ಗ್ಯಾರಂಟಿ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿರುವ ಹಿಮಾಚಲ ಸರ್ಕಾರದ ಸ್ಥಿತಿ ಕರ್ನಾಟಕಕ್ಕೆ ಬಂದರೂ ಅದರಲ್ಲಿ ಆಶ್ಚರ್ಯವೇನಿಲ್ಲ, ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಜನತೆಗೆ ನೀಡಿರುವ ವಚನ ಪಾಲನೆ ಹಾಗೂ ಜಾರಿಗೊಳಿಸಿರುವ ಯೋಜನೆಯನ್ನು ಸರಿದೂಗಿಸುವ ಬದ್ಧತೆ ಇದ್ದರೆ ಈ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸಲು ರಾಜ್ಯದ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸುವ ಬದ್ಧತೆ ಪ್ರದರ್ಶಿಸಲಿ ಎಂದು ಬಿ ವೈ ವಿಜಯೇಂದ್ರ ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸರ್ಕಾರದ ಆರ್ಥಿಕ ಸಂಪನ್ಮೂಲವನ್ನು ಆಧರಿಸಿ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ತಾವು ನೀಡುವ ಪೊಳ್ಳು ಭರವಸೆಗಳಿಗೆ ಹಣ ಒದಗಿಸಲಾಗದೇ ಯೋಜನೆಗಳು ಹೇಗೆ ವೈಫಲ್ಯ ಸಾಧಿಸುತ್ತವೆ ಎನ್ನುವುದಕ್ಕೆ ಕಾಂಗ್ರೆಸ್ ಆಡಳಿತದ ಹಿಮಾಚಲ ಪ್ರದೇಶ ಸರ್ಕಾರ ಸಾಕ್ಷಿ ಒದಗಿಸಿದೆ.
BY Vijayendra Reaction on withdrawal of guarantee schemes
ಕರ್ನಾಟಕದಲ್ಲೂ ಸಹ ಪಂಚ ಗ್ಯಾರಂಟಿಗಳನ್ನು ನಿರ್ವಹಿಸುವಲ್ಲಿ ಗೊಂದಲಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಲ್ಲಿ ಈಗಾಗಲೇ ನಷ್ಟವನ್ನು ಅನುಭವಿಸಿದ್ದು, ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳಿಗೆ ಬಡ್ಡಿರಹಿತವಾಗಿ 2 ಸಾವಿರ ಕೋಟಿ ರೂ ಸಾಲ ನೀಡಲು ಮುಂದಾಗಿದೆ. ಗೃಹ ಜ್ಯೋತಿ ಯೋಜನೆಯ ನಷ್ಟವನ್ನು ಸರಿದೂಗಿಸಲು ವಾಣಿಜ್ಯ ಹಾಗೂ ಉತ್ಪಾದಕ ವಲಯದ ಮೇಲೆ ವಿದ್ಯುತ್ ದರ ಹೆಚ್ಚಿಸಿರುವುದರ ಪರಿಣಾಮ, ಪರೋಕ್ಷವಾಗಿ ಜನ ಸಾಮಾನ್ಯರು ಇದರ ಬಿಸಿ ಅನುಭವಿಸುವಂತಾಗಿದೆ.
ಗೃಹ ಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲಾಗದೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಉಳಿಸಿಕೊಂಡಿರುವ ಬಾಕಿ ಕಂತುಗಳನ್ನು ಪಾವತಿಸಿ ಯೋಜನೆಯನ್ನು ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಯುವನಿಧಿ ಯೋಜನೆ ಯುವ ಜನರ ಪಾಲಿಗೆ ಗಗನಕುಸುಮವಾಗಿಯೇ ಉಳಿದಿದೆ ಎಂದು ವಿಜಯೇಂದ್ರ ಅವರು ಹೇಳಿದರು.
