ರಾಜ್ಯದಲ್ಲಿ 2008 ರಿಂದ 2023ರ ಸೆಪ್ಟೆಂಬರ್ 22 ರವರೆಗೆ ನೋಂದಣಿಯಾಗಿರುವ 4 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳು ಇವೆ. ಇವುಗಳಲ್ಲಿ 40,000 ಕೃಷಿ ಪಂಪ್ ಸೆಟ್ ಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕುಸುಮ್ ಬಿ ಯೋಜನೆಯಡಿ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜಿ. ಚಾರ್ಜ್ ತಿಳಿಸಿದ್ದಾರೆ.
4 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳ ರೈತರು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದು, ವಿದ್ಯುತ್ ಮಾರ್ಗ ಜಾಲದಿಂದ 500 ಮೀಟರ್ ಒಳಗಿದ್ದರೆ ಫೀಡರ್ ನಿಂದ ವಿದ್ಯುತ್ ಸಂಪರ್ಕ ಮತ್ತು ಮೂಲಸೌಕರ್ಯ ಕಲ್ಪಿಸಲಾಗುತ್ತದೆ. 500 ಮೀಟರ್ ಗಿಂತ ದೂರ ಇರುವ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ
ಇನ್ನೂ ಈ ವೇಳೆ ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾರ್ಚ್ 9 ರಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ 'ರೈತ ಸೌರಶಕ್ತಿ ಮೇಳ' ಆಯೋಜಿಸಿದೆ ಎಂದು ಹೇಳಿದರು.
ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್‌ಸೆಟ್ ಬಳಕೆಯೇ ಪರಿಹಾರ. ಹಾಗಾಗಿ, ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಜಿಕೆವಿಕೆ ಆವರಣದಲ್ಲಿ ಇದೇ ಮಾರ್ಚ್ 9 ರಂದು "ರೈತ ಸೌರ ಶಕ್ತಿ ಮೇಳ" ಆಯೋಜಿಸಲಾಗಿದೆ. ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು. ಅದಕ್ಕಾಗಿ ನಮ್ಮ ಸರ್ಕಾರ 'ಕುಸುಮ್ ಬಿ' ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ.
ನವೀನ ಮಾದರಿಯ ಸೌರ ಪಂಪ್‌ಸೆಟ್‌ಗಳ ಪ್ರಾತ್ಯಕ್ಷಿಕೆಯನ್ನು ನೋಡಿ, ಈ ವಿಚಾರವಾಗಿ ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮೇಳ ಅತ್ಯುತ್ತಮ ವೇದಿಕೆಯಾಗಲಿದೆ. ಸೌರ ಪಂಪ್‌ಸೆಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಅಳವಡಿಸಿಕೊಳ್ಳುವಂತಾಗಬೇಕು,"ಎಂದರು
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾರ್ಚ್ 9ರ ಸಂಜೆ 4 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜತೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 'ಕುಸುಮ್ ಸಿ' ಯೋಜನೆ ಹಾಗೂ ರಾಜ್ಯದ 13 ಜಿಲ್ಲೆಗಳಲ್ಲಿರುವ ವಿವಿಧ ವೋಲ್ಟೇಜ್ ವರ್ಗಗಳ ಹೊಸ ಸಬ್‌ಸ್ಟೇಷನ್‌ಗಳಿಗೂ ಮುಖ್ಯಮಂತ್ರಿಯವರು ಚಾಲನೆ ನೀಡಲಿದ್ದಾರೆ. ಮೇಳದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಸೇರಿದಂತೆ ಹಲವು ಸಚಿವರು ಮೇಳದಲ್ಲಿ ಭಾಗಿಯಾಗಲಿದ್ದಾರೆ,"ಎಂದು ಸಚಿವ ಜಾರ್ಜ್ ಮಾಹಿತಿ ನೀಡಿದರು.
ಹೆಚ್ಚಿನ ಪ್ರಮಾಣದಲ್ಲಿ ಸೌರ ಪಂಪ್ ಸೆಟ್ ಅಳವಡಿಕೆಯನ್ನು ರೈತರ ಸಮೂಹಗಳಲ್ಲಿ ಉತ್ತೇಜಿಸಲು ರಾಜ್ಯ ಸರ್ಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ 30 ರಷ್ಟು ಸಹಾಯಧನವನ್ನು ಶೇ 50 ಕ್ಕೆ ಹೆಚ್ಚಿಸಿದೆ. ಒಟ್ಟಾರೆ ಮೊತ್ತದಲ್ಲಿ ಶೇ 20 ರಷ್ಟನ್ನು ಮಾತ್ರ ರೈತರು ಭರಿಸಬೇಕಾಗಿರುತ್ತದೆ. ಇದಲ್ಲದೇ, ಯೋಜನೆಯಡಿ ರೈತರಿಗೆ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸಲಿದೆ,"ಎಂದರು
ಸಮಾರಂಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಉಪಸ್ಥಿತರಿದ್ದರು.
ಮೇಳದಲ್ಲಿ ಏನಿರುತ್ತೆ?
• ರಾಜ್ಯದ ನಾನಾ ಭಾಗಗಳಿಂದ ಬರುವ ರೈತರಿಗೆ ಸೌರ ಪಂಪ್‌ಸೆಟ್‌ಗಳ ಬಗ್ಗೆ ಮಾಹಿತಿ ನೀಡಲು ಮೇಳದಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ವಿವಿಧ ಸೌರ ವಿದ್ಯುತ್ ಉತ್ಪನ್ನಗಳ ಮಳಿಗೆಗಳು ಅಲ್ಲಿರಲಿವೆ.
• ಸೌರ ಪಂಪ್‌ಸೆಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ನೇರವಾಗಿ ನೋಡುವ ಅವಕಾಶ ಇರುತ್ತದೆ.
• ಸೋಲಾರ್ ಪಂಪ್‌ಸೆಟ್ ಅಳವಡಿಕೊಳ್ಳುವ ರೈತರಿಗಾಗಿಯೇ ಆನ್‌ಲೈನ್ ಪೋರ್ಟಲ್ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ, ಮೇಳದಲ್ಲಿ 'ಸೌರ ಮಿತ್ರ' ಆ್ಯಪ್ ಬಿಡುಗಡೆ ಮಾಡಲಾಗಿತ್ತದೆ. ಆ್ಯಪ್ ಮೂಲಕವೂ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
• ರೈತರಿಗಾಗಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸೌರ ಪಂಪ್ ಸೆಟ್‌ಗಳ ಉತ್ಪಾದಕರು, ಮಾರಾಟಗಾರರು, ಬ್ಯಾಂಕ್ ಅಧಿಕಾರಿಗಳು, ಕೃಷಿ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ಸಂವಾದದಲ್ಲಿ ಪಾಲ್ಗೊಂಡು ರೈತರಿಗೆ ಮಾಹಿತಿ ಒದಗಿಸಲಿದ್ದಾರೆ.