ಗೃಹಜ್ಯೋತಿ ಸರ್ವರ್‌ ಡೌನ್‌ : ಅರ್ಜಿ ಸಲ್ಲಿಸಲಾಗದೇ ಎರಡನೇ ದಿನವೂ ಜನರ ಪರದಾಟ!

ಗೃಹಜ್ಯೋತಿ ಸರ್ವರ್‌ ಡೌನ್‌ : ಅರ್ಜಿ ಸಲ್ಲಿಸಲಾಗದೇ ಎರಡನೇ ದಿನವೂ ಜನರ ಪರದಾಟ!

 Gruha Jyothi Scheme Seva Sindhu Portal Crash : ಗೃಹಜ್ಯೋತಿಯಡಿ ಉಚಿತ ವಿದ್ಯುತ್ ನೋಂದಣಿ ಭರಾಟೆಗೆ ವೆಬ್‌ಸೈಟೇ ಕ್ರ್ಯಾಶ್‌ ಆಗಿದೆ. ಎರಡನೇ ದಿನವೂ ಸಮಸ್ಯೆ ಮುಂದುವರಿದಿದ್ದು, ಜನರು ಹೈರಾಣಾಗಿದ್ದಾರೆ. ಗೃಹ ಜ್ಯೋತಿ ನೋಂದಣಿಗೆ ರಾಜ್ಯಾ ದ್ಯಂತ ನೂಕುನುಗ್ಗಲು ಸೃಷ್ಟಿಯಾಗಿದ್ದು, ಸೇವಾಸಿಂಧು ಪೋರ್ಟಲ್ ಕೈಕೊಟ್ಟಿದೆ. ಸರ್ವರ್‌ ಲೋಡ್‌ ಹೆಚ್ಚಿಸಲು ಕ್ರಮ ಕೈಗೊಳ್ಳದೇ ಅಧಿಕಾರಿಗಳು ಮೌನವಹಿಸಿರುವುದು ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.



ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಭಾನುವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ, ಆರಂಭದಲ್ಲಿಯೇ ವಿಘ್ನ ಎಂಬಂತೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಪಡೆಯಲು ಸೇವಾಸಿಂಧು ಪೋರ್ಟಲ್‌ ಸಮಸ್ಯೆ ಹಾಗೂ ಸರ್ವರ್‌ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ. ಭಾನುವಾರ ಪೂರ್ತಿ ಇದ್ದ ಸರ್ವರ್ ಸಮಸ್ಯೆ ಸೋಮವಾರ ಕೂಡ ಮುಂದುವರಿದಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ.

ಉಚಿತ ವಿದ್ಯುತ್‌ಗೆ ನೋಂದಣಿ ಮಾಡಿಕೊಳ್ಳಲು ಒಮ್ಮೆಲೇ ಜನ ಮುಗಿಬಿದ್ದ ಕಾರಣ ಸೇವಾ ಸಿಂಧು ವೆಬ್‌ಸೈಟ್‌ ಕ್ರಾಶ್‌ ಆಗಿದೆ. ಭಾನುವಾರ ಅರ್ಜಿ ತೆರೆದುಕೊಳ್ಳುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಸೋಮವಾರ ಈ ಸಮಸ್ಯೆ ಸ್ವಲ್ಪ ಬಗೆಹರಿದಿದ್ದು, ಅರ್ಜಿ ಒಪನ್‌ ಆದರೂ ಡೇಟಾವನ್ನು ತುಂಬಲು ಆಗುತ್ತಿಲ್ಲ. ಅಕೌಂಟ್‌ ನಂಬರ್‌ ಭರ್ತಿ ಮಾಡಿದ ತಕ್ಷಣ ವೆಬ್‌ಸೈಟ್‌ ಕಾರ್ಯನಿರ್ವಹಣೆಯನ್ನು ನಿಲ್ಲಿಸುತ್ತಿದ್ದು, ಮುಂದಿನ ಮಾಹಿತಿಯನ್ನು ಭರ್ತಿ ಮಾಡಲು ಜನರಿಗೆ ಆಗುತ್ತಿಲ್ಲ.

