ್ಕಿಂತ ನೂರು ಇನ್ನರು ರೂಪಾಯಿ ಉಳಿತಾಯವಾಗಬಹುದು. ಈ ರೀತಿಯ ಸಣ್ಣಪುಟ್ಟ ಉಳಿತಾಯವೇ ದೊಡ್ಡ ಮೊತ್ತವಾಗುತ್ತದೆ. ನಿಮ್ಮ ಸಂಪತ್ತು ಕೆಲವೊಮ್ಮೆ ನೂರು ರೂಪಾಯಿ ನೋಟಿನ ರೂಪದಲ್ಲಿ ಕಳೆದುಹೋಗಬಹುದು. ಕೆಲವೊಮ್ಮೆ ಅನವಶ್ಯಕವಾಗಿ ನೂರು ರೂಪಾಯಿ ಅಥವಾ ಐನೂರು ರೂಪಾಯಿ ನೀವು ಖರ್ಚು ಮಾಡಬಹುದು. ನೂರು ರೂಪಾಯಿಯಲ್ವ? ಅದರಲ್ಲಿ ಏನಿದೆ ಎಂಬ ಮನಸ್ಥಿತಿಯಲ್ಲಿ ದಿನನಿತ್ಯ ನೀವು ಸಾಕಷ್ಟು ಹಣ ಖರ್ಚು ಮಾಡುತ್ತ ಇರಬಹುದು. ತಿಂಗಳಾಂತ್ಯಕ್ಕೆ ಈ ರೀತಿ ಅನಗತ್ಯ ಖರ್ಚಿನ ಮೊತ್ತವೇ ಬೃಹತ್ ಆಗಿರುತ್ತದೆ. ಈ ರೀತಿಯ ಅನಗತ್ಯ ಖರ್ಚಿನ ಮೇಲೆ ನಿಗಾ ಇಡುವುದು ಹಣ ಉಳಿತಾಯದ ಮೊದಲ ಹೆಜ್ಜೆಯಾಗಿದೆ.
ಇಎಂಐ:
ತಿಂಗಳಿಗೆ, ವರ್ಷಕ್ಕೆ ಎಷ್ಟು ಇಎಂಐ ಕಟ್ಟುವಿರಿ ಲೆಕ್ಕ ಹಾಕಿ. ನೀವು ನೋಡದೆ ಇದ್ದರೂ ಹಲವು ಒಟಿಟಿಗಳ ಚಂದಾದಾರಿಕೆ ಮಾಡಿಕೊಂಡಿರಬಹುದು. ಕ್ಲಬ್‌ಗೆ ಹೋಗದೆ ಇದ್ದರೂ ಮೆಂಬರ್‌ಶಿಪ್ ರಿನಿವಲ್ ಮಾಡುತ್ತಿರಬಹುದು. ನಿಮಗೆ ಇವುಗಳಲ್ಲಿ ಯಾವುದು ಅಗತ್ಯವಿಲ್ಲವೋ ಅದನ್ನೆಲ್ಲ ಬಿಟ್ಟುಬಿಡಿ. ಗೂಗಲ್‌ಪೇ ಮುಂತಾದವುಗಳಲ್ಲ ಇರುವ ಆಟೋಪೇ ಆಯ್ಕೆಗೆ ಈಗಲೇ ಹೋಗಿ ಅನಗತ್ಯವಾಗಿರುವುದನ್ನು ಕ್ಯಾನ್ಸಲ್ ಮಾಡಿ.
