ಕರ್ನಾಟಕ ಸರ್ಕಾರಿ ಬಹುಬೇಡಿಕೆಯ ಹುದ್ದೆಗಳ ಪೈಕಿ ದ್ವಿತೀಯ ದರ್ಜೆ ಸಹಾಯಕ / ಕಿರಿಯ ಸಹಾಯಕ ಹುದ್ದೆಯೂ ಸಹ ಒಂದು. ಈ ಹುದ್ದೆಯನ್ನು ಸರ್ಕಾರಿ ಸಚಿವಾಲಯ, ಇಲಾಖೆಗಳು ಸೇರಿದಂತೆ ಗ್ರಾಮಪಂಚಾಯ್ತಿ ಆಡಳಿತ ಕಚೇರಿವರೆಗೂ ನೇಮಕ ಮಾಡಲಾಗುತ್ತದೆ.
ರಾಜ್ಯ ಸರ್ಕಾರದ ಇಲಾಖೆಗಳು, ನಿಗಮಗಳು, ಸಂಸ್ಥೆಗಳು, ಮಂಡಳಿಗಳಲ್ಲಿ ಮಾತ್ರವಲ್ಲದೇ ಗ್ರಾಮಪಂಚಾಯ್ತಿ ಕಚೇರಿ ವರೆಗೂ ಸಹ ದ್ವಿತೀಯ ದರ್ಜೆ ಸಹಾಯಕ / ಕಿರಿಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ರಾಜ್ಯದ ಯುವಜನತೆಯ ಬಹುಬೇಡಿಕೆ ಹುದ್ದೆ ಇದು. ಹಾಗೆಯೇ ಅತಿಹೆಚ್ಚು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುವ ಹುದ್ದೆಗಳು ಇವು. ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ / 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ, ವೇತನ ಎಷ್ಟು ಎಂದು ಈ ಕೆಳಗಿನಂತೆ ಮಾಹಿತಿ ನೀಡಲಾಗಿದೆ. ಈ ಹುದ್ದೆಯ ಆಸಕ್ತರು ಸರ್ಕಾರ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಈ ಮಾಹಿತಿ ಪೂರ್ವಸಿದ್ಧತೆಗೆ ಅನುಕೂಲವಾಗಿದೆ.
ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕೆಲವೊಮ್ಮೆ ಹುದ್ದೆ ಖಾಲಿ ಇರುವ ನಿಗಮ / ಇಲಾಖೆಗಳೇ ಅಧಿಸೂಚಿಸಿ ಆಯ್ಕೆ ಪ್ರಕ್ರಿಯೆ ನಡೆಸುತ್ತವೆ. ,
ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
3 ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಅವುಗಳೆಂದರೆ.
ಪತ್ರಿಕೆ-1: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ - 150 ಅಂಕಗಳಿಗೆ
ಪತ್ರಿಕೆ-2 : ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲಿಷ್- 100 ಅಂಕಗಳಿಗೆ ಪ್ರಶ್ನೆಗಳನ್ನು ಹೊಂದಿರುತ್ತದೆ.
ಪತ್ರಿಕೆ-3 : ಸಾಮಾನ್ಯ ಜ್ಞಾನ ಪತ್ರಿಕೆ- 100 ಅಂಕಗಳಿಗೆ ಪ್ರಶ್ನೆಗಳನ್ನು ಹೊಂದಿರುತ್ತದೆ.
ಪ್ರತಿ ಪತ್ರಿಕೆಯ ಪರೀಕ್ಷೆ ಅವಧಿ 1 ಗಂಟೆ 30 ನಿಮಿಷ ಇರುತ್ತದೆ.
ಕನ್ನಡ ಭಾಷಾ ಪರೀಕ್ಷೆ ಪಾಸ್ ಮಾಡುವುದು ಕಡ್ಡಾಯ
ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪತ್ರಿಕೆ-1 - ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಎಲ್ಲರಿಗೂ ಕಡ್ಡಾಯವಲ್ಲ. 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಓದಿರದವರು ಹಾಗೂ ಕೆಪಿಎಸ್‌ಸಿ ನಡೆಸಿದ ಈ ಹಿಂದಿನ ಯಾವುದೇ ವರ್ಷದಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಪಾಸ್ ಮಾಡಿರುವುದಿಲ್ಲವೋ ಅಂತಹವರು ಮಾತ್ರ ಈ ಪರೀಕ್ಷೆ ಬರೆದು ಪಾಸ್ ಮಾಡಬೇಕಿರುತ್ತದೆ. ಈ ಪರೀಕ್ಷೆ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಲಾಗುವುದಿಲ್ಲ. ಉಳಿದೆರಡು ಪತ್ರಿಕೆಗಳು ಎಲ್ಲರಿಗೂ ಕಡ್ಡಾಯವಾಗಿರುತ್ತವೆ.
ಆಯ್ಕೆಪಟ್ಟಿ ಸಿದ್ಧತೆ ವಿಧಾನ
ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2, ಪತ್ರಿಕೆ-3 ಅಂಕಗಳನ್ನು ಒಟ್ಟುಗೂಡಿಸಿ ಮೆರಿಟ್ ಪಟ್ಟಿಯನ್ನು ಹುದ್ದೆಗಳಿಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುತ್ತದೆ. ಮೊದಲಿಗೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿ, ಈ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ, ನಂತರ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಕೆಲವೊಮ್ಮೆ ಇಲಾಖೆಗಳ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಸಹ ಸಿದ್ಧತೆ ಮಾಡಿ ಪ್ರಕಟಿಸಲಾಗುತ್ತದೆ.
ಎಸ್‌ಡಿಎ ಹುದ್ದೆಗೆ ವೇತನ ಎಷ್ಟು? ಪಿಂಚಣಿ ಸೌಲಭ್ಯ ಹೇಗೆ ಅನ್ವಯವಾಗಲಿದೆ?
ದ್ವಿತೀಯ ದರ್ಜೆ ಸಹಾಯಕರ ವೇತನ ಶ್ರೇಣಿ ರೂ.21400-42000.
ಸರ್ಕಾರದ ಆದೇಶ ಸಂಖ್ಯೆ ಎಫ್ ಡಿ (ಎಸ್ ಪಿ ಎಲ್) 04 ಪಿಇಟಿ 2005, ದಿನಾಂಕ 31-03-2006 ಮತ್ತು ಅದರ ತಿದ್ದುಪಡಿಗಳ ಅನ್ವಯ ಪಿಂಚಣಿ ಸೌಲಭ್ಯ ದೊರೆಯಲಿದೆ.