Aadhaar seeding: ಪಹಣಿಗೂ ಮಾಡಿ ಆಧಾರ್ ಲಿಂಕ್;‌ ‘ಲಿಂಕಿಂಗ್‌’ ಲೋಕದಲ್ಲಿ ರೈತ ಹೈರಾಣ

Aadhaar seeding: ಪಹಣಿಗೂ ಮಾಡಿ ಆಧಾರ್ ಲಿಂಕ್;‌ ‘ಲಿಂಕಿಂಗ್‌’ ಲೋಕದಲ್ಲಿ ರೈತ ಹೈರಾಣ

ಬೆಂಗಳೂರು: ಇದು ರೈತರಿಗೆ ಸಂಬಂಧಪಟ್ಟ ಸುದ್ದಿ. ಈಗಾಗಲೇ ಹಲವು ಯೋಜನೆಗಳಿಗೆ ಆಧಾರ್‌ ಕಾರ್ಡ್‌ ಲಿಂಕ್‌ (Aadhaar card linkage) ಮಾಡಿ ಸುಸ್ತಾಗಿರುವ ರೈತರು ಈಗ ಪಹಣಿಗೆ ಆಧಾರ್ ಸೀಡಿಂಗ್ (Aadhaar seeding) ಮಾಡಬೇಕಿದೆ. ಇದು ಕಡ್ಡಾಯವೂ ಆಗಿದೆ. ಆಧಾರ್‌ ಲಿಂಕ್ ಬಗ್ಗೆ ರೈತರಿಗೆ ಆಗುತ್ತಿರುವ ತೊಂದರೆಗಳೇನು? ಎಂಬ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ ಮೇಲುಕೊಪ್ಪದ ಅರವಿಂದ ಸಿಗದಾಳ್ (Aravind Sigadal) ಅವರು ತಮ್ಮ ಅನಿಸಿಕೆಯನ್ನು ಹೀಗೆ ಹಂಚಿಕೊಂಡಿದ್ದಾರೆ.



ಇಂದು ಆಧಾರ್‌ ಸಂಖ್ಯೆ ಎಂಬುದು ಅತಿ ಮುಖ್ಯವಾಗಿದೆ. ಇದು ಒಂದು ರೀತಿಯ “ಡಿಜಿಟಲ್ ಬೇಸಾಯ” ಎಂದು ಹೇಳಬಹುದಾಗಿದೆ. ಹೇಗೆ ಬೇಸಾಯದಲ್ಲಿ ಪ್ರತಿ ತಿಂಗಳು ಏನಾದರೂ ಒಂದು ಕೆಲಸವನ್ನು ಮಾಡುತ್ತಾ ಇರಬೇಕೋ ಹಾಗೇ ಇಲ್ಲಿ ಆಧಾರ್‌ ಸಂಖ್ಯೆಯನ್ನು ಒಂದಲ್ಲಾ ಒಂದು ಕಡೆ ಲಿಂಕ್‌ ಮಾಡುತ್ತಾ ಇರಬೇಕು.

ಆಧಾರ್‌ ಸೀಡಿಂಗ್‌ ಬಗ್ಗೆ ರೈತರಿಗೆ ಮತ್ತು ಜನಸಾಮಾನ್ಯರಿಗೆ ಆಗುತ್ತಿರುವ ಕಿರಿಕಿರಿ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಹಣಿಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿದ್ದು, ಎಲ್ಲರೂ ಆದಷ್ಟು ಬೇಗ ಮಾಡಿಸಿಕೊಳ್ಳಿ ಎಂದು ಹೇಳುತ್ತಲೇ ಈಗಿರುವ ವ್ಯವಸ್ಥೆಯಲ್ಲಿನ ನ್ಯೂನತೆಯನ್ನು ಎತ್ತಿ ತೋರಿಸಿದ್ದಾರೆ. ಚಿಕ್ಕಮಗಳೂರಿನ ಮೇಲುಕೊಪ್ಪದಿಂದ ಒಬ್ಬರ ರೈತ ಆಧಾರ್‌ ಲಿಂಕ್‌ ಮಾಡಲು ಹೋದರೆ ಎಷ್ಟು ಸಮಯ ಬೇಕು? ಎಷ್ಟು ಖರ್ಚಾಗುತ್ತದೆ ಎಂಬುದನ್ನೂ ವಿವರಿಸಿದ್ದಾರೆ.

ಅರವಿಂದ ಸಿಗದಾಳ್ ಅವರ ಸೋಷಿಯಲ್‌ ಮೀಡಿಯಾ ವಾಲ್‌ನಲ್ಲೇನಿದೆ?