ಸಾಲ ಮಾಡಬೇಡಿ:
ಈಗ ಕ್ರೆಡಿಟ್ ಕಾರ್ಡ್‌ನಲ್ಲಿ ಸಾಕಷ್ಟು ಜನರು ಅಗತ್ಯವಿರುವ ಮತ್ತು ಕೆಲವೊಮ್ಮೆ ಅಷ್ಟೇನೂ ಅಗತ್ಯವಲ್ಲದ ವಸ್ತುಗಳನ್ನು ಖರೀದಿಸುತ್ತಾರೆ. ಸಾಲದ ಹಣದಲ್ಲಿಯೇ ಜೀವನ ಸಾಗಿಸುವ ಅಭ್ಯಾಸ ಸಾಕಷ್ಟು ಜನರಿಗೆ ಇದೆ. ಇದೇ ರೀತಿ ಒಂದು ಮೊಬೈಲ್ ಕಾರ್ಯನಿರ್ವಹಿಸುತ್ತಿದ್ದರೂ ಇನ್ಯಾವುದೋ ಬ್ರಾಂಡ್‌ನ ಫೋನ್ ಬೇಕು, ಲ್ಯಾಪ್‌ಟಾಪ್ ಬೇಕು ಎಂದು ಇಎಂಐನಲ್ಲಿ, ಸಾಲದಲ್ಲಿ ಖರೀದಿಸುವ ಅಭ್ಯಾಸ ಬಿಟ್ಟುಬಿಡಿ.
ಕಾರು ಖರೀದಿ:
ಕಾರು ಖರೀದಿಸುವುದು ತಪ್ಪೆಂದಲ್ಲ. ಆದರೆ, ಕಾರು ಖರೀದಿಸುವಾಗ ನಮ್ಮ ಬಜೆಟ್ ನೋಡಿಕೊಳ್ಳುವುದು ಅಗತ್ಯ. ಯಾರೋ ದೊಡ್ಡ ಕಾರು ಖರೀದಿಸಿದ್ದಾರೆ ಎಂದು ನೀವು ಅದೇ ರೀತಿಯ ಕಾರು ಖರೀದಿಸಬೇಕೆ? ಅಗತ್ಯವಿಲ್ಲದೆ ಇದ್ದರೂ ದೊಡ್ಡ ಎಸ್‌ಯುವಿ ಖರೀದಿಸುವವರು ಇದ್ದಾರೆ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರೂ ಇಬ್ಬರೂ ಒಂದೊಂದು ಕಾರು ಖರೀದಿಸುವ ಅಗತ್ಯವಿದೆಯೇ? ಕಾರು ಖರೀದಿಸಿದ ನಂತರ ಅದರ ಮೇಂಟೆನ್ಸ್‌ಗೂ ಸಾಕಷ್ಟು ಖರ್ಚಾಗುತ್ತದೆ. ನಿಮ್ಮಲ್ಲಿ ಹೆಚ್ಚು ಹಣ ಇಲ್ಲ ಎಂದಾದರೆ ಸಣ್ಣ ಕಾರು ಅಥವಾ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ.
ದೊಡ್ಡ ಮನೆ ಖರೀದಿ:
ಮನೆಯಲ್ಲಿ ನಾಲ್ವರು ಇದ್ದರೆ ಮೂರು ಮಹಡಿಯ ಮನೆ ನಿರ್ಮಿಸುವ ಅಗತ್ಯವಿದೆಯೇ? ಇಬ್ಬರೇ ಇರುವವರು ಎರಡು ಮಹಡಿ ಮನೆ ಖರೀದಿಸಬೇಕೆ? ಸಂಪತ್ತಿನ ತೋರ್ಪಡಿಕೆಗಾಗಿ ಸಾಲಸೋಲ ಮಾಡಿ ದೊಡ್ಡ ಮನೆ ಕಟ್ಟುವುದು ಬೇಡ.
