‘ಜೀವಜಲ’ ಯೋಜನೆಯಡಿ 2023-24ನೇ ಸಾಲಿನಲ್ಲಿ ನೀರಾವರಿ ಸೌಲಭ್ಯ ಪಡೆಯಲು ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
Jeevajala Irrigation Scheme :
‘ಗಂಗಾ ಕಲ್ಯಾಣ ಯೋಜನೆ’ಯ ಮಾದರಿಯಲ್ಲಿ ಬೇರೆ ಬೇರೆ ಪ್ರವರ್ಗಗಳ ಸಣ್ಣ ರೈತರಿಗಾಗಿ ಹಲವು ನೀರಾವರಿ ಯೋಜನೆಗಳನ್ನು ಸರಕಾರ ಅನುಷ್ಠಾನಗೊಳಿಸಿದೆ. ಈ ಪೈಕಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದಿಂದ ಪ್ರವರ್ಗ 3ಬಿ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರ ನೀರಾವರಿ ವ್ಯವಸ್ಥೆಗಾಗಿ ‘ಜೀವಜಲ’ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯಡಿ ಕೊಳವೆಬಾವಿ ಮತ್ತು ತೆರದ ಬಾವಿ ಎರಡಕ್ಕೂ ಇಲ್ಲಿ ಸಹಾಯಧನ ಹಾಗೂ ಸಾಲಸೌಲಭ್ಯ ಲಭ್ಯವಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಮುಂತಾದ ಕಡೆಗಳಲ್ಲಿ ಸಮೀಪದಲ್ಲೇ ನದಿಗಳು ಹರಿಯುವುದರಿಂದ ತೆರೆದ ಬಾವಿಗಳಿಗೆ ಹೆಚ್ಚು ಬೇಡಿಕೆಗಳಿವೆ.
‘ಜೀವ’ ಅಂದರೆ ‘ಜೀವನ’ ಅಥವಾ ‘ಬದುಕು’. ‘ಜಲ’ ಅಂದರೆ ‘ಗಂಗೆ’ – ನೀರು ‘ರೈತ ದೇಶದ ಬೆನ್ನೆಲುಬು’ ಎಂಬ ಸಾರಾಂಶವನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಅನುಕೂಲವಾಗಲೆಂದು ಈ ಯೋಜನೆಯನ್ನು ರೂಪಿಸಲಾಗಿದೆ. ಗ್ರಾಮಾಂತರ ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ಜಮೀನು ಹೊಂದಿರುವ ಮಳೆಯಾಶ್ರಿತ ವ್ಯವಸಾಯ ಮಾಡುವ ರೈತರಿಗೆ ಕೊಳವೆ ಬಾವಿ ಅಥವಾ ತೆರೆದ ಬಾವಿಗಳನ್ನು ತೆಗೆಸುವುದರಿಂದ ವಾಣಿಜ್ಯ ಫಸಲುಗಳನ್ನು ಬೆಳೆದು ಜೀವನ ಸಾಗಿಸಲು ಅನುಕೂಲವಾಗುತ್ತದೆ. ರೈತರಿಗೆ ಕೊಳವೆ ಬಾವಿಗಳು ಅವಶ್ಯಕವಿರುವಲ್ಲಿ ಆರ್ಥಿಕ ಸೌಲಭ್ಯ ಒದಗಿಸಿದರೆ, ಆತನ ಜೀವನ ಸುಧಾರಿಸುತ್ತದೆ. ಹೀಗಾಗಿ ಈ ಕಾರ್ಯಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು ಅರ್ಹ ರೈತರಿಗೆ ಆರ್ಥಿಕ ಸಹಾಯ ನೀಡುತ್ತಿದೆ.
ಯಾರೆಲ್ಲ ಅರ್ಹರು?
ಅರ್ಜಿದಾರರು ವೀರಶೈವ ಲಿಂಗಾಯತ (ಪ್ರವರ್ಗ-3ಬಿ) ಸಮುದಾಯಕ್ಕೆ ಸೇರಿರಬೇಕು ಹಾಗೂ ಸಂಬAಧಪಟ್ಟ ಪ್ರಾಧಿಕಾರದಿಂದ ಜಾತಿ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.
ಹಾಲಿ ಜಮೀನುಗಳಿಗೆ ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಮಳೆ ಆಧಾರಿತವಾಗಿ ಖುಷ್ಕಿಯಾಗಿರಬೇಕು.
ವೀರಶೈವ ಲಿಂಗಾಯತ ಸಮುದಾಯದ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ ಒಳಪಡುವ ನಿಗಮಗಳಲ್ಲಿ ಬೇರೆ ಯಾವುದಾದರು ಯೋಜನೆಗಳಲ್ಲಿ ಸಾಲ ಅಥವಾ ಇತರೆ ಆರ್ಥಿಕ ಸೌಲಭ್ಯ ಪಡೆದಿರಬಾರದು.
ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000 ರೂಪಾಯಿ ಹಾಗೂ ಪಟ್ಟಣ ಪ್ರದೇಶದವರಿಗೆ 1,20,000 ರೂಪಾಯಿ ಮಿತಿಯಲ್ಲಿರಬೇಕು.
Farmer’s FRUIT ID ಮತ್ತು ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು. ಜತೆಗೆ ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
ಎಷ್ಟು ಸಿಗಲಿದೆ ಸಹಾಯಧನ?
