ನವದೆಹಲಿ: ಹೊಸ ವರ್ಷದ ದಿನವೇ ಕೇಂದ್ರ ಸರ್ಕಾರ ದೇಶದ ಅನ್ನದಾತರಿಗೆ ಹಲವು ಬಂಪರ್ ಕೊಡುಗೆ ಪ್ರಕಟಿಸಿದೆ. ಪ್ರಮುಖವಾಗಿ ಡೈ-ಅಮೋನಿಯಂ ಫಾಸ್ಪೇಟ್ (ಡಿಎಪಿ) ಎನ್ಬಿಎಸ್ ಸಬ್ಸಿಡಿಯಾಚೆಗಿನ ಏಕ ಸಮಯದ ವಿಶೇಷ ಪ್ಯಾಕೇಜ್ ಅನ್ನು ಇದೇ ಜ.1.ರಿಂದ ಮುಂದಿನ ಆದೇಶದವರೆಗೆ ವಿಸ್ತರಿಸಲು ಬುಧವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ. ಮುಂದಿನ ಆದೇಶದವರೆಗೂ ಇದು ಜಾರಿಯಲ್ಲಿರಲಿದೆ. ರೈತರಿಗೆ ಕೈಗೆಟುಕುವ ದರದಲ್ಲಿ ಡಿಎಪಿ ಸುಸ್ಥಿರವಾಗಿ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಪ್ರತಿ ಮೆಟ್ರಿಕ್ ಟನ್ ಡಿಎಪಿಯ ವಿಶೇಷ ಪ್ಯಾಕೇಜನ್ನು ಎನ್ಬಿಎಸ್ ಸಬ್ಸಿಡಿ ಯಾದ 3,500 ರೂ.ಗೂ ಆಚೆಗೆ ವಿಸ್ತರಿಸುವ ಬಗ್ಗೆ ರಸಗೊಬ್ಬರಗಳ ಸಚಿವಾಲಯ ಮಾಡಿದ್ದ ಶಿಫಾ ರಸನ್ನು ಸಂಪುಟ ಸಭೆ ಅನುಮೋದಿಸಿತು.
ಈ ವಿಸ್ತರಣೆಯಿಂದ ಬೊಕ್ಕಸಕ್ಕೆ ಸುಮಾರು 3,850 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. ಇದರಿಂದಾಗಿ, ಕಳೆದ ವರ್ಷದ ಏಪ್ರಿಲ್ನಿಂದ ಇದುವರೆಗೆ ವಿಶೇಷ ಪ್ಯಾಕೇಜ್ಗೆ ಅನುಮೋದಿಸಿದ ಒಟ್ಟು ಮೊತ್ತ 6,475 ಕೋಟಿ ರೂ. ಆಗಲಿದೆ. ಪಿ ಮತ್ತು ಕೆ ರಸಗೊಬ್ಬರಗಳ 28 ಗ್ರೇಡ್ಗಳನ್ನು ರಸಗೊಬ್ಬರ ಉತ್ಪಾದಕರು ಮತ್ತು ಆಮದುದಾರರ ಮೂಲಕ ರೈತರಿಗೆ ಒದಗಿಸಲಾಗುತ್ತಿದೆ. ಎನ್ಬಿಎಸ್ ಯೋಜನೆಯಡಿ ಈ ಸಬ್ಸಿಡಿ 2010ರಿಂದಲೂ ಜಾರಿಯಲ್ಲಿದೆ. ರೈತರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ ಡಿಎಪಿ ರಸಗೊಬ್ಬರ ಬೆಲೆಯಲ್ಲಿ ಬದಲಾವಣೆ ಮಾಡಿರಲಿಲ್ಲ. 2024 ಏ.1ರಿಂದ ಡಿ.31ರವರೆಗೆ ವಿಶೇಷ ಪ್ಯಾಕೇಜ್ಗೆ ಕಳೆದ ವರ್ಷ ಜುಲೈನಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಫಸಲ್ ಬಿಮಾ ಮುಂದುವರಿಕೆ:
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್ಬಿವೈ) ಮತ್ತು ಪುನರ್ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು 2025-26ನೇ ಸಾಲಿಗೆ ಮುಂದುವರಿಸುವುದಕ್ಕೂ ಸಭೆ ಸಮ್ಮತಿಸಿತು. ಇದರಿಂದ, 2020-21ರಿಂದ 2025-26ರ ವರೆಗೆ ಬೊಕ್ಕಸಕ್ಕೆ ಒಟ್ಟು 69,515.71 ಕೋಟಿ ರೂಪಾಯಿ ವೆಚ್ಚವಾಗುತ್ತದೆ.
