ಇನ್ನು ಮುಂದೆ UPI Lite ನಲ್ಲಿ ಪಿನ್‌ ಹಾಕದೇ 500 ರೂ. ಸೆಂಡ್‌ ಮಾಡಿ – ರೆಪೋ ದರದಲ್ಲಿ ಇಲ್ಲ ಬದಲಾವಣೆ

ಇನ್ನು ಮುಂದೆ UPI Lite ನಲ್ಲಿ ಪಿನ್‌ ಹಾಕದೇ 500 ರೂ. ಸೆಂಡ್‌ ಮಾಡಿ – ರೆಪೋ ದರದಲ್ಲಿ ಇಲ್ಲ ಬದಲಾವಣೆ

 ಯುಪಿಐ ಲೈಟ್ (UPI Lite) ವಹಿವಾಟು ಮಿತಿಯನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) 200 ರೂ.ನಿಂದ 500 ರೂ.ಗೆ ಏರಿಸಿದೆ. ಇದರಿಂದಾಗಿ ಇನ್ನು ಮುಂದೆ ಗ್ರಾಹಕರು ಯುಪಿಐ ಲೈಟ್‌ ಅಪ್ಲಿಕೇಶನ್‌ನಲ್ಲಿ ಪಿನ್‌ ಹಾಕದೇ  500 ರೂ. ಕಳುಹಿಸಬಹುದಾಗಿದೆ.

ಹಣಕಾಸು ನೀತಿ ಸಮಿತಿಯು (MPC) ಸಭೆ ನಡೆಸಿದ ಬಳಿಕ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (RBI Governor Shaktikanta Das) ಸುದ್ದಿಗೋಷ್ಠಿ ನಡೆಸಿದರು. ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಮತ್ತು ಯುಪಿಐ ಲೈಟ್ ಸೇರಿದಂತೆ ಆಫ್‌ಲೈನ್ ಮೋಡ್‌ನಲ್ಲಿ ಸಣ್ಣ ಮೌಲ್ಯದ ಡಿಜಿಟಲ್ ಪಾವತಿಗಳಿಗಾಗಿ ಪ್ರತಿ ವಹಿವಾಟಿಗೆ 200 ರೂ. ಮತ್ತು ದಿನದ ವಹಿವಾಟಿಗೆ 2,000 ರೂ. ಮಿತಿ ಹೇರಲಾಗಿತ್ತು. ಜನರಿಂದ ಮನವಿ ಬಂದಿರುವ ಹಿನ್ನಲೆ ಪ್ರತಿ ವಹಿವಾಟಿನ ಮೌಲ್ಯವನ್ನು 200 ರೂ. ನಿಂದ 500 ರೂ.ಗೆ ಏರಿಸಲಾಗಿದೆ ಎಂದರು

ಬಳಕೆದಾರರಿಗೆ ಡಿಜಿಟಲ್ ಪಾವತಿಯ ಅನುಭವವನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಚಿಂತನೆ ನಡೆದಿದೆ. ಯುಪಿಐನಲ್ಲಿ ಸಂಭಾಷಣಾ ಪಾವತಿಗಳನ್ನು ಸಕ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಆರಂಭದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಇರಲಿದ್ದು ಬಳಿಕ ಭಾರತದ ಎಲ್ಲ ಭಾಷೆಗಳಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಇದು ಬಳಕೆದಾರರಿಗೆ ಪಾವತಿಗಳನ್ನು ಮಾಡಲು ಮತ್ತು ಆಫ್‌ಲೈನ್ ಅನ್ನು ಪರಿಚಯಿಸಲು AI- ಚಾಲಿತ ವ್ಯವಸ್ಥೆಗಳೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು

ಯುಪಿಐ ಲೈಟ್‌ ಮೂಲಕ NFC ತಂತ್ರಜ್ಞಾನವನ್ನು ಬಳಸಿಕೊಂಡು ಆಫ್‌ಲೈನ್‌ ಪಾವತಿ ಪರಿಚಯಿಸಲು ಆರ್‌ಬಿಐ ಸಿದ್ಧವಾಗಿದೆ. ಈ ವೈಶಿಷ್ಟ್ಯವು ಸೀಮಿತ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಗಳನ್ನು ಮಾಡಬಹುದು ಎಂದರು

ರೆಪೋ ದರವನ್ನು (Repo Rate) 6.50% ರಲ್ಲಿ ಕಾಯ್ದುಕೊಳ್ಳುವ ತೀರ್ಮಾನವನ್ನು ಆರ್‌ಬಿಐ ಕೈಗೊಂಡಿದೆ. ಮೂರು ದಿನ ಚರ್ಚೆ ನಡೆಸಿದ ಎಂಪಿಸಿ ಸದಸ್ಯರು ರೆಪೋ ದರದಲ್ಲಿ ಬದಲಾವಣೆ ಮಾಡದಿರಲು ಸರ್ವಾನುಮತದಿಂದ ಒಪ್ಪಿದ್ದಾರೆ. 2024ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ 6.5% ರಷ್ಟು ಇರಲಿದೆ ಎಂದು ಎಂಪಿಸಿ ಅಂದಾಜಿಸಿರುವುದಾಗಿಯೂ ಅವರು ತಿಳಿಸಿದ್ದಾರೆ

ಯುಪಿಐ ಪಾವತಿ ವ್ಯವಸ್ಥೆಯ ಸರಳೀಕೃತ ಆವೃತ್ತಿಯಾದ ಯುಪಿಐ ಲೈಟ್‌ ಅನ್ನು ಸೆಪ್ಟೆಂಬರ್ 2022 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ಆರ್‌ಬಿಐ ಪರಿಚಯಿಸಿತ್ತು.

ರೆಪೋ ರೇಟ್ ಎಂದರೇನು?
ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ.

UPI-Lite ಮತ್ತು UPI ನಡುವಿನ ವ್ಯತ್ಯಾಸವೇನು?
ಯುಪಿಐ ಮೂಲಕ ಹೆಚ್ಚಿನ ಮೌಲ್ಯದ ಹಾಗೂ ಕಡಿಮೆ ಮೌಲ್ಯದ ವಹಿವಾಟುಗಳನ್ನು ನಿರ್ವಹಿಸಲು ಬಳಸಬಹುದು. UPI-ಲೈಟ್ ನಲ್ಲಿ ನಿರ್ದಿಷ್ಟವಾಗಿ ಕಡಿಮೆ ಮೌಲ್ಯದ ವಹಿವಾಟುಗಳನ್ನು ಮಾತ್ರ ಮಾಡಬಹುದು.



Post a Comment

Previous Post Next Post
CLOSE ADS
CLOSE ADS
×