ಕೊಪ್ಪಳದ (Koppala) ಗಂಗಾವತಿ (Gangavati) ತಾಲೂಕಿನ ಚಿಕ್ಕರಾಂಪೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಜನಾದ್ರಿ ಪರ್ವತವು ರಾಮಾಯಣದಲ್ಲಿ ಬರುವ ಹನುಮಂತ ಜನಿಸಿದ ಸ್ಥಳ ಎಂದು ಕರೆಯಲಾಗುತ್ತಿದೆ. ಹಂಪಿಯ ಸಮೀಪದಲ್ಲಿ ಇರುವ ಅಂಜನಾದ್ರಿ ಪರ್ವತಕ್ಕೆ ಸಾಕಷ್ಟು ಇತಿಹಾಸ ಇರುವುದರಿಂದ ಸ್ಥಳೀಯ ಭಕ್ತರು ಸೇರಿದಂತೆ ದೇಶ, ವಿದೇಶಗಳಿಂದ ಕೂಡ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ವಾರದ ಕೊನೆಯ ದಿನಗಳಾದ ಶನಿವಾರ, ಭಾನುವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಪರ್ವತಕ್ಕೆ ಆಗಮಿಸಿ, ಆಂಜನೇಯ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಾರೆ. ಅಯೋಧ್ಯೆಯಷ್ಟೇ ಪವಿತ್ರತೆಯನ್ನು ಹೊಂದಿರುವ ಅಂಜನಾದ್ರಿ ಪರ್ವತವನ್ನು ಕಳೆದ 6 ವರ್ಷಗಳಿಂದ ತಾಲೂಕು ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರು ನಿರ್ವಹಣೆ ಮಾಡುತ್ತಿದ್ದು, ಭಕ್ತರಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ತಾಲೂಕು ಆಡಳಿತ ವಶಕ್ಕೆ:
ಸುಮಾರು ವರ್ಷಗಳಿಂದ ಖಾಸಗಿ ಒಡೆತನದಲ್ಲಿ ನಡೆಸಲಾಗುತ್ತಿದ್ದ ಅಂಜನಾದ್ರಿ ಬೆಟ್ಟದ ದೇವಸ್ಥಾನವನ್ನು 2018 ಜುಲೈ 23 ರಂದು ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಜಿಲ್ಲಾಡಳಿತವೇ ದೇವಸ್ಥಾನ ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ. ಖಾಸಗಿ ಒಡೆತನದ ಟ್ರಸ್ಟ್ ವತಿಯಿಂದ ವಶಕ್ಕೆ ಪಡೆದುಕೊಂಡಿರುವ ವೇಳೆಯಲ್ಲಿ ದೇವಸ್ಥಾನ ಹುಂಡಿಯಲ್ಲಿ ಕೇವಲ 247 ರೂ. ಕಾಣಿಕೆ ಮಾತ್ರ ಇತ್ತು. ಸದ್ಯ ದೇವಸ್ಥಾನದ ಹುಂಡಿ ಹಣ, ಪಾರ್ಕಿಂಗ್ ಹಣ, ಲಾಡು, ತೀರ್ಥ ಪ್ರಸಾದಗಳ ಮಾರಾಟ, ವಿವಿಧ ಸೇವೆಗಳಿಂದ ಬರುವ ಹಣ ಸೇರಿ ಒಟ್ಟು 6 ವರ್ಷಗಳ ಅವಧಿಯಲ್ಲಿ 6 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.
ತಾಲೂಕು ಆಡಳಿತ ದೇವಸ್ಥಾನ ನಿರ್ವಹಣೆಯ ಹೊಣೆ ತೆಗೆದುಕೊಂಡ 2018ರ ಜುಲೈ 23 ರಿಂದ ಮಾರ್ಚ್ 31 ರವರೆಗೆ 73,09,505 ರೂ. ಸಂಗ್ರಹವಾಗಿವೆ. 2019ರ ಏಪ್ರಿಲ್ 1 ರಿಂದ 2020ರ ಮಾರ್ಚ್ 31 ರವರೆಗೆ 1,12,62,404 ರೂ. ಸಂಗ್ರಹವಾಗಿದೆ. 2020ರ ಏಪ್ರಿಲ್ 1 ರಿಂದ 2021ರ ಮಾರ್ಚ್ 31 ರವರೆಗೆ 78,95,030 ರೂ. ಸಂಗ್ರಹವಾಗಿದೆ. 2021ರ ಏಪ್ರಿಲ್ 1 ರಿಂದ 2022ರ ಮಾರ್ಚ್ 31 ರವರೆಗೆ 1,29,42,104 ರೂ. ಸಂಗ್ರಹವಾಗಿದೆ. 2022 ಮಾರ್ಚ್ 1 ರಿಂದ 2023ರ ಮಾರ್ಚ್ 31 ರವರೆಗೆ 2,84,32,028 ರೂ. ಸಂಗ್ರಹವಾಗಿದೆ.
ಒಟ್ಟು 6 ವರ್ಷಗಳ ಅವಧಿಯಲ್ಲಿ 6,78,40,941 ರೂ. ಸಂಗ್ರಹವಾಗಿದೆ. ಇದರಲ್ಲಿ ದೇವಸ್ಥಾನ ನಿರ್ವಹಣೆ, ಸಿಬ್ಬಂದಿಯ ವೇತನ, ನಾನಾ ಖರ್ಚು ವೆಚ್ಚಗಳು ಸೇರಿದಂತೆ ಒಟ್ಟು 3,83,49,281 ರೂ. ಖರ್ಚು ಮಾಡಲಾಗಿದೆ. ಇನ್ನುಳಿದ 2,94,91,659 ರೂ. ಬ್ಯಾಂಕ್‌ಗಳಲ್ಲಿ ಉಳಿತಾಯ ಮಾಡಲಾಗಿದೆ.