ಇನ್ಮುಂದೆ ವಿದ್ಯಾರ್ಥಿನಿಯರಿಗಿಲ್ಲ ಬಸ್‌ ಪಾಸ್‌

ಇನ್ಮುಂದೆ ವಿದ್ಯಾರ್ಥಿನಿಯರಿಗಿಲ್ಲ ಬಸ್‌ ಪಾಸ್‌

 Karnataka Shakti Scheme:



 ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಹಿನ್ನಲೆ, ಇನ್ಮುಂದೆ ವಿದ್ಯಾರ್ಥಿನಿಯರಿಗೆ ಉಚಿತ/ರಿಯಾಯಿತಿ ದರದ ಬಸ್ ಪಾಸ್‌ನ ಅಗತ್ಯ ಇರುವುದಿಲ್ಲ. ಉಚಿತ ಶಕ್ತಿ ಯೋಜನೆ ಅಡಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿನಿಯರಿಗೆ ಟಿಕೆಟ್ ನೀಡುವ ಕೆಲಸವನ್ನು ನಿರ್ವಾಹಕರು ಮಾಡಲಿದ್ದಾರೆ. ವಿದ್ಯಾರ್ಥಿನಿಯರು ಹೊರ ರಾಜ್ಯಗಳಿಗೆ ಹೋಗುವಾಗ ಬಸ್ ಪಾಸ್ ಅಗತ್ಯವಿದ್ದು, ಈ ಸಮಯದಲ್ಲಿ ಅವರು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ, ಬಳಿಕ ಕರ್ನಾಟಕ ಒನ್‌ನಲ್ಲಿ ಬಸ್ ಪಾಸ್ ಪಡೆಯಬಹುದು

ರಾಜ್ಯ ಸರಕಾರದ ಮಹತ್ವದ ಯೋಜನೆಯಾದ ಶಕ್ತಿ ಜಾರಿಗೆ ಬರುತ್ತಿದ್ದಂತೆ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ/ರಿಯಾಯಿತಿ ಬಸ್‌ ಪಾಸ್‌ ಇನ್ಮುಂದೆ ಅಗತ್ಯ ಬೀಳೋದಿಲ್ಲ. ಆದರೆ ಅಂತಾರಾಜ್ಯ ಪ್ರಯಾಣದ ಬಸ್‌ಗಳಿಗೆ ಮಾತ್ರ ಬಸ್‌ ಪಾಸ್‌ ಅನಿರ್ವಾಯತೆ ಇದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ಹಾಗೂ ಮಂಗಳೂರು ವಿಭಾಗಗಳಿದ್ದು, ಇದರಲ್ಲಿ ಪುತ್ತೂರು ವಿಭಾಗದಲ್ಲಿ 5 ಡಿಪೋ ಹಾಗೂ ಮಂಗಳೂರು ವಿಭಾಗದಲ್ಲಿ 3 ಡಿಪೋಗಳು ಕಾರ್ಯಾಚರಿಸುತ್ತಿವೆ. ಮುಖ್ಯವಾಗಿ ಈ ಎರಡು ಡಿಪೋಗಳಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ 55 ಸಾವಿರ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್‌ ಪಾಸ್‌ ವಿತರಿಸಲಾಗಿದ್ದು, ಇದರಲ್ಲಿ 7 ಸಾವಿರ ವಿದ್ಯಾರ್ಥಿಗಳು ಹೊರ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ವಿದ್ಯಾರ್ಥಿಗಳಾಗಿದ್ದಾರೆ.

ವಿದ್ಯಾರ್ಥಿನಿಯರಿಗೂ ಟಿಕೆಟ್‌

ಶಕ್ತಿ ಯೋಜನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿನಿಯರಿಗೆ ಟಿಕೆಟ್‌ ನೀಡುವ ಕೆಲಸವನ್ನು ನಿರ್ವಾಹಕರು ಮಾಡಲಿದ್ದಾರೆ. ಈ ಹಿಂದೆ ಬಸ್‌ ಟಿಕೆಟ್‌ ನೀಡುವಾಗ ನಿರ್ವಾಹಕನಿಗೆ ಟಿಕೆಟ್‌ ಮೇಲೆ ಭತ್ಯೆ ನೀಡಲಾಗುತ್ತದೆ. ಶಕ್ತಿ ಯೋಜನೆಯಲ್ಲೂಈ ರೀತಿ ಟಿಕೆಟ್‌ ಮೇಲೆ ನಿರ್ವಾಹಕನಿಗೆ ಭತ್ಯೆ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಮೂಲಗಳು ಮಾಹಿತಿ ನೀಡಿವೆ.

