One nation, one student ID: ಇದು ವಿದ್ಯಾರ್ಥಿಗಳಿಗೆ ಜೀವಮಾನದ ಗುರುತಿನ ವ್ಯವಸ್ಥೆ. ವಿದ್ಯಾರ್ಥಿಯೊಬ್ಬರ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ವ್ಯಾಸಂಗದವರೆಗಿನ ಶೈಕ್ಷಣಿಕ ಮಾಹಿತಿಯನ್ನು ಟ್ರ್ಯಾಕಿಂಗ್ ಮಾಡಲು ಇದರಲ್ಲಿ ಸಾಧ್ಯವಿದೆ. ವಿದ್ಯಾರ್ಥಿ ಪಡೆದ ಶೈಕ್ಷಣಿಕ ಕ್ರೆಡಿಟ್‌ಗಳು, ಪ್ರಮಾಣಪತ್ರಗಳನ್ನು ಇದರಲ್ಲಿ ಪಡೆಯಬಹುದು.
ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳಿಗೆ "ಒನ್ ನೇಷನ್, ಒನ್ ಸ್ಟುಡೆಂಟ್ ಐಡಿ" ನೀಡುವ ಸಲುವಾಗಿ ಆಟೋಮೇಟೆಡ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ (APAAR) ಆರಂಭಿಸಲು ಹಲವು ರಾಜ್ಯ ಸರಕಾರಗಳು ಪೋಷಕರ ಅನುಮತಿಯನ್ನು ಕೋರಿವೆ. ಅಪಾರ್ ಮೂಲಕ ವಿದ್ಯಾರ್ಥಿಗಳ ದಾಖಲೆಗಳನ್ನು ಸುರಕ್ಷಿತವಾಗಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಉದ್ದೇಶ ಹೊಂದಿದೆ. ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಟ್ರ್ಯಾಕಿಂಗ್ ಮತ್ತು ದಾಖಲೆಗಳ ನಿರ್ವಹಣೆ ಸರಳವಾಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಏನಿದು ಅಪಾರ್ ಕಾರ್ಡ್?
ಇದು ವಿದ್ಯಾರ್ಥಿಗಳಿಗೆ ಜೀವಮಾನದ ಗುರುತಿನ ವ್ಯವಸ್ಥೆ. ವಿದ್ಯಾರ್ಥಿಯೊಬ್ಬರ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ವ್ಯಾಸಂಗದವರೆಗಿನ ಶೈಕ್ಷಣಿಕ ಮಾಹಿತಿಯನ್ನು ಟ್ರ್ಯಾಕಿಂಗ್ ಮಾಡಲು ಇದರಲ್ಲಿ ಸಾಧ್ಯವಿದೆ. ವಿದ್ಯಾರ್ಥಿ ಪಡೆದ ಶೈಕ್ಷಣಿಕ ಕ್ರೆಡಿಟ್‌ಗಳು, ಪ್ರಮಾಣಪತ್ರಗಳನ್ನು ಇದರಲ್ಲಿ ಪಡೆಯಬಹುದು. ಈ ಮಾಹಿತಿಗಳನ್ನು ಸಂಗ್ರಹಿಸಲು ಡಿಜಿಟಲ್ ರೆಪೊಸಿಟರಿಯಾದ ಅಕಾಡೆಮಿಕ್ ಬ್ಯಾಂಕ್ ಕ್ರೆಡಿಟ್ (ಎಬಿಸಿ)ಗೆ ಈ ಐಡಿಯನ್ನು ಲಿಂಕ್ ಮಾಡಲಾಗುತ್ತದೆ.
ಇದೇ ಸಮಯದಲ್ಲಿ ಅಪಾರ್ ಕಾರ್ಡ್ ಅನ್ನು ಡಿಜಿಲಾಕರ್ ಜತೆ ಸಂಯೋಜನೆ ಮಾಡಲಾಗುತ್ತದೆ. ಪರೀಕ್ಷೆ ಫಲಿತಾಂಶ, ಸರ್ಟಿಫಿಕೇಟ್‌ನಂತಹ ಅಗತ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ. ಈ ಮೂಲಕ ಭೌತಿಕ ದಾಖಲೆಗ ಅವಲಂಬನೆ ಕಡಿಮೆಯಾಗುತ್ತದೆ.
ಅಪಾರ್ ಕಾರ್ಡ್ ಅನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಪ್ರಾರಂಭಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ನಕಲಿ ಪ್ರಮಾಣಪತ್ರಗಳನ್ನು ನೀಡಿ ದಾಖಲಾಗುವುದನ್ನೂ ಇದು ತಪ್ಪಿಸುತ್ತದೆ. ಅಧಿಕೃತ ಸಂಸ್ಥೆಗಳು ಮಾತ್ರ ವಿದ್ಯಾರ್ಥಿಯ ಅಪಾರ್ ಖಾತೆಗೆ ಕ್ರೆಡಿಟ್‌ಗಳನ್ನು ಸೇರಿಸಬಹುದು.
