ಪಾಟ್ನಾ: ಮಸಾಲೆ ದೋಸೆ (Masala Dose) ಜೊತೆ ಸಾಂಬಾರ್ ನೀಡದ ರೆಸ್ಟೋರೆಂಟ್‍ಗೆ ಬಿಹಾರದ ಗ್ರಾಹಕರ ಕೋರ್ಟ್ (Consumer Court) 3,500 ರೂ. ದಂಡ ವಿಧಿಸಿದೆ. ಈ ಘಟನೆಯು 2022ರಲ್ಲಿ ನಡೆದಿದ್ದು 11 ತಿಂಗಳ ವಿಚಾರಣೆ ನಡೆಸಿದ ಬಳಿಕ ಇದೀಗ ಗ್ರಾಹಕರ ಆಯೋಗ ದಂಡ ವಿಧಿಸಿ ತೀರ್ಪು ನೀಡಿದೆ.
ಏನಿದು ಪ್ರಕರಣ..?: 2022ರ ಆಗಸ್ಟ್ 15ರಂದು ವಕೀಲರೊಬ್ಬರು (Lawyer) ತಮ್ಮ ಹುಟ್ಟುಹಬ್ಬದಂದು ನಮಕ್ ರೆಸ್ಟೋರೆಂಟ್‍ನಲ್ಲಿ (Restorent) ಸ್ಪೆಷಲ್ ಮಸಾಲೆ ದೋಸೆ ಆರ್ಡರ್ ಮಾಡಿದ್ದರು. ಅಂತೆಯೇ 140 ರೂ. ಬಿಲ್ ಕೊಟ್ಟು ಆರ್ಡರ್ ತೆಗೆದುಕೊಂಡು ಹೋಗಿದ್ದಾರೆ. ಆದರೆ ಮನೆಯಲ್ಲಿ ಪಾರ್ಸೆಲ್ ತರೆದು ನೋಡಿದಾಗ ಅದರಲ್ಲಿ ಸಾಂಬಾರ್ ಇಲ್ಲದೇ ಇರುವುದು ಗೊತ್ತಾಯಿತು
ಮರುದಿನ ವಕೀಲರು, ರೆಸ್ಟೋರೆಂಟ್‍ಗೆ ತೆರಳಿ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಮಾಲೀಕರು ಉಡಾಫೆಯ ಮಾತುಗಳನ್ನಾಡಿದ್ದಾರೆ. ಕೇವಲ 140 ರೂ. ನಲ್ಲಿ ಇಡೀ ರೆಸ್ಟೋರೆಂಟ್ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ
ಸಿಬ್ಬಂದಿ ಹಾಗೂ ಮಾಲೀಕನ ಮಾತಿನಿಂದ ಸಿಟ್ಟಿಗೆದ್ದ ವಕೀಲರು, ಕಾನೂನು ಮೊರೆ ಹೋಗಲು ನಿರ್ಧರಿಸಿದ್ದಾರೆ. ಗ್ರಾಹಕರ ನಂಬಿಕೆಗೆ ವಂಚನೆ ಆಗಿದೆ ಎಂದು ಗ್ರಾಹಕರ ಕೋರ್ಟ್ ಮೆಟ್ಟಿಲೇರಿದರು. ಅಂತೆಯೇ 11 ತಿಂಗಳು ಕಾನೂನು ಪ್ರಕ್ರಿಯೆಗಳು ನಡೆದಿದ್ದು, ಇದೀಗ ರೆಸ್ಟೋರೆಂಟ್ ಸೇವೆಯಲ್ಲಿ ಸಾಂಬಾರ್ ಕೊಡದೇ ಇದ್ದಿದ್ದು ತಪ್ಪು ಎಂದು ನ್ಯಾಯಾಲಯ ಮನಗಂಡಿದೆ
ಗ್ರಾಹಕರ ಆಯೋಗದ ಅಧ್ಯಕ್ಷ ವೇದ್ ಪ್ರಕಾಶ್ ಸಿಂಗ್ ಹಾಗೂ ಸದಸ್ಯ ವರುಣ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡು 3,500 ರೂ. ದಂಡ ಹಾಗೂ ಪ್ರಕರಣದ ವೇಳೆ ಮಾನಸಿಕ ಹಾಗೂ ದೈಹಿಕ ಒತ್ತಡದ ನೀಡಿರುವುಕ್ಕೆ ಪರಿಹಾರವಾಗಿ 2,000 ರೂ. ಗಳನ್ನು ಪಾವತಿಸುವಂತೆ ಆದೇಶಿಸಿದೆ.