ಜೀವಜಲ ಯೋಜನೆಯಡಿ ಸೌಲಭ್ಯ ಪಡೆಯಲು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಇತರೇ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆಬಾವಿ ಯೋಜನೆಗೆ ಘಟಕವೆಚ್ಚ 4.75 ಲಕ್ಷ ರೂಪಾಯಿಗಳಲ್ಲಿ 4.25 ಲಕ್ಷ ರೂಪಾಯಿ ಸಹಾಯಧನ (ಸಬ್ಸಿಡಿ) ಸಿಗುತ್ತದೆ. ಈ ಮೊತ್ತದಲ್ಲಿ ಬೋರ್‌ವೆಲ್ ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ 50,000 ರೂಪಾಯಿ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.
ಉಳಿದ ಜಿಲ್ಲೆಗಳಿಗೆ ಘಟಕವೆಚ್ಚ 3.75 ಲಕ್ಷ ರೂಪಾಯಿಗಳಲ್ಲಿ 3.25 ಲಕ್ಷ ರೂಪಾಯಿ ಸಹಾಯಧನ (ಸಬ್ಸಿಡಿ) ಸಿಗುತ್ತದೆ. ಈ ಮೊತ್ತದಲ್ಲಿ ನೀರಾವರಿ ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ 50,000 ರೂಪಾಯಿ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು
ಅರ್ಜಿದಾರರು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಈ ಕೆಳಕಂಡ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಹಿಂದುಳಿದ ವರ್ಗಗಳ ಪುವರ್ಗ-3ಬಿರಲ್ಲಿ ಬರುವ ಕರ್ನಾಟಕ ವೀರಶೈವ ಲಿಂಗಾಯತ ಮತ್ತು ಇದರ ಉಪಜಾತಿಗಳಿಗೆ ಸೇರಿರುವುದಕ್ಕೆ ಸಂಬ೦ಧಿಸಿದ ತಾಲ್ಲೂಕು ತಹಶೀಲ್ದಾರ್‌ರಿಂದ ನಿಗದಿತ ನಮೂನೆಯಲ್ಲಿ ಪಡೆದ ಜಾತಿ/ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
ಅರ್ಜಿದಾರರ ವಾಸದ ಪುರಾವೆಗಾಗಿ ಸಕ್ಷಮ ಪ್ರಾಧಿಕಾರಿಗಳು ನೀಡಿದ ಪಡಿತರ ಚೀಟಿ / ಚುನಾವಣಾ ಗುರುತಿನ ಚೀಟಿ / ಆಧಾರ ಕಾರ್ಡ್ ದೃಢೀಕೃತ ಪ್ರತಿ ಒದಗಿಸಬೇಕು.
ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ 3 ಫೋಟೋಗಳು, ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರುವ ಬಗ್ಗೆ ಕಂದಾಯ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
ಅರ್ಜಿದಾರರು ಹೊಂದಿರುವ ಜಮೀನಿನ ಕಂದಾಯ ದಾಖಲೆಗಳಾದ ಆರ್.ಟಿ.ಸಿ/ ಪಹಣಿ, ಖಾತಾ ಉದ್ದರಣೆ, ಪಟ್ಟಾ ಪುಸ್ತಕ, ಮುಟೇಶನ್, ಇ.ಸಿ. ವಂಶವೃಕ್ಷ, ಜಮೀನಿನ ಚೆಕ್ ಬಂದಿ.
ಅರ್ಜಿದಾರರು ನೀರಾವರಿ ಸೌಲಭ್ಯ ಹೊಂದಿಲ್ಲದೇ ಇರುವುದಕ್ಕೆ ಸ್ವಯಂ ಘೋಷಣೆ ಪತ್ರ.
ಘಟಕ ವೆಚ್ಚ ರೂ.1,50,000/-ಕ್ಕಿಂತ ಹೆಚ್ಚಾದಲ್ಲಿ ಸಾಲ ಪಡೆಯುವ ಬಗ್ಗೆ ಫಲಾನುಭವಿಯಿಂದ ಒಪ್ಪಿಗೆ ಪತ್ರ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ಜಾಲತಾಣ https://kvldcl.karnataka.gov.in ಗೆ ಭೇಟಿ ನೀಡಬಹುದಾಗಿದೆ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ
‘ಜೀವಜಲ’ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು ನೀರಾವರಿ ಸೌಲಭ್ಯ ಪಡೆಯಲು ಸೂಕ್ತ ದಾಖಲೆಗಳೊಂದಿಗೆ ಇದೇ ಅಕ್ಟೋಬರ್ 30, 2023ರ ಒಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ನಿಯಮಿತ, 5ನೇ ಮಹಡಿ, ವಿಶ್ವೇಶ್ವರಯ್ಯ ಚಿಕ್ಕಗೋಪುರ, ಡಾ. ಬಿ. ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001, ದೂರವಾಣಿ ಸಂಖ್ಯೆ: 080-22865522, 9900012351
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ…
2023-24ನೇ ಸಾಲಿಗೆ ಅನುಷ್ಠಾನಗೊಳ್ಳುತ್ತಿರುವ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಯೋಜನೆಗಳ ಕುರಿತ ಪ್ರಕಟಣೆ ಓದಲು ಇಲ್ಲಿ ಕ್ಲಿಕ್ ಮಾಡಿ…