ವಾಪಸ್ ಬರದ ಸಾಲ:
ಯಾರಾದರೂ ಸಾಲ ಕೇಳಿದಾಗ ಇಲ್ಲವೆನ್ನಲಾಗುವುದಿಲ್ಲ. ಅನಿವಾರ್ಯತೆ ಇದ್ದಾಗ ಸಹಾಯ ಮಾಡುವುದು ತಪ್ಪಲ್ಲ. ಅಪಾತ್ರರಿಗೆ ಸಾಲ ನೀಡಬಾರದು ಎನ್ನುವ ಮಾತಿದೆ. ಇದೇ ರೀತಿ ನಿಮಗೆ ವಾಪಸ್ ಬರುವ ಖಚಿತತೆ ಇಲ್ಲದೆ ಇರುವವರಿಗೆ ಸಾಲ ನೀಡಬೇಡಿ. ಸಾಲ ಕೇಳಿದ ವ್ಯಕ್ತಿ ಬ್ಯಾಂಕ್‌ನಿಂದ ಸಾಲ ಪಡೆಯಬಹುದಲ್ವ? ನೀವು ಯಾರಿಗೋ ಐದು ಲಕ್ಷ ರೂಪಾಯಿ ಸಾಲ ನೀಡಿದ್ದೀರಿ ಎಂದಿರಲಿ. ಅವರು ಐದು ವರ್ಷದ ನಂತರ ಆ ಹಣ ವಾಪಸ್ ನೀಡುತ್ತಾರೆ ಎಂದಿರಲಿ. ಎಲ್ಲಾದರೂ ನೀವು ಹಣವನ್ನು ಯಾವುದೋ ಉತ್ತಮ ಮ್ಯೂಚುಯಲ್ ಫಂಡ್ ಅಥವಾ ಒಳ್ಳೆಯ ಷೇರುಗಳ ಮೇಲೆ ಹೂಡಿಕೆ ಮಾಡಿದ್ದರೆ ಲಾಭವಾಗುತ್ತ ಇರಲಿಲ್ವ? ಹೂಡಿಕೆ ಬಗ್ಗೆ ಭಯವಿದ್ದರೆ ಚಿನ್ನದ ಮೇಲೆಯಾದರೂ ಹೂಡಿಕೆ ಮಾಡಬಹುದಿತ್ತಲ್ವ?
ನಿವೃತ್ತಿಗೆ ಹೂಡಿಕೆ:
ನಿವೃತ್ತಿ ಬದುಕಿಗಾಗಿ ಹಣ ಉಳಿತಾಯ ಮಾಡದೆ ಇರುವ ತಪ್ನನ್ನೂ ಸಾಕಷ್ಟು ಜನರು ಮಾಡುತ್ತಾರೆ.
ಹಣ ಸೇವ್ ಮಾಡಿ:
ಉಳಿಕೆ ಹಣವನ್ನು ಹೂಡಿಕೆ ಮಾಡದೆ ಇರುವ ತಪ್ಪನ್ನು ಮಾಡಬೇಡಿ. ತುರ್ತು ಪರಿಸ್ಥಿತಿಗೆ ಅಂತ ಒಂದಿಷ್ಟು ಹಣ ತೆಗೆದಿಡಿ.
ಗಳಿಕೆಗಿಂತ ಹೆಚ್ಚು ಖರ್ಚು ಮಾಡದಿರಿ:
ನಿಮ್ಮ ಖರ್ಚು ನಿಮ್ಮ ಆದಾಯಕ್ಕಿಂತ ಹೆಚ್ಚಿರಬಾರದು.
ಹೂಡಿಕೆ ಮಾಡದೆ ಇರುವುದು:
ಈಗ ಹಣವನ್ನು ಬೆಳೆಸುವುದು ಅತ್ಯಂತ ಅಗತ್ಯ. ಸಾಕಷ್ಟು ಜನರಿಗೆ ಹೂಡಿಕೆ ಕುರಿತು ಅರಿವಿಲ್ಲ. ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಕಡಿಮೆ ಬಡ್ಡಿದರದಲ್ಲಿ ಲಕ್ಷಗಟ್ಟಲೆ ಹಣ ಇಡುವ ಬದಲು ಅದನ್ನು ಎಚ್ಚರಿಕೆಯಿಂದ ಹೆಚ್ಚು ಲಾಭ ತಂದುಕೊಡುವ ಕಡೆ ಹೂಡಿಕೆ ಮಾಡುವುದು ಉತ್ತಮ. ಈ ಕುರಿತು ಒಂದಿಷ್ಟು ರಿಸರ್ಚ್ ಮಾಡಿ ಮುಂದುವರೆಯಿರಿ. ಯಾರೋ ಹೇಳಿದ್ರು ಎಂದು ಎಲ್ಲೋ ಹೂಡಿಕೆ ಮಾಡಬೇಡಿ.