ಸ್ವಯಂ ಉದ್ಯೋಗಕ್ಕೆ 5 ಲಕ್ಷ ಬಡ್ಡಿರಹಿತ ಸಾಲ, ಕೌಶಲ್ಯ ತರಬೇತಿ; ಲಖ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ

ಸ್ವಯಂ ಉದ್ಯೋಗಕ್ಕೆ 5 ಲಕ್ಷ ಬಡ್ಡಿರಹಿತ ಸಾಲ, ಕೌಶಲ್ಯ ತರಬೇತಿ; ಲಖ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ

Lakhpati Didi Scheme: ಮಹಿಳಾ ಸಬಲೀಕರಣಕ್ಕಾಗಿ ಭಾರತ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿದೆ. ಇಂದು ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ ಸ್ವಸಹಾಯ ಸಂಘದ ಮೂಲಕ 5 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಹಾಗೂ ಕೌಶಲ್ಯ ತರಬೇತಿ ನೀಡುವ ಲಖ್‌ಪತಿ ದೀದಿ ಯೋಜನೆ ಕುರಿತು ತಿಳಿಯೋಣ.



ಮಹಿಳಾ ಸಬಲೀಕರಣಕ್ಕಾಗಿ ಭಾರತ ಸರ್ಕಾರವು ಹಲವು ಯೋಜನೆಗಳನ್ನು ಘೋಷಿಸಿದೆ. ಕೆಲವೊಂದು ಯೋಜನೆಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ಇರುವುದಿಲ್ಲ. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ‘ಲಖ್‌ಪತಿ ದೀದಿ ಯೋಜನೆ’ ಕೂಡಾ ಒಂದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2023ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಮಹಿಳೆಯರಿಗೆ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ಘೋಷಿಸಿದರು. ಸ್ವಯಂ ಉದ್ಯೋಗ ಕಲ್ಪಿಸಿ ಬಡತನ ನಿರ್ಮೂಲನೆ ಮೂಲಕ ಮಹಿಳೆಯರು ಆರ್ಥಿಕ ಸಬಲರಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಈ ಯೋಜನೆ ಕುರಿತ ವಿವರ ಇಲ್ಲಿದೆ.

ಈ ಯೋಜನೆಯಿಂದ ವರ್ಷಕ್ಕೆ ಒಂದು ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸಲು ಸ್ವಯಂ ಉದ್ಯೋಗದ ಅವಕಾಶ ದೊರೆಯಲಿದೆ. ಅಲ್ಲದೆ 5 ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಮಹಿಳೆಯರಿಗೆ ತಮ್ಮ ಸ್ವಂತ ಉದ್ಯಮವನ್ನು ಆರಂಭಿಸಿ ತಮ್ಮದೇ ಕಾಲುಗಳ ಮೇಲೆ ನಿಂತು ಬದುಕು ಕಟ್ಟಿಕೊಳ್ಳಲು ಈ ಸಾಲ ಸೌಲಭ್ಯ ನೆರವಾಗುತ್ತದೆ.

ಈ ಯೋಜನೆಯ ಭಾಗವಾಗಿ, ಆಗಸ್ಟ್ 25ರಂದು ಪ್ರಧಾನಿ ಮೋದಿ ಅವರು 11 ಲಕ್ಷ ಮಹಿಳೆಯರಿಗೆ ಲಖ್‌ಪತಿ ದೀದಿ ಯೋಜನೆ ಪ್ರಮಾಣಪತ್ರ ನೀಡಿದರು. ಈ ಯೋಜನೆಯ ಭಾಗವಾಗಿ 2500 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರ ಹೇಳುವ ಪ್ರಕಾರ, ಈ ಯೋಜನೆಯಿಂದ 4.3 ಲಕ್ಷ ಸ್ವಸಹಾಯ ಗುಂಪುಗಳಲ್ಲಿ 48 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.

