ಜನರು ರಾತ್ರಿ ಮನೆಗೆ ಬೀಗ ಹಾಕದ ದೇಶ ಇದು.Liech tenstein, the amazing tiny nation in the earth: ಕಳ್ಳಕಾಕರು, ಪೊಲೀಸರು, ಮಿಲಿಟರಿಯವರು ಬಹಳ ಕಡಿಮೆ ಇರುವ ದೇಶವೆಂದರೆ ಲೀಕ್ಟನ್ಸ್ಟೀನ್. ಯೂರೋಪ್ನಲ್ಲಿ ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ನಡುವೆ ಲ್ಯಾಂಡ್ ಲಾಕ್ ಆಗಿರುವ ಲೀಕ್ಟನ್ಸ್ಟೀನ್ ಅತ್ಯುತ್ತಮ ಆದಾಯ ಇರುವ ದೇಶ. ಇಲ್ಲಿಯ ಜನಸಂಖ್ಯೆಗಿಂತ ಹೆಚ್ಚು ಸಂಖ್ಯೆಯಲ್ಲಿ ನೊಂದಾಯಿತ ಕಂಪನಿಗಳಿವೆ. ಇಲ್ಲಿ ಮನೆಗಳಿಗೆ ಜನರು ಲಾಕ್ ಮಾಡದೇ ಮಲಗುತ್ತಾರೆ, ಅಷ್ಟು ಸುರಕ್ಷಿತ.
ನೀವು ಎಂಥ ಜಾಗದಲ್ಲಿ ವಾಸಿಸಲು ಇಷ್ಟಪಡುತ್ತೀರಿ…? ಯಾವ ಭಯವೂ ಇಲ್ಲದೆ ಮುಕ್ತವಾಗಿರುವ, ಅತ್ಯಂತ ಸುರಕ್ಷಿತ ಸ್ಥಳದಲ್ಲಿ, ಮತ್ತು ಅತ್ಯಂತ ಶ್ರೀಮಂತ ಪ್ರದೇಶದಲ್ಲಿ ಸುಖವಾಗಿ ಬದುಕಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ನೀವು ಅಂಥ ಕನಸುಗಾರರಾಗಿದ್ದರೆ ನಿಮಗೆ ಸೂಕ್ತವಾಗುವ ದೇಶವೊಂದು ಇದೆ. ಇದು ಯೂರೋಪ್ನಲ್ಲಿರುವ ಬಹಳ ಪುಟ್ಟದಾದ ಲೀಕ್ಟನ್ಸ್ಟೀನ್ ದೇಶ (Liechtenstein). ವಿಶ್ವದಲ್ಲಿ ಅತಿಹೆಚ್ಚು ತಲಾದಾಯ ಹೊಂದಿರುವ ದೇಶಗಳ ಮೊದಲ ಸಾಲಿನಲ್ಲಿ ಇದು ಬರುತ್ತದೆ.
ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಲೀಕ್ಟನ್ಸ್ಟೀನ್ ಒಂದು ಪುಟ್ಟ ದೇಶ. ಇಲ್ಲಿ ಏರ್ಪೋರ್ಟ್ ಇಲ್ಲ, ಸ್ವಂತ ಕರೆನ್ಸಿ ಇಲ್ಲ. ಆದರೂ ಕೂಡ ಶ್ರೀಮಂತ ನಾಡೆನಿಸಿದೆ. ಇಲ್ಲಿ ಅಪರಾಧವೇ ನಡೆಯದೇನೋ ಅನ್ನುವಷ್ಟು ಮಾತ್ರ ಕ್ರೈಮ್ ರೇಟ್ ಇರುವುದು. ಇಲ್ಲಿಯ ಜನರು ತಮ್ಮ ಮನೆಗಳಿಗೆ ಸಾಮಾನ್ಯವಾಗಿ ಬೀಗ ಹಾಕುವುದೇ ಇಲ್ಲ. ಅಷ್ಟರಮಟ್ಟಿಗೆ ಸುರಕ್ಷಿತವಾಗಿದೆ ಈ ದೇಶ. ಇಷ್ಟು ಸುರಕ್ಷತೆ ಇದೆ ಎಂದರೆ ಇಲ್ಲಿ ಬಲಿಷ್ಠವಾದ ಪೊಲೀಸ್ ಮತ್ತು ಸೇನಾ ವ್ಯವಸ್ಥೆ ಇರಬೇಕೆಂದು ನೀವು ಭಾವಿಸಿದ್ದರೆ ಅದೂ ಸುಳ್ಳು. ಬಹಳ ಕಡಿಮೆ ಪೊಲೀಸ್ ಮತ್ತು ಮಿಲಿಟರಿ ಉಪಸ್ಥಿತಿ ಇದೆ.