ವಿದ್ಯಾರ್ಥಿನಿಯರು ಹೊರ ರಾಜ್ಯಗಳಿಗೆ ಹೋಗುವಾಗ ಬಸ್‌ ಪಾಸ್‌ ಅಗತ್ಯ ಇರುತ್ತದೆ. ಈ ಸಮಯದಲ್ಲಿಅವರು ಸೇವಾಸಿಂಧು ಪೋರ್ಟಲ್‌ನಲ್ಲಿಅರ್ಜಿ ಸಲ್ಲಿಸಿ, ಬಳಿಕ ಕರ್ನಾಟಕ ಒನ್‌ನಲ್ಲಿ ಬಸ್‌ ಪಾಸ್‌ ಪಡೆಯಲು ಸಾಧ್ಯವಿದೆ. ಜೂನ್ 15ರವರೆಗೆ ರಾಜ್ಯದಲ್ಲಿ ಹಳೆಯ ಬಸ್‌ ಪಾಸ್‌ ವಿಸ್ತರಣೆಗೊಂಡಿದ್ದು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಯಾವುದೇ ಅಡ್ಡಿ ಇಲ್ಲ. ಸೇವಾಸಿಂಧು ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದಾಗ ಈ ಮನವಿ ಕೆಎಸ್‌ಆರ್‌ಟಿಸಿ ವಿಭಾಗಗಳಿಗೆ ಹೋಗುತ್ತದೆ. ಅವರು ಪರಿಶೀಲಿಸಿ ಬಳಿಕ ಕರ್ನಾಟಕ ವನ್‌ಗೆ ಬಸ್‌ ಪಾಸ್‌ ವಿತರಣೆಗೆ ಅನುಮೋದನೆ ನೀಡಲಾಗುತ್ತದೆ.

ದಕ್ಷಿಣ ಕನ್ನಡದಲ್ಲೇ ಹೆಚ್ಚು ಬಸ್‌ ಪಾಸ್‌ ವಿತರಣೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗದಲ್ಲಿ 2019ರಲ್ಲಿ 46 ಸಾವಿರ ಬಸ್‌ ಪಾಸ್‌ ವಿತರಿಸಲಾಗಿತ್ತು. ಈ ಸಮಯದಲ್ಲಿ ತುಮಕೂರು ವಿಭಾಗದ ನಂತರದ ಸ್ಥಾನ ಪುತ್ತೂರು ವಿಭಾಗಕ್ಕೆ ಸಂದಿತ್ತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಪುತ್ತೂರು ವಿಭಾಗದಲ್ಲಿ 42 ಸಾವಿರ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ವಿತರಿಸಿದೆ. ಮಂಗಳೂರು ವಿಭಾಗದಲ್ಲಿ 13 ಸಾವಿರ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ವಿತರಿಸಲಾಗಿದೆ.

ಸರಕಾರಿ ಬಸ್‌ಗಳು ಬೇಕು ಎನ್ನುವ ಬೇಡಿಕೆ ಜನರಿಂದ ಬಂದರೆ ಅದಕ್ಕೆ ಬೇಕಾದ ನಿರ್ವಾಹಕ ಮತ್ತು ಚಾಲಕರ ಅಗತ್ಯತೆ, ಸರಕಾರಿ ಬಸ್‌ಗಳ ಲೆಕ್ಕವನ್ನು ಕೇಂದ್ರ ಇಲಾಖೆಗೆ ವರದಿ ಕಳುಹಿಸಿಕೊಡಬೇಕು ಎಂದು ಸೂಚನೆ ನೀಡಲಾಗಿದೆ. ಪ್ರಸ್ತುತ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ 564 ಬಸ್‌ಗಳಿದ್ದು, ಎಲ್ಲವೂ ಕಾರ್ಯಾಚರಿಸುತ್ತಿವೆ. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬೇಡಿಕೆಗೆ ಅನುಗುಣವಾಗಿ ಸರಕಾರಿ ಬಸ್‌ ನೀಡಲು ಪ್ರಯತ್ನಿಸಲಾಗುತ್ತದೆ ಎಂದು ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ತಿಳಿಸಿದ್ದಾರೆ.

Post a Comment

Previous Post Next Post

Top Post Ad

CLOSE ADS
CLOSE ADS
×