ಸ್ವಯಂಚಾಲಿತ ಹವಾಮಾನ ಕೇಂದ್ರ:
ಹವಾಮಾನ ಮಾಹಿತಿ, ನೆಟ್ವರ್ಕ್ ಡೇಟಾ ಸಿಸ್ಟಮ್ ಉಪಕ್ರಮದಡಿ ಬ್ಲಾಕ್ ಮಟ್ಟದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಹಾಗೂ ಪಂಚಾಯಿತಿ ಮಟ್ಟದಲ್ಲಿ ಸ್ವಯಂಚಾಲಿತ ಮಳೆ ಮಾಪಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ಹವಾಮಾನಕ್ಕೆ ತಕ್ಕಂತೆ ಬೆಳೆ ಬೆಳೆಯಲು ನೆರವಾಗಲಿದೆ. ಮೊಬೈಲ್ ನೆಟ್ವರ್ಕ್ ಇಲ್ಲದ ಕುಗ್ರಾಮಗಳ ರೈತರು ಈ ಕೇಂದ್ರಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ರೈತರಿಗೆ ಲಾಭವೇನು?:
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮುಂದುವರಿಕೆ ರೈತರಿಗೆ ನೆರವಾಗಲಿದೆ. ಹೆಚ್ಚುವರಿ ಒಂದು ವರ್ಷ ನೈಸರ್ಗಿಕ ವಿಕೋಪಗಳಿಂದ ಆದ ಬೆಳೆ ನಷ್ಟಕ್ಕೆ ಪರಿಹಾರ ಸಿಗಲಿದೆ. ಆ ಮೂಲಕ ಸಂಕಷ್ಟದಲ್ಲಿರುವ ಅನ್ನದಾತರಿಗೆ ಆರ್ಥಿಕ ಸಹಾಯ ಲಭಿಸಲಿದೆ.
ಹೊಸ ವರ್ಷದ ಮೊದಲನೇ ದಿನ ಕೈಗೊಂಡ ಮೊದಲ ನಿರ್ಧಾರ ಕೋಟಿ ಕೋಟಿ ರೈತರಿಗೆ ಸಮರ್ಪಿತ. ಬೆಳೆ ವಿಮಾ ಯೋಜನೆಗೆ ಹೆಚ್ಚಿನ ಹಂಚಿಕೆ ಅನುಮೋದಿಸಿದ್ದೇವೆ. ಇದು ರೈತರಿಗೆ ಹೆಚ್ಚಿನ ಭದ್ರತೆ ಒದಗಿಸುತ್ತದೆ. ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರವನ್ನು ಖಾತ್ರಿ ಪಡಿಸುತ್ತದೆ. ಅಷ್ಟೇ ಅಲ್ಲ ಬೆಳೆ ಹಾಗೂ ಹಾನಿಯ ಆತಂಕವನ್ನೂ ತಗ್ಗಿಸಲು ನೆರವಾಗುತ್ತದೆ.
ನರೇಂದ್ರ ಮೋದಿ ಪ್ರಧಾನಿ
ಫಸಲ್ ಬಿಮಾ, ಪುನರ್ ರಚಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳ ಒಟ್ಟು ವೆಚ್ಚವನ್ನು ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಿಂದ ನೈಸರ್ಗಿಕ ವಿಕೋಪಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳುವುದಕ್ಕೆ ರೈತರಿಗೆ ಅನುಕೂಲವಾಗಲಿದೆ.