2023-24ನೇ ಸಾಲಿನ ‘ಸ್ವಾವಲಂಭಿ ಸಾರಥಿ’ ಯೋಜನೆಯಡಿ ವಾಹನ ಖರೀದಿಗೆ ಸಹಾಯಧನ ಮತ್ತು ಸಾಲ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
Swawalambi Sarathi Scheme 2023 :
ಸಮಾಜದ ವಿವಿಧ ವರ್ಗ, ಸಮುದಾಯದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ‘ಸ್ವಾವಲಂಭಿ ಸಾರಥಿ’ ಯೋಜನೆಯನ್ನು ಈ ವರ್ಷದಿಂದ ಅನುಷ್ಠಾನಗೊಳಿಸಿದೆ. 2023-24ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಈ ಹೊಸ ಯೋಜನೆಯನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪರಿಚಯಿಸಿದ್ದರು. ಈ ಯೋಜನೆಯಡಿ ವಿವಿಧ ಸಮುದಾಯದ ನಿರುದ್ಯೋಗಿ ಯುವ ಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.
ಸಹಾಯಧನ (subsidy) ಎಷ್ಟು ಸಿಗಲಿದೆ?
ವಾಣಿಜ್ಯ ಬ್ಯಾಂಕುಗಳ ಸಹಯೋಗದ ಸ್ವಾವಲಂಭಿ ಸಾರಥಿ ಯೋಜನೆಯಡಿ ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನಾಲ್ಕು ಚಕ್ರ ವಾಹನ (Yellow board) ಖರೀದಿಗೆ ಸಾಲ ಪಡೆಯಬಹುದು. ಟ್ಯಾಕ್ಸಿ, ಗೂಡ್ಸ್ ವಾಹನ, ಪ್ಯಾಸೆಂಜರ್ ಆಟೋ ರಿಕ್ಷಾವನ್ನು ಖರೀದಿಸಲು ಬಯಸುವ ಫಲಾನುಭವಿಗಳಿಗೆ ಬ್ಯಾಂಕ್‌ನಿ೦ದ ಸಾಲ ಮಂಜೂರಾತಿಯಾಗಿದ್ದಲ್ಲಿ, ನಿಗಮದಿಂದ ವಾಹನದ ಮೌಲ್ಯದ ಶೇ.50ರಷ್ಟು ರಷ್ಟು ಸಬ್ಸಿಡಿ ಪಡೆಯುವ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂಪಾಯಿಗಳ ಸಹಾಯಧನವನ್ನು ವಿವಿಧ ಸಮುದಾಯಗಳ ನಿಗಮಗಳ ಮೂಲಕ ರಾಜ್ಯ ಸರಕಾರ ಮಂಜೂರು ಮಾಡುತ್ತದೆ.
ಸ್ವಾವಲಂಭಿ ಸಾರಥಿ ಯೋಜನೆಯ ಫಲಾನುಭವಿಗಳು ಉಳಿದ ಮೊತ್ತವನ್ನು ಬ್ಯಾಂಕ್ / ಹಣಕಾಸು ಸಂಸ್ಥೆಗಳ ಮೂಲಕ ಅವ ವಿಧಿಸುವ ಚಾಲ್ತಿ ಬಡ್ಡಿದರದಲ್ಲಿ ಸಾಲ ಪಡೆಯುವುದು. ಸದ್ಯಕ್ಕೆ ಸ್ವಾವಲಂಭಿ ಸಾರಥಿ ಯೋಜನೆಯಡಿ ಸಹಾಯಧನ ವಿತರಣೆಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿವೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ ಉಳಿದ ಸಮುದಾಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವ್ಯಾಪ್ತಿಗೆ ಒಳಪಡುವ ವೀರಶೈವ-ಲಿಂಗಾಯತ ಜಾತಿ ಹಾಗೂ ಉಪಜಾತಿಗೆ ಸೇರಿದ ಸಮುದಾಯದ (ಪವರ್ಗ-3ಬಿ) ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಒಕ್ಕಲಿಗ ಅಭಿವೃದ್ಧಿ ನಿಗಮ ವ್ಯಾಪ್ತಿಗೆ ಒಳಪಡುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್‌ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ (GOUDA) / ಗೌಡ (GOWDA), ಹಳ್ಳಿಕಾರ್ ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮ, ರೆಡ್ಡಿ, ಗೌಂಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ ಸಮುದಾಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮ ವ್ಯಾಪ್ತಿಗೆ ಒಳಪಡುವ ಪ್ರವರ್ಗ 3-ಬಿ ಅಡಿಯಲ್ಲಿ 2(ಎ) ರಿಂದ 2(ಎಫ್) ವರೆಗೆ ಬರುವಮರಾತ, ಮರಾಠ, ಅರೆಕ್ಷತ್ರಿ, ಅರೆ ಮರಾಠ, ರ‍್ಯಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾತ / ಕ್ಷತ್ರಿಯ ಮರಾಠ, ಕುಳವಾಡಿ ಸಮುದಾಯದವರು ಅರ್ಜಿ ಸಲ್ಲಿಸಬಹುದು.
- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ವ್ಯಾಪ್ತಿಯ ಬಡಗಿ, ಆಚಾರಿ, ಅಕ್ಕಸಾಲಿ, ಕಮ್ಮಾರ ಹಾಗೂ ಈ ಸಮುದಾಯದ 41 ಜಾತಿಯ ಅಭ್ಯರ್ಥಿಗಳು ‘ಸ್ವಾವಲಂಬಿ ಸಾರಥಿ’ ಯೋಜನೆಯಡಿ ವಾಹನ ಖರೀದಿಗೆ ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ.
ಸಬ್ಸಿಡಿ ಪಡೆಯಲು ಅರ್ಹತೆಗಳೇನು?
- ಅರ್ಜಿದಾರರು ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು. ಮೇಲ್ಕಾಣಿಸಿದ ಜಾತಿ-ಉಪಜಾತಿ, ಸಮುದಾಯಕ್ಕೆ ಸೇರಿದವರಾಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 45 ವರ್ಷಗಳ ನಡುವೆ ಇರಬೇಕು.
- ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ಕುಟುಂಬದ ಆದಾಯವು 4,50,000 ರೂಪಾಯಿಗಿಂತ ಕಡಿಮೆ ಇರಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ನೀಡಲಾದ ಚಾಲನಾ ಪರವಾನಗಿ ಹೊಂದಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ / ರಾಜ್ಯ ಸರ್ಕಾರಿ ಉದ್ಯೋಗಿಯಾಗಬಾರದು.
- ಕಳೆದ ಐದು ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ / ಅವಳ ಕುಟುಂಬದ ಸದಸ್ಯರು ಸರ್ಕಾರದ / ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ (ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
- ವಾಹನ ಚಾಲನಾ ಪರವಾನಗಿ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ವಾಹನದ ಅಂದಾಜು ದರಪಟ್ಟಿ
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
- ಸ್ವಯಂ ಘೋಷಣೆ ಪತ್ರ
ಎಲ್ಲಿ ಅರ್ಜಿ ಸಲ್ಲಿಸಬೇಕು?
ಸ್ವಾವಲಂಭಿ ಸಾರಥಿ- ವಾಹನ ಖರೀದಿ ಸಹಾಯಧನ ಯೋಜನೆ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಹ ಅರ್ಜಿದಾರರು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಜನ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ದಿನಾಂಕ
ಸ್ವಾವಲಂಭಿ ಸಾರಥಿ- ವಾಹನ ಖರೀದಿ ಸಹಾಯಧನ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 30, 2023 ಕೊನೆಯ ದಿನವಾಗಿದೆ. ಅಷ್ಟರೊಳಗೇ ಅರ್ಜಿ ಸಲ್ಲಿಸುವ ಮೂಲಕ ಈ 2023-24ನೇ ಸಾಲಿನ ಸೌಲಭ್ಯ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ
- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸಹಾಯವಾಣಿ ಸಂಖ್ಯೆ: 080-22374832 ಮತ್ತು 8050770004 ಅಥವಾ 8050770005
- ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ದಿ ನಿಗಮದ ಸಹಾಯವಾಣಿ: 080-2990 4350, 2990 4268
- ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸಮುದಾಯಗಳ ಸಹಾಯವಾಣಿ ಸಂಖ್ಯೆ: 080-22865522, 9900012351
- ಕರ್ನಾಟಕ ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮ ಸಹಾಯವಾಣಿ ಸಂಖ್ಯೆ: 8867537799
- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸಹಾಯವಾಣಿ ಸಂಖ್ಯೆ: 7899899039
- ಇನ್ನೂ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ನಿಮ್ಮ ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.