ಸೈಬರ್ ಪೀಡೆ: ದಿನಕ್ಕೊಂದೇ ರೇಷನ್ ಕಾರ್ಡ್ ತಿದ್ದುಪಡಿ | Ration Card Server Problem

 ರೇಷನ್ ಕಾರ್ಡ್ ತಿದ್ದುಪಡಿಗೆ ಜನ ಹೈರಾಣಾಗುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಿಸಲು ಜನರ ಪರದಾಟ ಮೇರೆ ಮೀರಿದೆ. ಏನಿದು ಸೈಬರ್ ಸಮಸ್ಯೆ? ಏನಾಗುತ್ತಿದೆ? ಇಲ್ಲಿದೆ ಮಾಹಿತಿ…



Ration Card Server Problem : 

ಸೈಬರ್ ಪೀಡೆ ಜನ ಜೀವ ಹಿಂಡುತ್ತಿದೆ. ಆಹಾರ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ವಿಭಾಗವಾರು ಸೀಮಿತ ಅವಧಿ ನಿಗದಿಪಡಿಸಿದ್ದು; ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ದಿನಕ್ಕೊಂದು ಕಾರ್ಡ್ ತಿದ್ದುಪಡಿ ಮಾಡುವುದೂ ಕೂಡ ದುಃಸ್ಸಾಹಸವಾಗಿದೆ. ಜನ ದಿನಗಟ್ಟಲೇ ಕೆಲಸ ಕಾರ್ಯ ಬಿಟ್ಟು ನಿಂತು ರೋಸಿಹೋಗುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಈ ಸಮಸ್ಯೆ ಇದ್ದರೂ ಸರ್ವರ್ ಸಮಸ್ಯೆಗೆ (Server Problem) ಸೂಕ್ತ ಪರಿಹಾರ ಕಂಡುಕೊಳ್ಳದೇ ಪದೇ ಪದೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸುತ್ತಿರುವ ಸರಕಾರದ ನಡೆಗೆ ಹಿಡಿಶಾಪ ಹಾಕುವಂತಾಗಿದೆ.

ದಿನಕ್ಕೊಂದು ತಿದ್ದುಪಡಿಯೂ ದುಸ್ತರ

ಅಕ್ಟೋಬರ್ 8 ರಿಂದ ಅಕ್ಟೋಬರ್ 10ರ ವರೆಗೆ 2ನೇ ಹಂತದಲ್ಲಿ ದಕ್ಷಿಣ ಕನ್ನಡ, ಚಾಮರಾಜನಗರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾಸನ, ಹಾವೇರಿ, ಗದಗ, ಉಡುಪಿ, ಮೈಸೂರು, ಮಂಡ್ಯ, ಉತ್ತರ ಕನ್ನಡ, ಕೊಡಗು, ವಿಜಯಪುರ ಸೇರಿ 15 ಜಿಲ್ಲೆಗಳ ಜನರಿಗೆ ಅವಕಾಶ ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಅವಕಾಶ ಕಲ್ಪಿಸಲಾಗಿದೆ. ಆದರೆ ದಿನಕ್ಕೊಂದು ಕಾರ್ಡ್ ತಿದ್ದುಪಡಿಯೂ ಕೂಡ ಸಾಧ್ಯವಾಗಿಲ್ಲ.

ಇದಕ್ಕೂ ಮೊದಲು ಆರಂಭಿಕ ಹಂತದಲ್ಲಿ ಅಕ್ಟೋಬರ್ 5 ರಿಂದ 7ರ ವರೆಗೆ ಬೆಂಗಳೂರು ನಗರ (Bangalore town), ಬೆಂಗಳೂರು ಗ್ರಾಮಾಂತರ (Bangaluru Rural) ಜಿಲ್ಲೆಯ ರೇಷನ್ ಕಾರ್ಡುದಾರರಿಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಿದಾಗಲೂ ಇದೇ ಸಮಸ್ಯೆ ತಲೆದೋರಿತ್ತು. ಇಡೀ ದಿನ ಕಾದರೂ ಒಂದೇ ಒಂದು ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ ಎಂದು ಗ್ರಾಮ ಒನ್ (Grama One Center) ಹಾಗೂ ಕರ್ನಾಟಕ ಒನ್ (karnataka One) ಸಿಬ್ಬಂದಿಗಳು ಅಲವತ್ತುಗೊಳುತ್ತಿದ್ದಾರೆ.

ತೀರದ ಪರಿಪಾಟಲು

ಪಡಿತರ ಚೀಟಿಗಳ ತಿದ್ದುಪಡಿಗೆ ಸರ್ಕಾರ ನೀಡಿದ ಅವಕಾಶ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತಿದೆ. ಸರ್ವರ್ ಸಮಸ್ಯೆಯಿಂದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಿಸಲು ಜನರ ಪರದಾಟ ಮೇರೆ ಮೀರಿದೆ. ಸೈಬರ್ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಲು ಲಾಗಿನ್ ಆದ ನಂತರ ಜಾತಿ ಪ್ರಮಾಣಪತ್ರ ಹಾಗೂ ಆದಾಯ ಪ್ರಮಾಣಪತ್ರ ಅಪ್‌ಲೋಡ್ ಮಾಡುತ್ತಿದ್ದಂತೆ ಸರ್ವರ್ ಎರರ್ ಬರುತ್ತಿದೆ. ಪುನಃ ಮುಂದಿನ ಪ್ರಕ್ರಿಯೆ ಆಗುತ್ತಿಲ್ಲ. ಮಕ್ಕಳ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಹಲವರು ಬಹಳ ಸಮಯದಿಂದ ಕಾಯುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಯಾವುದೂ ಸಾಧ್ಯವಾಗುತ್ತಿಲ್ಲ.