ಸಮಾಜ ಹಾಗೂ ನಾಡನ್ನು ಕಟ್ಟುವ ಮಾನವ ಸಂಪನ್ಮೂಲದ ಪ್ರಮುಖ ಭಾಗವಾಗಿರುವ ರೈತಾಪಿ ವರ್ಗ, ಶ್ರಮಿಕರು,ಯುವ ಜನರು, ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಭವಿಷ್ಯಕ್ಕಾಗಿ ಯಾವುದೇ ಯೋಜನೆ ರೂಪಿಸದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಡಳಿತ ನೀಡುವ ಮೂಲಕ ತನ್ನ ಖಜಾನೆ ಬರಿದು ಮಾಡಿಕೊಂಡಿದೆ,ಇದು ನಾಡಿನ ಜನರಿಗೆ ತಿಳಿಯದ ವಿಷಯವೇನಲ್ಲ, ಏಕೆಂದರೆ ಇದರ ಪರಿಣಾಮವನ್ನು ತೆರಿಗೆದಾರರು ನಿತ್ಯ ಅನುಭವಿಸುತ್ತಲೇ ಇದ್ದಾರೆ.
ಅಮಿತ್ ಶಾ ಭೇಟಿ ಮಾಡಿದ ಬಿ ವೈ ವಿಜಯೇಂದ್ರ
ಉಕ್ಕಿನ ಮನುಷ್ಯ ಎಂದು ಬಣ್ಣಿಸಲ್ಪಡುವ ಸರ್ದಾರ್ ವಲ್ಲಭಾಯಿ ಪಟೇಲರ ನಂತರ ದೇಶಕಂಡ ದಿಟ್ಟ ಗೃಹ ಸಚಿವ ಅಮಿತ್ ಶಾ ಅವರನ್ನು 2025ರ ನೂತನ ಕ್ಯಾಲೆಂಡರ್ ಹೊಸವರ್ಷದ ದಿನವಾದ ಇಂದು ನವದೆಹಲಿಯಲ್ಲಿ ಭೇಟಿಯಾಗಿ ಶುಭಾಶಯ ಕೋರಿ ಆಶೀರ್ವಾದ ಪಡೆಯಲಾಯಿತು.
ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದೀಚೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಕಾಂಗ್ರೆಸ್ ಆಡಳಿತದ ಪರಿಣಾಮವಾಗಿ ಪ್ರಸ್ತುತ ರಾಜ್ಯದಲ್ಲಿ ಉದ್ಭವಿಸಿರುವ ಅನೇಕ ಸಮಸ್ಯೆಗಳು, ಕಾಂಗ್ರೆಸ್ ಸರ್ಕಾರದ ಸಚಿವರುಗಳ ವಿರುದ್ಧದ ಆರೋಪಗಳ ಕುರಿತು ಹಾಗೂ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲ ವೃದ್ಧಿಗೊಳಿಸಲು ಯೋಜಿಸಿರುವ ಕಾರ್ಯಕ್ರಮಗಳ ಕುರಿತು ವಿವರಿಸಿ ಸೂಕ್ತ ಮಾರ್ಗದರ್ಶನವನ್ನು ಕೋರಲಾಯಿತು.
ದೇಶ ಸುಭದ್ರತೆಗಾಗಿ ಪ್ರಧಾನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಐತಿಹಾಸಿಕ ಹೆಜ್ಜೆಗಳನ್ನಿಡುತ್ತಿರುವ ಮಾನ್ಯ ಅಮಿತ್ ಶಾ ಜೀ ಯವರು ಪಕ್ಷ ಸಂಘಟನೆಗಾಗಿಯೂ ಅಷ್ಟೇ ಬದ್ಧತೆ ಹಾಗೂ ಕಾಳಜಿ ವಹಿಸುವುದು ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಆತ್ಮವಿಶ್ವಾಸದ ಛಲ ತುಂಬಲು ಕಾರಣವಾಗಿದೆ, ಅವರ ಸಂಘಟನಾ ಸಾಮರ್ಥ್ಯದ ಚತುರತೆ ಪಕ್ಷ ಕಟ್ಟುವ ಕಾಯಕದಲ್ಲಿ ಸದಾ ನನಗೆ ಪ್ರೇರಣೆಯ ಶಕ್ತಿಯಾಗಿದೆ. ಇಂದಿನ ಅವರ ಭೇಟಿಯ ಕ್ಷಣಗಳು ಎಂದಿನಂತೆ ಇನ್ನಷ್ಟು ಉತ್ಸಾಹತುಂಬಿ ಸಂಘಟನೆಯನ್ನು ನಿರೀಕ್ಷೆಯ ಗುರಿ ತಲುಪಿಸಲು ಆತ್ಮವಿಶ್ವಾಸ ತುಂಬಿತು.