ಈ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರವು ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಮಹಿಳಾ ಸ್ವಸಹಾಯ ಗುಂಪುಗಳಿಗೆ (SHG) ಡ್ರೋನ್‌ಗಳನ್ನು ಒದಗಿಸುತ್ತದೆ. ಸುಮಾರು 15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ನಿರ್ವಹಿಸಲು ಮತ್ತು ದುರಸ್ತಿ ಮಾಡಲು ತರಬೇತಿ ನೀಡಲಾಗುತ್ತಿದೆ. ಇದಲ್ಲದೆ, ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಎಲ್ಇಡಿ ಬಲ್ಬ್‌ ತಯಾರಿಕೆ ಮತ್ತು ಪ್ಲಂಬಿಂಗ್‌ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

ಲಖ್‌ಪತಿ ದೀದಿ ಯೋಜನೆ ಅರ್ಹತೆ

  • ಈ ಯೋಜನೆ ಮಹಿಳೆಯರಿಗೆ ಮಾತ್ರ.
  • ಮಹಿಳಾ ಅರ್ಜಿದಾರರು, ತಾವು ಅರ್ಜಿ ಸಲ್ಲಿಸುವ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
  • ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಮೀರಬಾರದು.
  • ಅರ್ಜಿದಾರರ ಕುಟುಂಬದಲ್ಲಿ ಯಾರೂ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.

ಯೋಜನೆಯ ಪ್ರಯೋಜನಗಳು

ಈ ಯೋಜನೆಯಡಿಯಲ್ಲಿ ಮಹಿಳೆಯರನ್ನು ಸ್ವ-ಸಹಾಯ ಗುಂಪುಗಳೊಂದಿಗೆ ಅನುಸಂಧಾನ ಮಾಡಲಾಗಿದೆ. ಇಲ್ಲಿ ಎಲ್‌ಇಡಿ ಲೈಟ್‌ಗಳ ತಯಾರಿಕೆ, ಪ್ಲಂಬಿಂಗ್ ಮತ್ತು ಡ್ರೋನ್ ರಿಪೇರಿ ತರಬೇತಿ ಪಡೆಯಬಹುದು. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ತಂತ್ರಜ್ಞಾನದ ಸೇರ್ಪಡೆಗೆ ಈ ಡ್ರೋನ್‌ಗಳು ಸಹಾಯ ಮಾಡುತ್ತವೆ. ಈ ಯೋಜನೆಯಡಿ ಕಾರ್ಯಾಗಾರಗಳು, ಸಾಲ ಸೌಲಭ್ಯ, ವಿಮೆ, ಕೌಶಲ್ಯ ಅಭಿವೃದ್ಧಿ, ಆರ್ಥಿಕ ಪ್ರೋತ್ಸಾಹ ಸೇರಿದಂತೆ ಹಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.

ಲಕ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ವಸತಿ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ
  • ಮೊಬೈಲ್ ಸಂಖ್ಯೆ

ಲಕ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ಸ್ಥಳೀಯ ಸ್ವಸಹಾಯ ಗುಂಪಿಗೆ ಸೇರಿಕೊಳ್ಳಿ.
  • ಅಂಗನವಾಡಿ ಕೇಂದ್ರವು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಅಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಲಾಗುತ್ತದೆ.
  • ಲಕ್‌ಪತಿ ದೀದಿ ಯೋಜನೆಗಾಗಿ ಅರ್ಜಿ ನಮೂನೆಯನ್ನು ಪಡೆದು ನಿಮ್ಮ ವಿವರಗಳನ್ನು ಭರ್ತಿ ಮಾಡಿ.
  • ನಿಗದಿತ ಕಚೇರಿ ಅಥವಾ ಅಂಗನವಾಡಿ ಕೇಂದ್ರದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಿ.
  • ನಂತರ ನಿಮ್ಮ ಅರ್ಜಿಯು ಅರ್ಹತೆ ಪರಿಶೀಲನೆ ಪ್ರಕ್ರಿಯೆಯ ಮೂಲಕ ಮುಂದಿನ ಹಂತಕ್ಕೆ ಹೋಗುತ್ತದೆ.
  • ಪರಿಶೀಲನೆಯ ನಂತರ ನಿಮ್ಮ ಅರ್ಜಿಯ ಅನುಮೋದನೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಎಸ್‌ಎಂಎಸ್ ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
  • ಆಯ್ಕೆಯ ನಂತರ ಕಾರ್ಯಾಗಾರಗಳು ಮತ್ತು ಇತರ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗುತ್ತದೆ.
  • ತರಬೇತಿಯ ನಂತರ ನಿಮಗೆ ಹಣಕಾಸಿನ ನೆರವು ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಾಗುತ್ತದೆ.

Post a Comment

Previous Post Next Post
CLOSE ADS
CLOSE ADS
×