ಮಕ್ಕಳಿಗೆ ಜಾತಿ, ಆದಾಯ ಪ್ರಮಾಣ ಪತ್ರ ಮಾಡಿಸಬೇಕು, ಬ್ಯಾಂಕಿನಲ್ಲಿ ಖಾತೆ ಮಾಡಿಸಬೇಕು. ಅಲ್ಲಿ ಪಡಿತರ ಚೀಟಿ ಕೇಳುತ್ತಾರೆ. ಸರ್ಕಾರ ಈ ಕಡೆಗೆ ಗಮನಹರಿಸಿ, ಮೊದಲು ಸರ್ವರ್ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಸಾರ್ವಜನಿಕರು ಗೋಳಾಡುತ್ತಿದ್ದಾರೆ. ಪ್ರತಿನಿತ್ಯ 100ಕ್ಕೂ ಹೆಚ್ಚು ಮಂದಿ ಬಂದು ವಾಪಸ್ಸು ಹೋಗುತ್ತಿದ್ದಾರೆ. ಮೊದಲು ಅವಕಾಶ ನೀಡಿದ್ದಾಗಲೂ ಸರ್ವರ್ ಸಮಸ್ಯೆ (Ration Card Server Problem) ಕಾಡುತ್ತಿತ್ತು. ಈಗಲೂ ಅದೇ ರೀತಿಯ ಸಮಸ್ಯೆ ಕಾಡುತ್ತಿದೆ. ಜನರು ಬಂದಾಗ ಅವರ ಮೊಬೈಲ್ ಸಂಖ್ಯೆ ತೆಗೆದುಕೊಂಡು ಸರ್ವರ್ ಸರಿಹೋದ ಕೂಡಲೇ ಕರೆ ಮಾಡುವುದಾಗಿ ಹೇಳಿ ಕಳುಹಿಸುತ್ತಿದ್ದೇವೆ ಎನ್ನುತ್ತಾರೆ ಸೈಬರ್ ಕೇಂದ್ರದ ಮಾಲೀಕರು.

ಸೂಕ್ತ ಪರಿಹಾರ ಯಾವಾಗ?

ರಾಜ್ಯ ಸರಕಾರವು ಮೊದಲು ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Updates) ಖಾಸಗಿಯವರಿಗೆ ಕೊಟ್ಟಿದ್ದ ಅವಕಾಶವನ್ನು ಈ ಹಿಂದೆಯೇ ವಾಪಸ್ ಪಡೆದಿದೆ. ಗ್ರಾಮ ಒನ್, ಕರ್ನಾಟಕ ಒನ್‌ನಲ್ಲಿ ಮಾತ್ರ ಪಡಿತರ ತಿದ್ದುಪಡಿ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಎನ್‌ಐಸಿ ಮೂಲಕ ನಿರ್ವಹಣೆಯಾಗುತ್ತಿರುವ ಸರ್ವರ್’ನಲ್ಲಿ ಆಹಾರ ಇಲಾಖೆ ಪೋರ್ಟಲ್ ಕೂಡ ನಡೆಯುತ್ತಿದೆ. ಈಚೆಗೆ ಅದೂ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ. ದಿನಕ್ಕೊಂದು ಅರ್ಜಿ ತಿದ್ದುಪಡಿ ಮಾಡಲಾಗದಷ್ಟು ಇಡೀ ಸರ್ವರ್ ವ್ಯವಸ್ಥೆ ಹದಗೆಟ್ಟಿದೆ.

ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯದಂತಹ ಅನೇಕ ಯೋಜನೆಗಳಿಗೆ ರೇಷನ್ ಕಾರ್ಡ್ ಮಹತ್ವದ ದಾಖಲೆಯಾಗಿದೆ. ಹಾಗಾಗಿ ಪಡಿತರ ಕಾರ್ಡ್ ಅಪ್ಡೇಟ್ ಮತ್ತು ಪಡಿತರ ಕಾರ್ಡ್ಗಳಿಗೆ ಸದಸ್ಯರ ಹೆಸರು ಸೇರ್ಪಡೆ ಅರ್ಜಿಗಳ ಸಂಖ್ಯೆ ಹೆಚ್ಚಾಗಿವೆ. ರೇಷನ್ ಕಾರ್ಡ್ ತಿದ್ದುಪಡಿ ಸರಿಯಾಗಿ ಇಲ್ಲದೇ ಇರುವುದರಿಂದ ಅನೇಕ ಫಲಾನುಭವಿಗಳು ಸರಕಾರದ ಇತರ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಯಾವಾಗ? ಸರ್ವರ್ ಸಮಸ್ಯೆ ಸಂಪೂರ್ಣ ಪರಿಹಾರವಾಗುವ ವರೆಗೂ ರೇಷನ್ ಕಾಡ್ ತಿದ್ದುಪಡಿಗೆ ಸರಕಾರ ನಿರಂತರ ಅವಕಾಶ ಅಲ್ಪಿಸಬೇಕು ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Previous Post Next Post