IPL 2026: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿಯ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯಲಿದೆ. ಡಿಸೆಂಬರ್ 16 ರಂದು ಜರುಗಲಿರುವ ಈ ಹರಾಜಿನ ಮೂಲಕ ಗರಿಷ್ಠ 77 ಆಟಗಾರರಿಗೆ ಅವಕಾಶ ಸಿಗಲಿದೆ. ಅಂದರೆ 10 ತಂಢಗಳಲ್ಲಿ ಒಟ್ಟು 77 ಸ್ಲಾಟ್​ಗಳು ಮಾತ್ರ ಖಾಲಿಯಿದ್ದು, ಈ ಸ್ಥಾನಗಳಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. 10 ಫ್ರಾಂಚೈಸಿಗಳ ನಡುವೆ ನಡೆಯಲಿರುವ ಈ ಹರಾಜಿನಲ್ಲಿ ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಚೆನ್ನೈ ಸೂಪರ್ ಕಿಂಗ್ಸ್​: 

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಹರಾಜಿಗೂ ಮುನ್ನ 12 ಆಟಗಾರರನ್ನು ಬಿಡುಗಡೆ ಮಾಡಿದೆ. ಅದರಂತೆ ಇದೀಗ 43.40 ಕೋಟಿ ರೂ. ಹರಾಜು ಮೊತ್ತ ಹೊಂದಿರುವ ಸಿಎಸ್​ಕೆ ಒಟ್ಟು 9 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ ನಾಲ್ವರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಬಹುದು. ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ಭಾರತೀಯ ಹಾಗೂ 4 ವಿದೇಶಿ ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ.

ಮುಂಬೈ ಇಂಡಿಯನ್ಸ್: 

ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಒಟ್ಟು 10 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಇದೀಗ 20 ಆಟಗಾರರನ್ನು ಹೊಂದಿರುವ ಮುಂಬೈ ಇಂಡಿಯನ್ಸ್​ಗೆ ಇನ್ನೂ 5 ಪ್ಲೇಯರ್ಸ್​ಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ಅದರಂತೆ 2.75 ಕೋಟಿ ರೂ. ಹರಾಜು ಮೊತ್ತದಲ್ಲಿ ಮುಂಬೈ ಇಂಡಿಯನ್ಸ್ ನಾಲ್ವರು ಭಾರತೀಯರು ಹಾಗೂ ಓರ್ವ ವಿದೇಶಿ ಆಟಗಾರನನ್ನು ಖರೀದಿಸಬಹುದು.

ಸನ್​​ರೈಸರ್ಸ್ ಹೈದರಾಬಾದ್: 

ಎಸ್​ಆರ್​​ಹೆಚ್ ಫ್ರಾಂಚೈಸಿಯು 10 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಅದರಂತೆ ಇದೀಗ 25.50 ಕೋಟಿ ರೂ. ಹೊಂದಿರುವ ಸನ್​ರೈಸರ್ಸ್ ಹೈದರಾಬಾದ್​ 10 ಆಟಗಾರರನ್ನು ಖರೀದಿಸಬಹುದು. ಈ ಹತ್ತರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಕೂಡ ಆಯ್ಕೆ ಮಾಡಬಹುದು.

ಪಂಜಾಬ್ ಕಿಂಗ್ಸ್​: 

ಐಪಿಎಲ್ ರಿಟೆನ್ಷನ್ ವೇಳೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಒಟ್ಟು 6 ಆಟಗಾರರನ್ನು ರಿಲೀಸ್ ಮಾಡಿದ್ದಾರೆ. ಇದೀಗ 21 ಆಟಗಾರರ ಬಳಗವನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಹರಾಜಿನ ಮೂಲಕ 11.50 ಕೋಟಿಯಲ್ಲಿ ಒಟ್ಟು ನಾಲ್ವರನ್ನು ಖರೀದಿಸಬಹುದು. ಇದರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ.

