ಕರ್ನಾಟಕದ ಕಾಂಗ್ರೆಸ್ ನೀಡಿರುವ 'ಗೃಹಲಕ್ಷ್ಮಿ' ಗ್ಯಾರಂಟಿ ಯೋಜನೆಯ ನೋಂದಣಿ ನಡೆಯುತ್ತಿದೆ. ಯೋಜನೆಯ ಫಲಾನುಭವಿಗಳ ನೋಂದಣಿ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯುವ ಮಹತ್ವದ ಅಪ್‌ಡೇಟ್ ಒಂದನ್ನು ನೀಡಿದೆ.
ಕಳೆದ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಚಾಲನೆ ಕೊಟ್ಟಿದ್ದಾರೆ. ಇದುವರೆಗೂ ಸುಮಾರು 22.90 ಲಕ್ಷ ಫಲಾನುಭವಿಗಳ ನೋಂದಣಿಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೂಲಕ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಯೋಜನೆ ಅನ್ವಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ಗಳನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, 'ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಯಾರೊಬ್ಬರೂ ಹಣ ನೀಡುವ ಅಗತ್ಯವಿಲ್ಲ, ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರಲಿದೆ' ಎಂದು ಹೇಳಿದ್ದಾರೆ.
ಹೊಸ ಅಪ್‌ಡೇಟ್ ಏನು?; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಕುರಿತು ಹೊಸ ಅಪ್‌ಡೇಟ್ ನೀಡಿದೆ. ಗೃಹಲಕ್ಷ್ಮಿ ನೋಂದಣಿಗೆ ಪಲಾನುಭವಿಗಳು ಇನ್ನೂ ಮುಂದೆ ಪಲಾನುಭವಿಗಳಿಗೆ SMS ಕಳುಹಿಸುವುದಿಲ್ಲ.
ಫಲಾನುಭವಿಗಳು ತಮಗೆ ಹತ್ತಿರದ ಗ್ರಾಮ ಒನ್, ಗ್ರಾಮ ಪಂಚಾಯತಿ ಕಚೇರಿಯ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ನಗರದ ವಾರ್ಡ್ ಕಚೇರಿಗಳಲ್ಲಿ ನೇರವಾಗಿ ಹೋಗಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬಹುದು.
ಸರ್ವರ್ ಸಮಸ್ಯೆಯಿಂದಾಗಿ ಯೋಜನೆ ಫಲಾನುಭವಿಗಳಿಗೆ ಸರಿಯಾಗಿ ಎಸ್‍ಎಂಎಸ್ ಬರುತ್ತಿರಲಿಲ್ಲ. ಆದ್ದರಿಂದ ನೋಂದಣಿ ವಿಳಂಬವಾಗುತ್ತಿದೆ ಎಂಬ ಆರೋಪವಿತ್ತು. ಮಹಿಳೆಯರು ನೋಂದಣಿಗೆ ಕೇಂದ್ರಕ್ಕೆ ಆಗಮಿಸಿ ತಾಸುಗಟ್ಟಲೇ ಕಾದು ವಾಪಸ್ ಆಗುತ್ತಿದ್ದರು. ಆದ್ದರಿಂದ ಈಗ ಎಸ್‌ಎಂಎಸ್ ವ್ಯವಸ್ಥೆ ಬದಲು ನೇರ ನೋಂದಣಿಗೆ ಅವಕಾಶ ನೀಡಲಾಗಿದೆ.
ಯೋಜನೆಯ ನೋಂದಣಿಗೆ ಆಧಾರ್, ರೇಷನ್ ಕಾರ್ಡ್ ಸೇರಿ ಎಲ್ಲಾ ದಾಖಲೆ ಹಿಡಿದು ಹೋದರೂ ಸಹ ಎಸ್ಎಂಎಸ್ ಸಂದೇಶ ಬಂದಿಲ್ಲ ಎಂದು ನೋಂದಣಿ ಮಾಡಿಕೊಳ್ಳುತ್ತಿರಲಿಲ್ಲ. ಆದ್ದರಿಂದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ದರಿಂದ ಎಸ್‌ಎಂಎಸ್ ಸ್ಥಗಿತಗೊಳಿಸಲಾಗಿದೆ.