ಭಾನುವಾರದ ರಜಾದಿನದ ಹೊರತಾಗಿಯೂ ಎಲ್ಲ ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌, ಬಾಪೂಜಿ ಒನ್‌ ಹಾಗೂ ನಾಡ ಕಚೇರಿಗಳಲ್ಲಿ ನೋಂದಣಿಗೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗಿತ್ತು. ಬೆಳಗ್ಗೆ 11 ಗಂಟೆಯಿಂದ ನೋಂದಣಿಗೆ ಅವಕಾಶ ನೀಡಲಾಗಿತ್ತಾದರೂ ನೋಂದಣಿ ಶುರುವಾದ ಕೆಲ ಹೊತ್ತಿನಲ್ಲೇ ಸರ್ವರ್ ಸಮಸ್ಯೆಯಿಂದ ಸ್ಥಗಿತಗೊಂಡಿತು. ಸೈಬರ್ ಕೇಂದ್ರದಲ್ಲಿ ಗೃಹಜ್ಯೋತಿ ನೋಂದಣಿಗೆ ಜನರು ಮುಗಿಬಿದ್ದರು, ನೋಂದಣಿ ಸಾಧ್ಯವಾಗಲಿಲ್ಲ. ಈ ಸಮಸ್ಯೆ ಸೋಮವಾರವೂ ಮುಂದುವರಿದಿದೆ.

ಭಾನುವಾರ ಬೆಳಗ್ಗೆ ದಾವಣಗೆರೆ, ಧಾರವಾಡ, ದಕ್ಷಿಣ ಕನ್ನಡ, ಬೆಂಗಳೂರು ಸೇರಿ ಹಲವೆಡೆ ಜನ ಸಾಲುಗಟ್ಟಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದರು. ಬಹುತೇಕ ಎಲ್ಲೆಡೆಯೂ ಸರ್ವ‌ರ್‌ ಡೌನ್ ಸಮಸ್ಯೆ ಕಾಣಿಸಿಕೊಂಡಿತು. ಸೇವಾ ಕೇಂದ್ರಗಳು, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಕಚೇರಿಗಳ ಮುಂದೆ ಅರ್ಜಿಗಳನ್ನು ಹಿಡಿದು ಗಂಟೆಗಟ್ಟಲೆ ಕೂತರೂ ಸೇವಾಸಿಂಧು ಪೋರ್ಟಲ್ ಸರ್ವ‌ರ್‌ ಸಮಸ್ಯೆ ಬಗೆಹರಿಯಲಿಲ್ಲ. ಜನ ಕಾದು ಕಾದು ಸುಸ್ತಾಗಿದ್ದು, ಸೋಮವಾರವೂ ಈ ಸಮಸ್ಯೆ ಬಗೆಹರಿಯದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಮೊದಲ ದಿನವೇ 55,000 ಮಂದಿ ನೋಂದಣಿ!

ಇನ್ನು, ಭಾನುವಾರ ಮೊದಲ ದಿನ ತಾಂತ್ರಿಕ ಅಡಚಣೆಯ ನಡುವೆಯೂ 55,000 ಜನರು ಗೃಹಜ್ಯೋತಿಗೆ ನೋಂದಣಿ ಮಾಡಿಸಿದ್ದಾರೆ. ಬೆಳಗ್ಗೆ ಕೆಲವರಿಗಷ್ಟೇ ಹೆಸರು ನೋಂದಣಿಗೆ ಅವಕಾಶ ಸಿಕ್ಕಿತ್ತು. ಆ ಬಳಿಕ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜೆ 4.30 ರಿಂದ 6ರವರೆಗೆ ವಿವಿಧ ಸೇವಾ ಕೇಂದ್ರಗಳಲ್ಲಿ 55,000 ಮಂದಿ ನೋಂದಣಿ ಮಾಡಿಕೊಂಡಿರುವುದಾಗಿ ಇಂಧನ ಇಲಾಖೆ ಸ್ಪಷ್ಟಪಡಿಸಿದೆ.

ಸೂಕ್ತ ಸಿದ್ಧತೆ ಮಾಡಿಕೊಳ್ಳದ ಅಧಿಕಾರಿಗಳು

ಗೃಹಜ್ಯೋತಿ ಯೋಜನೆಗೆ ಒಟ್ಟು 2.10 ಕೋಟಿ ಜನ ಅರ್ಹರಾಗಿದ್ದಾರೆ. ಅಷ್ಟೂ ಮಂದಿ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಿದೆ. ಹೀಗಾಗಿ ಸೇವಾಸಿಂಧು ಪೋರ್ಟಲ್ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಸರ್ವರ್ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಳ ಮಾಡಿಕೊಳ್ಳುವುದಾಗಿ ಇ-ಆಡಳಿತದ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇಲಾಖೆ ಸಿದ್ಧತೆಯಲ್ಲಿ ವಿಫಲವಾಗಿರುವುದು ಮೊದಲ ಎರಡು ದಿನಗಳಲ್ಲೇ ಬಹಿರಂಗಗೊಂಡಿದೆ.

Post a Comment

Previous Post Next Post
CLOSE ADS
CLOSE ADS
×