ಅರೆ, ಇದು ಹೇಗೆ ಸಾಧ್ಯ? ಲೀಕ್ಟನ್ಸ್ಟೀನ್ ದೇಶವು ತನ್ನ ಸುತ್ತಲಿನ ಪರಿಸರ ಮತ್ತು ದೇಶಗಳೊಂದಿಗೆ ಉತ್ತಮ ತಾಳಮೇಳ ಹೊಂದಿದೆ. ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ದೇಶಗಳ ಸಾರಿಗೆ ನೆಟ್ವರ್ಕ್ ಅನ್ನೇ ತನ್ನ ನಾಡಿಗೆ ವಿಸ್ತರಿಸಿಕೊಂಡಿದೆ. ಸ್ವಿಟ್ಜರ್ಲೆಂಡ್ನ ಸ್ವಿಸ್ ಫ್ರಾಂಕ್ ಕರೆನ್ಸಿಯನ್ನೇ ಇದು ಬಳಸುತ್ತದೆ. ಇದರೊಂದಿಗೆ ಸ್ವಂತವಾದ ಸೆಂಟ್ರಲ್ ಬ್ಯಾಂಕ್ ಇಟ್ಟುಕೊಳ್ಳುವ ಗೋಜಲು ಇರುವುದಿಲ್ಲ.
ಲೀಕನ್ಸ್ಟೀನ್ ಪುಟ್ಟ ದೇಶವಾದರೂ ಉತ್ಪಾದನೆಯಲ್ಲಿ ದೈತ್ಯ
ಲೀಕ್ಟನ್ಸ್ಟೀನ್ ದೇಶದ ಒಟ್ಟು ವಿಸ್ತೀರ್ಣ 160 ಚದರ ಕಿಮೀ ಮಾತ್ರ. ಇಲ್ಲಿಯ ಜನಸಂಖ್ಯೆ ಕೇವಲ 42,000 ಆಸುಪಾಸಿನಷ್ಟೇ ಇರುವುದು. ಬೆಂಗಳೂರಿನ ಒಂದು ಪುಟ್ಟ ಏರಿಯಾದಲ್ಲೇ ಇದಕ್ಕಿಂತ ಹೆಚ್ಚು ಜನರು ಇರುತ್ತಾರೆ.
ಈ ದೇಶ ಸಾಲವೇ ಹೊಂದಿಲ್ಲ. ಇಲ್ಲಿರುವ ಜನರು ಪ್ರಯೋಗಶೀಲತೆ ಮತ್ತು ನಾವೀನ್ಯತೆಯಲ್ಲಿ ಪಳಗಿದವರು. ಎಂಜಿನಿಯರಿಂಗ್ನಲ್ಲಿ ನಿಷ್ಣಾತರು. ಅಂತೆಯೇ, ಇಲ್ಲಿ ಉತ್ಕೃಷ್ಟವಾದ ಮ್ಯಾನುಫ್ಯಾಕ್ಚರಿಂಗ್ ಸೌಕರ್ಯ ಇದೆ. ಸ್ವಿಟ್ಜರ್ಲೆಂಡ್ ರೀತಿಯಲ್ಲಿ ಪ್ರಿಸಿಶಿನ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಲೀಕ್ಟನ್ಸ್ಟೀನ್ ಜನರು ನಿಷ್ಣಾತರಾಗಿದ್ದಾರೆ. ಇಲ್ಲಿರುವ ಜನಸಂಖ್ಯೆಯಿಂದ ನೊಂದಾಯಿತ ಕಂಪನಿಗಳ ಸಂಖ್ಯೆಯೇ ಹೆಚ್ಚು.