ಮೊದಲಿನ ವ್ಯವಸ್ಥೆ; ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದ ಪ್ರಮುಖ ಯೋಜನೆ ಗೃಹಲಕ್ಷ್ಮಿ. ಯೋಜನೆ ಫಲಾನುಭವಿಯ ನೋಂದಣಿಗೆ ಮೊದಲು ದಿನಾಂಕ, ಸಮಯ ಮತ್ತು ಸ್ಥಳವನ್ನು 1902 ಸಂಖ್ಯೆಗೆ ಕಾಲ್ ಮಾಡಿ ಅಥವಾ 8147500500 ನಂಬರಗೆ ಎಸ್‍ಎಂಎಸ್ ಮೂಲಕ ಸಂದೇಶ ಕಳುಹಿಸಿ ಪಡೆಯಬೇಕಿತ್ತು.
ಒಂದು ವೇಳೆ ನಿಗದಿತ ಸಮಯಕ್ಕೆ ಹೋಗಲು ಆಗದಿದ್ದರೆ ಮರುದಿನ ಸಂಜೆ 5 ಗಂಟೆಯ ಬಳಿಕ ಹೋಗಿ ನೋಂದಣಿ ಮಾಡಿಕೊಳ್ಳಬಹುದಿತ್ತು. ಆದರೆ ಈಗ ಎಸ್‌ಎಂಎಸ್ ವ್ಯವಸ್ಥೆ ತೆರವುಗೊಳಿಸಿ ನೇರ ನೋಂದಣಿಗೆ ಅವಕಾಶ ನೀಡಲಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳು ಮತ್ತು ನಗರ ಪ್ರದೇಶದಲ್ಲಿ ಕರ್ನಾಟಕ ಒನ್ ಕೇಂದ್ರಗಳು ಅರ್ಜಿ ಸಲ್ಲಿಸುವ ಕೇಂದ್ರಗಳಾಗಿವೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವನ್ನು ಪಾವತಿಸತಕ್ಕದ್ದಲ್ಲ, ಯೋಜನೆಗೆ ನೋಂದಣಿ ಸಂಪೂರ್ಣ ಉಚಿತ.
ಯೋಜನೆ ಫಲಾನುಭವಿಯಾಗಲು ಅರ್ಜಿದಾರರು ಮಧ್ಯವರ್ತಿಗಳ ಮೇಲೆ ಅಂವಲಂಬಿತರಾಗದೇ ಅರ್ಜಿಯನ್ನು ಸ್ವತಃವಾಗಿ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ. ಈ ಯೋಜನೆಯ ನೋಂದಣಿಗೆ ಯಾವುದೇ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿರುವುದಿಲ್ಲ.
ಸರ್ಕಾರದಿಂದ ನೇಮಕಗೊಂಡ ಪ್ರಜಾಪ್ರತಿನಿಧಿಗಳ ಮೂಲಕ ಸಹ ನೋಂದಣಿ ಮಾಡಿಕೊಳ್ಳಬಹುದು. ಅವರು ಮನೆ-ಮನೆಗೆ ಭೇಟಿ ನೀಡಿ ಸ್ಥಳದಲ್ಲಿಯೇ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಿದ್ದಾರೆ.
ಯೋಜನೆಗೆ ಯಾರು ಅರ್ಹರು? ಎಂಬುದು ಸಾಮಾನ್ಯ ಪ್ರಶ್ನೆಯಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಬಿಪಿಎಲ್ , ಎಪಿಎಲ್, ಅಂತ್ಯೋದಯ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟನ್ಸ್ ಸಲ್ಲಿಸುವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಲ್ಲ.