ಬೇಸಾಯ ಮತ್ತು ಹಾರ್ವೆಸ್ಟಿಂಗ್ ಭಾಗವಾಗಿ ಭತ್ತ, ಅಡಿಕೆ, ಕಾಫಿ, ಮೆಣಸಿಗೆ ಪ್ರತಿ ತಿಂಗಳು ಕೆಲಸ ಇದ್ದೇ ಇರುತ್ತದೆ. ಇದನ್ನು “ಲಿಂಕ್‌” ಮಾದರಿಯಲ್ಲಿ ಹೇಳುವುದಾದರೆ, ತೋಟ – ಗದ್ದೆಗಳಿಗೆ ಗೊಬ್ಬರ ಲಿಂಕ್ ಮಾಡಬೇಕು, ಸುಣ್ಣ ಲಿಂಕ್ ಮಾಡಬೇಕು, ಕಳೆ ತೆಗೆಯುವ ಯಂತ್ರ ಲಿಂಕ್ ಮಾಡಬೇಕು, ಕಪ್ಪು ಹೆರೆಯುವ- ಅಂಚು ಕಡಿಯುವ ಕೆಲಸಗಳನ್ನು ಲಿಂಕ್ ಮಾಡಬೇಕು, ಕಾಪರ್ ಸಲ್ಫೇಟ್ ಲಿಂಕ್ ಮಾಡಬೇಕು, ಮೇಲುಗೊಬ್ಬರ ಲಿಂಕ್ ಮಾಡಬೇಕು…. ಹೀಗೆ ಮಾಡುತ್ತಲೇ ಇರಬೇಕು.

ಅದೇ ರೀತಿ ರೈತರು:

  • ಫ್ರೂಟ್ ಐಡಿಗೆ ಆಧಾರ್ ಲಿಂಕ್,
  • ಬೆಳೆ ಸರ್ವೆ ಆ್ಯಪ್‌ಗೆ ಆಧಾರ್ ಲಿಂಕ್,
  • ತೋಟದಲ್ಲಿ ಬಳಸುವ RTI ನೋಂದಾಯಿತ ಗಾಡಿಗಳಿಗೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಲಿಂಕ್,
  • ಬ್ಯಾಂಕಿಗೆ ಆಧಾರ್ ಲಿಂಕ್,
  • ಉಳಿತಾಯ ಖಾತೆಗೆ ಎನ್‌ಪಿಸಿಐ ಲಿಂಕ
  • ಬೆಳೆ ಸರ್ವೆಗೆ ಪಹಣಿ ಲಿಂಕ್,
  • ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್,
  • ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್,

ಮೇಲುಗೊಬ್ಬರ ಕೊಟ್ಟಂತೆ ಎಲ್ಲ ಕಡೆಗೂ ವರ್ಷಕ್ಕೊಮ್ಮೆ ಕೆವೈಸಿ (KYC) ಲಿಂಕ್ ಅನ್ನು ಮಾಡಿಸುತ್ತಿರಬೇಕು.

ಈಗ ಪಹಣಿಗೆ ಆಧಾರ್ ಸೀಡಿಂಗ್!!!