ರಾಜಸ್ಥಾನ್ ರಾಯಲ್ಸ್: 

ಆರ್​ಆರ್​ ಫ್ರಾಂಚೈಸಿಯು ಒಟ್ಟು 9 ಸ್ಲಾಟ್​​ಗಳನ್ನು ಹೊಂದಿದೆ. ಇದೀಗ 14 ಆಟಗಾರರೊಂದಿಗೆ 16.05 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ರಾಜಸ್ಥಾನ್ ರಾಯಲ್ಸ್ ಹರಾಜಿನ ಮೂಲಕ 8 ಭಾರತೀಯ ಹಾಗೂ ಓರ್ವ ವಿದೇಶಿ ಆಟಗಾರನನ್ನು ಖರೀದಿಸಬಹುದು.

ಲಕ್ನೋ ಸೂಪರ್ ಜೈಂಟ್ಸ್​: 

ಎಸ್​ಎಲ್​ಜಿ ಫ್ರಾಂಚೈಸಿಯು ಮಿನಿ ಹರಾಜಿನ ಮೂಲಕ 6 ಆಟಗಾರರನ್ನು ಖರೀದಿಸಬಹುದು. 22.95 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್​  ತಂಡಕ್ಕೆ ನಾಲ್ವರು ವಿದೇಶಿ ಹಾಗೂ ಇಬ್ಬರು ಭಾರತೀಯರನ್ನು ಆಯ್ಕೆ ಮಾಡಲು ಅವಕಾಶವಿದೆ.

ಕೊಲ್ಕತ್ತಾ ನೈಟ್ ರೈಡರ್ಸ್: 

ಕೆಕೆಆರ್ ಫ್ರಾಂಚೈಸಿಯು 9 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಇದೀಗ 12 ಆಟಗಾರರ ಬಳಗವನ್ನು ಹೊಂದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ಒಟ್ಟು 13 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಅದರಂತೆ 64.30 ಕೋಟಿ ರೂ.ನಲ್ಲಿ ಕೆಕೆಆರ್ 6 ವಿದೇಶಿ ಆಟಗಾರರು ಹಾಗೂ 7 ಭಾರತೀಯ ಆಟಗಾರರನ್ನು ಖರೀದಿಸಬಹುದು.

ಗುಜರಾತ್ ಟೈಟಾನ್ಸ್​: 

ಜಿಟಿ ಫ್ರಾಂಚೈಸಿಯು ಮಿನಿ ಹರಾಜಿಗೂ ಮುನ್ನ 5 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಅದರಂತೆ ಇದೀಗ 12.90 ಕೋಟಿ ರೂ. ಹರಾಜು ಮೊತ್ತ ಹೊಂದಿರುವ ಗುಜರಾತ್ ಟೈಟಾನ್ಸ್ ನಾಲ್ವರು ವಿದೇಶಿ ಹಾಗೂ ಓರ್ವ ಭಾರತೀಯ ಆಟಗಾರನನ್ನು ಖರೀದಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್​: 

ಡಿಸಿ ಫ್ರಾಂಚೈಸಿಯು ಒಟ್ಟು 7 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ 21.80 ಕೋಟಿ ರೂ. ಹರಾಜು ಮೊತ್ತ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ 8 ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದೆ. ಈ ಸ್ಲಾಟ್​ಗಳಲ್ಲಿ ಐವರು ವಿದೇಶಿ ಹಾಗೂ ಮೂವರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: 

ಆರ್​ಸಿಬಿ ಫ್ರಾಂಚೈಸಿಯು ಒಟ್ಟು 8 ಆಟಗಾರರನ್ನು ಬಿಡುಗಡೆ ಮಾಡಿದೆ. ಇದೀಗ 17 ಸದಸ್ಯರುಗಳ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 16.40 ಕೋಟಿ ರೂ. ಹರಾಜು ಮೊತ್ತದಲ್ಲಿ 8 ಆಟಗಾರರನ್ನು ಖರೀದಿಸಬಹುದು. ಈ ಎಂಟು ಆಟಗಾರರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಲು ಆರ್​ಸಿಬಿಗೆ ಅವಕಾಶವಿದೆ.


Previous Post Next Post