ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ತಿಂಗಳಿಗೆ 2 ಸಾವಿರ ಪಡೆಯಲು ಮಹಿಳೆಯರ ಬಳಿ ಈ ದಾಖಲೆಗಳು ಇರಬೇಕು

ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ತಿಂಗಳಿಗೆ 2 ಸಾವಿರ ಪಡೆಯಲು ಮಹಿಳೆಯರ ಬಳಿ ಈ ದಾಖಲೆಗಳು ಇರಬೇಕು

 ಇಂದಿನಿಂದ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಾರಂಭವಾಗುತ್ತದೆ



ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗಾಗಿ ಇಂದಿನಿಂದ ನೋಂದಣಿ ಆರಂಭವಾಗಲಿದೆ. ಯಾರು ಅರ್ಹರು, ಬೇಕಾಗಿರುವ ದಾಖಲೆಗಳು, ನೋಂದಣಿ ಮಾಡಿಸುವ ವಿಧಾನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮಹಿಳೆಯರ ಸ್ವಾವಲಂಬನೆಗಾಗಿ ದಿಟ್ಟ ಹೆಜ್ಜೆ ಇಟ್ಟಿರುವ ಕಾಂಗ್ರೆಸ್ ಸರ್ಕಾರ (Karnataka Congress Govt) ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳ ಪೈಕಿ ಮೂರು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ಇದೀಗ 4ನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi Scheme) ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲು ನೋಂದಣಿಯನ್ನು ಇಂದಿನಿಂದ ಆರಂಭಿಸಲಾಗುತ್ತಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿಂದು (ಜುಲೈ 19, ಬುಧವಾರ) ಸಂಜೆ 5.30ಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಧಿಕೃತವಾಗಿ ಗೃಹಲಕ್ಷ್ಮಿ ನೋಂದಣಿಗೆ ಚಾಲನೆ ನೀಡಿಲಿದ್ದಾರೆ.


ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಗಣ್ಯರು ಉಪಸ್ಥಿತಿ ಇರಲಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು?

ಕರ್ನಾಟಕದಲ್ಲಿ ವಾಸವಾಗಿರುವಂತಹ ಪಡಿತರ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿ ಗೃಹಲಕ್ಷ್ಮಿ ಯೋಜನೆಗೆ ಅರ್ಹವಾಗಿದ್ದು, ಇವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮೆಯಾಗುತ್ತದೆ


ಎಲ್ಲೆಲ್ಲಿ ನೋಂದಣಿಗೆ ಅವಕಾಶ?

ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದಲ್ಲಿ ಉಚಿತ ಇಂದಿನಿಂದ ನೋಂದಣಿ ಮಾಡಿಕೊಳ್ಳಬಹುದು. ಅಧಿಕೃತ ಪ್ರಜಾ ಪ್ರತಿನಿಧಿ ಸ್ವಯಂ ಸೇವಕರು ಕೂಡ ನಿಮ್ಮ ಮನೆ ಬಾಗಿಲಲ್ಲೇ ಬಂದು ಉಚಿತವಾಗಿ ನೋಂದಣಿ ಮಾಡುತ್ತಾರೆ.


ಗೃಹಲಕ್ಷ್ಮಿ ಯೋಜನೆಗೆ ಬೇಕಾಗಿರುವ ದಾಖಲೆಗಳು

ಕಾಂಗ್ರೆಸ್‌ ಸರ್ಕಾರದ 4ನೇ ಗ್ಯಾರಂಟಿಯಾಗಿರುವ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ನಿಮ್ಮ ಬ್ಯಾಂಕ್ ಪಾಸ್‌ಬುಕ್ ಪ್ರತಿ, ಪಡಿತರ ಕಾರ್ಡ್ ಸಂಖ್ಯೆ, ಯಜಮಾನಿ ಮತ್ತು ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ.


ತೆರಿಗಿ ಪಾವತಿಸುವವರ ಕುಟುಂಬಕ್ಕೂ ಸಿಗುತ್ತಾ ಯೋಜನೆ?

ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗುವವರು ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರಾಗಿರತಕ್ಕದ್ದಲ್ಲ ಎಂಬ ಷರತ್ತನ್ನು ವಿಧಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.


ಇತ್ತೀಚೆಗಷ್ಟೇ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಸಚಿವರು, ಗೃಹಲಕ್ಷ್ಮಿ ಯೋಜನೆಗೆ ಜುಲೈ 19 ರಿಂದ ನೋಂದಣಿ ಆರಂಭವಾಗಲಿದೆ. ಅಂದು ಅಧಿಕೃತ ಕಾರ್ಯಕ್ರಮ ನಡೆಸಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎನ್ನುವ ಮಾಹಿತಿ ನೀಡಿದ್ದರು.

2000 ರೂಪಾಯಿ ಬ್ಯಾಂಕ್ ಖಾತೆಗೆ ಯಾವಾಗ ಜಮೆಯಾಗುತ್ತೆ?

ಒಟ್ಟು 1.20 ಕೋಟಿ ಗೃಹಿಣಿಯರು ಈ ಯೋಜನೆಯಡಿ ಫಲಾನುಭವಿಗಳಾಗಲು ಅರ್ಹರಿದ್ದಾರೆ. ಆದರೆ ನೋಂದಣಿ ನಂತರ ಇದರ ಸ್ಪಷ್ಟ ಚಿತ್ರಣ ಸಿಗಲಿದೆ. ಆಗಸ್ಟ್‌ ತಿಂಗಳಿನಿಂದಲೇ ಫಲಾನುಭವಿಗಳ ಖಾತೆಗೆ ಹಣ ಜಮಾವಣೆಯಾಗಲಿದೆ ಎಂದು ಹೆಬ್ಬಾಳ್ಕರ್ ವಿವರಿಸಿದ್ದಾರೆ.


ಎರಡು ರೀತಿಯಲ್ಲಿ ನೋಂದಣಿ ಮಾಡಿಸಬಹುದು

ಮೊದಲನೆಯದ್ದು ರೇಷನ್‌ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ, ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರವನ್ನು ತಿಳಿಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಗ್ರಾಮದ ಸಮೀಪವಿರುವ ಗ್ರಾಮ ಒನ್‌ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶವಿದೆ. ನಗರ ಪ್ರದೇಶದಲ್ಲಿ ಸಮೀಪದ ಕರ್ನಾಟಕ ಒನ್‌ ಅಥವಾ ಬೆಂಗಳೂರು ಒನ್‌ ಕೇಂದ್ರದಲ್ಲಿ ಮಾಡಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

Post a Comment

Previous Post Next Post
CLOSE ADS
CLOSE ADS
×