  • ಅದೃಷ್ಟ ಚನಾಗಿದ್ದರೆ, ಮನೆಯಲ್ಲಿ ನೆಟ್ವರ್ಕ್ ಸಿಕ್ಕಿದರೆ ಅಂಗಳದ ತುದಿ ನಿಂತು ಪಹಣಿಗೆ ಆಧಾರ್ ಸೀಡಿಂಗ್ ಮಾಡಿಕೊಳ್ಳಬಹುದು. ಇಲ್ಲವಾದರೆ, ಗ್ರಾಮ ಲೆಕ್ಕಿಗ, ಪಿಡಿಒಗಳನ್ನು ಭೇಟಿ ಮಾಡಿ, ಅಲ್ಲಿ ಸರ್ವರ್ ಸರಿ ಇದ್ದರೆ (ಹೆಚ್ಚಿನ ಸಂದರ್ಭದಲ್ಲಿ ಸರ್ವರ್ ಸರಿ ಇರೊಲ್ಲ!!?) ಅಧಿಕಾರಿಗಳು ಫೀಲ್ಡ್ ವರ್ಕಿಗೆ ಹೋಗಿಲ್ಲ ಅಂದರೆ (!!?) ಅಲ್ಲಿ ಹೋಗಿ ಮಾಡಿಸಿಕೊಳ್ಳಬಹುದು!
  • ನಮ್ಮ ಮೇಲುಕೊಪ್ಪದಿಂದ (ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ) ರೈತರು ತಮ್ಮ ಭಂಡಿಗಡಿ ಗ್ರಾಮ ಪಂಚಾಯಿತಿ ಅಥವಾ ಗ್ರಾಮ ಲೆಕ್ಕಿಗ ಕಚೇರಿಗೆ ಹೋಗಲು 32 ಕಿಲೋಮೀಟರ್ ದೂರವನ್ನು ಎರಡು ಬಸ್‌ಗಳಲ್ಲಿ ಪ್ರಯಾಣಿಸಿ ತಲುಪಬೇಕು. ಬೆಳಗ್ಗೆ ಎಂಟು ಗಂಟೆ ಬಸ್‌ನಲ್ಲೇ ಹೊರಟರೆ ಕೊಪ್ಪ-ಹರಿಹರಪುರ-ಭಂಡಿಗಡಿಯನ್ನು ಎರಡು ಬಸ್‌ನಲ್ಲಿ ತಲುಪಿ, ಫೀಲ್ಡ್ ವರ್ಕ್‌ಗೆ ಹೋದವರನ್ನು ಕಾದು, ಸರ್ವರ್ ಸರಿ ಹೋಗುವವರೆಗೆ ವಿಶ್ರಮಿಸಿ, ಅದೃಷ್ಟ-ಹಣೇಬರಹಗಳನ್ನು ಪರೀಕ್ಷಿಸಿ, ಇಡೀ ದಿನವನ್ನು ವ್ಯಯಿಸಿ, ಬಸ್‌ ಚಾರ್ಜ್ 120 ರೂಪಾಯಿಯನ್ನು ಖರ್ಚು ಮಾಡಿ, ಲಿಂಕೇಜ್ ವ್ಯವಹಾರ ಮುಗಿದರೆ ಮುಗಿಸಿಕೊಂಡು, ಅದೇ ಮಾರ್ಗದಲ್ಲಿ ಮತ್ತೆ ಎರಡು ಬಸ್ ಹಿಡಿದು ಸಂಜೆ ಆರೂವರೆಗೆ ಮನೆಗೆ ಬಂದು ಲಿಂಕ್ ಆಗಬಹುದು!
  • ಪಹಣಿಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿದ್ದು ಎಲ್ಲರೂ ಆದಷ್ಟು ಬೇಗ ಮಾಡಿಸಿಕೊಳ್ಳಿ.

ತಿಂಗಳಿಗೊಂದರಂತೆ ಲಿಂಕೇಜ್ ಮಾಡುವ ಸರ್ಕಾರದ ಈ ಲಿಂಕೇಜ್ ಬೇಸಾಯ ಪದ್ಧತಿ ನೋಡಿದ ಮೇಲೆ ನಮಗೆ ಉಳಿಯುವ ಕಟ್ಟ ಕಡೆಯ ಧೈರ್ಯದ ಪ್ರಶ್ನೆ:

  • ಈಗಾಗಲೇ ಬೆಳೆ ಸರ್ವೆಗೆ ಆಧಾರ್ ಲಿಂಕ್ ಆಗಿದೆ, ಫ್ರೂಟ್ ಐಡಿಗೆ ಪಹಣಿ ಲಿಂಕ್ ಆಗಿದೆ. ಈಗ ಪಹಣಿಗೆ ಆಧಾರ್ ಬೀಜ ಬಿತ್ತೋಕೆ (ಸೀಡಿಂಗ್) ರೈತರೇ ಈ ಬರಗಾಲದಲ್ಲಿ ಸುಸ್ತಾಗಿ ಸಾಯಬೇಕಾ?
  • ಕಂದಾಯ ಇಲಾಖೆಯ ನಡಿಗೆ ಪ್ರತಿ ಗ್ರಾಮದ ಕಡೆಗೆ ಅಂತ ಊರು ತುಂಬ ಪ್ಲಾಸ್ಟಿಕ್ ಫ್ಲೆಕ್ಸ್ ಹಾಕಿ, ಟಿವಿಯಲ್ಲಿ ಜಾಹೀರಾತು ಕೊಟ್ಟು ಬಡ್ಕಂಡಿದ್ರಲ್ಲ!!?, ಆ ಸ್ಕೀಮಿನಲ್ಲಿ ಈ ‘ಲಿಂಕನ್ನು’ ಸೇರಿಸೋಕಾಗಲ್ವಾ?
  • ಸರ್ಕಾರ, ಜನ ಪ್ರತಿನಿಧಿಗಳು, ಅಧಿಕಾರಿಗಳು ಎಲ್ಲ ಸೇರಿಕೊಂಡು ಯಾಕೆ ಹೀಗೆ ರೈತರ ಜೀವ ತಿಂತೀರಿ ಮಾರ್ರೆ!!!?” ಎಂದು ಅರವಿಂದ ಸಿಗದಾಳ್ ಅವರು ಬರೆದುಕೊಂಡಿದ್ದಾರೆ.

Post a Comment

Previous Post Next Post
CLOSE ADS
CLOSE ADS
×