ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು, ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕು ಎಂಬ ಕನಸು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಈ ಯಶಸ್ಸು ನಿಮ್ಮದಾಗಬೇಕಾದರೆ ಮುಖ್ಯವಾಗಿ ಈ ಕೆಲವು ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಇದುವೇ ಯಶಸ್ಸಿನ ಮೂಲ ಗುಟ್ಟು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಚಾಣಕ್ಯರ ಪ್ರಕಾರ ಯಶಸ್ಸು ಗಳಿಸಲು ಯಾವೆಲ್ಲಾ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.
ಜೀವನದಲ್ಲಿ ಮುಂದೆ ಬರಬೇಕು, ಸಮಾಜದಲ್ಲಿ ಗೌರವ ಸಿಗಬೇಕು, ಯಶಸ್ವಿ ಜೀವನವನ್ನು ನಡೆಸಬೇಕು ಅಂತ ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಈ ಕನಸು ನನಸಾಗಬೇಕೆಂದರೆ ಕಠಿಣ ಪರಿಶ್ರಮದ ಜೊತೆಗೆ ಈ ಕೆಲವೊಂದು ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡುತ್ತಾರೆ. ಜೀವನದಲ್ಲಿ ಒಬ್ಬ ಮನುಷ್ಯ ಯಶಸ್ವಿಯಾಗಬೇಕೆಂದರೆ (success) ಏನೆಲ್ಲಾ ಮಾಡಬೇಕು ಎಂಬುದಕ್ಕೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ಯಶಸ್ಸು, ಗೌರವ ಲಭಿಸಲು ಈ ನಾಲ್ಕು ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಇದುವೇ ಯಶಸ್ಸಿನ ಮೂಲ ಗುಟ್ಟು ಎಂದಿದ್ದಾರೆ. ಹಾಗಿದ್ರೆ ಯಾವ ಅಭ್ಯಾಸವು ಜೀವನವದಲ್ಲಿ ಯಶಸ್ಸನ್ನು ತಂದು ಕೊಡುತ್ತದೆ ಎಂಬುದ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ
ಈ ನಾಲ್ಕು ಅಭ್ಯಾಸಗಳೇ ಯಶಸ್ಸಿನ ಮೂಲ ಗುಟ್ಟು:
ಸಮಯವನ್ನು ಬುದ್ಧಿವಂತಿಕೆಯಿಂದ ಬಳಸುವ ಅಭ್ಯಾಸ:
ಸಮಯವನ್ನು ಬುದ್ಧಿವಂತಿಕೆಯಿಂದ ಹೇಗೆ ಬಳಸಬೇಕೆಂದು ತಿಳಿದಾಗ ಮಾತ್ರ ಒಬ್ಬ ವ್ಯಕ್ತಿ ಯಶಸ್ವಿಯಾಗಲು ಸಾಧ್ಯ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ನೀವು ಈ ಅಭ್ಯಾಸವನ್ನು ಬೆಳೆಸಿಕೊಂಡರೆ, ನೀವು ಖಂಡಿತವಾಗಿಯೂ ಜೀವನದಲ್ಲಿ ನೀವು ಅಂದುಕೊಂಡದ್ದನ್ನು ಸಾಧಿಸುವಿರಿ ಮತ್ತು ಸಮಾಜದಲ್ಲಿ ಅಪಾರ ಗೌರವವನ್ನು ಗಳಿಸುವಿರಿ. ನೀವು ಶ್ರೇಷ್ಠ ವ್ಯಕ್ತಿಯಾಗಲು ಬಯಸಿದರೆ, ಸೋಮಾರಿತನವನ್ನು ಪಕ್ಕಕ್ಕಿಟ್ಟು ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಲು ಕಲಿಯಿರಿ.
ಮನಸ್ಸನ್ನು ನಿಯಂತ್ರಿಸುವುದು:
ಚಾಣಕ್ಯ ನೀತಿಯ ಪ್ರಕಾರ, ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿರುವ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಮನಸ್ಸನ್ನು ನಿಯಂತ್ರಿಸಲು ಕಲಿತಾಗ ನೀವು ಯಾವಾಗಲೂ ನಿಮ್ಮ ಗುರಿಯಕಡೆಗೆ ಗಮನ ಹರಿಸುತ್ತೀರಿ, ಭಾವನೆಗಳಿಗೆ ಒಳಗಾಗಿ ತಪ್ಪು ಹೆಜ್ಜೆ ಇಡುವುದಿಲ್ಲ ಹಾಗೂ ಕೆಟ್ಟ ಅಭ್ಯಾಸಗಳ ಕಡೆಗೂ ವಾಲುವುದಿಲ್ಲ. ಇದು ನಿಮಗೆ ಯಶಸ್ಸಿನ ಜೊತೆಗೆ ಅಪಾರ ಗೌರವವನ್ನೂ ತಂದುಕೊಡುತ್ತದೆ.
ಇತರರಿಗೆ ಸಹಾಯ ಮಾಡುವುದು:
ಆಚಾರ್ಯ ಚಾಣಕ್ಯರ ಪ್ರಕಾರ, ಕಷ್ಟದಲ್ಲಿರುವ ಯಾರಿಗಾದರೂ ಸಹಾಯ ಮಾಡಲು ಇಚ್ಛಿಸುವ ಪ್ರತಿಯೊಬ್ಬ ವ್ಯಕ್ತಿಯೂ ಶ್ರೇಷ್ಠನೇ. ನೀವು ಯಾವಾಗಲೂ ಕಷ್ಟದಲ್ಲಿರುವ ಯಾರಿಗಾದರೂ ನಿಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಸಮಾಜದಲ್ಲಿ ನಿಮಗೆ ಗೌರವ ಲಭಿಸುತ್ತದೆ.
ಚಿಂತನಶೀಲವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು:
ಆಚಾರ್ಯ ಚಾಣಕ್ಯ ಹೇಳುವಂತೆ ಯಶಸ್ವಿ ಜನರು ಎಂದಿಗೂ ಆತುರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಅವರು ಎಚ್ಚರಿಕೆಯಿಂದ ಪರಿಶೀಲಿಸಿ ನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಿಳುವಳಿಕೆಯಿಂದ ಚಿಂತನಶೀಲವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿ ಜೀವನದಲ್ಲಿ ಎಂದಿಗೂ ಎಡವುದಿಲ್ಲ ಮತ್ತು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಹೀಗೆ ನಿಮ್ಮ ಯಶಸ್ಸಿಗೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ಕೂಡ ಬಹು ಮುಖ್ಯವಾಗಿರುತ್ತವೆ.