ಅಪಾರ್ ಕಾರ್ಡ್‌ನ ಪ್ರಮುಖ ಫೀಚರ್‌ಗಳು
ಪ್ರತಿಯೊಬ್ಬ ವಿದ್ಯಾರ್ಥಿಗೆ ವಿಶಿಷ್ಟ ಗುರುತಿನ ಸಂಖ್ಯೆ: ಆಧಾರ್ ಕಾರ್ಡ್‌ನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ವಿಶಿಷ್ಟ ಸಂಖ್ಯೆ ನೀಡುವಂತೆ ವಿದ್ಯಾರ್ಥಿಗಳಿಗೆ ಅಪಾರ್ ಕಾರ್ಡ್‌ನಲ್ಲಿ ಯೂನಿಕ್ ಯೂಸರ್ ಅಪಾರ್ ಐಡಿ ನೀಡಲಾಗುತ್ತದೆ. ಈ ಐಡಿಯಡಿಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಕ್ರೆಡಿಟ್‌ಗಳು ಮತ್ತು ಸರ್ಟಿಫಿಕೇಟ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು.
ಅಕಾಡೆಮಿಕ್ ಕ್ರೆಡಿಟ್ ವರ್ಗಾವಣೆ: ಅಪಾರ್‌ನಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ವಿದ್ಯಾರ್ಥಿ ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ವರ್ಗಾವಣೆಗೊಂಡಾಗ ಸುಲಭವಾಗಿ ವರ್ಗಾವಣೆ ಮಾಡಬಹುದು. ಈ ಮೂಲಕ ದಾಖಲೆಗಳು ಮತ್ತು ಸರ್ಟಿಫಿಕೇಟ್‌ಗಳ ಫಿಸಿಕಲ್ ಟ್ರಾನ್ಸ್‌ಫರ್ ಕಾರ್ಯಗಳು ಇಲ್ಲವಾಗಲಿದೆ.
ವಾಲೆಂಟರಿ ಆಧಾರ್ ಇಂಟಿಗ್ರೇಷನ್: ವಿದ್ಯಾರ್ಥಿಯ ಆಧಾರ್ ಬಳಸಿ ತಮ್ಮ ಮಾಹಿತಿಯನ್ನು ವಿದ್ಯಾರ್ಥಿಗಳು ದೃಢೀಕರಿಸಬಹುದು. ಇದೇ ಕಾರಣಕ್ಕೆ ಕೆಲವು ಪೋಷಕರಿಗೆ ಭಯವಾಗಿದೆ. ತಮ್ಮ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದೇ ಎಂಬ ಆತಂಕ ಕೆಲವು ಹೆತ್ತವರದ್ದು.
ಡೇಟಾ ಸುರಕ್ಷಿತವೆಂದು ಭರವಸೆ ನೀಡಿದ ಸರಕಾರ
ಈ ಅಪಾರ್ ಕಾರ್ಡ್ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಇದೇ ಸಮಯದಲ್ಲಿ ಡೇಟಾ ಖಾಸಗಿತನ ಮತ್ತು ಆಧಾರ್ ಬಳಕೆ ಬಗ್ಗೆ ಕಳವಳವೂ ಮೂಡಿದೆ. ವಿದ್ಯಾರ್ಥಿಗಳ ಡೇಟಾವನ್ನು ರಹಸ್ಯವಾಗಿ ಇಡಲಾಗುತ್ತದೆ, ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಸರಕಾರ ಭರವಸೆ ನೀಡಿದೆ. ಇಷ್ಟು ಮಾತ್ರವಲ್ಲದೆ ಈ ಅಪಾರ್ ಐಡಿಗೆ ನೀಡಿರುವ ಒಪ್ಪಿಗೆಯನ್ನು ವಿದ್ಯಾರ್ಥಿಗಳು ಅಥವಾ ಹೆತ್ತವರು ಯಾವುದೇ ಸಂದರ್ಭದಲ್ಲಿ ಹಿಂತೆಗೆದುಕೊಳ್ಳಬಹುದು ಎಂದು ಸರಕಾರ ತಿಳಿಸಿದೆ. ಈ ರೀತಿ ಒಪ್ಪಿಗೆ ಹಿಂತೆಗೆದುಕೊಂಡರೆ ಅಲ್ಲಿಯವರೆಗಿನ ದಾಖಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸರಕಾರ ತಿಳಿಸಿದೆ.